ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನವೋಲ್ಲಾಸದಿಂದ ಶಾಲೆಗೆ ಬಂದ ಮಕ್ಕಳು

ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ ಸಂಭ್ರಮ: ಶೇ 32ರಷ್ಟು ಹಾಜರಾತಿ
Last Updated 7 ಸೆಪ್ಟೆಂಬರ್ 2021, 3:43 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ಕಾರಣದಿಂದ ಕಳೆದ ಒಂದೂವರೆ ವರ್ಷದ ನಂತರ 6 ರಿಂದ 8 ವರ್ಗದ ಭೌತಿಕ ತರಗತಿಗಳು ಸೋಮವಾರದಿಂದ ಆರಂಭವಾದವು.

ಶಾಲಾವರಣ ಮಕ್ಕಳಿಂದ ತುಂಬಿತ್ತು. ಮಕ್ಕಳನ್ನು ಶಾಲೆಗೆ ಬಿಡಲು ಪಾಲಕರು ಆಗಮಿಸಿದ್ದರು. ಶಾಲೆಗೆ ಬಂದ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿತ್ತು. ಸೋಮವಾರದಿಂದ ಭೌತಿಕ ತರಗತಿಗಳು ಆರಂಭವಾದರೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಜಿಲ್ಲೆಯಲ್ಲಿ ಶೇ 32ರಷ್ಟು ಹಾಜರಾತಿ ದಾಖಲಾತಿ ಹೊಂದಿದೆ.

ನಗರ ಸೇರಿದಂತೆ ಜಿಲ್ಲಾದ್ಯಂತ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಸ್ಯಾನಿಟೈಸ್‌ ಮಾಡುವ ಸ್ವಚ್ಛತೆ ಕಾಪಾಡಲಾಗಿತ್ತು.

ಶಾಲಾವರಣದಲ್ಲಿ ತಳಿರು ತೋರಣ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಳಿರು ತೋರಣ ಕಟ್ಟಿ ಶಾಲೆಗೆ ಅಲಂಕಾರ ಮಾಡಲಾಗಿತ್ತು. ಶಾಲಾ ಮುಂಭಾಗದ ಆವರಣ ಗೋಡೆಯ ಗೇಟ್‌ಗೆ ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಆಹ್ವಾನಿಸಿದರು. ಇನ್ನೂ ಕೆಲ ಕಡೆ ಮಕ್ಕಳನ್ನು ಹೂವು ಕೊಟ್ಟು ಶಿಕ್ಷಕರು ಶಾಲೆಗೆ ಬರ ಮಾಡಿಕೊಂಡರು. ಮಕ್ಕಳು ಹೂವು ಪಡೆದು ನಗೆ ಬೀರಿ ಶಾಲೆಯ ಒಳಗೆ ತೆರಳಿದರು.

ಥರ್ಮಲ್‌ ಸ್ಕ್ರೀನಿಂಗ್‌: ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ಮೂಲಕ ದೇಹದ ಉಷ್ಣತೆ ಪರೀಕ್ಷೆ ಮಾಡಲಾಯಿತು. ನಂತರ ಕೊಠಡಿಯೊಳಗೆ ಬಿಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಕೆಲ ಶಿಕ್ಷಕರು, ಶಿಕ್ಷಕಿಯರು ಮಾಸ್ಕ್‌, ಪೆನ್‌, ನೋಟ್‌ ಬುಕ್‌ ನೀಡುವ ಮೂಲಕ ಔದಾರ್ಯತೆ ಮೆರೆದರು.

ಶಾಲೆಗಳಿಗೆ ಅಧಿಕಾರಿಗಳ ಭೇಟಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ವಡಗೇರಾ ತಾಲ್ಲೂಕಿನ ಹಲಗೇರಾ, ವಡಗೇರಾ ಶಾಲೆಗೆ ಭೇಟಿ ನೀಡಿದರು. ಶಾಲಾ ಆರಂಭದ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದರು.

ಯಾದಗಿರಿ ತಾಲ್ಲೂಕಿನ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಅವರು ನಗರದ ಅಂಬೇಡ್ಕರ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನಗರಸಭೆ ಸದಸ್ಯ ಹಣಮಂತ ನಾಯಕ ಇದ್ದರು.

ಪ್ರಭಾತ ಪೇರಿ: ‘ಬನ್ನೀರಿ ಬನ್ನೀರಿ ಶಾಲೆಗೆ ಬನ್ನೀರಿ’ ಎಂದು ವಿದ್ಯಾರ್ಥಿಗಳು ಹುಣಸಗಿ ತಾಲ್ಲೂಕಿನ ಗೆದ್ದಲಮರಿಯಲ್ಲಿ ಪ್ರಭಾತ ಪೇರಿ ನಡೆಸಿದರು. ಇದಕ್ಕೆ ಶಿಕ್ಷಕರು, ಶಿಕ್ಷಕರು ಸಾಥ್‌ ನೀಡಿದರು.

***

25 ಸಾವಿರ ಮಕ್ಕಳು ಹಾಜರು

ಯಾದಗಿರಿ: ಜಿಲ್ಲೆಯಲ್ಲಿ ಸಫಮವಾರ ಆರಂಭವಾಗ ಹಿರಿಯ ಪ್ರಾಥಮಿಕ ಶಾಲೆಗೆ 25, 866 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶ್ರಾವಣ ಸೋಮವಾರ ಮತ್ತು ಬೆನಕನ ಅಮಾವಾಸ್ಯೆ ಇದ್ದ ಕಾರಣ ಹೆಚ್ಚಿನ ಕಡೆ ಮಕ್ಕಳು ಬಂದಿಲ್ಲ.

ಜಿಲ್ಲೆಯಲ್ಲಿ 6, 7, 8 ನೇ ತರಗತಿಗೆ 79, 831 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶಹಾಪುರ ತಾಲ್ಲೂಕಿನಲ್ಲಿ 8,092, ಸುರಪುರ ತಾಲ್ಲೂಕಿನಲ್ಲಿ 9,015, ಯಾದಗಿರಿ ತಾಲ್ಲೂಕಿನಲ್ಲಿ 8759 ಸೇರಿದಂತೆ 25,866 ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಬಂದಿದ್ದಾರೆ.

****

ಶಾಲಾ ಹಾಜರಾತಿ ವಿವರ

ತಾಲ್ಲೂಕು; ಶೇಕಡವಾರು

ಶಹಾಪುರ; 31.23

ಸುರಪುರ; 32.94

ಯಾದಗಿರಿ; 33.00

ಒಟ್ಟು; 32.40

***

ಈಗ ಭೌತಿಕ ತರಗತಿಗಳು ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶಾಲೆಯ ನಿಜವಾದ ಅನುಭವ ಸವಿದಂತಾಯಿತು

- ಸಿದ್ರಾಮ ತೋಗಟವೀರ, ಶಿಕ್ಷಕ

***

ಬಹು ದಿನಗಳ ನಂತರ ಶಾಲೆಗೆ ಮರಳಿ ಬರುತ್ತಿರುವುದು ಖುಷಿ ತಂದಿದೆ. ಆನ್‌ಲೈನ್ ತರಗತಿಗಿಂತ ಭೌತಿಕ ತರಗತಿಗಳೇ ಹೆಚ್ಚು ಉತ್ತಮ

- ವಿವೇಕಾನಂದ, 7ನೇ ತರಗತಿ ವಿದ್ಯಾರ್ಥಿ

***

ಮಕ್ಕಳ ಭವಿಷ್ಯ ಹಾಗೂ ಜೀವ ಎರಡು ಗಮನದಲ್ಲಿಟ್ಟುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಿ ಭೌತಿಕ ತರಗತಿಗಳು ನಡೆಸಿದರೆ ಸೂಕ್ತ

-ಸಿದ್ದಪ್ಪ ಜೇಗರ್ ಸೈದಾಪುರ, ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT