ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಮಸ್ಯೆಗಳ ಆಗರ ನಗರ ಆರೋಗ್ಯ ಕೇಂದ್ರ

ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲೇ ಅವ್ಯವಸ್ಥೆ; ಸೌಕರ್ಯಗಳ ಕೊರತೆ
Last Updated 7 ಅಕ್ಟೋಬರ್ 2021, 7:01 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳೇಇಲ್ಲ. ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ.

ಈ ಮೊದಲು ನಗರ ಆರೋಗ್ಯ ಕೇಂದ್ರ ಮಹಾತ್ಮ ಗಾಂಧಿ ವೃತ್ತದ ಸಮೀಪದ ರಾಠಿಭವನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿಂದ ಗಣೇಶ ನಗರಕ್ಕೆ ಸ್ಥಳಾಂತರಿಸಲಾಯಿತು. ಕಳೆದ ಒಂದೂವರೆ ವರ್ಷದಿಂದ ಡಿಎಚ್‌ಒ ಆವರಣದಲ್ಲಿ ಸಣ್ಣ ಕೊಠಡಿಯಲ್ಲಿ ಆರೋಗ್ಯ ಕೇಂದ್ರ ನಡೆಯುತ್ತಿದೆ.

ಔಷಧಿ ಉಗ್ರಾಣ ಪಕ್ಕದಲ್ಲಿರುವ, ಆಗಿನ ಜಿಲ್ಲಾ ಸರ್ವೇಕ್ಷಣಾ ಕಚೇರಿಯ ಸ್ಥಳವನ್ನೇ ನಗರ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಆದರೆ, ಇಲ್ಲಿ ಯಾವುದೇ ಸೌಲಭ್ಯಗಳು ಇಲ್ಲ.

ನಗರ ಆರೋಗ್ಯ ಕೇಂದ್ರ ಎಂದು ಗುರುತಿಸಲು ಯಾವುದೇ ನಾಮಫಲಕಗಳು ಇಲ್ಲ. ಹೊಸದಾಗಿ ಬಂದವರಿಗೆ ಯಾವುದೇ ಮಾಹಿತಿಯೂ ಲಭಿಸುವುದಿಲ್ಲ.

‘ಗಾಳಿ, ಮಳೆಗೆ ನಾಮಫಲಕ ಹಾರಿ ಹೋಗಿ ಬಿದ್ದಿದೆ. ಅದನ್ನು ಮತ್ತೆ ಅಳವಡಿಸಲಾಗುವುದು’ ಎನ್ನುತ್ತಾರೆ ವೈದ್ಯಾಧಿಕಾರಿ.

ಚಿಕಿತ್ಸೆಗೆಂದು ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ ಇಲ್ಲಿ ಸೌಲಭ್ಯಗಳ ಕೊರತೆ ಇದೆ. ಕುಳಿತುಕೊಳ್ಳಲು ಜಾಗ ಕೊರತೆ ಜತೆಗೆ ಸೂಕ್ತ ಆಸನ ವ್ಯವಸ್ಥೆಯೂ ಇಲ್ಲ. ಮೂತ್ರ ಪರೀಕ್ಷೆಗಾಗಿ ಡಿಎಚ್‌ಒ ಕಚೇರಿ ಒಳಗಿರುವ ಶೌಚಾಲಯವನ್ನು ಅವಲಂಬಿಸಬೇಕಾಗಿದೆ. ಕಟ್ಟಡ ಅಕ್ಕಪಕ್ಕದಲ್ಲೇ ಗಿಡಗಂಟಿ ಬೆಳೆದು ನಿಂತಿದೆ.

ಜಿಲ್ಲಾಸ್ಪತ್ರೆ ನಂತರ ನಗರ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ ಇದೆ. ಆದರೆ, ಇಲ್ಲಿರುವ ಆಸ್ಪತ್ರೆಯೇ ಸಮಸ್ಯೆಗಳ ಆಗರವಾಗಿದೆ. ನಗರ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ ಎಂದು ವೈದ್ಯರೇ ಒಪ್ಪಿಕೊಳ್ಳುತ್ತಾರೆ.

13 ಮಂದಿ ಸಿಬ್ಬಂದಿ:ನಗರ ಆರೋಗ್ಯ ಕೇಂದ್ರದಲ್ಲಿ 13 ಸಿಬ್ಬಂದಿ ಇದ್ದಾರೆ. ಇವರಲ್ಲಿ 7 ಮಂದಿ ಕಾಯಂ ಸಿಬ್ಬಂದಿ ಇದ್ದರೆ 6 ಜನ ಎರವಲು ಆಧಾರದ ಮೇಲೆ ಬಂದಿದ್ದಾರೆ. ಇಷ್ಟು ಸಿಬ್ಬಂದಿ ನಗರ ಆರೋಗ್ಯ ಕೇಂದ್ರದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಕೋವಿಡ್‌ ಲಸಿಕೆ ಕಾರ್ಯಕ್ಕೆಂದು ಸಿಬ್ಬಂದಿ ಹೊರಗಡೆಯೇ ಇರುತ್ತಾರೆ.

ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ
ನಗರದ ಹಳೆ ಜಿಲ್ಲಾ ಆಸ್ಪತ್ರೆಯಲ್ಲಿಯೂ ಸೌಲಭ್ಯಗಳು ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಜನರೇಟರ್ ವ್ಯವಸ್ಥೆ ಇದ್ದರೂ ಸಮರ್ಪಕ ವ್ಯವಸ್ಥೆಇಲ್ಲದ ಕಾರಣ ಸೋಮವಾರ ರಾತ್ರಿ ರೋಗಿಗಳು ಕತ್ತಲೆಯಲ್ಲಿಕಾಲ ಕಳೆದಿದ್ದಾರೆ.

ಸೋಮವಾರ ಸಂಜೆ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಈ ವೇಳೆ ವಿದ್ಯುತ್‌ ಕಡಿತವಾಗಿತ್ತು. ಬಹಳ ಹೊತ್ತಿನ ವರೆಗೆ ವಿದ್ಯುತ್‌ ವ್ಯತ್ಯಯದಿಂದ ರೋಗಿಗಳು ಪರದಾಡಿದರು. ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಕಾಲ ಕಳೆದಿದ್ದಾರೆ.

ಮಹಿಳೆಯರು, ಮಕ್ಕಳು ನಿದ್ದೆ ಇಲ್ಲದೆ ಚಡಪಡಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲೇ ಇಂತಹ ಅವ್ಯವಸ್ಥೆ ಕಂಡು ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

***

ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ನಡೆಸುವಂತೆ ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಸೂಚಿಸಿದ್ದಾರೆ. ಹೀಗಾಗಿ ಕಟ್ಟಡದ ಹುಡುಕಾಟ ನಡೆದಿದೆ.
-ಡಾ.ಇಂದುಮತಿ ಕಾಮಶೆಟ್ಟಿ,ಡಿಎಚ್‌ಒ

***

ಒಂದು ತಿಂಗಳಲ್ಲಿ ನಗರ ಆರೋಗ್ಯ ಕೇಂದ್ರವನ್ನು ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು. ಸೂಕ್ತ ಕಟ್ಟಡವನ್ನು ಪರಿಶೀಲಿಸುತ್ತಿದ್ದೇವೆ.
-ಡಾ.ನಾಗರಾಜ ಪಾಟೀಲ, ಆಡಳಿತ ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ

***

ಸೌಲಭ್ಯಗಳು ಇಲ್ಲದಿದ್ದರೂ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲ ಕೆಲಸಗಳು ಸುಗಮವಾಗಿ ಆಗುತ್ತಿವೆ. ಸ್ಥಳಾಂತರ ಯೋಜನೆ ಮೇಲಾಧಿಕಾರಿಗಳದ್ದು.
-ಡಾ.ವಿನಿತಾ, ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ

***

ನಗರ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು.
-ಸೋಮಶೇಖರ ಮಸ್ಕನಳ್ಳಿ, ನಗರ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT