ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗುತಜ್ಞರ ಸ್ವಗತ!

Last Updated 24 ಜೂನ್ 2019, 19:30 IST
ಅಕ್ಷರ ಗಾತ್ರ

ಮನೆಯ ತುಂಬಾ ಸನ್ಮಾನದ ಶಾಲು, ಹಾರ, ಫಲಕಗಳು ರಾಶಿರಾಶಿಯಾಗಿ ಬಿದ್ದಿವೆ. ಜನರ ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇವೆ. ಆದರೆ, ಪ್ರಶಸ್ತಿ, ಸನ್ಮಾನಗಳಿಂದ ಹೊಟ್ಟೆ ತುಂಬುವುದಿಲ್ಲ. ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ನಮ್ಮ ಬದುಕಿಗೆ ಸರ್ಕಾರ ಏನಾದರೂ ಅನುಕೂಲ ಮಾಡಿಕೊಡಲಿ – ಇದು ರಾಜ್ಯದ ಪ್ರಖ್ಯಾತ ಮುಳುಗುತಜ್ಞರಾದ ಜಾವಿದ್‌ ಮತ್ತು ತಂಡದ ಸ್ವಾಭಿಮಾನದ ನುಡಿಗಳು.

ಕೆಲವು ದಿನಗಳ ಹಿಂದೆ, ಹಾಸನದಲ್ಲಿ 17 ವರ್ಷದ ಸಿರಾಜುದ್ದೀನ್‌ ಎಂಬ ಹುಡುಗ, ಸ್ನಾನ ಮಾಡಲು ಕೆರೆಗೆ ಇಳಿದ. ನೀರಿನ ಸೆಳೆತಕ್ಕೆ ಸಿಕ್ಕಿ ಹಾಕಿಕೊಂಡು, ಅಲ್ಲೇ ಜಲ ಸಮಾಧಿಯಾದ. ಆತನ ಶವ ಹೊರ ತೆಗೆಯಲು ಅಲ್ಲಿನ ಘಟಾನುಘಟಿ ಈಜುಗಾರರಿಂದಲೂ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ನಮಗೆ ಕರೆ ಬಂತು.

ಆ ದಿನ ನಾವು ಮಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಹಾಸನಕ್ಕೆ ಬಂದಾಗ ಸಮಯ 3 ಗಂಟೆಗೆ ಆಗಿತ್ತು. ಅಷ್ಟರಲ್ಲಾಗಲೇ ಆತ ನೀರಿನಲ್ಲಿ ಮುಳುಗಿ 23 ಗಂಟೆಗಳಾಗಿದ್ದವು. ಸ್ಥಳೀಯರಿಂದ ಮಾಹಿತಿ ಪಡೆದು ನೀರಿಗಿಳಿದೆವು. ಐದು–ಹತ್ತು ನಿಮಿಷದಲ್ಲಿ ಶವವನ್ನು ಮೇಲೆತ್ತಿದ್ದಾಯಿತು. ಸಂಬಂಧಿಕರ ದುಃಖದ ಕಟ್ಟೆ ಒಡೆಯಿತು. ಮನಸ್ಸನ್ನು ಎಷ್ಟೇ ಗಟ್ಟಿಮಾಡಿಕೊಂಡರೂ ನಮ್ಮ ಕಣ್ಣಂಚಿನಲ್ಲೂ ಕಣ್ಣೀರು ಜಾರಿತು.

ಜಾಕೀರ್‌, ಸಾದಿಕ್‌, ಹಸನ್‌ ಮತ್ತು ವಾಸೀಂ ನಮ್ಮ ತಂಡದಲ್ಲಿರುವ ಮುಳುಗುತಜ್ಞರು. ಪ್ರತಿ ಬಾರಿ ಇಂಥ ದುರ್ಘಟನೆ ಸಂಭವಿಸಿದಾಗಲೂ ನಮ್ಮ ಜೀವವನ್ನು ಪಣಕ್ಕಿಟ್ಟು ನೀರಿಗೆ ಬಿದ್ದವರನ್ನು ಕಾಪಾಡುತ್ತೇವೆ. ಜಲಸಮಾಧಿಯಾದ ದೇಹವನ್ನು ಮೇಲೆತ್ತುತ್ತೇವೆ. ಆಗೆಲ್ಲಾ, ಮಾಧ್ಯಮದಲ್ಲಿ ಹೀರೊಗಳಾಗುತ್ತೇವೆ. ಟಿವಿ ಸ್ಟುಡಿಯೊಗಳಲ್ಲಿ ಚರ್ಚೆಯಾಗುತ್ತದೆ. ಆದರೆ, ಕಷ್ಟಪಟ್ಟು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬುದು ನಮ್ಮ ಕೊರಗು. ಅತ್ಯಂತ ಅಪಾಯಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಮ್ಮ ಜೀವನಕ್ಕೆ ಭದ್ರತೆ ಇಲ್ಲ. ನಾವು ಸಾಹಸ ಮೆರೆದಾಗ ಶಾಸಕರು, ಸಚಿವರು ‘ನಿಮಗೆಲ್ಲರಿಗೂ ಏನಾದರೂ ಒಳ್ಳೆಯದು ಮಾಡಿಕೊಡುತ್ತೇವೆ’ ಎಂದು ಆಶ್ವಾಸನೆ ನೀಡುತ್ತಾರೆ. ಆದರೆ, ಅವು ಇಂದಿಗೂ ಕೇವಲ ಭರವಸೆಗಳಾಗಿಯೇ ಉಳಿದಿವೆ.

ಒಮ್ಮೆ ಮಂಗಳೂರಿನ ಸಮುದ್ರದಲ್ಲಿ ಹಡಗು ಮುಳುಗಿತು. ಆಗ ಜೀವದ ಹಂಗು ತೊರೆದು ಎಂಟು ಜನರನ್ನು ರಕ್ಷಿಸಿದೆವು. ಆದರೆ, ಸರ್ಕಾರ ನಮ್ಮ ಕಡೆಗೆ ತಿರುಗಿ ಕೂಡ ನೋಡಲಿಲ್ಲ. ಮತ್ತೆ ಮಾಮೂಲಿಯಾಗಿ ನಾವು ಮಾಧ್ಯಮಗಳಲ್ಲಿ ಹೀರೊ ಆದೆವು, ಅಷ್ಟೇ. ‘ಮಾಸ್ತಿಗುಡಿ’ ಸಿನಿಮಾ ಕ್ಲೈಮ್ಯಾಕ್ಸ್‌ ದುರಂತದಲ್ಲಿ ಮೃತಪಟ್ಟ ಉದಯ್‌ ಮತ್ತು ಅನಿಲ್‌ ಅವರ ದೇಹವನ್ನು ಹೊರತೆಗೆದಾಗಲೂ ಇದೇ ಸನ್ನಿವೇಶ ಪುನರಾವರ್ತನೆಯಾಯಿತು.

‘ನಮಗೆಲ್ಲರಿಗೂ ಸರ್ಕಾರಿ ಕೆಲಸ ಕೊಡಲಿಕ್ಕೆ ಸಾಧ್ಯವಿಲ್ಲ’ ಎಂದು ಮಂತ್ರಿಗಳು, ಶಾಸಕರು ನೇರವಾಗಿ ಹೇಳಿದ್ದಾರೆ. ಏಕೆಂದರೆ, ನಮ್ಮಲ್ಲಿ ಯಾರೂ ಕೂಡ ಎಸ್ಸೆಸ್ಸೆಲ್ಸಿ ಪೂರೈಸಿಲ್ಲ. ಆದರೆ ನಮ್ಮೆಲ್ಲರಲ್ಲೂ ಅತ್ಯುತ್ತಮವಾದ ಈಜುಗಾರಿಕೆ ಕೌಶಲವಿದೆ. ನಮಗೆ ಸರ್ಕಾರಿ ಕೆಲಸ ಬೇಡ. ಆಟೊರಿಕ್ಷಾ ಓಡಿಸುವುದು, ಟ್ಯಾಕ್ಸಿ ಚಾಲನೆ.. ಹೀಗೆ ಏನಾದರೊಂದು ವ್ಯಾಪಾರ, ವ್ಯವಹಾರ ಮಾಡುವುದಕ್ಕೆ ನೆರವಾಗಿ. ಬದುಕಿಗೆ ಭದ್ರತೆಯಾದರೂ ಸಿಗುತ್ತದೆ ಎಂದು ಗೋಗರೆದು, ಅಂಗಲಾಚಿದ್ದೇವೆ. ಹ್ಞೂಂ, ನಮ್ಮ ಬೇಡಿಕೆಗಳಾವುವು ಈವರೆಗೆ ಈಡೇರಲಿಲ್ಲ.

ಪ್ರತಿಯೊಬ್ಬ ಮುಳುಗುತಜ್ಞರಿಗೂ ಇಬ್ಬರು, ಮೂವರು ಹೆಣ್ಣುಮಕ್ಕಳು ಇದ್ದಾರೆ. ಈ ಆಶ್ವಾಸನೆಗಳನ್ನು ಕೇಳಿ ಕೇಳಿ ಬೇಜಾರಾಗಿಬಿಟ್ಟಿದೆ. ಈ ಕೆಲಸವನ್ನೇ ಮಾಡಬಾರದು ಅಂತ ಮತ್ತೆ ಮತ್ತೆ ಅನ್ನಿಸುತ್ತದೆ. ಆದರೆ, ದುರ್ಘಟನೆಗಳು ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆ ಮನಸ್ಸು ತಡೆಯುವುದಿಲ್ಲ. ಸತ್ತವರ ಮನೆಯ ಸಂಕಟ ಪರಿಹರಿಸಿದರೆ ನಮ್ಮನ್ನು ದೇವರು ನೋಡುತ್ತಾನಲ್ಲ ಎಂಬ ಆತ್ಮತೃಪ್ತಿಯಿಂದಷ್ಟೇ ಈ ಕೆಲಸ ಮಾಡುತ್ತಿದ್ದೇವೆ.

ಕೆಲವೆಡೆಗಳಲ್ಲಿ ನಮಗೆ ತುಂಬ ಕಹಿ ಅನುಭವಗಳಾಗಿವೆ. ದೇಹವನ್ನು ನೀರಿನಿಂದ ಹೊರಕ್ಕೆ ತೆಗೆದ ನಂತರ ನಮ್ಮನ್ನು ಕರೆಸಿದವರೂ ಸೇರಿದಂತೆ ಒಬ್ಬರೂ ಸ್ಥಳದಲ್ಲಿ ಇರುವುದಿಲ್ಲ. ಕೊನೆಯಲ್ಲಿ ಉಳಿಯುವುದು ನಾವು ಐವರು ಮಾತ್ರ. ನೀವು ಊಟ, ತಿಂಡಿ ಮಾಡಿದಿರಾ? ಚಹಾ ಆಯಿತಾ? ಎಂದು ಕೇಳುವವರೂ ದಿಕ್ಕಿರುವುದಿಲ್ಲ. ಅದೆಲ್ಲಾ ಹೋಗಲಿ ನಾವು ತಣ್ಣೀರುಬಾವಿಯಿಂದ ಬಾಡಿಗೆ ಕಾರು ತಗೊಂಡು ಹೋಗಿದ್ದಕ್ಕೆ, ಬಾಡಿಗೆ ಕೂಡ ಕೆಲವೊಮ್ಮೆ ಸಿಗುವುದಿಲ್ಲ. ಅವರು ಕೂಡ ದುಃಖದಲ್ಲಿರುತ್ತಾರೆ ನಿಜ. ಆದರೆ, ನಮ್ಮ ಕಷ್ಟ ಯಾರಿಗೆ ಹೇಳುವುದು? ಹತ್ತು ವರ್ಷದಿಂದಲೂ ಇದೇ ನಮ್ಮ ಗೋಳಾಗಿದೆ.

ಈವರೆಗೆ ನಾವು 150 ಜನರನ್ನು ರಕ್ಷಿಸಿದ್ದೇವೆ. 300ಕ್ಕೂ ಅಧಿಕ ಮೃತ ದೇಹಗಳನ್ನು ಹೊರ ತೆಗೆದಿದ್ದೇವೆ. ಹಾಗಂತ, ಮಾಧ್ಯಮಗಳಲ್ಲಿ ಹೀರೊಗಳಾಗುವ ನಮ್ಮ ಬದುಕು ಅಷ್ಟೇನೂ ರಂಜಿತವಾಗಿಲ್ಲ. ಹೆಂಡತಿ, ಮಕ್ಕಳು ಮನೆಯಲ್ಲಿ ನೆಮ್ಮದಿಯಿಂದ ಇಲ್ಲ. ಪ್ರತಿ ಬಾರಿ ಹೊರಕ್ಕೆ ಹೋಗುವಾಗಲೂ, ನಮಗೇನೂ ತೊಂದರೆ ಆಗದಿರಲಿ ಎಂದು ಆ ಅಲ್ಲಾಹುವಿನಲ್ಲಿ ಕುಟುಂಬದವರು ಬೇಡಿಕೊಳ್ಳುತ್ತಾರೆ. ಅವರ, ಪ್ರಾರ್ಥನೆಯೇ ನಮಗೆ ಸುರಕ್ಷಾಕವಚ.

ಸಮುದ್ರದಲ್ಲಿ ಕೋಲ್‌ (ಕಡಲಿನಲ್ಲಿ ಸಿಗುವ ಒಂದು ಬಗೆಯ ಚಿಪ್ಪು) ತೆಗೆಯುವುದೇ ನಮ್ಮ ವೃತ್ತಿ. ಕಡಲತಟದಿಂದ ಸುಮಾರು ಒಂದು ಕಿಲೋ ಮೀಟರ್‌ ದೂರಕ್ಕೆ ಸಾಗಿ, 30ರಿಂದ 40 ಅಡಿ ಆಳ ಇರುವ ಪ್ರದೇಶದಲ್ಲಿ ನೀರಿಗೆ ಧುಮುಕಿ ಚಿಪ್ಪು ಹೆಕ್ಕಿ ತರುತ್ತೇವೆ. ಕೆ.ಜಿ.ಗೆ ₹50 ಸಿಗುತ್ತದೆ. ಐದು ಜನ ಒಮ್ಮೆ ಕಡಲಿಗೆ ಧುಮುಕಿದರೆ 100 ಕೆ.ಜಿ.ಯಷ್ಟು ಚಿಪ್ಪು ಸಂಗ್ರಹಿಸುತ್ತೇವೆ. ಅದನ್ನು ಮಾರಾಟ ಮಾಡಿ ಎಲ್ಲರೂ ಹಣವನ್ನು ಸಮನಾಗಿ ಹಂಚಿಕೊಳ್ಳುತ್ತೇವೆ. ವರ್ಷದಲ್ಲಿ ಐದು ತಿಂಗಳ ಕಾಲ ಅಂದರೆ, ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಮಾತ್ರ ಈ ಕೆಲಸ ಇರುತ್ತದೆ. ಉಳಿದ ಏಳು ತಿಂಗಳು ನಾವು ನಿರುದ್ಯೋಗಿಗಳು. ಅಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಸಂಭವಿಸುವ ದುರಂತಗಳಲ್ಲಿ ರಕ್ಷಣಾ ಕೆಲಸಗಳಿಗೆ ಹೋಗುತ್ತೇವೆ.

ಇತ್ತೀಚೆಗೆ ಸಚಿವ ಯು.ಟಿ.ಖಾದರ್‌ ಅವರು ನಮ್ಮ ಐವರಿಗೆ ದೋಣಿ ಕೊಡಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಆ ವ್ಯವಸ್ಥೆಯನ್ನಾದರೂ ಮಾಡಿಕೊಟ್ಟರೆ ನಾವು ಹೇಗೊ ಬದುಕುತ್ತೇವೆ. ಸರ್ಕಾರ ಕೆಲಸ ಕೊಡಲಿ ಬಿಡಲಿ ನಮ್ಮ ಕೆಲಸ ನಾವು ಮಾಡುತ್ತೇವೆ. ಏಕೆಂದರೆ, ಕಷ್ಟದಲ್ಲಿರುವವನಿಗೆ ಸಹಾಯಮಾಡಬೇಕು ಎಂಬುದು ಮಾನವಧರ್ಮ. ನಮ್ಮ ಕೊನೆಯುಸಿರು ಇರುವವರೆಗೂ ಅದರಂತೆ ನಡೆಯುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT