ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿಯಲ್ಲಿ 300 ಎಒಒ ಹುದ್ದೆಗಳು: 3 ಹಂತದ ಪರೀಕ್ಷೆ ಹೇಗಿರುತ್ತದೆ?

ಅಕ್ಷರ ಗಾತ್ರ

ಸಾರ್ವಜನಿಕ ಸ್ವಾಮ್ಯದ ‘ಭಾರತೀಯ ಜೀವ ವಿಮಾ ನಿಗಮ’ ಸಂಸ್ಥೆಯಲ್ಲಿ (ಎಲ್‌ಐಸಿ) ಬ್ಯಾಕ್‌ಲಾಗ್ ಸೇರಿದಂತೆ ದೇಶದಾದ್ಯಂತ ಒಟ್ಟು 300 ‘ಎಲ್‌ಐಸಿ ಸಹಾಯಕ ಆಡಳಿತಾಧಿಕಾರಿ (ಎಒಒ–ಜನರಲಿಸ್ಟ್) 31ನೇ ಬ್ಯಾಚ್’ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಜನವರಿ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಜನವರಿ 31 ಕೊನೆ ದಿನವಾಗಿದೆ. ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ 21 ವರ್ಷದಿಂದ 30 ವರ್ಷ ವಯೋಮಾನದ ಪುರುಷ ಮತ್ತು ಸ್ತ್ರೀ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಎಲ್‌ಐಸಿಯಲ್ಲಿ ಎಒಒ ಒಂದು ಮಹತ್ವದ ಹುದ್ದೆಯಾಗಿದೆ. ಕೇಂದ್ರಿಕೃತ ಮಂಡಳಿಯಿಂದ ಈ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಗೆ ಮೂರು ಹಂತಗಳಲ್ಲಿ ವ್ಯವಸ್ಥಿತ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಹಾಗಾದರೆ ಆ ಹಂತಗಳು ಏನು? ಪರೀಕ್ಷೆ ಹೇಗಿರುತ್ತದೆ? ಸಿಲೇಬಸ್ ಹೇಗಿರುತ್ತದೆ? ಎಂಬುದನ್ನಿ ಇಲ್ಲಿ ಚರ್ಚಿಸಲಾಗಿದೆ.

ಹಂತ –I

ಮೊದಲ ಹಂತವು ಪೂರ್ವಭಾವಿ ಪರೀಕ್ಷೆಯನ್ನು ಹೊಂದಿರುತ್ತದೆ. ಕಂಪ್ಯೂಟರ್ ಆಧರಿತ ಈ ಪರೀಕ್ಷೆಯಲ್ಲಿ (ಆನ್‌ಲೈನ್ ಎಕ್ಸಾಮ್) 100 ಅಂಕಗಳಿಗೆ 1 ಗಂಟೆಯ ಪರೀಕ್ಷೆ ಇರುತ್ತದೆ. ಇದರಲ್ಲಿ ಮೂರು ಭಾಗಗಳಿದ್ದು ತಾರ್ಕಿಕ ಸಾಮರ್ಥ್ಯಕ್ಕೆ 35 ಪ್ರಶ್ನೆಗಳು 35 ಅಂಕ, ಕ್ವಾಂಟಿಟೇಟಿವ್‌ಗೆ 35 ಪ್ರಶ್ನೆಗಳು–35ಅಂಕ, ಇಂಗ್ಲಿಷ್ ಭಾಷೆ ಸಾಮರ್ಥ್ಯಕ್ಕೆ 30 ಪ್ರಶ್ನೆಗಳು 30 ಅಂಕಗಳನ್ನು ನಿಗದಿಪಡಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮುಖ್ಯ ಪರೀಕ್ಷೆಗೆ ಇಂಗ್ಲಿಷ್ ಭಾಷೆ ಸಾಮರ್ಥ್ಯದ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಆದರೆ, ಕನಿಷ್ಠ 10 ಅಂಕಗಳನ್ನು ಪಡೆಯುವುದು ಕಡ್ಡಾಯ. ಉಳಿದ 70 ಅಂಕಗಳನ್ನು ಮಾತ್ರ ಮುಖ್ಯಪರೀಕ್ಷೆಯ ರ್ಯಾಂಕಿಂಗ್‌ಗೆ ಪರಿಗಣಿಸಲಾಗುತ್ತದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 1 ಅನುಪಾತ 20ರಂತೆ ಅಭ್ಯರ್ಥಿಗಳನ್ನು ಮುಖ್ಯಪರೀಕ್ಷೆಗೆ ಕರೆಯಲಾಗುತ್ತದೆ.

ಹಂತ II

ಎರಡನೇ ಹಂತವು 300 ಅಂಕಗಳಿಗೆ ನಡೆಯುವ ಪರೀಕ್ಷೆಯಾಗಿರುತ್ತದೆ. ಇದು ಕೂಡ ಕಂಪ್ಯೂಟರ್ ಆಧಾರಿತ ಬಹುಆಯ್ಕೆಯ ಮಾದರಿ ಪರೀಕ್ಷೆಯಾಗಿದ್ದು (ಹಿಂದಿ ಅಥವಾ ಇಂಗ್ಲಿಷ್) 2 ಗಂಟೆಯದ್ದಾಗಿರುತ್ತದೆ.

ಇದರಲ್ಲಿ 4 ಭಾಗಗಳನ್ನು ಮಾಡಲಾಗಿದ್ದು ತಲಾ 30 ಪ್ರಶ್ನೆಗಳನ್ನು ನೀಡಲಾಗುತ್ತದೆ. ಶೇ 40 ರಷ್ಟು ಕನಿಷ್ಠ ಅಂಕಗಳನ್ನು ಪ್ರತಿ ವಿಭಾಗದಲ್ಲಿ ಪಡೆಯುವುದು ಅನಿವಾರ್ಯ.

ಭಾಗ 1: ಗ್ರಹಿಕೆ ಸಾಮರ್ಥ್ಯ –90 ಅಂಕ

ಭಾಗ 2: ಸಾಮಾನ್ಯ ಜ್ಞಾನ, ಪ್ರಚಲಿತ –60 ಅಂಕ

ಭಾಗ 3: ದತ್ತಾಂಶ ವಿಶ್ಲೇಷಣೆ ಮತ್ತು ಅಳವಡಿಕೆ –90 ಅಂಕ

ಭಾಗ 4: ವಿಮಾ ಮತ್ತು ಹಣಕಾಸು ಮಾರುಕಟ್ಟೆ ಜಾಗೃತಿ –60 ಅಂಕ

ಗಮನಿಸಬೇಕಾದ ಅಂಶವೆಂದರೆ ಇದೇ ಹಂತದಲ್ಲಿ ಒಟ್ಟು 25 ಅಂಕಗಳ 2 ಪ್ರಶ್ನೆಗಳಿಗೆ ವಿವರಣಾತ್ಮಕವಾಗಿ ಉತ್ತರಿಸಬೇಕಾಗುತ್ತದೆ. ಇದು ಕೂಡ ಕಂಪ್ಯೂಟರ್ ಆಧಾರಿತ ಅರ್ಹತಾ ಪರೀಕ್ಷೆಯಾಗಿದ್ದು ಕನಿಷ್ಠ 10 ಅಂಕಗಳನ್ನು ಪಡೆಯುವುದು ಅನಿವಾರ್ಯವಾಗಿರುತ್ತದೆ.

ಹಂತ III

ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಮುಖ್ಯಪರೀಕ್ಷೆಯಲ್ಲಿ ಜನರಲ್ ಮೆರಿಟ್‌ನವರು ಶೇ 60 ಅಂಕ, ಒಬಿಸಿ ಶೇ 30, ಎಸ್‌ಸಿ/ಎಸ್‌ಟಿ ಶೇ 27 ಅಂಕಗಳನ್ನು ಪಡೆದಿದ್ದರೇ ಮಾತ್ರ ಸಂದರ್ಶನಕ್ಕೆ ಅರ್ಹರು. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳ ಮೆರಿಟ್ ಪರಿಗಣಿಸಿ ಅಭ್ಯರ್ಥಿಗಳನ್ನು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಯಲ್ಲಿ ಯಶಸ್ವಿಯಾದವರು ಎಒಒಗಳಾಗಿ ನೇಮಕವಾಗುತ್ತಾರೆ.

ಒಂದು ವೇಳೆ ಯಾವುದೇ ಅಭ್ಯರ್ಥಿ ಕನಿಷ್ಠ ಅಂಕಗಳನ್ನು ಪಡೆಯದಿದ್ದರೇ ಈ ನೇಮಕಾತಿಯನ್ನೇ ಸ್ಥಗೀತಗೊಳಿಸಿ ಅಗತ್ಯ ಬಿದ್ದರೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.

––––––––

ಬಾಕ್ಸ್ ಐಟಮ್‌ಗಳು

ಸಿಲೇಬಸ್ ಹೇಗಿರಲಿದೆ?

ಇದೊಂದು ಪದವಿ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು ಗ್ರಹಿಕೆ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಪ್ರಚಲಿತ, ದತ್ತಾಂಶ ವಿಶ್ಲೇಷಣೆ ಮತ್ತು ಅಳವಡಿಕೆಗೆ ಸಂಬಂಧಿಸಿದ ಇತ್ತೀಚಿನ ಪಠ್ಯವನ್ನು ಅಭ್ಯಸಿಸಬೇಕಾಗುತ್ತದೆ. ವಿಶೇಷವಾಗಿ ವಿಮಾ ಮತ್ತು ಹಣಕಾಸು ಮಾರುಕಟ್ಟೆಗೆ ಸಂಬಂಧಿಸಿದ ಪಠ್ಯವನ್ನು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಪ್ರಚಲಿತ, ಸಾಮಾನ್ಯ ಜ್ಞಾನಕ್ಕಾಗಿ ಅಧ್ಯಯನ ಪರಿಕರಗಳ ಜೊತೆ ಪ್ರತಿದಿನ ದಿನಪತ್ರಿಕೆ ಓದುವುದು ಸೂಕ್ತ. ವಿಶೇಷವಾಗಿ ಅಭ್ಯರ್ಥಿಗಳು ಸುದ್ದಿ ಪತ್ರಿಕೆಗಳ ಜೊತೆ ಹಣಕಾಸು, ಆರ್ಥಿಕ ಪತ್ರಿಕೆಗಳನ್ನು ಪ್ರತಿದಿನ ಓದುವುದು ಉತ್ತಮ. ವಿವರವಾದ ಸಿಲೇಬಸ್ ಏನೇನಿರಲಿದೆ ಎಂಬುದರ ಬಗ್ಗೆ ತಿಳಿಯಲು https://www.careerpower.in/lic-aao-syllabus.html ಈ ಲಿಂಕ್‌ಗೆ ಭೇಟಿ ನೀಡಬಹುದು.

ಎಲ್‌ಐಸಿ ನೀಡಲಿದೆ ತರಬೇತಿ

ಎಒಒ ಹುದ್ದೆಗಳಿಗೆ ಯಶಸ್ವಿಯಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಎಲ್‌ಐಸಿ ವತಿಯಿಂದಲೇ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಎಲ್‌ಐಸಿ ವೆಬ್‌ಸೈಟ್‌ www.licindia.in ನೇಮಕಾತಿ ವಿಭಾಗದಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ. ಜನವರಿ 31 ರ ನಂತರ ಎಲ್‌ಐಸಿಯ ವಿಭಾಗೀಯ ಕಚೇರಿಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಆಸಕ್ತರು ತಮ್ಮ ಸ್ವಂತ ಖರ್ಚಿನಲ್ಲಿ ತರಬೇತಿಗೆ ಹಾಜರಾಗಬೇಕಾಗುತ್ತದೆ.

ಕನ್ನಡದಲ್ಲೂ ಪರೀಕ್ಷೆ ನಡೆಸಲು ಆಗ್ರಹ

ಎಒಒ ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆ) ನಡೆಸಲಾಗುತ್ತಿದೆ. ಇದರಿಂದ ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಯ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬ ಕೂಗು ಕೇಳಿ ಬಂದಿದ್ದು ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಅನೇಕರು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT