ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚನಸೂರ್ ಹೇಳಿಕೆ ಬಾಲಿಶತನದ್ದು; ಬೋರಬಂಡಾ

ಗುರುಮಠಕಲ್‌: ಕೆರೆ ತುಂಬಿಸುವ ಯೋಜನೆ ಕುರಿತು ಜನರಿಗೆ ಸುಳ್ಳು ಮಾಹಿತಿ
Last Updated 6 ಡಿಸೆಂಬರ್ 2019, 11:55 IST
ಅಕ್ಷರ ಗಾತ್ರ

ಯಾದಗಿರಿ: ಗುರುಮಠಕಲ್‌ ಕ್ಷೇತ್ರದ ಕೆರೆ ತುಂಬುವ ಯೋಜನೆ ನನ್ನ ಕನಸಿನ ಕೂಸಾಗಿದ್ದು, ಈಗಾಗಲೇ ಜಾರಿಯಾಗಿರುವ ಈ ಯೋಜನೆಯನ್ನು ತಾವೇ ಜಾರಿಗೊಳಿಸಿರುವುದಾಗಿ ಹೇಳುತ್ತಿರುವ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ್ ಹೇಳುತ್ತಿರುವುದು ಬಾಲಿಶತನದಿಂದ ಕೂಡಿದೆ ಎಂದು ಬಿಜೆಪಿ ಮುಖಂಡ ಹಾಗೂ ಗುರುಮಠಕಲ್‌ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ ಟೀಕಿಸಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ನಮ್ಮ ಹೋರಾಟ ಸಮಿತಿಯಿಂದ ಗುರುಮಠಕಲ್‌ ಕ್ಷೇತ್ರದಾದ್ಯಂತ ಸಂಚರಿಸಿ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಜನಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ನಂತರ ಸರ್ಕಾರ 55 ಕೆರೆಗಳನ್ನು ಭೀಮಾ ನದಿಯಿಂದ ಭರ್ತಿ ಮಾಡಲು ₹ 452 ಕೋಟಿ ಅನುದಾನ ಮಂಜೂರು ಮಾಡಿತು. ಕಾಮಗಾರಿ ಈಗಾಗಲೇ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.

ನವೆಂಬರ್‌ 05 ರಂದು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುಮಠಕಲ್‌ ಕ್ಷೇತ್ರದ ನೀರಾವರಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಇದಲ್ಲದೆ ನಾನು ಹಾಗೂ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ಸೇರಿ ಗುರುಮಠಕಲ್‌ ಹಾಗೂ ಯಾದಗಿರಿ ಕ್ಷೇತ್ರಗಳ 60 ಕೆರೆಗಳು ಭರ್ತಿ ಮಾಡಲು ₹ 480 ಕೋಟಿ ಅನುದಾನ ಬಿಡಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಾಬುರಾವ ಚಿಂಚನಸೂರ್‌ ಅವರು ಎಲ್ಲ ತಾವೇ ಮಾಡಿದ್ದಾಗಿ ಹೇಳಿಕೆ ನೀಡುತ್ತ ಕ್ಷೇತ್ರದ ಜನರ ದಿಕ್ಕು ಬದಲಿಸುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿಕೆ ಕೊಡುತ್ತಿರುವುದು ಸರಿಯಲ್ಲ. ಮಾಜಿ ಸಚಿವರಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೆರೆ ತುಂಬುವ ಯೋಜನೆ ಬಗ್ಗೆ ಎಷ್ಟು ಹೋರಾಟ ನಡೆಸಿದ್ದೇನೆ ಎಂಬ ಬಗ್ಗೆ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಚಿಂಚನಸೂರ್‌ ಅವರು ಎಲ್ಲಿಂದಲೋ ಬಂದು ಎಲ್ಲ ನಾನೇ ಮಾಡಿದ್ದೇನೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ಚಿಂಚನಸೂರ್‌ ಅವರನ್ನು ಈಗಾಗಲೇ ಜನತೆ ತಿರಸ್ಕರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT