ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅಪರಾಧಕ್ಕೆ ಕಡಿವಾಣ ಹಾಕಿದ ಕೊರೊನಾ!

ಮಾರ್ಚ್‌ನಲ್ಲಿ ವಿವಿಧ 16 ಪ್ರಕರಣಗಳು ದಾಖಲು, ಎಲ್ಲೆಡೆ ಪೊಲೀಸರ ನಿಗಾ
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ಭೀತಿ, ಲಾಕ್‌ಡೌನ್‌ ಪರಿಣಾಮ ಅಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ. ಮಾರ್ಚ್‌ ತಿಂಗಳಲ್ಲಿ ಕೊಲೆ ಯತ್ನ, ಮನೆ ದರೋಡೆ, ವಂಚನೆ, ಫೋಸ್ಕೊ ಸೇರಿದಂತೆ ಇನ್ನಿತರ ಅ‍ಪರಾಧ ಪ್ರಕರಣಗಳು ದಾಖಲಾಗಿಲ್ಲ.

ಜಿಲ್ಲೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ, ವಂಚನೆ ಸೇರಿದಂತೆ ಇನ್ನಿತರ ಘಟನೆಗಳು ಸಂಭವಿಸುತ್ತಿದ್ದವು. ಆದರೆ, ಇದೆಲ್ಲಕ್ಕೂ ಮಾರ್ಚ್‌ ತಿಂಗಳಲ್ಲಿ ಬ್ರೇಕ್‌ ಬಿದ್ದಿದೆ. ಅಪಘಾತ ಪ್ರಕರಣಗಳು ಇಲ್ಲದೇ ಜಿಲ್ಲೆಯು ಶಾಂತವಾಗಿದೆ.

ಜಿಲ್ಲೆಯಲ್ಲಿ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಘಟಿಸಿದ ಅರ್ಧದಷ್ಟು ಪ್ರಕರಣಗಳು ಮಾರ್ಚ್‌ನಲ್ಲಿ ದಾಖಲಾಗಿಲ್ಲ. ಲಾಕ್‌ಡೌನ್‌ ಆಗಿರುವ ಪರಿಣಾಮ ಎಲ್ಲರೂ ಮನೆಯಲ್ಲೇ ಇದ್ದಾರೆ. ಮನೆ ದರೋಡೆಯಂತಹ ಪ್ರಕರಣಗಳು ಕೂಡ ದಾಖಲಾಗಿಲ್ಲ.

ಜನವರಿ, ಫೆಬ್ರುವರಿತಿಂಗಳಲ್ಲಿ 5 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದರೆ, ಮಾರ್ಚ್‌ನಲ್ಲಿ ಒಂದೂ ನಡೆದಿಲ್ಲ. ಜನವರಿಯಲ್ಲಿ 3 ಮನೆ ದರೋಡೆ ಪ್ರಕರಣಗಳು ದಾಖಲಾಗಿದ್ದು, ಫೆಬ್ರುವರಿ, ಮಾರ್ಚ್‌ನಲ್ಲಿ ಇದಕ್ಕೆ ಕಡಿವಾಣ ಬಿದ್ದಿದೆ. ಜನವರಿಯಲ್ಲಿ 14, ಫೆಬ್ರುವರಿಯಲ್ಲಿ 9, ಮಾರ್ಚ್‌ನಲ್ಲಿ 2 ಜಗಳ ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿವೆ.

2 ಮಾರಕ ಅಪಘಾತ ಪ್ರಕರಣಗಳು ದಾಖಲಾಗಿದ್ದರೆ, 6 ಮಾರಕವಲ್ಲದ ಪ್ರಕರಣಗಳು ಸಂಭವಿಸಿವೆ. ಜನವರಿಯಲ್ಲಿ 13, ಫೆಬ್ರುವರಿಯಲ್ಲಿ 21 ಮಾರಕ ಅಪಘಾತ ಸಂಭವಿಸಿವೆ. ಜನವರಿ ತಿಂಗಳಲ್ಲಿ 10, ಫೆಬ್ರುವರಿಯಲ್ಲಿ 5, ಮಾರ್ಚ್‌ನಲ್ಲಿ 2 ಗಲಭೆಗಳು ಪ್ರಕರಣಗಳು ಮಾತ್ರ ದಾಖಲಾಗಿವೆ.

ವಂಚನೆ ಪ್ರಕರಣಗಳಿಲ್ಲ: ಮಹಿಳಾ ಠಾಣೆಗಳಲ್ಲಿ ತಿಂಗಳಲ್ಲಿ ಹಲವು ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದವು. ಕೆಲವು ರಾಜಿಯಾದರೆ, ಇನ್ನೂ ಕೆಲವು ಎಫ್‌ಐಆರ್‌ ಹಂತಕ್ಕೆ ತಲುಪತ್ತಿದ್ದವು. ಆದರೆ, ಮಾರ್ಚ್‌ನಲ್ಲಿ ಒಂದು ದಾಖಲಾಗಿಲ್ಲ. ಜನವರಿಯಲ್ಲಿ 5, ಫೆಬ್ರುವರಿಯಲ್ಲಿ 2 ಪ್ರಕರಣ ದಾಖಲಾಗಿವೆ.

ಫೆಬ್ರುವರಿಯಲ್ಲಿ 3 ಕೊಲೆಗಳಾಗಿದ್ದರೆ, ಮಾರ್ಚ್‌ನಲ್ಲಿ 1 ಪ್ರಕರಣ ದಾಖಲಾಗಿದೆ. ಫೋಕ್ಸೊ ಕಾಯ್ದೆಯಡಿ ಮಾರ್ಚ್‌ನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಜನವರಿ 2, ಫೆಬ್ರುವರಿ 2 ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆ ಆಗಿಲ್ಲ. ಜನವರಿಯಲ್ಲಿ 2, ಫೆಬ್ರುವರಿಯಲ್ಲಿ 1, ಮಾರ್ಚ್‌ನಲ್ಲಿ 2 ಕೇಸ್‌ ರಿಜಿಸ್ಟರ್‌ ಆಗಿವೆ. ಜನವರಿಯಲ್ಲಿ 4, ಫೆಬ್ರುವರಿಯಲ್ಲಿ 3 ದರೋಡೆ ಪ್ರಕರಣಗಳಾಗಿವೆ.

ಜಾತಿ ನಿಂದನೆ ಶೂನ್ಯ:ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮೇಲೆ ನಡೆಯುತ್ತಿದ್ದ ಜಾತಿ ನಿಂದನೆ ಪ್ರಕರಣಗಳು ಶೂನ್ಯಕ್ಕೆ ತಲುಪಿವೆ. ಜನವರಿಯಲ್ಲಿ 7, ಫೆಬ್ರುವರಿಯಲ್ಲಿ 3 ಪ್ರಕರಣಗಳಾಗಿದ್ದರೆ ಮಾರ್ಚ್‌ನಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಜನವರಿಮತ್ತು ಫೆಬ್ರುವರಿಯಲ್ಲಿ 20 ಕಳ್ಳತನ ಪ್ರಕರಣಗಳಾಗಿದ್ದು, ಮಾರ್ಚ್‌ನಲ್ಲಿ 1 ಪ್ರಕರಣ ಮಾತ್ರ ದಾಖಲಾಗಿದೆ. ಒಟ್ಟಿನಲ್ಲಿ ಕೊರೊನಾ ಭೀತಿಯಿಂದಾಗಿ ಅಪರಾಧ ಕೃತ್ಯಗಳು ಕಡಿಮೆ ಆಗಿವೆ. ಸಣ್ಣ‍ಪುಟ್ಟ ಕಾರಣಗಳಿಗೆ ಪೊಲೀಸ್‌ ಠಾಣೆ ಮೆಟ್ಟಿಲು ಏರುವ ಪ್ರಸಂಗಗಳು ಹೆಚ್ಚಿದ್ದವು.

ಆದರೆ, ಹೊರಗಡೆ ಹೋದರೆ ಪೊಲೀಸ್‌ ಲಾಠಿ ಏಟು ಬೀಳುತ್ತದೆ ಎಂದು ಹಲವರು ಅಗತ್ಯ ವಸ್ತುಗಳಿಗಳಿಗೆ ಮಾತ್ರ ಒಡಾಡುತ್ತಿದ್ದಾರೆ. ಇದರಿಂದ ಠಾಣೆ ಮೆಟ್ಟಿಲು ಏರಲು ಹತ್ತಲು ಹಿಂಜರಿಕೆಯೂ ಕಾರಣವಾಗಿರಬಹುದು.

***

ಮಾರ್ಚ್‌ ತಿಂಗಳಲ್ಲಿ ಅಪಘಾತ ಪ್ರಕರಣಗಳಲ್ಲಿ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿದೆ. ಇದಕ್ಕೆ ಲಾಕ್‌ಡೌನ್‌ ಕಾರಣವಾಗಿರಬಹುದು. ಆದರೂ ಕೆಲ ಗಂಭೀರ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ

- ಋಷಿಕೇಶ ಭಗವಾನ್‌ ಸೋನವಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮಾರ್ಚ್‌ ತಿಂಗಳಲ್ಲಿ ನಗರ ಠಾಣೆಯಲ್ಲಿ 5 ಪ್ರಕರಣಗಳು ಮಾತ್ರ ದಾಖಲಾಗಿದ್ದು, ಮಾಸ್ಕ್ ಮಾರಾಟ ದರ ಹೆಚ್ಚಳಕ್ಕೆ 3, ಜೂಜು ಮತ್ತು ಜಗಳಕ್ಕೆ ಸಂಬಂಧಿಸಿದಂತೆ ತಲಾ 1 ಪ್ರಕರಣ ದಾಖಲಾಗಿವೆ.

- ಕೃಷ್ಣ ಸುಬೇದಾರ್‌, ಅಪರಾಧ ವಿಭಾಗದ ಪಿಎಸ್‌ಐ, ನಗರ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT