ಸೋಮವಾರ, ಸೆಪ್ಟೆಂಬರ್ 27, 2021
27 °C
ಎಂಟು ದಿನಕ್ಕೊಮ್ಮೆ ನಳದಲ್ಲಿ ನೀರು

ಕಾಖಂಡಕಿಯಲ್ಲಿ ಕುಡಿಯುವ ನೀರಿಗೂ ತ್ರಾಸು..! ಓಣಿ ಓಣಿ, ಹೊಲಗಳಿಗೂ ಅಲೆದಾಟ...

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಹೋದ ಮಂಗಳವಾರ ನಮ್ಮೂರಲ್ಲಿ ಜಾತ್ರೆಯಿತ್ತು. ಹಲವು ಬಾರಿ ಪಂಚಾಯ್ತಿ ಪಿಡಿಒ ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ಸೋಮವಾರದೊಳಗೆ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ನೀರು ಕೊಡುವೆವು ಎಂದಿದ್ದರು...

ಜಾತ್ರೆ ಮುಗಿದು ನಾಲ್ಕೈದು ದಿನವಾಯ್ತು. ಇದೂವರೆಗೂ ಆರ್‌ಒ ಪ್ಲಾಂಟ್‌ ದುರಸ್ತಿಗೊಳ್ಳಲಿಲ್ಲ. ನಮ್ಮ ಓಣಿಯ ನೀರಿನ ಸಮಸ್ಯೆ ಬಗೆಹರಿಯಲಿಲ್ಲ..! ಕುಡಿಯುವ ನೀರಿಗಾಗಿ ಅಲೆದಾಟ ಇಂದಿಗೂ ತಪ್ಪಿಲ್ಲ.

ಬೇಸತ್ತು ವಿಜಯಪುರ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗೆ ಮೊಬೈಲ್‌ ಕರೆ ಮೂಲಕ ಶುಕ್ರವಾರ ದೂರಿತ್ತೆವು. ಮಾಡಿಸೋಣ. ನಿಮ್ಮ ಆರ್‌ಒ ಘಟಕದ ಬಳಿಗೆ ಸ್ಥಳೀಯ ಅಧಿಕಾರಿ, ದುರಸ್ತಿ ಸಿಬ್ಬಂದಿ ಕಳಿಸುವೆ ಎಂದರು. ದಿನ ಕಳೆದರೂ ಯಾರೊಬ್ಬರ ಸುಳಿವಿಲ್ಲ...

ನಮ್ಮ ನೀರಿನ ಗೋಳು ಕೇಳೋರು ಯಾರೂ ಇಲ್ಲ. ಕ್ಷೇತ್ರದ ಶಾಸಕರೊಬ್ಬರನ್ನು ಬಿಟ್ಟು ಎಲ್ಲರಿಗೂ ದೂರಿತ್ತಿದ್ದಾಗಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ನಮ್ಮ ನೆರವಿಗೆ ಧಾವಿಸುವಂತೆ ಮನವಿಯನ್ನೂ ಮಾಡಿಕೊಂಡಿದ್ದು ಆಯ್ತು. ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ’ ಎಂದು ಬಬಲೇಶ್ವರ ತಾಲ್ಲೂಕು ಕಾಖಂಡಕಿ ಗ್ರಾಮದ ನಾಗರಾಜ ಹೊನವಾಡ, ಯಲ್ಲಪ್ಪ ಕುರಿದೊಡ್ಡಿ, ಸದಾಶಿವ ಸೀತಿಮನಿ ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

ಓಣಿ ಓಣಿ ಅಲೆದಾಟ:

‘ಕಾಖಂಡಕಿ ದೊಡ್ಡೂರು. ಇಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕಾಖಂಡಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಬಸ್‌ ನಿಲ್ದಾಣದ ಬಳಿ ಒಂದು ಘಟಕ ಸ್ಥಾಪಿಸಿದೆ. ಮಹಿಪತಿ ದಾಸರ ಗುಡಿ ಬಳಿ ಇನ್ನೊಂದು ಘಟಕವಿದೆ. ಅಂಬೇಡ್ಕರ್‌ ಭವನದ ಬಳಿ ಮತ್ತೊಂದು ಘಟಕವಿದೆ.

ಯಾಡ್‌ ವರ್ಸದ ಹಿಂದೆ ಬೀರೇಶ್ವರ ದೇಗುಲದ ಬಳಿ ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಸ್ಥಾಪಿಸಲಾಗಿತ್ತು. ಆರಂಭದ ಎರಡ್ಮೂರು ತಿಂಗಳು ಎಲ್ಲವೂ ಚಲೋ ನಡೆದಿತ್ತು. ₨ 2 ಕ್ಕೆ 10 ಲೀಟರ್ ನೀರು ಸಿಗ್ತಿತ್ತು.

ಇದೀಗ ಬಾಗಿಲು ಮುಚ್ಚಲಾಗಿದೆ. ಈ ಘಟಕ ಪುನರಾರಂಭಿಸುವಂತೆ ಸಂಬಂಧಿಸಿದವರಿಗೆ ಸರಣಿ ಮನವಿ ಸಲ್ಲಿಸಿದರೂ; ಸ್ಪಂದನೆ ಶೂನ್ಯವಾಗಿದೆ. ಇದರಿಂದ ಬೀರೇಶ್ವರ ಗುಡಿ ಆಜುಬಾಜು, ಸುತ್ತಮುತ್ತಲಿನ ಓಣಿಯ ಜನರು ಶುದ್ಧ ಕುಡಿಯುವ ನೀರಿಗಾಗಿ ಬೇರೆ ಬೇರೆ ಓಣಿಗಳಿಗೆ ಅಲೆಯಬೇಕಿದೆ.

ಊರಲ್ಲಿರುವ ಉಳಿದ ಘಟಕಗಳಲ್ಲೂ ಸಾಕಾಗುವಷ್ಟು ಶುದ್ಧ ಕುಡಿಯುವ ನೀರು ಸಿಗ್ತಿಲ್ಲ. ವಿಧಿಯಿಲ್ಲದೆ ಶುದ್ಧ ನೀರು ಅರಸಿ ಖಾಸಗಿ ಜಮೀನುಗಳಲ್ಲಿರುವ ಕೊಳವೆಬಾವಿಗಳನ್ನು ಅವಲಂಬಿಸಬೇಕಿದೆ. ವಿದ್ಯುತ್ ಯಾವಾಗ ಇರಲಿದೆ. ನಮಗೆ ನೀರು ಸಿಗಲಿದೆ ಎಂಬುದೇ ನಿತ್ಯವೂ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ’ ಎಂದು ಕಾಖಂಡಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗರಾಜ ಹೊನವಾಡ ಅಸಮಾಧಾನ ವ್ಯಕ್ತಪಡಿಸಿದರು.

ಪಾಳಿಯಂತೆ ವಾರಕ್ಕೊಮ್ಮೆ ನೀರು..!

‘ಊರಲ್ಲಿ ಪಾಳಿಯಂತೆ ಎಂಟು ದಿನಕ್ಕೊಮ್ಮೆ ನೀರು ಬಿಡ್ತಾರೆ. ಒಂದೊಂದು ಓಣಿಗೆ ಒಂದೊಂದು ತಾಸು ನೀರು ಕೊಡತ್ವಾರೆ. ನೀರು ಬಂದಾಗ ಎಲ್ಲವಕ್ಕೂ ತುಂಬಿ ಕೊಳ್ತೇವಿ. ನಾಲ್ಕ್‌ ದಿನ ಅನ್ನೋದ್ರೊಳಗೆ ಖಾಲಿಯಾಗುತ್ತೆ.

ಅನಿವಾರ್ಯವಾಗಿ ಯಾವ ಓಣಿಗೆ ನೀರು ಬಿಟ್ಟಿರುತ್ತಾರೆ ಅಲ್ಲಿಗೆ ಹೋಗಿ ಕುಡಿಯೋಕೆ ಅಂಥಹ ನಾಲ್ಕ್ ಕೊಡ ನೀರು ತರ್ತೀವಿ. ಅವ್ರು ಕೊಡ್ತ್ವಾರೆ. ನಮ್ಮ ಓಣಿಗೆ ನೀರು ಬಿಟ್ಟಾಗಲೂ ಬೇರೆ ಓಣಿಯವರು ಬಂದು ಹಿಡ್ಕೊಂಡು ಹೋಗ್ತಾರೆ. ಬಳಕೆಗೆ ಖಾಸಗಿ ಜಮೀನಿನ ಕೊಳವೆಬಾವಿಯ ನೀರೇ ಗತಿ’ ಎನ್ನುತ್ತಾರೆ ಕಾಖಂಡಕಿಯ ಯಲ್ಲಪ್ಪ ಕುರಿದೊಡ್ಡಿ.

‘ಬೀರೇಶ್ವರ ಗುಡಿ ಸುತ್ತಮುತ್ತಲಿನ ನಿವಾಸಿಗಳು, ಕಾಖಂಡಕಿಯ ತಾಂಡಾ ಜನರು ನಿತ್ಯವೂ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಕನಿಷ್ಠ ಯಾಡ್‌ ಸಾವ್ರ ಮಂದಿಗೆ ನೀರಿನ ತ್ರಾಸಿದೆ. ಎರಡ್ಮೂರು ಬಾರಿ ಪಂಚಾಯ್ತಿಗೆ ಎಡತಾಕಿ ಸಮಸ್ಯೆ ಒದರಿದರೂ; ಮಾಡಿಸೋಣ ಎಂಬುದನ್ನು ಬಿಟ್ಟರೇ ಬೇರೇನನ್ನು ಮಾಡ್ತಿಲ್ಲ. ಜಿಲ್ಲಾಡಳಿತ ನಮ್ಮ ಸಮಸ್ಯೆ ಪರಿಹಾರಕ್ಕೆ ಟ್ಯಾಂಕರ್ ಮೂಲಕವಾದ್ರೂ ನೀರು ಕೊಡಲಿ’ ಎಂಬ ಆಗ್ರಹ ಸದಾಶಿವ ಸೀತಿಮನಿ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು