ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗದ ಸೇತುವೆಯ ಕಥೆ

Last Updated 8 ಜುಲೈ 2019, 19:30 IST
ಅಕ್ಷರ ಗಾತ್ರ

ಮುಕ್ಕಾಲು ಶತಮಾನ ಕಂಡಿರುವ ಮತ್ತು ಒಂದು ಕಾಲದಲ್ಲಿ ಉತ್ತರ–ದಕ್ಷಿಣ ದಖ್ಖನ್ ಪ್ರದೇಶಗಳಿಗೆ ಏಕೈಕ ರಹದಾರಿ ಕಲ್ಪಿಸಿದ್ದ ಸೀರತ್-ಏ-ಜೂದಿ ಸೇತುವೆ ಹಿಂದೆ ಹಲವು ಕುತೂಹಲದ ಕಥೆಗಳಿವೆ. ‘ಎಂಜನೀಯರಿಂಗ್ ಮಾರ್ವೆಲ್’ ಎನಿಸಿಕೊಂಡಿರುವ ಈ ಸೇತುವೆ ಸ್ಮಾರಕವಾಗಿ ರಕ್ಷಣೆಯಾಗಲಿ ಎಂಬುದು ಹಲವರ ಕಳಕಳಿ.

ಕರ್ನಾಟಕದ ರಾಯಚೂರು ಹಾಗೂ ತೆಲಂಗಾಣದ ಕೃಷ್ಣಾ ಜಿಲ್ಲೆಗಳನ್ನು ಸಂಪರ್ಕಿಸುವ ಏಕೈಕ ಕೊಂಡಿ ಸೀರತ್-ಏ-ಜೂದಿ ಸೇತುವೆ. ಇದು ಹಲವು ಕಾರಣಗಳಿಗಾಗಿ ಆಸಕ್ತಿ ಮೂಡಿಸುತ್ತದೆ.

ಹೈದರಾಬಾದ್ ನಿಜಾಮರು ರಾಯಚೂರು ಜಿಲ್ಲೆ ಶಕ್ತಿನಗರದ ದೇವಸೂಗೂರಿನ ಬಳಿ ಸುಮಾರು 77 ವರ್ಷಗಳ ಹಿಂದೆ ನಿರ್ಮಿಸಿದ ಈ ಸೇತುವೆ ಎಂಜಿನಿಯರ್‌ಗಳ ಪ್ರಕಾರ ಇದು ‘ಎಂಜನಿಯರಿಂಗ್ ಮಾರ್ವೆಲ್’. ಅನೇಕ ರೋಚಕಗಳನ್ನು ತನ್ನ ಒಡಲೊಳಗೇ ಹುದುಗಿಸಿಕೊಂಡಿರುವ, ಶತಮಾನಗಳ ಕಾಲ ಉಸಿರಾಡುವ ಸಾಮರ್ಥ್ಯವಿರುವ ಈ ಸೇತುವೆ ನಿಜಾಮ್ ಅರಸರ ಮುಂದಾಲೋಚನೆಯ ಸಾಕ್ಷಿಯಂತಿದೆ.

ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹರಿಯುವ ಕೃಷ್ಣಾ ನದಿ ಪಾತ್ರದಲ್ಲಿಯೇ ಕಟ್ಟಿರುವ ಅತ್ಯಂತ ಹಳೆಯ ಹಾಗೂ ಬೃಹತ್ ಸೇತುವೆ ಎಂದೇ ಇದನ್ನು ಪರಿಗಣಿಸಲಾಗಿದೆ. ತನ್ನ ವಿಶಿಷ್ಟ ರಚನೆ ಹಾಗೂ ನೀಲನಕ್ಷೆಯ ಅಭಿಯಾಂತ್ರಿಕ ಕಾರಣಗಳಿಗಾಗಿ ಇಂತಹ ಸೇತುವೆ ಕಟ್ಟುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಕ್ಲಿಷ್ಟಕರ ಎಂಬುದು ಎಂಜಿನಿಯರ್‌ಗಳ ವಾದ.

ಜೂದಿ ಸೇತುವೆ ಆಗ ದಕ್ಷಿಣ ಹಾಗೂ ಉತ್ತರ ದಖ್ಖನ್ ಪ್ರದೇಶಗಳನ್ನು ಸಂಪರ್ಕಿಸುವ ಕೊಂಡಿಯಾಗಿತ್ತು. ಪಾಕಿಸ್ತಾನದ ಪೇಶಾವರ ಹಾಗೂ ಭಾರತದ ಕನ್ಯಾಕುಮಾರಿ (ಅಂದಿನ ಕೇಪ್ ಕ್ಯಾಮರೂನ್) ಪ್ರದೇಶಗಳನ್ನು ಸಂದಿಸುವ ಏಕೈಕ ರಹದಾರಿ ಎಂಬುದು ಈ ಸೇತುವೆ ಅಗ್ಗಳಿಕೆಯಾಗಿತ್ತು. ಇಸ್ಲಾಂ ಹಿನ್ನೆಲೆಯಲ್ಲಿ ಸೀರತ್-ಏ-ಜೂದಿ ಎಂಬುದಕ್ಕೆ ‘ಮುಳುಗಡೆಯಾಗದ ಸೇತುವೆ’ ಎಂಬ ಅರ್ಥವಿದೆ. ಇದರ ನೀಲನಕ್ಷೆ ಹಾಗೂ ಗುಣಲಕ್ಷಣಗಳನ್ನು ಪರಿಗಣಿಸಿ ಇದನ್ನು ‘ನಾನ್ ಸಬ್‍ಮರ್ಸಿಬಲ್ ಬ್ರಿಜ್’ (ಮುಳುಗಡೆರಹಿತ ಸೇತುವೆ) ಎಂದು ಪರಿಗಣಿಸಲಾಗಿದೆ.

ರಾಜಕುಮಾರ ನವಾಬ್ ಜವ್ವಾದ್‍ಜಾಹ ಬಹದ್ದೂರ್ ಅವರ ರಾಯಚೂರು ಪ್ರಯಾಣದ ಸ್ಮರಣಾರ್ಥವಾಗಿ ಸೇತುವೆಯನ್ನು ನಿರ್ಮಿಸಲಾಯಿತು ಎಂದು ಸೇತುವೆಯ ಮೇಲಿನ ಶಾಸನದಿಂದ ತಿಳಿದು ಬರುತ್ತದೆ.

ಅಂದಿನ ಹೈದರಾಬಾದ್ ಹಾಗೂ ಬೀರಾರ್ ಭೂಪ್ರದೇಶಗಳಲ್ಲಿಯೇ ಅತ್ಯಂತ ದೊಡ್ಡದಾದ ಸೇತುವೆ ಇದಾಗಿತ್ತು. ನಿಜಾಮ್ ನವಾಬ್ ಸರ್ ಮೀರ್ ಓಸ್ಮಾನ್ ಅಲಿ ಖಾನ್ ಬಹದ್ದೂರ್ (ನಿಜಾಮೆತ್ ಮುಲ್ಕ್ ಹೈದರಾಬಾದ್‍ನ ಏಳನೆಯ ಆಸಫ್‍ಜಾಹ) ಅವರ ಕಾಲಘಟ್ಟದಲ್ಲಿ ಹೈದರಾಬಾದ್ ಸಂಸ್ಥಾನದಲ್ಲಿಯೇ ಅತ್ಯಂತ ಪ್ರಮುಖ ಸ್ಮಾರಕ ಎಂದು ಇದನ್ನು ಗುರುತಿಸಲಾಗಿತ್ತು.

‘ಆಸಫ್‍ಜಾಹ ಅವರ ಪ್ರಕಾರ ಅಂದಿನ ಅರಸರ ಮುನ್ನೋಟಕ್ಕೆ ಸಾಕ್ಷಿಯಾಗಿ ಹಾಗೂ ಅವರ ಜನಪರ ಯೋಜನೆಗಳ ಕುರುಹಿನ ಬೆಳ್ಳಿ ಕಿರಣವಾಗಿ ಈ ಸೇತುವೆ ಎಂದೆಂದಿಗೂ ಬೆಳಗುತ್ತಿರುತ್ತದೆ’ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಸೇತುವ ನಿರ್ಮಾಣ

ಸೇತುವೆ ಕಟ್ಟುವ ಕಾರ್ಯ 1933 ರಲ್ಲಿ ಆರಂಭಗೊಂಡು 1943ಕ್ಕೆ ಮುಕ್ತಾಯಗೊಂಡಿತು. ಒಟ್ಟಾರೆ ವ್ಯಯಿಸಿದ ಹಣ 13,28,500 ಮೌಲ್ಯದ ಹಾಲಿಯಾ ನಾಣ್ಯಗಳು. ಇದರ ಮುಖ್ಯ ಎಂಜಿನಿಯರ್ ಮೊಹಮದ್ ಹಾಮೇದ್ ಮಿರ್ಜಾ. ಸೇತುವೆಯಲ್ಲಿ 90 ಅಡಿ ವಿಸ್ತಾರದ ಒಟ್ಟು 35 ಕಮಾನುಗಳಿವೆ. ಒಟ್ಟಾರೆ ಉದ್ದ 2,488 ಅಡಿ ಹಾಗೂ ಅಗಲ 20 ಅಡಿ. ಇದು ನದಿಯ ತಳದಿಂದ 60 ಅಡಿ ಎತ್ತರವಿದೆ.

ಈ ಪ್ರದೇಶದಲ್ಲಿ ನದಿಗೆ 50,000 ಚದರ ಮೈಲಿ ಕ್ಷೇತ್ರಗಳಿಂದ ನೀರು ಹರಿದು ಬರುತ್ತದೆ. ನೆರೆಯ ಸಂದರ್ಭದಲ್ಲಿ ಒಂದು ಸೆಕೆಂಡಿಗೆ ಸುಮಾರು 10 ಲಕ್ಷ ಘನ ಅಡಿ ನೀರು ಹೊರ ಹೊಮ್ಮುತ್ತದೆ.

‘ಪ್ರತಿಯೊಂದು ಕಮಾನು ಇಂಗ್ಲೀಷ್‍ನ ಉಲ್ಟ ‘ವಿ’ ಅಕ್ಷರದಂತಿದೆ. ಆ ಆಕಾರದಲ್ಲಿ ಕಮಾನು ರಚಿಸುವುದರಿಂದ ಭಾರಿ ನೆರೆ ಬಂದಾಗ ನೀರು ಸರಾಗವಾಗಿ ಹರಿದುಹೋಗುತ್ತದೆ’ ಎಂದು ರಾಯಚೂರು ಥರ್ಮಲ್ ಪವರ್ ಸ್ಟೇಷನ್ನಿನ ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ. ವಿ. ಮಾಗಳದ ವಿವರಿಸುತ್ತಾರೆ.

‘ಸ್ಥಳೀಯವಾಗಿ ಲಭ್ಯವಿರುವ ಗ್ರಾನೈಟ್‍ಗಳನ್ನು ಬಳಸಿ ಸೇತುವೆ ನಿರ್ಮಿಸಲಾಗಿದೆ. ಹರಿಯುವ ನದಿಯನ್ನು ನೋಡಲು ಸೇತುವೆಯ ಮೇಲೆ ಅಲ್ಲಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಅಂದಿನ ದಿನಮಾನಗಳಲ್ಲಿ ಕೃಷ್ಣಾ ನದಿಗೆ ಯಾವುದೇ ಅಣೆಕಟ್ಟುಗಳು ಇರಲಿಲ್ಲ. ಹೀಗಾಗಿ ಇಲ್ಲಿ ನೀರು ಅತ್ಯಂತ ರಭಸದಿಂದ ಹರಿಯುತಿತ್ತು. ಸೇತುವೆ ಕಟ್ಟುವ 50 ವರ್ಷಗಳ ಹಿಂದಿನ ಪ್ರತಿ ವರ್ಷದ ಮಳೆಯ ಪ್ರಮಾಣ, ನರೆ ಹಾಗೂ ಹರಿಯುವ ರೀತಿಯನ್ನು ಅಭ್ಯಸಿಸಿ ನೀಲ ನಕ್ಷೆಯನ್ನು ತಯಾರಿಸಲಾಗಿದೆ. ಒಂದಿನಿತು ಸಿಮೆಂಟ್ ಉಪಯೋಗಿಸದೇ ಸೇತುವೆಯನ್ನು ಕಟ್ಟಲಾಗಿದೆ’ ಎನ್ನುತ್ತಾರೆ ಅವರು.

ಕಟ್ಟಡದ ಗುಣಮಟ್ಟ ಅದೆಷ್ಟು ಉತ್ಕೃಷ್ಟವಾಗಿದೆಯೆಂದರೆ ಇಲ್ಲಿ ಬಳಕೆಯಾಗಿರುವ ಪ್ರತಿ ಕಲ್ಲನ್ನು ಒಂದೇ ರೀತಿಯಲ್ಲಿ ಕತ್ತರಿಸಲಾಗಿದೆ. ಹೀಗಾಗಿ ಪ್ರತಿ ಕಲ್ಲು ಒಂದೇ ರೀತಿಯಾಗಿ ಗೋಚರಿಸುತ್ತದೆ. ಪ್ರತಿ ಕಮಾನು ಒಂದು ‘ಕೀ ಸ್ಟೋನ್’ ಮೇಲೆ ಅವಲಂಬಿತವಾಗಿದೆ. ಆ ‘ಕೀ ಸ್ಟೋನ್’ ಸರಿಸಿದರೆ ಇಡೀ ಕಮಾನಿನಲ್ಲಿರುವ ಕಲ್ಲಿನ ತುಂಡುಗಳು ಚದುರಿ ಬೀಳುತ್ತವೆ.

‘ಒಟ್ಟಾರೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಪ್ರತಿಯೊಂದು ಕಮಾನನ್ನು ನಿರ್ದಿಷ್ಟ ಸ್ಥಳದಲ್ಲಿ ಕಟ್ಟಲಾಗಿದೆ. ಈ ಸೇತುವೆ ನಿಸ್ಸಂದೇಹವಾಗಿ ಶ್ರೇಷ್ಟ ಎಂಜಿನಿಯರಿಂಗ್ ಜ್ಞಾನ ಹಾಗೂ ಗುಣಮಟ್ಟದ ಪ್ರತೀಕವಾಗಿದೆ. ಇಂತಹ ಸೇತುವೆ ಕಟ್ಟುವುದನ್ನು ಇಂದಿನ ದಿನಮಾನಗಳಲ್ಲಿ ಊಹಿಸಿಕೊಳ್ಳುವುದು ಕಷ್ಟ. ಇದನ್ನು ಒಂದು ಐತಿಹಾಸಿಕ ಸ್ಮಾರಕವಾಗಿ ರಕ್ಷಿಸಬೇಕಿದೆ’ ಎಂಬುದು ಮಾಗಳದ ಅವರ ಕಳಕಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT