ಸೋಮವಾರ, ಮಾರ್ಚ್ 8, 2021
22 °C

ಕ್ಷಯವೇ? ಭಯ ಬೇಡ

ಡಾ. ಉಮಾಮಹೇಶ್ವರಿ ಎನ್. Updated:

ಅಕ್ಷರ ಗಾತ್ರ : | |

Prajavani

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಕ್ಷಯದ ಮೂಲ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ. ಕಫದಲ್ಲಿ ಬ್ಯಾಕ್ಟೀರಿಯಾ ಇರುವ ರೋಗಿಗಳು ಕೆಮ್ಮುವಾಗ, ಉಗುಳುವಾಗ ಈ ಕ್ರಿಮಿಗಳು ಗಾಳಿಯಲ್ಲಿ ಸೇರಿಕೊಂಡು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ.

ರೋಗ ತಗಲಬಹುದಾದ ಅಂಗಾಂಗಗಳು: ಶ್ವಾಸಕೋಶಗಳು, ಸಣ್ಣ ಕರುಳು, ಗ್ರಂಥಿಗಳು, ಮೆದುಳು ಮತ್ತು ಅದರ ಹೊರಪದರಗಳು, ಎಲುಬುಗಳು ಹಾಗೂ ಗರ್ಭಕೋಶ ಈ ಸೋಂಕಿಗೆ ಸಾಮಾನ್ಯವಾಗಿ ತುತ್ತಾಗುತ್ತವೆ. ಆದರೆ ಕೂದಲು ಮತ್ತು ಉಗುರುಗಳನ್ನು ಬಿಟ್ಟು ಯಾವುದೇ ಅಂಗಗಳನ್ನು ಇದು ಬಲಿ ತೆಗೆದುಕೊಳ್ಳಬಹುದು.

ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿದಾಗ, ದೇಹದ ರೋಗ ನಿರೋಧಕ ವ್ಯವಸ್ಥೆಯು ಅವನ್ನು ದಮನಿಸಲು ಪ್ರಯತ್ನಿಸುತ್ತದೆ. ಆ ಜಾಗಕ್ಕೆ ಹೊಂದಿಕೊಂಡಂತಹ ಗ್ರಂಥಿಗಳು ವಿಪರೀತವಾಗಿ ಊದಿರುತ್ತವೆ. ಈ ಹಂತವನ್ನು ರೋಗದ ಪ್ರಾಥಮಿಕ ಹಂತವೆನ್ನುತ್ತೇವೆ. ಈ ಹಂತವು ಹೆಚ್ಚಿನ ಸಂದರ್ಭಗಳಲ್ಲಿ ತನ್ನಿಂದ ತಾನಾಗಿಯೇ ಶಮನವಾಗುತ್ತದೆ.

ಇದಾಗಿ ಎಷ್ಟೋ ವರ್ಷಗಳ ನಂತರ ವ್ಯಕ್ತಿಯ ರೋಗನಿರೋಧಕ ಶಕ್ತಿಯಲ್ಲಿ ಕೊರತೆಯುಂಟಾದಾಗ ಸೋಂಕಿನ ಬ್ಯಾಕ್ಟೀರಿಯಾಗಳು ದೇಹದ ಅಂಗಗಳಲ್ಲಿ ವೃದ್ಧಿಯಾಗಿ ರೋಗ ಉಂಟುಮಾಡುತ್ತವೆ. ಈ ಹಂತವನ್ನು ‘ಪೋಸ್ಟ್ ಪ್ರೈಮರಿ’ ಹಂತವೆನ್ನುತ್ತಾರೆ. ಕೆಲವು ಸಂದರ್ಭಗಳಲ್ಲಿ ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಪಕವಾಗಿ ಹರಡಬಹುದು. ಈ ಪ್ರಭೇದವನ್ನು ಮಿಲಿಯರಿ ಕ್ಷಯರೋಗವೆನ್ನುತ್ತಾರೆ.

ರೋಗ ಲಕ್ಷಣಗಳೇನು?

l ಯಾವುದೇ ವ್ಯಕ್ತಿ ಎರಡು-ಮೂರು ವಾರಗಳಿಗಿಂತ ಹೆಚ್ಚಾಗಿ ಕೆಮ್ಮುತ್ತಿದ್ದರೆ ತಪಾಸಣೆಗೆ ಒಳಗಾಗಬೇಕು.

l ಕಫದಲ್ಲಿ ರಕ್ತ ಬರುವುದು.

l ಸಾಯಂಕಾಲ ಬರುವ ಸಣ್ಣ ಜ್ವರ-ಎರಡು‌ ಮೂರು ವಾರಗಳಿಗಿಂತ ಹೆಚ್ಚಾಗಿ ಸುಸ್ತು, ರಾತ್ರಿ ಹೊತ್ತು ಬೆವರುವುದು.

l ಹಸಿವೆ ಕಡಿಮೆಯಾಗುವುದು ಮತ್ತು ತೂಕ ಕಡಿಮೆಯಾಗುವುದು.

l ಹೊಟ್ಟೆ ನೋವು, ಉಬ್ಬರ, ಭೇದಿಯಾಗುವುದು.

l ಬೆನ್ನು, ಮೂಳೆಗಳಲ್ಲಿ ವಿಪರೀತ ನೋವು.

l ಕತ್ತಿನಲ್ಲಿ, ಕಂಕುಳಲ್ಲಿ ಕಾಣಿಸುವ ಊತ.

l ತಲೆ ನೋವು, ವಾಂತಿ, ಮಂಪರು, ಅಪಸ್ಮಾರ.

ರೋಗ ಪತ್ತೆ ಹೇಗೆ?

ಕಫ ಪರೀಕ್ಷೆ- ಮೈಕ್ರೋಸ್ಕೊಪಿ, ಟಿ.ಬಿ.ಕಲ್ಚರ್ ಮತ್ತು ಸೆನ್ಸಿಟಿವಿಟಿ.

ಕ್ಷ- ಕಿರಣ

ಬಯಾಪ್ಸಿ- ಗ್ರಂಥಿಯ ಅಥವಾ ರೋಗ ತಗಲಿರಬಹುದಾದ ಅಂಗದ ತುಣುಕನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಪರೀಕ್ಷೆಗೆ ಒಳಪಡಿಸುವುದು.

ಮ್ಯಾಂಟೂ ಪರೀಕ್ಷೆ- ಇದು ದೊಡ್ಡವರಲ್ಲಿ ಸಹಾಯಕವಲ್ಲ. ಕೆಲವು ಮಕ್ಕಳಲ್ಲಿ ಸಹಾಯವಾಗಬಹುದು.

ಇತ್ತೀಚಿಗೆ ಬಂದಿರುವ ಪರೀಕ್ಷೆಗಳು: ಸಿಬಿ-ನಾಟ್ ಮತ್ತು ಲೈನ್ ಪ್ರೋಬ್ ಅಸ್ಸೇಗಳು ಬಹುಸಂಖ್ಯೆಯಲ್ಲಿ, ಬಹುಬೇಗ ಮತ್ತು ನಿಖರವಾಗಿ ರೋಗ ಪತ್ತೆ ಮಾಡಲು ಸಹಾಯಕ.

ಚಿಕಿತ್ಸೆ

ಕ್ಷಯರೋಗ ಎಲ್ಲಾ ಸೋಂಕುಗಳಂತಲ್ಲ. ರೋಗಪೀಡಿತ ಜಾಗದಲ್ಲಿ ಬೇರೆ ಬೇರೆ ಹಂತದ ಬೆಳವಣಿಗೆಯಲ್ಲಿರುವ ಮತ್ತು ಬೇರೆ ಬೇರೆ ವೇಗದಲ್ಲಿ ಹೆಚ್ಚುತ್ತಿರುವ ಬ್ಯಾಕ್ಟೀರಿಯಾಗಳಿರುತ್ತವೆ. ಇವೆಲ್ಲವನ್ನೂ ತಹಬಂದಿಗೆ ತರಲು ಹಲವು ಔಷಧಿಗಳನ್ನು ಒಟ್ಟಿಗೇ ಕೊಡಬೇಕಾಗುತ್ತದೆ ಮತ್ತು ಚಿಕಿತ್ಸೆಗೆ ದೀರ್ಘಕಾಲ ಹಿಡಿಯುತ್ತದೆ.

ಔಷಧಿಗಳನ್ನು ದಿನವೂ ಸೇವಿಸಬೇಕು. ವಾರಕ್ಕೆ ಮೂರು ದಿನ ಔಷಧಿ ಸೇವನೆಯ ಕ್ರಮವನ್ನು ಇತ್ತೀಚಿಗೆ ದಿನನಿತ್ಯದ ಸೇವನೆಗೆ ಬದಲಾಯಿಸಲಾಗಿದೆ. ಮರು ಚಿಕಿತ್ಸೆಯ ಸಂದರ್ಭದಲ್ಲಿ ತಜ್ಞರ ಸಲಹೆ ರೋಗಿಯಿಂದ ರೋಗಿಗೆ ಸಂದರ್ಭಾನುಸಾರ ವ್ಯತ್ಯಾಸವಾಗುತ್ತದೆ.

ಭಾರತ ಸರ್ಕಾರದ ಡಾಟ್ಸ್ ಕಾರ್ಯಕ್ರಮದ ಮೂಲಕ ಔಷಧ ಸೇವನೆಯನ್ನು ಆರೋಗ್ಯ ಕಾರ್ಯಕರ್ತರ ಸಮಕ್ಷಮದಲ್ಲಿ ಮಾಡಿಸಲಾಗುತ್ತದೆ. ಉತ್ತಮ ಗುಣಮಟ್ಟದ ಔಷಧಿಗಳನ್ನು ಸರಕಾರದಿಂದ ಉಚಿತವಾಗಿ ಪೂರೈಸಲಾಗುತ್ತದೆ.

***

ರೋಗ ತಡೆಗಟ್ಟುವಿಕೆ

ಬಿ.ಸಿ.ಜಿ.: ಕ್ಷಯರೋಗ ತಡೆಗಟ್ಟಲು ಬಿ.ಸಿ.ಜಿ. ಚುಚ್ಚುಮದ್ದನ್ನು ಮಗು ಹುಟ್ಟಿದ ಹಲವು ದಿನಗಳಲ್ಲಿ ಹಾಕಲಾಗುತ್ತದೆ. ಇದು ಖಂಡಿತವಾಗಿಯೂ ಮಿಲಿಯರಿ ಎಂಬ ತೀವ್ರ ಸ್ವರೂಪದ ಮತ್ತು ದೇಹದ ಎಲ್ಲ ಅಂಗಗಳಿಗೂ ಹರಡುವ ತೀವ್ರ ಕ್ಷಯರೋಗವನ್ನು ಹಾಗೂ ಟಿಬಿ ಮೆನಿಂಜೈಟಿಸ್ ಎಂಬ ಮೆದುಳು ಕವಚಗಳ ಉರಿಯೂತವನ್ನು ತಡೆಗಟ್ಟುತ್ತದೆ.

ರೋಗಿಗಳಿಗೆ ಕಿವಿಮಾತು

l ಸಂಶಯ ಬಂದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.

l ಕೊಟ್ಟ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿ.

l ಔಷಧಿಗಳನ್ನು ಅವಧಿಗೆ ಮುನ್ನ ನಿಲ್ಲಿಸಬೇಡಿ.

l ಔಷಧಿಗಳಿಗೆ ವ್ಯತಿರಿಕ್ತ ಪರಿಣಾಮ ಕಂಡು ಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ. 

l ಎಲ್ಲೆಂದರಲ್ಲಿ ಕಫ ಉಗಿಯಬೇಡಿ.

l ರೋಗ ಶಮನವಾಗಲು ಪೂರಕವಾಗಿ ಪೌಷ್ಟಿಕ ಆಹಾರವನ್ನು ಸೇವಿಸಿ.

l ಮದ್ಯ ಸಿಗರೇಟುಗಳಿಂದ ದೂರವಿರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.