ಭಾನುವಾರ, ಸೆಪ್ಟೆಂಬರ್ 19, 2021
25 °C

ಫ್ಯಾಷನ್ ಕಮ್ಯೂನಿಕೇಷನ್‌ ಕೋರ್ಸ್‌: ಹೊಸ ಉದ್ಯೋಗದ ಹಾದಿ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗೆ ದಿನಕ್ಕೊಂದು ಹೊಸ ಉದ್ಯೋಗದ ಹಾದಿ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಸಲುವಾಗಿ ಹೊಸ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳಲ್ಲಿ ಫ್ಯಾಷನ್ ಕಮ್ಯೂನಿಕೇಷನ್ ಕೋರ್ಸ್‌ ಜನಪ್ರಿಯವಾಗುತ್ತಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಫ್ಯಾಷನ್ ಟ್ರೆಂಡ್‌ನ ಕುರಿತು ಆಸಕ್ತಿ ಹಾಗೂ ಜ್ಞಾನ ಹೊಂದಿರುವವರು ಈ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಯಾವುದೇ ವಿಷಯದಲ್ಲಿ ಪಿಯುಸಿ ಮುಗಿಸಿದ್ದು ಫ್ಯಾಷನ್ ಕ್ಷೇತ್ರದ ಮೇಲೆ ಒಲವು ಹೊಂದಿರುವವರು ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ಇದರಲ್ಲಿ ಸ್ನಾತಕೋತ್ತರ ಪದವಿಯನ್ನೂ ಮಾಡಬಹುದು.

ಫ್ಯಾಷನ್ ಕಮ್ಯೂನಿಕೇಷನ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳ ಬಯಸುವವರು ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ತಂತ್ರಜ್ಞಾನಗಳ ಕುರಿತು ಆಳವಾದ ಜ್ಞಾನವನ್ನು ಹೊಂದಿರಬೇಕು. ಎಐ, ಅನಾಲಿಟಿಕ್ಸ್‌, ಆಟೊಮೇಷನ್ ಚಾಟ್ಸ್ ಬೂಟ್ಸ್, ವರ್ಚುವಲ್ ರಿಯಾಲಿಟಿ, ಮೊಬೈಲ್ ಆ್ಯಪ್ಸ್ ಮುಂತಾದವುಗಳ ಬಗ್ಗೆ ತಿಳಿದುಕೊಂಡಿರಬೇಕು. 

ಎಲ್ಲಿದೆ ಅವಕಾಶ?

ಫ್ಯಾಷನ್ ಕಮ್ಯೂನಿಕೇಷನ್ ಕ್ಷೇತ್ರವನ್ನು ವೃತ್ತಿಗಾಗಿ ಆಯ್ಕೆ ಮಾಡಿಕೊಂಡವರಿಗೆ ಹಲವು ಅವಕಾಶಗಳಿವೆ. ವಿಷುವಲ್‌ ಮರ್ಚಂಡೈಸ್‌ ಮ್ಯಾನೇಜ್‌ಮೆಂಟ್‌, ಗ್ರಾಫಿಕ್ ಡಿಸೈನಿಂಗ್‌, ಪಬ್ಲಿಕ್ ರಿಲೇಷನ್ಸ್‌, ಆರ್ಟ್‌ ಡೈರೆಕ್ಷನ್‌ ಹಾಗೂ ಫ್ಯಾಷನ್ ಜರ್ನಲಿಸಂ ಮುಂತಾದ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶದ ಬಾಗಿಲು ತೆರೆದಿರುತ್ತದೆ.

ವಿಷುವಲ್‌ ಮರ್ಚಂಡೈಸ್‌ ಮ್ಯಾನೇಜ್‌ಮೆಂಟ್‌: ವಿಷುವಲ್‌ ಮರ್ಚಂಡೈಸಿಂಗ್ ಎನ್ನುವುದು ಗ್ರಾಹಕರ ಗಮನವನ್ನು ಸೆಳೆಯಲು ಫ್ಯಾಶನ್ ಉತ್ಪನ್ನಗಳನ್ನು ಆಕರ್ಷಕ ರೀತಿಯಲ್ಲಿ ಪ್ರದರ್ಶಿಸುವ ಕಲೆ. ಇದು ಲೈವ್‌ ಪ್ರಚಾರದ ಮೂಲಕ ವಿಕ್ಷಕರನ್ನು ಸೆಳೆಯುವಂತೆ ಮಾಡಲು ನೆರವಾಗುತ್ತದೆ. ಬಹಳಷ್ಟು ಯೋಜನೆ, ವ್ಯವಸ್ಥೆಯ ಮೂಲಕ ಇದು ಗ್ರಾಹಕರನ್ನು ಸೆಳೆಯಲು ಥೀಮ್‌ಗಳನ್ನು ರಚಿಸುತ್ತದೆ. ಸ್ಟೈಲ್ ಫೋಟೊಗ್ರಫಿ, ಡಿಸೈನ್ ಫೋಟೊಗ್ರಫಿ ಮುಂತಾದ ಅಂಶಗಳನ್ನೂ ಇದು ಒಳಗೊಂಡಿದೆ.

ಗ್ರಾಫಿಕ್ ಡಿಸೈನ್‌: ಫ್ಯಾಷನ್ ಕಮ್ಯೂನಿಕೇಷನ್ ಡಿಗ್ರಿ ಗ್ರಾಫಿಕ್ ಡಿಸೈನ್‌ನ ವಿವಿಧ ಅಂಶಗಳು ಹಾಗೂ ತಂತ್ರಜ್ಞಾನವನ್ನು ಒಳಗೊಂಡಿದೆ. ಇದರಲ್ಲಿ ಬಣ್ಣಗಳು, ವಿವಿಧ ಛಾಯೆಗಳು, ವಿವಿಧ ಆಕಾರಗಳ ಕುರಿತಾಗಿ ತಿಳಿಸಲಾಗುತ್ತದೆ. ಇದರೊಂದಿಗೆ ಪ್ರತಿ ಅಂಶಗಳೊಂದಿಗಿನ ಸಮತೋಲನಕ್ಕೂ ಇದು ಪ್ರಾಮುಖ್ಯ ನೀಡುತ್ತದೆ. ಡಿಜಿಟಲ್ ಮತ್ತು ಮುದ್ರಣ ಮಾಧ್ಯಮ ಪಾಲುದಾರರಿಗೆ ಉಪಯುಕ್ತ ಸಲಹೆಗಳನ್ನು ನೀಡುತ್ತದೆ.

ಫ್ಯಾಷನ್ ಸ್ಟೈಲಿಂಗ್‌: ಫ್ಯಾಶನ್ ಸ್ಟೈಲಿಂಗ್ ಎನ್ನುವುದು ಫ್ಯಾಷನ್ ಕಮ್ಯೂನಿಕೇಷನ್‌ ಕೋರ್ಸ್‌ನ ಒಂದು ವೃತ್ತಿ ಆಯ್ಕೆಯಾಗಿದೆ. ಮಾಧ್ಯಮ, ಚಲನಚಿತ್ರ, ದೂರದರ್ಶನ, ಮುದ್ರಣ ಮತ್ತು ಅಂತರ್ಜಾಲದಲ್ಲಿ ಫ್ಯಾಷನ್ ಸ್ಟೈಲಿಸ್ಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಡ್ರೆಸ್‌ ಮಾಡಿಕೊಳ್ಳಬೇಕು, ಪರಿಕಲ್ಪನೆಗೆ ಅನುಗುಣವಾಗಿ ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಮುಂದಿನ ಫ್ಯಾಷನ್ ಟ್ರೆಂಡ್.. ಈ ಎಲ್ಲವುದರ ಬಗ್ಗೆ ತಿಳಿಸಲಾಗುವುದು.

ಆರ್ಟ್ ಡೈರೆಕ್ಷನ್‌: ಯಾವುದೇ ದೃಶ್ಯ ಅಥವಾ ಸ್ಥಳವನ್ನು ಆಕರ್ಷಿಸಲು ಮತ್ತು ಬ್ರಾಂಡ್ ಇಮೇಜ್‌ಗೆ ಸಿಂಕ್ ಮಾಡಲು ಕಲಾ ನಿರ್ದೇಶಕರು ವಿವಿಧ ಅಂಶಗಳಿಗೆ ಪರಿಣಾಮಕಾರಿ ದೃಶ್ಯದ ಬಗ್ಗೆ ನಿರ್ಧರಿಸುತ್ತಾರೆ. ಪ್ರದರ್ಶನಕ್ಕಾಗಿ ಸರಿಯಾದ ವಿಷಯಗಳನ್ನು ಗುರುತಿಸುವುದು, ಆಯ್ಕೆ ಮಾಡುವ ಕಲೆ, ಆಯ್ಕೆಯ ಉಡುಪುಗಳು ಹಾಗೂ ಬೆಳಕಿನ ಆಯ್ಕೆ ಇತ್ಯಾದಿ ಎಲ್ಲವನ್ನೂ ಇದು ಒಳಗೊಂಡಿದೆ.

ಫ್ಯಾಷನ್ ಜರ್ನಲಿಸಂ: ಪರಿಣಾಮಕಾರಿ ಪ್ರಚಾರಕ್ಕಾಗಿ ಪ್ರಭಾವಶಾಲಿ ಬರವಣಿಗೆ ಅಗತ್ಯ. ಆ ಮೂಲಕ ಹೊಸ ಉಡುಪುಗಳ ಕುರಿತು ಗ್ರಾಹಕರಿಗೆ ಆಳವಾಗಿ ವಿವರಿಸಬಹುದು ಹಾಗೂ ಅವರನ್ನು ಆಕರ್ಷಿಸಬಹುದು. ಆಕರ್ಷಕ ಪದಗಳು ಹಾಗೂ ಆಲೋಚನೆಗಳ ಮೂಲಕ ಗ್ರಾಹಕರನ್ನು ಸೆಳೆಯಲು ಇದು ನೆರವಾಗುತ್ತದೆ. ಆ ಕಾರಣಕ್ಕಾಗಿ, ಫ್ಯಾಷನ್ ಸಂವಹನವು ವಿದ್ಯಾರ್ಥಿಗಳಿಗೆ ಸೃಜನಶೀಲ ಬರವಣಿಗೆಯ ಬಗ್ಗೆ ಕಲಿಸುತ್ತದೆ, ಇದು ಉತ್ಪನ್ನದ ಪ್ರಚಾರ ಮತ್ತು ಮಾರಾಟದ ಮೇಲೆ ಗಣನೀಯ ಪರಿಣಾಮ ಬೀರುವಂತೆ ಮಾಡುತ್ತದೆ.

ಫ್ಯಾಷನ್ ಫೋರ್‌ಕಾಸ್ಟಿಂಗ್‌: ಫ್ಯಾಷನ್ ಫೋರ್‌ಕಾಸ್ಟಿಂಗ್‌ ಹಿಂದಿನ ಹಾಗೂ ಇಂದಿನ ಫ್ಯಾಷನ್‌ ಟ್ರೆಂಡ್‌ಗಳನ್ನು ಆಧರಿಸಿ ಗ್ರಾಹಕರ ಮುಂದಿನ ಖರೀದಿ ವರ್ತನೆಯು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಭವಿಷ್ಯದ ಫ್ಯಾಷನ್‌ ಟ್ರೆಂಡ್‌ಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಬಟ್ಟೆ, ಬಣ್ಣ, ವಿನ್ಯಾಸ, ಟೆಕ್ಸ್ಚರ್‌, ಬ್ಯೂಟಿ ಗ್ರೂಮಿಂಗ್‌, ಫೂಟ್‌ವೇರ್‌, ಸ್ಟ್ರೀಟ್‌ ಸ್ಟೈಲಿಂಗ್ ಮುಂತಾದ ಫ್ಯಾಷನ್‌ಗೆ ಸಂಬಂಧಿಸಿದ ಟ್ರೆಂಡ್‌ಗಳೂ ಇದರಲ್ಲಿ ಒಳಗೊಂಡಿರುತ್ತವೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು