ಶುಕ್ರವಾರ, ಮೇ 27, 2022
21 °C
ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ

ಸಹಾಯಕ ಪ್ರಾಧ್ಯಾಪಕರ ಹುದ್ದೆ | ಸಾಮಾನ್ಯ ಜ್ಞಾನ – ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಅಧಿಕೃತವಾಗಿ ಪ್ರಕಟವಾಗುವುದೊಂದು ಬಾಕಿ ಇದೆ. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರವಾಗಿದೆ. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್‌ ವಿಷಯದಲ್ಲಿ ತಲಾ 100 ಅಂಕಗಳಿಗೆ ನಡೆಯಲಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯ. 10ನೇ ತರಗತಿಯ ಮಟ್ಟದ ‘ನಿಮ್ಮಲ್ಲಿರುವ ವಿಷಯ ಜ್ಞಾನವನ್ನು’ ಪರೀಕ್ಷಿಸುವಂತಹ ಪ್ರಶ್ನೆಗಳಿರುತ್ತವೆ. ಇದಲ್ಲದೇ ಸಾಮಾನ್ಯಜ್ಞಾನ ಮತ್ತು ಐಚ್ಛಿಕ ವಿಷಯದ ಪತ್ರಿಕೆಗಳೂ ಇರುತ್ತವೆ.

ಉಳಿದಂತೆ ಸಾಮಾನ್ಯಜ್ಞಾನ ಪತ್ರಿಕೆಯು 50 ಅಂಕಗಳಿಗಾದರೆ ಐಚ್ಛಿಕ ವಿಷಯದ ಪತ್ರಿಕೆಯು 250 ಅಂಕಗಳಿಗೆ ಇರುತ್ತದೆ. ಸಾಮಾನ್ಯಜ್ಞಾನ ಪತ್ರಿಕೆಯು 6ನೇ ತರಗತಿಯಿಂದ 12ನೇ(ಪಿಯುಸಿ) ತರಗತಿಯವರೆಗಿರುವ ಇತಿಹಾಸ, ಭಾರತೀಯ ಅರ್ಥಶಾಸ್ತ್ರ, ಭಾರತೀಯ ಸಂವಿಧಾನ ಮತ್ತು ರಾಜಕೀಯ, ಭೂಗೋಳ, ವಿಜ್ಞಾನ, ಮಾನಸಿಕ ಸಾಮರ್ಥ್ಯ ಮತ್ತಿತರ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಎಲ್ಲ ಪ್ರಶ್ನೆಗಳೂ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ.

ಸಾಮಾನ್ಯವಾಗಿ ಐಚ್ಛಿಕ ವಿಷಯದ ಪತ್ರಿಕೆಗಳಲ್ಲಿ ಸ್ನಾತಕೋತ್ತರ ಪದವಿಯ ಹಂತದ ವಿಷಯಗಳು ಪಠ್ಯವಾಗಿರುತ್ತವೆ. ಹೀಗಾಗಿ ಪಠ್ಯಕ್ರಮ ಆಧರಿಸಿ ಆಳವಾದ ಹಾಗೂ ವಿಮರ್ಶಾತ್ಮಕ ಅಧ್ಯಯನ ಬಹುಮುಖ್ಯ. ಈ ಅಂಕಣದಲ್ಲಿ ‘ಸಾಮಾನ್ಯ ಜ್ಞಾನ’ಕ್ಕೆ ಸಂಬಂಧಿಸಿದ ಕೆಲವು ಮಾದರಿ ಪ್ರಶ್ನೋತ್ತರಗಳನ್ನು ಕೊಡಲಾಗಿದೆ.

****

1. ಇತ್ತೀಚೆಗೆ ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಕೆ. ಜೆ. ಆಲ್ಪೊನ್ಸ್ (K.J. Alphons) ‘ಸಂವಿಧಾನ ತಿದ್ದುಪಡಿ ಮಸೂದೆ –2021’ ಮಂಡಿಸಿದರು. ಈ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?

ಎ. ಪ್ರಸ್ತಾವನೆ (ಪ್ರಿಯಾಂಬಲ್)  ಬಿ. ಮೂಲಭೂತ ಹಕ್ಕುಗಳು

ಸಿ. ಮೂಲಭೂತ ಕರ್ತವ್ಯಗಳು  ಡಿ. ವಿಧಾನಸಭಾ ಚುನಾವಣೆ

ಉತ್ತರ:ಎ

****

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕಾಶಿಯಲ್ಲಿ 1916ರಲ್ಲಿ ಬನಾರಸ್ ಹಿಂದೂ ವಿಶ್ವ ವಿದ್ಯಾಲಯವನ್ನು ಉದ್ಘಾಟಿಸಲು ಬಂದ ಮಹಾತ್ಮ ಗಾಂಧೀಜಿ ಅಲ್ಲಿನ ಕಿರಿದಾದ ಮತ್ತು ಶುಚಿ ಇಲ್ಲದ ರಸ್ತೆ ಹಾಗೂ ವಾತಾವರಣ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಇದಾಗಿ ಸುಮಾರು 105 ವರ್ಷಗಳ ತರುವಾಯ ‘ಭವ್ಯ ಕಾಶಿ ದಿವ್ಯ ಕಾಶಿಯ’ ಉದ್ಘಾಟನೆ ಮಾಡಲಾಗಿದೆ. ಗಂಗಾ ನದಿಯಿಂದ ವಿಶ್ವನಾಥನ ಧಾಮಕ್ಕೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಹಿಂದಿನ 3 ಸಾವಿರ ಚದರ ಅಡಿ ಪ್ರದೇಶವನ್ನು 5 ಲಕ್ಷ ಚದರ ಅಡಿಗೆ ವಿಸ್ತರಿಸಿ ಹೊಸ ಕಾರಿಡಾರ್ ನಿರ್ಮಿಸಲಾಗಿದೆ.

2. 1669ರಲ್ಲಿ ಮೊಘಲ್‌ದೊರೆ ಔರಂಗಜೇಬ್‌ ನಾಶಗೊಳಿಸಿದ್ದ ಕಾಶಿ ವಿಶ್ವನಾಥ ದೇಗುಲ 1780ರಲ್ಲಿ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್ ಅವಧಿಯಲ್ಲಿ ಪುನರ್‌ ನಿರ್ಮಾಣಗೊಂಡಿತ್ತು. ಬಳಿಕ 19ನೇ ಶತಮಾನದಲ್ಲಿ ಮಹಾರಾಜ ರಣಜಿತ್‌ಸಿಂಗ್ ‘ಚಿನ್ನದ ಕಳಶ’ ಅಳವಡಿಸಿದ್ದರು.‌

3. ವಾರಾಣಸಿ 18189 ನೇಕಾರ ಕುಟುಂಬಗಳ ತವರು. ಬನಾರಸ್ ರೇಷ್ಮೆ ಸೀರೆ ಎಂದರೆ ವಿಶ್ವಪ್ರಸಿದ್ಧ. ಇದರ ಪಕ್ಕದಲ್ಲಿಯೇ ಭಗವಾನ್ ಬುದ್ಧ ಮೊದಲು ಉಪದೇಶ ನೀಡಿದ ಸಾರನಾಥವೂ ಇದೆ. ಅಲ್ಲದೇ ರವಿದಾಸರ ಹುಟ್ಟೂರು ಹಾಗೂ ಸಂತರ ಕಬೀರರ ಕರ್ಮ ಭೂಮಿಯೂ ಆಗಿದೆ ಕಾಶಿ. ಹೀಗಾಗಿ ಸಹಜವಾಗಿಯೇ ಅಂತರರಾಷ್ಟ್ರೀಯ ಮಾನ್ಯತೆ ಇದೆ.

4. 108 ವರ್ಷಗಳ ತರುವಾಯ ಕೆನಡಾದಲ್ಲಿ ಸಿಕ್ಕಿದ್ದ ಮಾತಾ ಅನ್ನಪೂರ್ಣೇಶ್ವರಿ ಮೂರ್ತಿಯನ್ನು ಪುನಃ ತಂದು ಅದರ ಮೂಲಸ್ಥಾನದಲ್ಲಿ ಅಂದರೆ ವಿಶ್ವನಾಥನ ಸನ್ನಿಧಿಯ ಪಕ್ಕದಲ್ಲಿ ಮರುಪ್ರತಿಷ್ಠಾಪಿಸಲಾಗಿದೆ. ಈಗ ಏಕ ಕಾಲದಲ್ಲಿ ಲಕ್ಷಾಂತರ ಜನರು ಅನ್ನಪೂರ್ಣೇಶ್ವರಿ ಸನ್ನಿಧಾನದ ಪಕ್ಕದಲ್ಲಿರುವ ಭೋಜನಾಲಯದಲ್ಲಿ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ?
ಎ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ
ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ
ಸಿ. ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ
ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ:ಎ

****

3. ಸೆಕೆಂಡ್‌ಗೆ 47 ಕಿ. ಮೀ. ವೇಗದಲ್ಲಿ ಸಾಗುವ …………………. ಧೂಮಕೇತು, ಸರಿ ಸುಮಾರು 523 ಶತಕೋಟಿ ಕಿ. ಮೀ. ದೂರದಿಂದ ಭೂಮಿಯ ಬಳಿಗೆ ಬಂದು, ಇದೀಗ ದೂರ ಸರಿಯುತ್ತಿದೆ.

ಎ. ಲಿಯೋನಾರ್ಡೋ(Leonard)
ಬಿ. ಹ್ಯಾಲಿ (Halley's Comet)
ಸಿ. ಟೆಂಪಲ್-1 (Tempel 1) |
ಡಿ. ಬೊರೆಲಿ (Borrelly)

ಉತ್ತರ:ಎ

****
4. ಭೂಮಿಯಿಂದ 400 ಕಿ.ಮೀ ಎತ್ತರದಲ್ಲಿರುವ ಕಕ್ಷೆಯಲ್ಲಿ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ಇಸ್ರೊ ನಿಶ್ಚಯಿಸಿದೆ. 20 ಟನ್ ತೂಕ ಹೊಂದಿರುವ ಈ ಬಾಹ್ಯಾಕಾಶ ಕೇಂದ್ರದಲ್ಲಿ ಗಗನ ಯಾತ್ರಿಗಳು 15 ರಿಂದ 20 ದಿನ ಇರುವ ವ್ಯವಸ್ಥೆ ಮಾಡಲಾಗುತ್ತದೆ. ಹಾಗಾದರೆ ಯಾವ ವರ್ಷದೊಳಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ?

ಎ. 2025   
ಬಿ. 2030
ಸಿ. 2035   
ಡಿ. 2040

ಉತ್ತರ:ಬಿ

****

5. 2027 ರಿಂದ ಯುವ ಜನತೆ ಸಿಗರೇಟ್ ಸೇದದಂತೆ ನಿಷೇಧ ಹೇರಲು ಈ ಕೆಳಗಿನ ಯಾವ ರಾಷ್ಟ್ರ ಮುಂದಾಗಿದೆ?

ಎ. ಆಸ್ಟ್ರೇಲಿಯಾ  
ಬಿ. ಪಾಕಿಸ್ತಾನ
ಸಿ. ನ್ಯೂಜಿಲೆಂಡ್  
ಡಿ. ಜಪಾನ್

ಉತ್ತರ:ಸಿ

6) ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್‌ ನೀಡುವ ‘ರಾಯಲ್ ಗೋಲ್ಡ್ ಮೆಡಲ್-2022’ ಪುರಸ್ಕಾರಕ್ಕೆ ಯಾರು ಆಯ್ಕೆಯಾಗಿದ್ದಾರೆ?

ಎ. ಬಾಲಕೃಷ್ಣ ದೋಷಿ  
ಬಿ. ಜೈನಾರಾಯಣ ಪಂಡಿತ
ಸಿ. ಶ್ರೀರಾಮ್ ಪ್ರೆಸ್ಟಿಜ್   
ಡಿ. ನಾರಾಯಣ ಸ್ವಾಮಿ ಜೆ ಆರ್

ಉತ್ತರ:ಎ

****

ನಿಮಗಿದು ಗೊತ್ತೆ?

ಖಾಸಗಿ ಮಸೂದೆ (ಪ್ರವೇಟ್ ಮೆಂಬರ್ ಬಿಲ್)

ಸಚಿವ ಸಂಪುಟದ ಸದಸ್ಯರಲ್ಲದ ಸಂಸದರು ಮಂಡಿಸುವ ಮಸೂದೆಗಳಿಗೆ ’ಪ್ರವೇಟ್ ಮೆಂಬರ್ ಬಿಲ್’ ಅಥವಾ ಖಾಸಗಿ ಮಸೂದೆ ಎನ್ನುವರು. ಸಂಸತ್ ಅಧಿವೇಶನ ನಡೆಯುವಾಗ ಪ್ರತಿ ಶುಕ್ರವಾರ ಈ ರೀತಿಯ ಮಸೂದೆ ಮಂಡಿಸಲು ಅವಕಾಶ ನೀಡಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಈವರೆಗೆ ಕೇವಲ 14 ಬಿಲ್‌ಗಳು ಮಾತ್ರ ಎರಡೂ ಸದನದಲ್ಲಿ ಪಾಸ್ ಆಗಿ ಕಾನೂನುಗಳಾಗಿವೆ. 1970ರ ನಂತರ ಖಾಸಗಿ ಸದಸ್ಯರು ಮಂಡಿಸಿದ ಒಂದೇ ಒಂದು ಮಸೂದೆಯೂ ಪಾಸಾಗಿಲ್ಲ, ಕಾನೂನಾಗಿಲ್ಲ. 2014ರಲ್ಲಿ ಮಾತ್ರ, ರಾಜ್ಯಸಭೆಯಲ್ಲಿ ಟ್ರಾನ್ಸ್‌ಜೆಂಡರ್ ಬಿಲ್‌ ಪಾಸ್ ಆಗಿತ್ತು. ಆದರೆ ಅದು ಲೋಕಸಭೆಯಲ್ಲಿ ಪಾಸಾಗಿರಲಿಲ್ಲ.

14ನೇ ಲೋಕಸಭೆಯ ಅವಧಿಯಲ್ಲಿ 67 ಸಂಸತ್ ಸದಸ್ಯರು 328 ‘ಪ್ರೈವೇಟ್‌ ಮೆಂಬರ್ ಬಿಲ್‌ಗಳನ್ನು’ ಮಂಡಿಸಿದ್ದರು. ಆದರೆ ಅದರಲ್ಲಿ ಶೇ 96ರಷ್ಟು ಬಿಲ್‌ಗಳು ಒಂದೇ ಒಂದು ಚರ್ಚೆಯನ್ನು ನಡೆಸದೇ ಅನೂರ್ಜಿತಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು