ಸೋಮವಾರ, ಅಕ್ಟೋಬರ್ 18, 2021
25 °C

ಗ್ರೂಪ್-ಸಿ ಹುದ್ದೆ ಪರೀಕ್ಷೆ ಸಿದ್ಧತೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಲೋಕ ಸೇವಾ ಆಯೋಗವು ‘ಗ್ರೂಪ್ ಸಿ’ಯ ವಿವಿಧ 523 ಹುದ್ದೆಗಳ ನೇಮಕಾತಿಗೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಗೆ ತಯಾರಿ ಹೇಗಿರಬೇಕು?

ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳಾದ ಲೇಬರ್ ಇನ್‌ಸ್ಪೆಕ್ಟರ್, ಹಾಸ್ಟೆಲ್ ವಾರ್ಡನ್, ಸಾಂಖಿಕ ನಿರೀಕ್ಷಕರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕರವಸೂಲಿಗಾರರು ಈ ಮೊದಲಾದ 523 ಹುದ್ದೆಗಳ ನೇಮಕಾತಿಗೆ ಬರುವ ಡಿಸೆಂಬರ್ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿಶ್ಚಯಿಸಿದೆ. ಪರೀಕ್ಷೆ ಹೇಗಿರುತ್ತದೆ ಮತ್ತು ತಯಾರಿ ಹೇಗೆ ನಡೆಸಬೇಕೆಂಬುದನ್ನು ನೋಡೋಣ:

ಪರೀಕ್ಷೆಯಲ್ಲಿ ಏನೇನು ಇರುತ್ತದೆ?
ಈ ಪರೀಕ್ಷೆಯಲ್ಲಿ ಮೂರು ಪ್ರಶ್ನೆ ಪತ್ರಿಕೆ ಇರುತ್ತದೆ. ಮೊದಲನೆಯದು ಕಡ್ಡಾಯ ಕನ್ನಡ. ಈ ಪತ್ರಿಕೆಯಲ್ಲಿ ಪಡೆದಿರುವ ಅಂಕಗಳನ್ನು ಅಂತಿಮ ರ‍್ಯಾಕಿಂಗ್‌ಪಟ್ಟಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಎರಡನೆಯದು ಸಾಮಾನ್ಯ ಜ್ಞಾನ. ಮೂರನೆಯದು ಸಂವಹನ. ಎರಡನೇ ಮತ್ತು ಮೂರನೇ ಪತ್ರಿಕೆಗಳು ಮಹತ್ವದ್ದಾಗಿದೆ. ಅಂದರೆ ಸಾಮಾನ್ಯ ಜ್ಞಾನ ಹಾಗೂ ಸಂವಹನ ಬಹಳ ಮಹತ್ವದ್ದಾಗಿದೆ. ಇವೆರಡರಲ್ಲಿ ಗಳಿಸಿದ ಅಂಕಗಳನ್ನು ಸ್ಪರ್ಧೆಗೆ ಪರಿಗಣಿಸುವುದರಿಂದ ಅತ್ಯುತ್ತಮ ತಯಾರಿ ಮಾಡಿಕೊಳ್ಳಬೇಕು.

ಸಾಮಾನ್ಯ ಜ್ಞಾನ ಪತ್ರಿಕೆಯು 100 ಅಂಕಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯಲ್ಲಿ ಈ ಕೆಳಗಿನ ವಿಷಯದ ಮೇಲೆ ಪ್ರಶ್ನೆ ಕೇಳಲಾಗುತ್ತದೆ. ಪ್ರಚಲಿತ ಘಟನೆ, ಸಾಮಾನ್ಯ ವಿಜ್ಞಾನ, ಭೂಗೋಳ, ಸಮಾಜ ವಿಜ್ಞಾನ, ಭಾರತೀಯ ಸಮಾಜ ಮತ್ತು ಅದರ ಕ್ರಿಯಾತ್ಮಕತೆ, ಭಾರತೀಯ ಇತಿಹಾಸ, ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ, ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ, ಸ್ವಾತಂತ್ರ್ಯಾ ನಂತರ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆ, ಕರ್ನಾಟಕದ ಆರ್ಥಿಕತೆ ಮತ್ತು ಅದರ ಬಲ ಹಾಗೂ ದೌರ್ಬಲ್ಯ, ಪ್ರಸ್ತುತ ಹಂತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ, ಕರ್ನಾಟಕ ಸಮರ್ಥ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ, ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು.

ಮೂರನೆಯದು ಸಂವಹನ. ಈ ಪತ್ರಿಕೆಯು 35 ಅಂಕಗಳಿಗಾಗಿ ಸಾಮಾನ್ಯ ಕನ್ನಡ, 35 ಅಂಕಗಳಿಗಾಗಿ ಸಾಮಾನ್ಯ ಇಂಗ್ಲಿಷ್, 30 ಅಂಕಗಳಿಗಾಗಿ ಕಂಪ್ಯೂಟರ್ ಜ್ಞಾನ ಒಳಗೊಂಡಿರುತ್ತದೆ.

ಪರೀಕ್ಷೆಗೆ ಏನೇನು ಓದಬೇಕು?
ಈ ಪರೀಕ್ಷೆ ಒಂದು ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು ನಿಮ್ಮ ಜೊತೆಗೆ ಪರೀಕ್ಷೆ ಬರೆಯುವವರೊಡನೆ ಸ್ಪರ್ಧೆ ನೀಡಿ ಮುಂದೆ ಇರುವುದೇ ಮುಖ್ಯ. ಈಗ ಲಭ್ಯವಿರುವ ಎರಡು ತಿಂಗಳಲ್ಲಿ ಸಂಪೂರ್ಣ ಅಧ್ಯಯನ ಮಾಡಿಕೊಂಡು ಮುನ್ನಡೆಯಬೇಕಾಗಿದೆ.

ಸಾಮಾನ್ಯ ವಿಜ್ಞಾನ, ಭೂಗೋಳ, ಸಮಾಜ ವಿಜ್ಞಾನ ವಿಷಯಗಳಿಗೆ 8, 9, 10ನೇ ತರಗತಿಯ ವಿಜ್ಞಾನ ಮತ್ತು ಸಮಾಜವಿಜ್ಞಾನದ ಪುಸ್ತಕಗಳನ್ನು ಓದಬೇಕು, ಪ್ರತಿಯೋಗಿತಾ ದರ್ಪಣ ಪ್ರಕಟಿಸಿರುವ ಭಾರತೀಯ ಇತಿಹಾಸ, ಜನರಲ್ ಜಿಯಾಗ್ರಫಿ ಹಾಗೂ ಜನರಲ್ ಸೈನ್ಸ್ ಪುಸ್ತಕಗಳನ್ನು ಕೂಡಾ ಪರಾಮರ್ಶಿಸಿ.

ಭಾರತೀಯ ಸಮಾಜ ಮತ್ತು ಅದರ ಕ್ರಿಯಾತ್ಮಕತೆ ಈ ವಿಷಯಕ್ಕೆ ಭಾರತೀಯ ಸಮಾಜಶಾಸ್ತ್ರ ಪುಸ್ತಕ ಓದಬಹುದು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿರುವ ಭಾರತದ ಗೆಜೆಟಿಯರ್ ಸಂಪುಟ-2 ರಲ್ಲಿ ಇರುವ ಸಮಾಜ, ಧರ್ಮ, ಸಾಹಿತ್ಯ ಎಂಬ ಅಧ್ಯಾಯದಲ್ಲಿರುವ ಕೆಲವು ಆಯ್ದ ಭಾಗಗಳನ್ನು ಓದಿಕೊಳ್ಳುವುದು ಉತ್ತಮ.

ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತದ ಕುರಿತು ಬೇರೆ ಬೇರೆ ಲೇಖಕರು ಬರೆದಿರುವ ಪುಸ್ತಕಗಳು ಲಭ್ಯ. ಅವುಗಳನ್ನು ಅಂಗಡಿಯಲ್ಲಿ ಖರೀದಿಸಬಹುದು ಅಥವಾ ಗ್ರಂಥಾಲಯಗಳಲ್ಲಿ ಓದಬಹುದು.

ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ, ಸ್ವಾತಂತ್ರ್ಯಾ ನಂತರ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆ, ಕರ್ನಾಟಕ ಆರ್ಥಿಕತೆ ಮತ್ತು ಅದರ ಬಲ ಹಾಗೂ ದೌರ್ಬಲ್ಯ, ಪ್ರಸ್ತುತ ಹಂತ, ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಗೆಜೆಟಿಯರ್ ಇಲಾಖೆ ಪ್ರಕಟಿಸಿರುವ ‘ಕರ್ನಾಟಕ ಕೈಪಿಡಿ’ ಓದಬೇಕು. ಇದರ ಜೊತೆಗೆ ಬಜೆಟ್, ಕರ್ನಾಟಕ ಎಕನಾಮಿಕ್ ಸರ್ವೇ ಓದುವುದು ಉತ್ತಮ. ಇಡೀ ಪುಸ್ತಕ ಓದುವ ಅವಶ್ಯಕತೆ ಇಲ್ಲ. ನಿಮ್ಮ ಪಠ್ಯಕ್ರಮದಲ್ಲಿ ಯಾವೆಲ್ಲಾ ವಿಷಯಗಳು ನೀಡಿದ್ದಾರೋ ಅವುಗಳಿಗೆ ಸಂಬಂಧಿಸಿದ ಚಾಪ್ಟರ್‌ಗಳನ್ನು ಅವಶ್ಯ ಓದಿ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಕುರಿತು ತಜ್ಞರು ಬರೆದಿರುವ ಪುಸ್ತಕದ ಜೊತೆಗೆ ಪಂಚಾಯಿತಿರಾಜ್ ಕೈಪಿಡಿ ಎಂಬ ಪುಸ್ತಕವನ್ನು ಓದಬಹುದು.

ವಿವಿಧ ಪ್ರಕಾಶನಗಳ ಮಾರ್ಗದರ್ಶಿ ಪುಸ್ತಕಗಳು ನಿಮ್ಮ ತಯಾರಿಗೆ ಸಹಕಾರಿಯಾಗಬಲ್ಲದು. ದಿನಪತ್ರಿಕೆಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ರಾಜ್ಯದ ಸುದ್ದಿಸಂಗತಿಗಳನ್ನು ಸಂಗ್ರಹಿಸಿ ಓದುವುದು ಒಳ್ಳೆಯದು. ಯೂಟ್ಯೂಬ್ ಚಾನೆಲ್‌ಗಳಲ್ಲಿ ಇರುವ ವಿಡಿಯೊ ಪಾಠಗಳನ್ನು ಕೂಡ ನೋಡಿಕೊಳ್ಳಬಹುದು.

ದಿನಪತ್ರಿಕೆಗಳನ್ನು ಓದುವಾಗ ನೀವು ಈಗಾಗಲೇ ಭಾರತದ ಸಂವಿಧಾನವನ್ನು ಓದಿರಿರುವುದರ ಆಧಾರದ ಮೇಲೆ ಅದಕ್ಕೆ ಸಂಬಂಧಿಸಿದ ಲೇಖನ/ ವರದಿಗಳಿದ್ದರೆ ಗಮನ ಕೊಟ್ಟು ಓದಿ, ರಾಜಕೀಯ ನಾಯಕರ/ ಪಕ್ಷಗಳ ಕಚ್ಚಾಟದ ವರದಿಗೆ ಮಹತ್ವ ಕೊಡುವುದು ಬೇಡ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ವರದಿಗಳು ಪ್ರಕಟವಾದರೆ ಭಾರತೀಯ ಅರ್ಥಶಾಸ್ತ್ರದ ಹಿನ್ನೆಲೆಯಲ್ಲಿರುವ ವರದಿಗಳನ್ನು ಓದಿ. ಕಂಪನಿಗಳ ತ್ರೈಮಾಸಿಕ ಸಾಧನೆಗಳ ಕುರಿತು, ಷೇರು ಮಾರುಕಟ್ಟೆಯ ಬಗ್ಗೆ ಬರುವ ವರದಿಗಳ ಕಡೆಗೆ ಹೆಚ್ಚು ಗಮನ ಕೊಡುವುದು ಬೇಡ, ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟವಾಗುವ ಎಲ್ಲಾ ವರದಿ ಹಾಗೂ ಲೇಖನಗಳನ್ನು ಮರೆಯದೇ ಓದಿ.

ಇತಿಹಾಸವನ್ನು ಅಧ್ಯಯನ ಮಾಡುವಾಗ ಕರ್ನಾಟಕ ಹಾಗೂ ಭಾರತ ಇತಿಹಾಸ ಎರಡನ್ನು ಗಮನ ಕೊಟ್ಟು ಓದಿ. ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕ ಭಾರತ ಮತ್ತು ಸಾಂಸ್ಕೃತಿಕ ಕರ್ನಾಟಕದ ಕುರಿತಾದ ಎಲ್ಲಾ ಅಂಶಗಳನ್ನು ಗಮನ ಕೊಟ್ಟು ಓದಿ.

ರಾಷ್ಟ್ರೀಯ ಉದ್ಯಾನವನ, ನದಿಗಳು, ಪ್ರಶಸ್ತಿಗಳು, ಇತ್ತೀಚಿಗೆ ಪ್ರಕಟವಾದ ಪುಸ್ತಕಗಳು ಮತ್ತು ಅದರ ಲೇಖಕರು, ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಸುನಾಮಿ, ಪ್ರವಾಹ ಮೊದಲಾದವುಗಳಿಗೆ ಸಂಬಂಧಿಸಿದ ಮಾಹಿತಿ, ಕ್ರೀಡಾರಂಗದಲ್ಲಾದ ಇತ್ತೀಚಿನ ಸಾಧನೆ ಮತ್ತು ಸಾಧಕರ ಪರಿಚಯ, ಕಲಾವಿದರು ಮತ್ತು ಅವರ ಸಾಧನೆ, ಇತ್ತೀಚಿಗೆ ಪ್ರಕಟವಾದ ಪ್ರಶಸ್ತಿಗಳು, ಅಂತರರಾಷ್ಟ್ರೀಯ/ ರಾಷ್ಟ್ರೀಯ/ ರಾಜ್ಯದಲ್ಲಿ ಸುದ್ದಿಯಲ್ಲಿರುವ ಸ್ಥಳಗಳು ಹಾಗೂ ಮಹನೀಯರ ಬಗ್ಗೆ ಮಾಹಿತಿ, ದೇಶಗಳು ಅವುಗಳ ರಾಜಧಾನಿ ಮತ್ತು ಸುದ್ದಿಯಲ್ಲಿರುವ ಪ್ರಮುಖ ಸ್ಥಳಗಳ ಮಾಹಿತಿ. ನಮ್ಮ ದೇಶದಲ್ಲಿರುವ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳು, ಅವುಗಳ ರಾಜಧಾನಿ ಈ ಮೊದಲಾದ ಸಾಮಾನ್ಯಜ್ಞಾನ ಕುರಿತ ಮಾಹಿತಿಯನ್ನು ಬಿಡುವಿದ್ದಾಗಲೆಲ್ಲಾ ಕಣ್ಣಾಡಿಸುತ್ತಾ ಇರಿ.

ಪ್ರತಿದಿನವೂ ಅಭ್ಯಾಸಕ್ಕಾಗಿ ಒಂದಿಷ್ಟು ಸಮಯವನ್ನು ತೆಗೆದಿಡುವುದರ ಜೊತೆಗೆ ಪ್ರತಿನಿತ್ಯವೂ ನೀವು ಹಿಂದೆ ಓದಿದ ವಿಷಯ ವಸ್ತುವನ್ನು ಪುನರಾವರ್ತನೆ ಮಾಡುತ್ತಾ ಅಧ್ಯಯನ ಮಾಡುವುದರಿಂದ ಹಿಂದೆ ಓದಿರುವುದನ್ನು ಮರೆತು ಹೋಗದಂತೆ ತಡೆಯಬಹುದು. ಪ್ರತೀದಿನ ಪರೀಕ್ಷೆ ಮುಗಿಯುವ ತನಕ ಕನಿಷ್ಟ 5-6 ಗಂಟೆಯನ್ನಾದರೂ ಓದಲು ಮೀಸಲಿಡಿ. ಅದರಲ್ಲಿ 1 ಗಂಟೆ ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸಲು ಮೀಸಲಿಟ್ಟರೆ ಚೆನ್ನ. ಪರೀಕ್ಷೆ ಹತ್ತಿರ ಹತ್ತಿರ ಬಂದಂತೆ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಆ ಒತ್ತಡಕ್ಕೆ ಒಳಗಾಗದಂತೆ ಶಾಂತ ಚಿತ್ತರಾಗಿರಿ ಅದಕ್ಕಾಗಿ ಯೋಗ ಅಥವಾ ಧ್ಯಾನದ ಕಡೆಗೆ ಗಮನ ಹರಿಸಿ. ಕನಿಷ್ಠ 10-15 ನಿಮಿಷವಾದರೂ ಧ್ಯಾನ ಮಾಡುವುದು ಉತ್ತಮ.

(ಮಾಹಿತಿ: Spardha Bharati UPSC ಯೂಟ್ಯೂಬ್‌ ಚಾನೆಲ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು