ಶನಿವಾರ, ಅಕ್ಟೋಬರ್ 8, 2022
21 °C
ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಮನೆಗಳಿಗೆ ಹಾನಿ

ಯಾದಗಿರಿ: ಮಳೆಗೆ 510 ಮನೆಗಳಿಗೆ ಹಾನಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ 510 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಪರಿಹಾರಕ್ಕಾಗಿ ಕಾದು ಕುಳಿತ್ತಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಗುರುಮಠಕಲ್‌ ತಾಲ್ಲೂಕಿನಲ್ಲಿ ಕಡಿಮೆ ಮನೆಗಳು ಬಿದ್ದಿವೆ.

ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದಲೂ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಮನೆಗಳು ಕುಸಿದು ಬೀಳುತ್ತಿವೆ.

ಮಣ್ಣಿನ ಮನೆಗಳಿಗೆ ಹಾನಿ: ಜಿಲ್ಲೆಯ ಗ್ರಾಮೀಣ ಭಾಗದ ಮಣ್ಣಿನ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಜಿಟಿಜಿಟಿ ಮಳೆಯಿಂದ ಮಣ್ಣಿನ ಮನೆಗಳು ತೇವಾಂಶ ಹೆಚ್ಚಳಗೊಂಡು ಕುಸಿದು ಬೀಳುತ್ತಿವೆ. ಇದರಿಂದ ಅನಾಹುತಗಳು ಕೂದಲೇಳೆಯ ಅಂತರದಲ್ಲಿ ತಪ್ಪಿವೆ.

ರಾತ್ರಿ ವೇಳೆ ಜೋರು ಮಳೆಯಾದರೆ ಅಂದು ಮನೆ ಮಂದಿಯೆಲ್ಲ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಹಲವಾರು ಮಣ್ಣಿನ ಮನೆಗಳು ದಿಢೀರ್‌ ಕುಸಿದು ಹುಣಸಗಿ ತಾಲ್ಲೂಕಿನಲ್ಲಿ ಮೂವರಿಗೆ ಗಾಯವಾಗಿದೆ.

ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವುದರಿಂದ ಮಣ್ಣಿನ ಗೋಡೆಗಳು ತೇವಾಂಶ ಇಡಿದುಕೊಂಡು ಕುಸಿದು ಬೀಳುತ್ತಿವೆ. ಕೆಲವು ಕಡೆ ಗೋಡೆ ಕುಸಿದರೆ, ಇನ್ನೂ ಕೆಲವು ಕಡೆ ಛಾವಣಿ ಕುಸಿದಿದೆ.

350 ಮನೆಗಳ ತಂತ್ರಾಂಶದಲ್ಲಿ ದಾಖಲು: ಜಿಲ್ಲೆಯಲ್ಲಿ ಮನೆಗಳ ಹಾನಿಯಾಗಿರುವುದನ್ನು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಪರಿಶೀಲಿಸಿದ ನಂತರ ಅದನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಲಾಗುತ್ತಿದೆ.

ಯಾದಗಿರಿ ತಾಲ್ಲೂಕಿನಲ್ಲಿ 23 ಮನೆಗಳ ಸಂಖ್ಯೆ, ಶಹಾಪುರ ತಾಲ್ಲೂಕಿನಲ್ಲಿ 59, ಸುರಪುರ ತಾಲ್ಲೂಕಿನಲ್ಲಿ 92, ಗುರುಮಠಕಲ್‌ ತಾಲ್ಲೂಕಿನಲ್ಲಿ 26, ವಡಗೇರಾ ತಾಲ್ಲೂಕಿನಲ್ಲಿ 48, ಹುಣಸಗಿ ತಾಲ್ಲೂಕಿನಲ್ಲಿ 102 ಹಾನಿಯಾದ ಮನೆಗಳನ್ನು ಅಪ್ಲೋಡ್‌ ಮಾಡಲಾಗಿದೆ. ನಿರಂತರ ಅಪ್ಲೋಡ್‌ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಾರಾಯಣಪುರ ಗ್ರಾ.ಪಂ ವ್ಯಾಪ್ತಿಯ ದೇವರಗಡ್ಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಸಿಡಿಲಿಗೆ ಮನೆಯೊಂದು ಭಸ್ಮವಾಗಿತ್ತು. ಹೀಗೆ ವಿಧವಿಧವಾಗಿ ಮನೆಗಳು ಹಾನಿಯಾಗಿವೆ.

ಮನೆ ಕುಸಿತಕ್ಕೆ ತಕ್ಕಂತೆ ಪರಿಹಾರ: ಜಿಲ್ಲೆಯಲ್ಲಿ ಭಾಗಶಃ ಬಿದ್ದಿರುವ ಮನೆಗಳು ಹೆಚ್ಚಿವೆ. ‍ಪೂರ್ಣ ಪ್ರಮಾಣ ಅಥವಾ ಅಲ್ಪಸ್ಪಲ್ಪ ಮನೆಗಳು ಇಲ್ಲ. ಸದ್ಯಕ್ಕೆ ದಾಖಲೆಗಳು ಸರಿ ಇದ್ದವರಿಗೆ ಕೆಲವು ಕಡೆ ಚೆಕ್‌ ವಿತರಿಸಲಾಗಿದೆ. ಹಲವು ಕಡೆ ಇನ್ನೂ ಬಾಕಿ ಇದೆ.

ಪೂರ್ಣ ಮನೆ ಕಳೆದುಕೊಂಡವರಿಗೆ ₹5 ಲಕ್ಷ, ಭಾಗಶಃ ಮನೆಗೆ ₹2 ಲಕ್ಷ ಪರಿಹಾರ, ತ್ವರಿತ ಪರಿಹಾರ ₹10 ಸಾವಿರ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಮನೆಗಳಿಗೆ ನುಗ್ಗಿದ ನೀರು: ಯಾದಗಿರಿಯ ದುರ್ಗಾನಗರದ ಮನೆಗಳಿಗೆ ನೀರು ನುಗ್ಗಿ ಜನರ ನರಕಯಾತನೆ ಜೀವನ ನಡೆಸುತ್ತಿದ್ದಾರೆ. 

ದೊಡ್ಡ ಕೆರೆಯ ಪಕ್ಕದಲ್ಲಿರುವ ದುರ್ಗಾನಗರದಲ್ಲಿ ಮಳೆ ಬಂದರೆ ನರಕಯಾತನೆ ಜೀವನ ನಡೆಸುವಂತಾಗಿದೆ. ನೀರು ದುರ್ಗಾನಗರಕ್ಕೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ.

ನಾಲ್ಕು ಮನೆಯೊಳಗೆ ನೀರು ನುಗ್ಗಿದ್ದು, ಅದೇ ರೀತಿ ಕೆರೆ ನೀರು ಮನೆ ಸುತ್ತಲೂ ಸುತ್ತುವರೆದು ಜಲ ದಿಗ್ಬಂಧನವಾಗಿದೆ. 20ಕ್ಕೂ ಹೆಚ್ಚು ಮನೆ ಸುತ್ತಲೂ ಕೆರೆ ನೀರು ಸುತ್ತುವರೆದಿದೆ.

ಹಾವು ಚೇಳುಗಳ ಭಯದಲ್ಲಿ ಜೀವನ: ಕಳೆದ ಆರು ತಿಂಗಳ ಒಳಗೆ ಶರಣಮ್ಮ, ದರ್ಶನ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಕೆರೆ ನೀರು ನುಗ್ಗದಂತೆ ಕ್ರಮಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ. 

***

ಮಳೆಯಿಂದ ಕುಸಿದ ಮನೆಗಳನ್ನು ಸರ್ವೆ ಮಾಡಿ ದಾಖಲಾತಿ ಸಂಗ್ರಹಿಸಲಾಗುತ್ತಿದೆ. ತಂತ್ರಾಂಶದಲ್ಲಿ ದಾಖಲೆ ಮಾಡಿದರೆ ಪರಿಹಾರ ಬರಲಿದೆ
-ಶರಣಬಸಪ್ಪ ಕೋಟೆಪ್ಪಗೊಳ,  ಹೆಚ್ಚುವರಿ ಜಿಲ್ಲಾಧಿಕಾರಿ 

***

ನಮ್ಮ ಹಳೆಯ ಮನೆ ಕುಸಿದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಮನೆಯ ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಶೀಘ್ರವೇ ಪರಿಹಾರ ಬರಲಿದೆ ಎಂದು ತಿಳಿಸಿದ್ದಾರೆ
-ಬಸವರಾಜ ಹೊಸಮನಿ, ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು