ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಸಂಭ್ರಮದ ಕಂದಕೂರ ಚೇಳಿನ ಜಾತ್ರೆ

ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಿಂದಲೂ ಭಕ್ತರ ಆಗಮನ, ಚೇಳಿಗೆ ವಿಶೇಷ ಪೂಜೆ
Last Updated 3 ಆಗಸ್ಟ್ 2022, 5:20 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಕೊಂಡಮೇಶ್ವರಿ ದೇವಿ ಹಾಗೂ ಚೇಳಿನ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ಜಿಲ್ಲೆ, ಹೊರಜಿಲ್ಲೆ, ಪಕ್ಕದ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಿಂದ ಭಕ್ತರ ನೆರೆದಿದ್ದರು.

ಜಾತ್ರೆ ನಿಮಿತ್ತ ಕೊಂಡಮೇಶ್ವರಿ ದೇವಿಗೆ ವಿಶೇಷ ಪೂಜೆ, ವಿಧಿವಿಧಾನಗಳು ನೆರವೇರಿದವು. ದೇವಿಯನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ದೇವಿ ದರ್ಶನ ಪಡೆದರು.ಕೊಂಡಮೇಶ್ವರಿ ದೇವಿ ಅನುಗ್ರಹದಿಂದ ಪಂಚಮಿ ದಿನ ಚೇಳು ಕುಟುಕುವುದಿಲ್ಲ. ಒಂದು ವೇಳೆ ಕುಟುಕಿದರೂ ವಿಷ ಏರುವುದಿಲ್ಲಎಂಬ ನಂಬಿಕೆಯಿದೆ.

ಚೇಳುಗಳ ಹುಡುಕಾಟ: ಜಾತ್ರೆಗೆ ಬಂದಿದ್ದ ಭಕ್ತರು ಬೆಟ್ಟದಲ್ಲಿ ಚೇಳುಗಳ ಹುಡುಕಾಟದಲ್ಲಿ ತೊಡಗಿದ್ದರು. ಕಲ್ಲುಗಳ ಸಂದಿನಲ್ಲಿ ಅಡಗಿಕೊಂಡಿದ್ದ ಚೇಳುಗಳನ್ನು ಹಿಡಿದು ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ತಮ್ಮ ಕೈಯಲ್ಲಿಡಿದು ಆಶ್ಚರ್ಯಚಕಿತಗೊಂಡರು.

ಕಳೆದ ಐದಾರು ವರ್ಷಗಳಿಂದ ಜಾತ್ರೆಗೆ ಬರುತ್ತಿದ್ದೇನೆ. ಈವರೆಗೆ ಚೇಳು ಕುಟುಕಿಲ್ಲ. ಚೇಳುಗಳನ್ನು ಕೈಯಲ್ಲಿ ಹಿಡಿಯುವುದೇ ಸಂಭ್ರಮ ಎಂದು ಭಕ್ತ ಹಣಮಂತ ಬೋಯಿನ್‌ ತಿಳಿಸಿದರು.

ಪಲ್ಲಕ್ಕಿ ಉತ್ಸವ: ಕೊಂಡಮೇಶ್ವರಿ ಜಾತ್ರೆ ಅಂಗವಾಗಿ ಗ್ರಾಮದಿಂದ ಬೆಟ್ಟದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮಸ್ಥರು ಪಲ್ಲಕಿ ಹೊತ್ತು ಬೆಟ್ಟವನ್ನು ಹತ್ತುತ್ತಾರೆ. ಬಣ್ಣದ ದೇವರ ಹಸುಗೆ ಬಟ್ಳೆಗಳಿಂದ ಅದಕ್ಕೆ ಅಲಂಕಾರ ಮಾಡಲಾಗಿತ್ತು. ದೇಗುಲ ಸುತ್ತ 5 ಸಾರಿ ಪ್ರದಕ್ಷಿಣೆ ಹಾಕಲಾಯಿತು.

ಚೇಳು ಹಿಡಿದು ಜನರು ಭಕ್ತಿಯಿಂದ ನಮಿಸಿದರೆ, ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿಕ್ಲಿಕ್ಕಿಸಿಕೊಂಡರು. ದೂರದ ಊರುಗಳವರಿಗೆ ವಿಡಿಯೋ ಕಾಲ್‌ ಮಾಡಿ ಚೇಳು ಹಿಡಿದುಕೊಂಡಿರುವುದನ್ನು ತೋರಿಸಿದರು.

ವ್ಯಾಪಾರ ವಹಿವಾಟು ಜೋರು: ಕೊರೊನಾದಿಂದಾಗಿ ಜಾತ್ರೆ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಜಾತ್ರೆ ನಡೆಸಿದ್ದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಖಾರಾ ಮಂಡಳು, ಬೆಂಡೆ ಬತ್ತಾಸು, ಭಜ್ಜಿ, ಜಿಲೆಬಿ ಸೇರಿದಂತೆ ಮಕ್ಕಳ ಆಟಿಕೆಗಳು, ಬಳೆ, ಮಕ್ಕಳ ಆಟಿಕೆ, ಮಹಿಳೆಯರ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಇಡಲಾಗಿತ್ತು.

ಟ್ರಾಫಿಕ್‌ ಜಾಂ: ಸಾವಿರಾರು ಭಕ್ತರು ಗ್ರಾಮಕ್ಕೆ ಬೈಕ್, ಕಾರು, ಆಟೊ, ಟಂಟಂಗಳ ಮೂಲಕ ಆಗಮಿಸಿದ್ದರು. ಬೆಟ್ಟಕ್ಕೆ ಪ್ರವೇಶಿಸುವ ಮಧ್ಯೆ ಟ್ರಾಫಿಕ್‌ ಜಾಂ ಉಂಟಾಗಿ ವಾಹನ ಸವಾರರು ಸುಮಾರು 20 ನಿಮಿಷ ಪರದಾಡಿದರು. ಪೊಲೀಸರು ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು.

***

ಗ್ರಾಮದಲ್ಲಿ ವಿಶೇಷ ಜಾತ್ರೆ ನಡೆಯುವುದು ಸಂಭ್ರಮ ಹೆಚ್ಚಿಸಿದೆ. ಕಳೆದ ವರ್ಷಕಿಂತ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಿದೆ. ಕೊಂಡಮೇಶ್ವರಿ ದೇವಿ ಮಹಿಮೆಯಿಂದ ಚೇಳು ಕುಟುವುದಿಲ್ಲ
ಮೋನಿಕಾ ಕಂದಕೂರ, ಭಕ್ತೆ

***

ಪಂಚಮಿ ಹಬ್ಬದ ವಿಶೇಷ ದಿನ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಮಾತ್ರ ಚೇಳುಗಳು ಕಾಣಿಸಿಕೊಳ್ಳುತ್ತಿವೆ. ಇದು ಇಲ್ಲಿನ ಪ್ರಕೃತಿಯಾಗಿದೆ. ಭಕ್ತರು ಚೇಳುಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ
ನಾಗೇಶ ಗದ್ದಿಗಿ, ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT