ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯ್ಕಲ್ ಪ್ರೌಢಶಾಲೆ: ಬಯಲಲ್ಲೇ ಬಿಸಿಯೂಟ!

Last Updated 6 ಜುಲೈ 2013, 9:36 IST
ಅಕ್ಷರ ಗಾತ್ರ

ಯಾದಗಿರಿ:  ಮಳೆಯಿಂದ ತೊಯ್ದ ಕಟ್ಟಿಗೆಗಳು, ದಟ್ಟ ಹೊಗೆಯಲ್ಲೇ ಮಕ್ಕಳ ಬಿಸಿಯೂಟ ತಯಾರಿ, ಬಯಲಿನಲ್ಲಿಯೇ ಅಡುಗೆ ಮಾಡುವ ಸಿಬ್ಬಂದಿ.

ಸಮೀಪದ ನಾಯ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದುಃಸ್ಥಿತಿ ಇದು. ಅತ್ಯಂತ ಹಳೆಯ ಹಾಗೂ ಉತ್ತಮ ಶಾಲೆ ಎಂಬ ಖ್ಯಾತಿ ಪಡೆದಿರುವ ನಾಯ್ಕಲ್ ಗ್ರಾಮದ ಈ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೂ ಕೊಠಡಿ ಇಲ್ಲ.

ಬಯಲಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಇಲ್ಲದಿರುವುದರಿಂದ ತೊಯ್ದ ಕಟ್ಟಿಗೆಗಳನ್ನು ಬಳಸಿ ಅಡುಗೆ ಮಾಡಲಾಗುತ್ತಿದ್ದು, ದಟ್ಟ ಹೊಗೆ ಆವರಿಸುತ್ತಿದೆ. ಅಲ್ಲದೇ ಶಾಲೆಯ ಮಕ್ಕಳಿಗೆ ಕುಡಿಯುವ ನೀರು ವ್ಯವಸ್ಥೆಯೂ ಇಲ್ಲದಾಗಿದೆ.

ಸಮಸ್ಯೆಗಳ ಮಧ್ಯೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಿದೆ. ಹೊಗೆಯಲ್ಲಿ ಬಿಸಿಯೂಟ ಸೇವಿಸುವುದರಿಂದ ರೋಗ-ರುಜಿನಗಳು ಬರುವ ಭೀತಿ ಎದುರಾಗಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಡ ಮಕ್ಕಳು ಓದುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸೌಲಭ್ಯವೇ ಇಲ್ಲದಿರುವುದರಿಂದ ಮಕ್ಕಳು ವಿದ್ಯಾಭ್ಯಾಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಮಂಜುಳಾ ಕೂಡ ಈ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಬಯಲಲ್ಲಿಯೇ ಅಡುಗೆ, ತಯಾರಿಸುವುದನ್ನು ಕಂಡು ದಂಗಾದರು. ಸ್ಥಳದಲ್ಲಿದ್ದ ಬಿಸಿಯೂಟ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

ಬಿಸಿಯೂಟದ ಅಡುಗೆ ಕೋಣೆ ನಿರ್ಮಾಣ, ಅಡುಗೆ ಅನಿಲ ಸಿಲಿಂಡರ್ ಪೂರೈಸುವಂತೆ ಆದೇಶ ನೀಡಿದರು. ಆದರೆ ಇದುವರೆಗೂ ಈ ಯಾವ ಸೌಲಭ್ಯಗಳೂ ಶಾಲೆಗೆ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಾರ್ಯದರ್ಶಿಗಳ ಆದೇಶಕ್ಕೆ ಅನುಗುಣವಾಗಿ ಕೇವಲ ಎರಡು ಸಿಲಿಂಡರ್ ಪೂರೈಸಲಾಯಿತು. ಇನ್ನೂ ಎರಡು ಸಿಲಿಂಡರ್ ಹಾಗೂ ಒಲೆಗಳು ಇಲ್ಲದಿರುವುದರಿಂದ ಕಟ್ಟಿಗೆಯಲ್ಲಿಯೇ ಬಿಸಿಯೂಟ ತಯಾರಿ ಮಾಡುವಂತಾಗಿದೆ ಎಂದು ಅಡುಗೆ ಸಹಾಯಕರು ಹೇಳುತ್ತಾರೆ.

ಇನ್ನು ಬಿಸಿಯೂಟದ ಕೋಣೆ ಇಲ್ಲದೇ ಇರುವುದರಿಂದ ಶಾಲೆಯ ಕಚೇರಿಯನ್ನೇ ಬಿಸಿಯೂಟ ಕೋಣೆಯನ್ನಾಗಿ ಮಾಡಲಾಗಿದೆ. ಶಾಲೆಗೆ ಶಿಕ್ಷಣ ಇಲಾಖೆ ಆಯುಕ್ತರು, ಯಾದಗಿರಿ ಡಿಡಿಪಿಐ, ಬಿಇಒ ಹೀಗೆ ಅನೇಕ ಅಧಿಕಾರಿಗಳು ಪ್ರೌಢಶಾಲೆಗೆ ಭೇಟಿ ನೀಡುತ್ತಾರೆ.

ಆದರೆ ಇದುವರೆಗೂ ಬಿಸಿಯೂಟದ ಅಡುಗೆ ಕೋಣೆ ನಿರ್ಮಿಸಿಲ್ಲ. ಸಿಲಿಂಡರ್ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅನುದಾನ ಮಂಜೂರು: ನಾಯ್ಕಲ್‌ನ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ನಾಲ್ಕು ಶಾಲೆಗಳಲ್ಲಿ ಅಡುಗೆ ಕೋಣೆ ನಿರ್ಮಿಸಲು ಮಂಜೂರಾತಿ ನೀಡಿದ್ದು, ಅದಕ್ಕೆ ಅನುಗುಣವಾಗಿ ಒಟ್ಟು ರೂ.3.01 ಲಕ್ಷದಲ್ಲಿ ಶೇ. 75 ರಷ್ಟು ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಡಿ.ಎಂ. ಹೊಸಮನಿ ಹೇಳುತ್ತಾರೆ.

ಕೂಡಲೇ ಕಟ್ಟಡ ಆರಂಭಿಸಲು ಸೂಚಿಸಲಾಗಿದೆ. ನಾಳೆಯೇ ಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಕಟ್ಟಡ ಪೂರ್ಣವಾಗುವವರೆಗೆ ಶೆಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

ಅಗತ್ಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ, ಶಾಲೆಯಲ್ಲಿನ ಕೊರತೆಗಳ ಬಗ್ಗೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ತೊಂದರೆ ನಿವಾರಿಸಲು ಆದ್ಯತೆ ನೀಡಲಾಗುವುದು ಎಂದರು.

ಕೆಸರಲ್ಲೇ ವಿದ್ಯಾರ್ಥಿಗಳ ಕಿರು ಪರೀಕ್ಷೆ
ಯಾದಗಿರಿ:
ಸಮೀಪದ ನಾಯ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶುಕ್ರವಾರ ಶಾಲೆಯ ಆವರಣದ ಕೆಸರಿನಲ್ಲಿಯೇ ಕುಳಿತು ಕಿರು ಪರೀಕ್ಷೆ ಬರೆದರು.

ಮಳೆಯಿಂದ ನೀರಿನ ನಿಂತಿದ್ದು, ಅಂತಹ ಸ್ಥಳದಲ್ಲಿಯೇ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಶಾಲೆಯು ಮುಖ್ಯರಸ್ತೆ ಬದಿಗೆ ಇರುವುದರಿಂದ ಈ ದೃಶ್ಯವನ್ನು ನೋಡಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಕೋಣೆ ಅಥವಾ ಶಾಲೆಯ ಆವರಣದ ಕಟ್ಟೆಯ ಮೇಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕಾಗಿತ್ತು. ಶಾಲೆ ಸಿಬ್ಬಂದಿ ಶಾಲೆಯ ಆವರಣದ ಕೆಸರಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಸಲು ಕೂರಿಸಿದ್ದು ಸರಿಯಲ್ಲ ಎಂದು ಹೇಳಿದರು.

ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದು, ಹಾಗಾಗಿ ಶಾಲೆಯ ಆವರಣದ ಒಳಗಡೆ ಮಳೆ ನೀರು ನಿಂತು ಆವರಣ ಕೆಸರು ಗದ್ದೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕಿರು ಪರೀಕ್ಷೆ ಬರೆದಿದ್ದಾರೆ. ಶಾಲೆಯಲ್ಲಿ ಕೋಣೆಗಳಿದ್ದರೂ, ವಿದ್ಯಾರ್ಥಿಗಳು ನಕಲು ಮಾಡದಿರಲಿ ಎಂಬ ಉದ್ದೇಶದಿಂದ ಹೊರಗಡೆ ಕೂಡ್ರಿಸಿ ಪರೀಕ್ಷೆ ಬರೆಸಲಾಗುತ್ತಿದೆ ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT