ಬುಧವಾರ, ಆಗಸ್ಟ್ 17, 2022
28 °C
ಕತ್ತಲೆಯಲ್ಲಿ ಜನ ಸಂಚಾರ; ನಗರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ

ಯಾದಗಿರಿ: ಕಂಬಗಳಿದ್ದರೂ ಬೆಳಗದ ವಿದ್ಯುತ್‌ ದೀಪಗಳು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಪ್ರಮುಖ ರಸ್ತೆ, ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳು ಇಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಡುತ್ತಾರೆ. ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾದ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ನಗರದ ನಿವಾಸಿಗಳು ಆರೋಪ.

ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ವಿದ್ಯುತ್‌ ಕಂಬಗಳಿದ್ದರೂ ಬೆಳಕಿನ ವ್ಯವಸ್ಥೆ ಇಲ್ಲ. ಹೆಸರಿಗೆ ಮಾತ್ರ ಕಂಬಗಳಿವೆ. ವರ್ಷಗಳು ಕಳೆದರೂ ದುರಸ್ತಿ ಆಗಿಲ್ಲ. ಇದನ್ನು ಕಂಡರೂ ನಗರಸಭೆ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ನಗರದ ಗಂಜ್‌ ವೃತ್ತದಿಂದ ಮತ್ತು ಮೈಲಾಪುರ ಬೇಸ್‌ನಿಂದ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಬೆಳೆಗುತ್ತವೆ. ಹಗಲೂ, ರಾತ್ರಿ ಬೀದಿ ದನಗಳು ಈ ರಸ್ತೆಯಲ್ಲಿ ಓಡಾಡುತ್ತ ಇರುತ್ತವೆ. ಸ್ವಲ್ಪ ಅಜಾಗರೂಕತೆಯಾದರೂ ವಾಹನ ಸವಾರರು ಅಪಘಾತಕ್ಕೀಡಾಗುವುದು ಖಚಿತ.

ದೊಡ್ಡಕೆರೆ, ಸಣ್ಣಕೆರೆ (ಲುಂಬಿನಿ ವನ), ಹೊಸಳ್ಳಿ ರಸ್ತೆ, ಅಜೀಜ್‌ ಕಾಲೊನಿ, ಮೆಥೋಡಿಸ್ಟ್‌ ಚರ್ಚ್‌ ರಸ್ತೆ, ಸ್ಟೇಷನ್‌ ರಸ್ತೆ ಸೇರಿದಂತೆ ಹಳೆ, ಹೊಸ ಬಡಾವಣೆಗಳಲ್ಲೂ ಬೆಳಕಿಲ್ಲದ ಸ್ಥಿತಿ. ಹಿರಿಯ ನಾಗರಿಕರು, ಮಕ್ಕಳು ರಾತ್ರಿ ವೇಳೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಾರೆ.  ಬೀದಿ ದೀಪ ನಿರ್ವಹಣೆಗೆ ನಗರಸಭೆಗೆ ಪ್ರತ್ಯೇಕ ಅನುದಾನ ಇಲ್ಲ. ಹೀಗಾಗಿ ದುರಸ್ತಿ ಭಾಗ್ಯ ಸಿಗುತ್ತಿಲ್ಲ.

ಹೊಸ ಬಡಾವಣೆಗಳಿಲ್ಲ ಬೀದಿ ದೀಪಗಳು: ನಗರದಲ್ಲಿ ಹೊಸದಾಗಿ ನಿರ್ಮಾಣವಾದ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲದಂತಾಗಿದೆ. ಕಂಬಗಳನ್ನು ಹಾಕುವುದು ಜೆಸ್ಕಾಂ ಕೆಲಸ. ಹೀಗಾಗಿ ನಾವು ಬೀದಿ ದೀಪ ಹಾಕಿಲ್ಲ ಎನ್ನುವುದು ನಗರಸಭೆ ಅಧಿಕಾರಿಗಳ ಉತ್ತರ.

ಬಾಲಾಜಿ ನಗರ, ಫಿಲ್ಟರ್‌ ಬೆಡ್‌ ಏರಿಯಾ, ಲಕ್ಕಿ ನಗರ, ಮಾತಾ ಮಾಣಿಕೇಶ್ವರಿ ನಗರ, ಆರ್‌ವಿ ಶಾಲೆ ಅಕ್ಕಪಕ್ಕದಲ್ಲಿ ಹೊಸ ಬಡಾವಣೆಗಳಲ್ಲಿ ರಸ್ತೆಯೂ ಸರಿಯಿಲ್ಲ. ಇಲ್ಲಿ ಕತ್ತಲೆಯಲ್ಲಿ ಸಂಚರಿಸುವಂತಾಗಿದೆ.

ಇದು ಹೊಸ ಬಡಾವಣೆಗಳ ರಸ್ತೆಯಾದರೆ ಹಳೆ ಬಡಾವಣೆಗಳಲ್ಲಿ ಇದಕ್ಕಿಂತ ಭಿನ್ನವೇನೂ ಇಲ್ಲ. ಅಲ್ಲಿಯೂ ಸಮರ್ಪಕ ನಿರ್ವಹಣೆ ಕೊರತೆಯಿಂದ ಬಳಲುವಂತಾಗಿದೆ. 

‘ಮನವಿ ಮಾಡಿದರೂ ಪ್ರಯೋಜನವಿಲ್ಲ’: ‘ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಬೀದಿ ದೀಪ ಅಳವಡಿಸಲು ಅಧಿಕಾರಿಗಳಿಗೆ ಮನವಿ ಮಾಡಿದರೂ ನಮ್ಮ ಪ್ರದೇಶದಲ್ಲಿ  ಅಳವಡಿಸಿಲ್ಲ. ಇದರಿಂದ ನಾವು ಹಲವಾರು ತಿಂಗಳಿಂದ ಕತ್ತಲೆಯಲ್ಲಿ ಸಂಚರಿಸುವಂತಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಿ’ ಎಂದು ಬಾಲಾಜಿ ನಗರ ನಿವಾಸಿ ರಾಘವೇಂದ್ರ ಒತ್ತಾಯಿಸುತ್ತಾರೆ.

‘ಬೀದಿ ದೀಪ ಬೆಳಗದ ಸಮಸ್ಯೆ ಒಂದೆಡೆಯಾದರೆ, ಕೆಲ ಕಡೆ ಬೆಳಿಗ್ಗೆ, ಮಧ್ಯಾಹ್ನದ ವೇಳೆಯೂ ದೀಪಗಳು ಬೆಳಗುತ್ತವೆ. ಇದರಿಂದ ವಿದ್ಯುತ್‌  ಪೋಲಾಗುತ್ತದೆ. ಇತ್ತ ಕಡೆ ಗಮನಹರಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮಲ್ಲಿಕಾರ್ಜುನ ಭಗವಂತ ಹೇಳುತ್ತಾರೆ. 

ಕಳ್ಳತನಕ್ಕೂ ಕಾರಣ: ಬೀದಿ ದೀಪಗಳು ಇಲ್ಲದೆ ಇರುವುದರಿಂದ ಕೆಲ ಕಡೆ ಇದನ್ನು ಬಂಡವಾಳ ಮಾಡಿಕೊಂಡ ಕಳ್ಳರು ಕಳ್ಳತನಕ್ಕೆ ಇಳಿಯುತ್ತಾರೆ. ನಂದಿನಿ ಹಾಲಿನ ವಾಹನದವರು ಕೆಲವೊಮ್ಮೆ ನಗರಕ್ಕೆ ಮಧ್ಯರಾತ್ರಿ ಬಂದು ಹಾಲಿನ ಪಾಕೆಟ್‌ಗಳನ್ನು ಅಂಗಡಿ ಬಳಿ ಇಟ್ಟು ಹೋಗುತ್ತಾರೆ. ಕಳ್ಳರು ಇದನ್ನು ಗಮನಿಸಿ ಕಳವು ಮಾಡಿಕೊಂಡು ಹೋಗಿದ್ದಾರೆ.

ಹೀಗಾಗಿ ಎಲ್ಲ ಕಡೆಯೂ ಬೀದಿ ದೀಪ ಅಳವಡಿಸಬೇಕು ಎನ್ನುವುದು ನಗರ ನಿವಾಸಿಗಳ ಆಗ್ರಹ.

ಹುಣಸಗಿ: ರಸ್ತೆ ವಿಭಜಕಗಳಿಲ್ಲ ದೀಪಗಳು
ಹುಣಸಗಿ:
ತಾಲ್ಲೂಕು ಕೇಂದ್ರ ಹುಣಸಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ರಸ್ತೆ ವಿಭಜಕಗಳ ಮಧ್ಯೆ ಬೀದಿ ದೀಪಗಳನ್ನು ಅಳವಡಿಸುವುದು ಪಟ್ಟಣದ ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದು, ಇಂದಿಗೂ ಇನ್ನೂ ಕಾಲ ಕೂಡಿ ಬಂದಿಲ್ಲ.

ಪಟ್ಟಣದಲ್ಲಿ ದೇವಪುರ ಮನಗೂಳಿ ರಾಜ್ಯ ಹೆದ್ದಾರಿ ಹಾಯ್ದು ಹೋಗಿದ್ದ ಈ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಪಟ್ಟಣದ ಸೌಂದರ್ಯಿಕರಣಕ್ಕೆ ಒತ್ತು ನೀಡಲಾಗುತ್ತದೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ, ಪಟ್ಟಣದಲ್ಲಿ ಪ್ರಮುಖ ರಸ್ತೆ ನಿರ್ಮಿಸಲಾಯಿತು. ಅದರ ಮಧ್ಯೆ ವಿಭಜಕಗಳನ್ನು ಮಾತ್ರ ಅಳವಡಿಸಿ ಕೈ ತೊಳೆದುಕೊಂಡಿತು.

‘ಪಟ್ಟಣ ಪಂಚಾಯಿತಿಯಿಂದ ಕೆಲ ಕಡೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದ್ದರಿಂದಾಗಿ ಹಗಲು ಹೊತ್ತಿನಲ್ಲಿಯೂ ದೀಪಗಳು ಉರಿಯುತ್ತವೆ’ ಎಂದು ಪಟ್ಟಣದ ಚನ್ನಕುಮಾರ ದಿಂಡವಾರ ಹೇಳುತ್ತಾರೆ.

‘ಪಟ್ಟಣದ ಮುಖ್ಯ ರಸ್ತೆಯ ಮಧ್ಯ ಭಾಗದಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಈಗಾಗಲೇ ಇಲಾಖೆಗೆ ಕೋರಲಾಗಿದೆ. ಅನುದಾನ ಲಭ್ಯವಾದ ಬಳಿಕ ದೀಪಗಳನ್ನು ಅಳವಡಿಸುವುದಾಗಿ’ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣಕುಮಾರ ತಿಳಿಸಿದರು.

ಸುರಪುರ: ಹಗಲಲ್ಲೂ ಪ್ರಕಾಶಿಸುವ ಬೀದಿ ದೀಪಗಳು
ಸುರಪುರ:
ನಗರದಲ್ಲಿ ಬೀದಿ ದೀಪಗಳು ಹಗಲಲ್ಲೂ ಪ್ರಕಾಶಿಸುತ್ತವೆ. ಬೆಳಿಗ್ಗೆ ದೀಪ ಆರಿಸುವಲ್ಲಿ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಲವು ಸ್ಥಳಗಳಲ್ಲಿ ಬೀದಿ ದೀಪಗಳಿಲ್ಲದೆ ನಾಗರಿಕರು ಪರದಾಡುವಂತಾಗಿದೆ.

ನಗರದಲ್ಲಿ 31 ವಾರ್ಡ್‍ಗಳಿವೆ. 3,323 ವಿದ್ಯುತ್ ಕಂಬಗಳಿವೆ. 2,823 ಕಂಬಗಳನ್ನು ದೀಪ ಅವಶ್ಯವಿರುವ ಕಂಬಗಳೆಂದು ಗುರುತಿಸಲಾಗಿದೆ. ಅದರಲ್ಲಿ 2,250 ಕಂಬಗಳಿಗೆ ಮಾತ್ರ ವಿವಿಧ ದೀಪಗಳನ್ನು ಹಾಕಲಾಗಿದೆ. ಅವುಗಳಲ್ಲೂ 500 ಕಂಬಗಳಿಗೆ ದೀಪಗಳಿಲ್ಲದೆ ಕತ್ತಲು ಆವರಿಸಿದೆ.

ಗಾಂಧಿವೃತ್ತ, ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತ, ಕುಂಬಾರಪೇಟೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ 10 ಹೈಮಾಸ್ಟ್‌ಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಎರಡು ಹಾಳಾಗಿವೆ. 851 ಕಂಬಗಳಿಗೆ ಮರ್ಕ್ಯೂರಿ, 739 ಕಂಬಗಳಿಗೆ ಟ್ಯೂಬ್‌ಲೈಟ್, 900ಕ್ಕೂ ಹೆಚ್ಚು ಕಂಬಗಳಿಗೆ ಬಲ್ಬ್ ಅಳವಡಿಸಲಾಗಿದೆ ಎಂದು ನಗರಸಭೆ ದಾಖಲೆ ಹೇಳುತ್ತದೆ.

ವಾಸ್ತವದಲ್ಲಿ ಬಹುತೇಕ ಕಡೆ ದೀಪಗಳೇ ಇಲ್ಲ. ಅವಶ್ಯವಿರುವ ಕೆಲವಡೆ ಜೆಸ್ಕಾಂ ಕಂಬ ಹಾಕಿಲ್ಲ. ಮತ್ತೆ ಕೆಲವು ಕಡೆ ತಂತಿ ಜೋಡಣೆ ಮಾಡಿಲ್ಲ. ಹೀಗಾಗಿ ಜೆಸ್ಕಾಂ ಮತ್ತು ನಗರಸಭೆ ಹಗ್ಗಜಗ್ಗಾಟದಲ್ಲಿ ನಾಗರಿಕರು ಕತ್ತಲ್ಲಲ್ಲಿ ತಿರುಗಾಡುವಂತಾಗಿದೆ. ಕೆಲ ಮುಖ್ಯ ರಸ್ತೆಗಳಲ್ಲಿ ದೀಪಗಳು ಪ್ರಜ್ವಲಿಸುತ್ತಿರುತ್ತವೆ. ಆದರೆ, ಬಡಾವಣೆಯ ಸಂದಿ ಗೊಂದಿಗಳಲ್ಲಿ ದೀಪ ಹಾಕಲು ಸಿಬ್ಬಂದಿ ಮರೆತಂತೆ ಇದೆ ಎಂದು ನಾಗರಿಕರು ಆರೋಪಿಸುತ್ತಾರೆ.

ಶಹಾಪುರ: ಖಾಸಗಿ ಕಂಪನಿಗೆ ಬೀದಿ ದೀಪಗಳ ನಿರ್ವಹಣೆ
ಶಹಾಪುರ:
ನಗರದಲ್ಲಿ ಮುಖ್ಯ ಬೀದಿಯನ್ನು ಹೊರತುಪಡಿಸಿ 31 ವಾರ್ಡ್‌ಗಳ ಬೀದಿ ದೀಪಗಳ ನಿರ್ವಹಣೆಯನ್ನು ಖಾಸಗಿ ಕಂಪನಿಯಾದ ಸಂಗಮೇಶ ಎಲೆಕ್ಟ್ರಿಕಲ್ ಗುತ್ತಿಗೆಯ ಕಂಪನಿಗೆ ಆರು ತಿಂಗಳ ಹಿಂದೆ ನಗರಸಭೆ ನೀಡಿದೆ. ಪ್ರತಿ ತಿಂಗಳು ಬಲ್ಬ್ ಹೋಗಿದ್ದರೆ ಹಾಕುತ್ತಾರೆ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ನಗರದ ಬಸವೇಶ್ವರ ವೃತ್ತ, ಗಾಂಧಿಚೌಕ್, ವಾಲ್ಮೀಕಿ ವೃತ್ತ ಸೇರಿದಂತೆ ಏಳು ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಿದೆ. ಸೋಡಿಯಂ ಲೈಟ್ ವಿದ್ಯುತ್ ದೀಪಗಳು ಇವೆ.

ಆದರೆ, ಸೋಡಿಯಂ ದೀಪಗಳನ್ನು ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಮನೆ ಮುಂದೆ ಮತ್ತು ಮಳಿಗೆಯ ಹತ್ತಿರ ಅಳವಡಿಸಿದ್ದಾರೆ. ಅಲ್ಲದೆ ಹಗಲು ಹೊತ್ತಿನಲ್ಲಿಯೂ ದೀಪಗಳನ್ನು ಉರಿಸುತ್ತಾರೆ. ಇದರಿಂದ ಅನವಶ್ಯವಾಗಿ ವಿದ್ಯುತ್ ಪೋಲಾಗುವುದರ ಜೊತೆಗೆ ಸಾರ್ವಜನಿಕ ಹಣವು ವೆಚ್ಚವಾಗುತ್ತಲಿದೆ. ನಗರದ ಹಲವು ಬಡಾವಣೆಯ ದೀಪಗಳು ಇದೇ ಕತೆಯಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ನಗರದ ಜನತೆಯ ಆರೋಪವಾಗಿದೆ.

ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳ ವಿವರ
ಒಟ್ಟು ವಿದ್ಯುತ್‌ ಕಂಬಗಳು;
8045
ಬೀದಿ ದೀಪ ಇರುವ ಕಂಬಗಳು; 4675
ಬೀದಿ ದೀಪ ಇರದೇ ಇರುವ ಕಂಬಗಳು; 3370
ಎಸ್‌.ವಿ ಬೀದಿ ದೀಪಗಳು; 2650
ಟ್ಯೂಬ್‌ ಲೈಟ್‌ ಬೀದಿ ದೀಪಗಳು; 1750
ಹೈಮಾಸ್ಟ್‌ ಕಂಬಗಳು; 8,400
ವ್ಯಾಟ್ ಎಂ.ಎಚ್‌ ದೀಪಗಳು; 96

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು