ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂಪಾಡ: ಕುಡಿಯುವ ನೀರಿಗಾಗಿ ನಿತ್ಯ ಪರದಾಟ

ಕೋವಿಡ್ ಭೀತಿಯನ್ನೂ ಮೀರಿದ ‘ಜೀವಜಲ’ ಸಂಕಟ, ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ
Last Updated 16 ಮೇ 2021, 3:01 IST
ಅಕ್ಷರ ಗಾತ್ರ

ಗುರುಮಠಕಲ್: ಕಡಿಮೆ ನೀರಿನ ಪೂರೈಕೆಯಿಂದಾಗಿ ತಾಲ್ಲೂಕಿನ ಯಂಪಾಡ ಗ್ರಾಮಸ್ಥರು ಜೀವಜಲಕ್ಕಾಗಿ ನಿತ್ಯ ಪರದಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಯಂಪಾಡ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆಯಿದ್ದು, 780 ಕುಟುಂಬಗಳಿವೆ. 8 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.

ಕೊರೊನಾ ಸೋಂಕು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಡುತ್ತಿದೆ. ದೂರದ ನಗರಗಳಿಗೆ ವಲಸೆ ಹೋದವರು ಲಾಕ್‌ಡೌನ್ ಕಾರಣ ಹಿಂದಿರುಗಿದ್ದಾರೆ. ಆದರೆ, ಜನರು ಜೀವಕ್ಕಿಂತಲೂ ಜೀವಜಲಕ್ಕೆ ಆದ್ಯತೆ ನೀಡಿ, ನೀರಿಗಾಗಿ ಗುಂಪುಗೂಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಸೋಂಕಿನ ಭಯವಿಲ್ಲವೇ? ಎಂದರೆ ‘ಸೋಂಕು ಬಂದರೆ ಬದುಕುವ ಸಾಧ್ಯತೆಗಳಿವೆ. ಆದರೆ ನೀರಿಲ್ಲದೆ ಹೇಗೆ ಬದುಕಬೇಕು ಅನ್ನೋದನ್ನು ತಿಳಿಸಿ' ಎಂದು ಗ್ರಾಮಸ್ಥರು ಖಾರವಾಗಿಯೇ ತಮ್ಮ ಸಮಸ್ಯೆಯ ತೀವ್ರತೆ ವಿವರಿಸಿದರು.

ಸರ್ಕಾರವೇನೋ ಲಾಕ್‌ಡೌನ್ ಮಾಡಿ ಗುಂಪುಗೂಡದಿರಿ, ಹೊರಗೆ ಬರಬೇಡಿ ಎಂದು ನಿಯಮಗಳನ್ನು ಜಾರಿ ಮಾಡಿದೆ. ಆದರೆ, ಕುಡಿಯಲು ನೀರು ಸಿಗದಿರುವಾಗ ಮನೆಯಲ್ಲಿ ಕೂಡುವುದಾದರು ಹೇಗೆ? ಸಮಸ್ಯೆ ಪರಿಹರಿಸದೆ ಕೇವಲ ನಿಯಮಗಳನ್ನು ಪಾಲಿಸುವಂತೆ ಹೇಳುವುದು ಸರಿಯೇ? ನಮಗೆ ನೀರು ಕೊಡಿ ಎಂದು ಪಂಚಾಯಿತಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿದೆ. ಸಮಸ್ಯೆ ಮಾತ್ರ ಹಾಗೇ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮಕ್ಕೆ 1 ಲಕ್ಷ ಲೀಟರ್ ನೀರು ಬೇಕು. ಆದರೆ ಅರ್ಧದಷ್ಟು ನೀರನ್ನು ಪೂರೈಸುತ್ತಿಲ್ಲ. 2 ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದಿದ್ದು, ಒಬ್ಬರು ತಮ್ಮ ಜಮೀನಿಗೂ ನೀಡಬೇಕೆಂದು ತಾಕೀತು ಮಾಡುತ್ತಾರೆ. ವಿದ್ಯುತ್ ಸರಬರಾಜು 6 ಗಂಟೆಗಳು ಮಾತ್ರ. ಅದರಲ್ಲಿ ಜಮೀನಿಗೆ ನೀರು ನೀಡಿದರೆ ನೀರಿನ ಟ್ಯಾಂಕಿನ ಕೆಳ ಮಟ್ಟಕ್ಕೂ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ನಿರ್ದೇಶಿಸಲಾಗಿದೆ. ಕಾಮಗಾರಿ ಸಂಪೂರ್ಣ ಪೂರ್ಣಗೊಂಡ ನಂತರ ನಾವು ಅದನ್ನು ಪಡೆದುಕೊಳ್ಳುತ್ತೇವೆ. ಆದರೆ, ಅಲ್ಲಿಯ ವರೆಗೆ ಗ್ರಾಮದ ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲು ಹಾಗೂ ಇನ್ನೂ ಹೆಚ್ಚುವರಿ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯುವ ಅಥವಾ ಇತೆರೆ ಮೂಲಗಳನ್ನು ಪಡೆಯುವ ಸಾಧ್ಯತೆಗಳನ್ನು ಉಪಯೋಗಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

****

‘ಅವೈಜ್ಞಾನಿಕ ಟೆಂಡರ್‌ನಿಂದ ಸಮಸ್ಯೆ ಉಲ್ಬಣ’

ಯಾದಗಿರಿಯ ಭೀಮಾ ನದಿಯಿಂದ ಗುರುಮಠಕಲ್ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಬಹುಗ್ರಾಮ ನೀರಿನ ಯೋಜನೆಯ (ಭೀಮಾಯೋಜನೆ) ಟೆಂಡರ್ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಕಾಮಗಾರಿಯು ಮುತುವರ್ಜಿವಹಿಸಿ ಅನುಷ್ಠಾನಕ್ಕೆ ತರಲು ಯತ್ನಿಸಿದರೆ ಸಮಸ್ಯೆಯಾಗುತ್ತಿರಲಿಲ್ಲ ಎಂದು ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಭಾಗದ ಚಂಡರಕಿ, ಪುಟಪಾಕ, ಚಪೆಟ್ಲಾ ಮತ್ತು ಗಾಜರಕೋಟ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ತೀವ್ರವಾಗಿತ್ತು. ಶಾಸಕ ನಾಗನಗೌಡ ಕಂದಕೂರ ಅವರು ವೈಯಕ್ತಿಕವಾಗಿ ಮುತುವರ್ಜಿ ವಹಿಸಿದ್ದರಿಂದ ಅಲ್ಲಿ ಸಮಸ್ಯೆಯಿಲ್ಲದಂತಾಗಿದೆ. ಅದೇ ರೀತಿ ಯಂಪಾಡ ಗ್ರಾಮದ ಸಮಸ್ಯೆಗೆ ಶಾಶ್ವತ ಹಾಗೂ ತ್ವರಿತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಸದ್ಯಕ್ಕೆ ಗ್ರಾಮದ ಸಮಸ್ಯೆ ಬಗೆಹರಿಸಲು ನಾನೂ ವೈಯಕ್ತಿಕವಾಗಿ ಸಹಾಯ ಮಾಡುವುದಕ್ಕೆ ಸಿದ್ದನಾಗಿದ್ದೇನೆ ಎಂದು ಅವರು ಹೇಳಿದರು.
***
ಯಂಪಾಡ ಗ್ರಾಮದ ನೀರಿನ ವ್ಯವಸ್ಥೆ

ವೈಯಕ್ತಿಕ ನಳಗಳು; 150

ಸಾರ್ವಜನಿಕ ನಳಗಳು; 100

ಪೂರೈಕೆಯಾಗುವ ನೀರು; 50 ಸಾವಿರ ಲೀಟರ್

ಒಟ್ಟು ನೀರಿನ ಬೇಡಿಕೆ; 1 ಲಕ್ಷ ಲೀಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT