ಮಂಗಳವಾರ, ಡಿಸೆಂಬರ್ 6, 2022
20 °C

ಎಸ್‌ಬಿಐ ಪಿಒ ಹುದ್ದೆಗಳ ನೇಮಕಾತಿ: ಹೀಗಿದೆ ಮುಖ್ಯ ಪರೀಕ್ಷೆ

ಆರ್‌.ಕೆ. ಬಾಲಚಂದ್ರ Updated:

ಅಕ್ಷರ ಗಾತ್ರ : | |

ಎಸ್‌ಬಿಐ ಪ್ರೊಬೆಷನರಿ ಆಫೀಸರ್‍ಸ್‌ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಮುಖ್ಯಪರೀಕ್ಷೆ ಮತ್ತು ಸಂದರ್ಶನಗಳು ಹಾಗೂ ಹೊಸ ನಿಯಮಗಳ ಕುರಿತ ಮಾಹಿತಿ ಇಲ್ಲಿದೆ.

ಬ್ಯಾಂಕಿಂಗ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿರುತ್ತವೆ. ಎರಡು ಹಂತಗಳಲ್ಲಿ ಲಿಖಿತ ಪರೀಕ್ಷೆಗಳು ಹಾಗೂ ಮೂರನೇ ಹಂತವಾಗಿ ಸಂದರ್ಶನವಿರುತ್ತದೆ.

ಕಳೆದ ವಾರ ಭಾರತೀಯ ಸ್ಟೇಟ್‌ ಬ್ಯಾಂಕ್  1673 ಪ್ರೊಬೆಷನರಿ ಆಫೀಸರ‍್ಸ್‌(ಪಿಒ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ಈ ನೇಮಕಾತಿಯಲ್ಲಿ ಮೂರು ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಈ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಸಂಚಿಕೆ ಯಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಪೂರ್ವಭಾವಿ ಪರೀಕ್ಷೆಗಳ ವಿವರವನ್ನು ನೀಡಲಾಗಿತ್ತು. ಪರೀಕ್ಷೆ ನಡೆಯುವ ವಿಧಾನ, ಪರೀಕ್ಷೆಯ ವಿಷಯ, ಸಮಯ ಹಾಗೂ ಅಂಕಗಳ ಬಗ್ಗೆಯೂ ವಿವರಿಸಲಾಗಿತ್ತು.

ಈ ಸಂಚಿಕೆಯಲ್ಲಿ ಮುಖ್ಯ ಪರೀಕ್ಷೆಯ ವಿಧಾನ, ವಿಷಯಗಳು, ಅಂಕಗಳು ಹಾಗೂ ಸಮಯದ ಬಗ್ಗೆ ತಿಳಿಯೋಣ. ಜೊತೆಗೆ, ಬದಲಾಗಿರುವ ಪರೀಕ್ಷಾ ನಿಯಮಗಳ ಬಗ್ಗೆಯೂ ಅರಿತುಕೊಳ್ಳೋಣ.

ಮುಖ್ಯ ಪರೀಕ್ಷೆಯ ವಿವರಗಳು

ಈ ಪರೀಕ್ಷೆಯಲ್ಲಿ ನಾಲ್ಕು ಪತ್ರಿಕೆಗಳಿರುತ್ತವೆ. 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು, 180 ನಿಮಿಷದ ಸಮಯಾವಕಾಶವನ್ನು ನಿಗದಿಪಡಿಸಲಾಗಿರುತ್ತದೆ(ವಿವರಗಳಿಗೆ ಕೋಷ್ಠಕ ನೋಡಿ). 

ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಇರುತ್ತದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ತಪ್ಪು ಉತ್ತರ ಗುರುತಿಸಿದರೆ, ಆಯಾ ವಿಷಯದ ಪ್ರತಿ ಪ್ರಶ್ನೆಗೆ ನಿಗದಿಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ(ನೆಗೆಟಿವ್‌ ಕರೆಕ್ಷನ್‌) ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

ಮುಖ್ಯಪರೀಕ್ಷೆ ನಂತರ

ಮುಖ್ಯ ಪರೀಕ್ಷೆ ಮುಗಿಯುತ್ತಿದ್ದಂತೆ, ಇಂಗ್ಲಿಷ್‌ ಭಾಷೆಗೆ ಸಂಬಂಧಿಸಿದಂತೆ 50 ಅಂಕಗಳಿಗೆ ಡಿಸ್ಕ್ರಿಪ್ರಿಟಿವ್‌ ಟೆಸ್ಟ್ (Letter Writing & Essay- with two questions) ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಇದು ಆನ್‌ಲೈನ್‌ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರ ಬರೆಯಬೇಕು. ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಮೂರನೇ ಹಂತದ ಆಯ್ಕೆ

ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ನಂತರ, ಮೂರನೇ ಹಂತದಲ್ಲಿ ಸಂದರ್ಶನ ಹಾಗೂ ಗುಂಪು ಚರ್ಚೆ ಇರುತ್ತದೆ. ಸಂದರ್ಶನಕ್ಕೆ 30 ಅಂಕಗಳು, ಗುಂಪು ಚರ್ಚೆಗೆ 20 ಅಂಕಗಳು. ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ’(‘Non-Creamy layer’) ಷರತ್ತನ್ನು ಒಳಗೊಂಡಿ ರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿಕೊಂಡಿರುವ ಆದರೆ (Non-Creamy layer )‘ಕೆನೆರಹಿತ ಪದರ’ ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರ(EWS) ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇಡಬ್ಲ್ಯುಎಸ್‌ ಅಡಿಯಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಆರ್ಥಿಕ  ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸದಿದ್ದಲ್ಲಿ ಅಂತಹವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

ಆಯ್ಕೆ ಪಟ್ಟಿ

ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ- II ಮತ್ತು ಹಂತ- III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ.

ಹಂತ-2ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳಲ್ಲಿ (250 ಅಂಕಗಳಲ್ಲಿ) ಅದರ 75 ಅಂಕಗಳು ಮತ್ತು ಅಭ್ಯರ್ಥಿಗಳ ಹಂತ-3ರಲ್ಲಿ ಪಡೆದ ಅಂಕಗಳಲ್ಲಿ (50 ಅಂಕಗಳಲ್ಲಿ) ಅದರ 25 ಅಂಕಗಳನ್ನು ಸೇರಿಸಿ(100ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ- 3ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. (ಮುಖ್ಯ ಪರೀಕ್ಷೆ ಮತ್ತು ಗುಂಪು ಚರ್ಚೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲಷ್ಟೇ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.)

ಆಯ್ಕೆಯಾದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಮೂಲ ಬ್ಯಾಂಕಿಂಗ್ ಜ್ಞಾನ ಒದಗಿಸಲಾಗುತ್ತದೆ. ಪ್ರೊಬೆಷನರಿ ಆಫೀಸರ್ ಆಗಿ ನೇಮಕವಾದವರು ಮೊದಲಿಗೆ 2 ವರ್ಷ ಪ್ರೊಬೆಷನರಿ ಪಿರಿಯಡ್‌ನಲ್ಲಿ ವಿವಿಧ ತರಬೇತಿ ನೀಡಲಾ ಗುತ್ತದೆ. ಬ್ಯಾಂಕ್ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿರಂತರ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಬ್ಯಾಂಕಿನ ಅಸ್ತಿತ್ವದಲ್ಲಿರುವ ನೀತಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕಾಲಕಾಲಕ್ಕೆ ಬ್ಯಾಂಕ್ ನಿರ್ಧರಿಸಿದ ಮಾನದಂಡಗಳ ಪ್ರಕಾರ ಮೌಲ್ಯಮಾಪನವನ್ನು ದೃಢೀಕರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್ ಸೇರುವ ಮೊದಲು, ₹2 ಲಕ್ಷ ಮೌಲ್ಯಕ್ಕೆ ಬಾಂಡ್ ಅನ್ನು  ಬ್ಯಾಂಕ್‌ಗೆ ಕನಿಷ್ಠ ಮೂರು ವರ್ಷಗಳ ಅವಧಿಗೆ ನೀಡಬೇಕು. ಅಭ್ಯರ್ಥಿಯು ಮೂರು ವರ್ಷಗಳ ಅವಧಿ ಮುಗಿಯುವ ಮೊದಲು ಬ್ಯಾಂಕ್ ಸೇವೆಗೆ ರಾಜೀನಾಮೆ ನೀಡಿದರೆ ಹಣ ಹಿಂತಿರುಗಿಸಲಾಗುವುದಿಲ್ಲ.

ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದವರಿಗೆ ವೇತನ ಶ್ರೇಣಿ: ₹36,000-₹63,840 ಮಾಸಿಕ(ನಾಲ್ಕು ಅಡ್ವಾನ್ಸ್‌ ಇನಕ್ರಿಮೆಂಟ್ ಸೇರಿ) ಹಾಗೂ ಇತರೆ ಭತ್ಯೆಗಳು.

ಬದಲಾವಣೆಗಳಿವೆ, ಗಮನಿಸಿ

ಈ ಹಿಂದಿನ ಮುಖ್ಯ ಪರೀಕ್ಷೆಯಲ್ಲಿದ್ದ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಆ ಪ್ರಕಾರ ಈ ಬಾರಿ ಜನರಲ್‌/ಎಕಾನಮಿ/ಬ್ಯಾಂಕಿಂಗ್‌ ಅವೇರ್‌ನೆಸ್ ಪತ್ರಿಕೆಯಲ್ಲಿ  ಪ್ರಶ್ನೆಗಳ ಸಂಖ್ಯೆ ಹಾಗೂ ಅಂಕಗಳನ್ನು ಹೆಚ್ಚಿಸಲಾಗಿದೆ. ಹಾಗೆಯೇ ರೀಸನಿಂಗ್ ಮತ್ತು ಡಾಟಾ ಇಂಟ್ರಪೀಟೇಶನ್ ವಿಭಾಗದಲ್ಲಿ ಪ್ರಶ್ನೆಗಳ ಸಂಖ್ಯೆ ಹಾಗೂ ಅಂಕಗಳನ್ನು ಕಡಿಮೆಗೊಳಿಸಲಾಗಿದೆ.

ಈ ಬಾರಿ ಕನ್ನಡದಲ್ಲಿ ಪರೀಕ್ಷೆ ಇಲ್ಲ

ಎರಡು ವಾರಗಳ ಹಿಂದೆ ಕರೆಯಲಾಗಿದ್ದ ಎಸ್ ಬಿ ಐ– ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಎರಡೂ ಹಂತಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.  ಆದರೆ ಈ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಈ ವೆಬ್ ಲಿಂಕ್ ಬಳಸಿ: https://bank.sbi/careers or https://www.sbi.co.in/careers

(ಲೇಖಕರು: ಬ್ಯಾಂಕಿಂಗ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು