ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾವಾಣಿ: ಲೋಕಸಭೆ ಚುನಾವಣೆ– ತಿಳಿದಿರಬೇಕಾದ ಮಹತ್ವದ ಅಂಶಗಳು

ತಿಳಿದಿರಬೇಕಾದ ಮಹತ್ವದ ಅಂಶಗಳು
Published 8 ಮೇ 2024, 22:37 IST
Last Updated 8 ಮೇ 2024, 22:37 IST
ಅಕ್ಷರ ಗಾತ್ರ

ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಸ್ತುತ ಭಾರತದಲ್ಲಿ 2024, ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಲೋಕಸಭೆಯ 18ನೇ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಲೋಕಸಭೆ ಹಾಗೂ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೇಲಿಂದ ಮೇಲೆ ಕೇಳಿರುವ ಹಾಗೂ ಕೇಳಬಹುದಾದ ಪ್ರಶ್ನೆಗಳನ್ನು ಆಧರಿಸಿ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

l ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಮತ್ತು ಪ್ರಾಂತೀಯ ಕೌನ್ಸಿಲ್‌ಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು 1920ರಲ್ಲಿ ಬ್ರಿಟಿಷ್ ಭಾರತದಲ್ಲಿ ಚುನಾವಣೆಗಳು ನಡೆದವು. ಇವು ದೇಶದ ಆಧುನಿಕ ಇತಿಹಾಸದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗಳಾಗಿವೆ.

l ಭಾರತದ ಲೋಕಸಭೆಗೆ ಮೊದಲ ಸಾರ್ವತ್ರಿಕ ಚುನಾವಣೆಗಳು 25 ಅಕ್ಟೋಬರ್ 1951ರಿಂದ 21 ಫೆಬ್ರುವರಿ 1952ರವರೆಗೆ ನಡೆದವು. ಮೊದಲ ಲೋಕಸಭೆಯ ಮೊದಲ ಅಧಿವೇಶನ 13 ಮೇ 1952ರಂದು ಪ್ರಾರಂಭವಾಯಿತು.

l ಮೊದಲ ಲೋಕಸಭೆಯಲ್ಲಿ 489 ಸ್ಥಾನ ಗಳಿಗೆ ಆಯ್ಕೆ ನಡೆದಿತ್ತು. 1996ರಿಂದ 2024ರವರೆಗೆ 543 ಸ್ಥಾನಗಳಿಗೆ ಆಯ್ಕೆ ನಡೆಯುತ್ತಿದೆ.

l 1984ರಲ್ಲಿ ನಡೆದ 8ನೇ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಗಳಿಸಿದ ಶೇ 48.12ರಷ್ಟು ಮತಗಳ ಪ್ರಮಾಣ ಇಲ್ಲಿಯವರೆಗಿನ ಅತ್ಯಧಿಕ ಮತಗಳಿಕೆಯ ಪ್ರಮಾಣವಾಗಿದೆ.

l ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊತ್ತಮೊದಲು ಮತ ಚಲಾಯಿಸಿದವರು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್‌ ಶರಣ್‌ ನೇಗಿ.

l ಭಾರತದ ಮೊದಲ ಲೋಕಸಭಾ ಸ್ಪೀಕರ್ ಗಣೇಶ್ ವಾಸುದೇವ್ ಮಾವಲಂಕರ್. (1952 ರಿಂದ 1956)

l ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಮೀರಾ ಕುಮಾರ್ (2009 ರಿಂದ 2014). ಅವರು 15ನೇ ಲೋಕಸಭೆಯ ಸ್ಪೀಕರ್ ಆಗಿದ್ದರು.

l ಲೋಕಸಭಾ ಸದಸ್ಯರ ಅವಧಿ 5 ವರ್ಷಗಳಾಗಿರುತ್ತದೆ. (ವಿಸರ್ಜನೆ ಹೊರತುಪಡಿಸಿ)

l ಸ್ಪೀಕರ್ ಅನುಮೋದನೆಯೊಂದಿಗೆ ಲೋಕಸಭೆಯಲ್ಲಿ ಮಾತ್ರ ‘ಹಣಕಾಸಿನ ಮಸೂದೆ’ ಮಂಡಿಸಬಹುದು.

l ಸಂಸತ್ತಿನ ಸದನದಲ್ಲಿ ಸದಸ್ಯರು ನಿರ್ದಿಷ್ಟ ಸಚಿವರಿಗೆ ಪ್ರಶ್ನೆಯೊಂದನ್ನು ಕೇಳಿ ಅದಕ್ಕೆ ಮೌಖಿಕ ವಿವರಣೆಯನ್ನು ನಿರೀಕ್ಷಿಸಿದರೆ, ಅದನ್ನು ‘ಚುಕ್ಕೆ ಗುರುತಿನ ಪ್ರಶ್ನೆ’ (Star Mark) ಎಂದು ಕರೆಯಲಾಗುತ್ತದೆ. 

l ಲೋಕಸಭೆ ಅಧಿವೇಶನದ ಒಂದೇ ದಿನದಲ್ಲಿ ಗರಿಷ್ಠ 20 ‘ಚುಕ್ಕೆ ಗುರುತಿನ ಪ್ರಶ್ನೆ’ಗಳನ್ನು ಕೇಳಬಹುದು.ಲೋಕಸಭೆಯನ್ನು ‘ಸಂಸತ್ತಿನ ಕೆಳಮನೆ’ ಎಂದು ಕರೆಯಲಾಗುತ್ತದೆ.

l ಸಾರ್ವತ್ರಿಕ ವಯಸ್ಕ ಮತದಾನ ಎಂದರೆ, 18 ವರ್ಷ ಮೀರಿದ ಎಲ್ಲರಿಗೂ ಯಾವುದೇ ಭೇದವಿಲ್ಲದೇ ಮತದಾನದ ಅವಕಾಶವನ್ನು ಒದಗಿಸುವುದಾಗಿದೆ. (ಮುಂಚೆ ಇದು 21 ವರ್ಷಗಳಾಗಿತ್ತು)

l ಪ್ರಸ್ತುತ ಭಾರತದ ಲೋಕಸಭೆಯ ಸದಸ್ಯರ ಒಟ್ಟು ಸಂಖ್ಯೆ 545 ಇವರ ಪೈಕಿ 543 ಜನ ನೇರವಾಗಿ ಜನರಿಂದ ಆಯ್ಕೆಯಾದರೆ, ಇಬ್ಬರನ್ನು ಭಾರತದ ಸಂವಿಧಾನದ 331ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ನಾಮನಿರ್ದೇಶನ ಮಾಡುತ್ತಾರೆ.

l 17ನೇ ಲೋಕಸಭೆಗೆ (2019) ಯಾವುದೇ ನಾಮನಿರ್ದೇಶಿತ ಸದಸ್ಯರನ್ನು ಭಾರತದ ರಾಷ್ಟ್ರಪತಿ ನಾಮನಿರ್ದೇಶನ ಮಾಡಿಲ್ಲ.

l ಲೋಕಸಭೆಗೆ ಆಯ್ಕೆಯಾಗಬೇಕಾದರೆ, ಭಾರತದ ಸಂವಿಧಾನದ 84ನೇ ವಿಧಿಯ ಪ್ರಕಾರ, ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯಾಗಿರಬೇಕು, ಕನಿಷ್ಠ 25 ವರ್ಷ ವಯಸ್ಸಿನವರಾಗಿರಬೇಕು ಮತ್ತು ಸಂಸತ್ತು ರೂಪಿಸಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸೂಚಿಸಬಹುದಾದ ಇತರ ಅರ್ಹತೆಗಳನ್ನು ಹೊಂದಿರಬೇಕು.

l ಭಾರತದ ಸಂವಿಧಾನದ 94, 101ನೇ ವಿಧಿಯನ್ವಯ ಲೋಕಸಭೆ ವಿಸರ್ಜನೆಯ ನಂತರವೂ ಮುಂದಿನ ಲೋಕಸಭೆ ಅಸ್ತಿತ್ವಕ್ಕೆ ಬಂದು ಮುಂದಿನ ಸ್ಪೀಕರ್ ಆಯ್ಕೆ ಆಗುವವರೆಗೆ ಸ್ಪೀಕರ್‌ ಅಧಿಕಾರಾವಧಿ ಮುಂದುವರಿಯುತ್ತದೆ.

l ಭಾರತದ ಸಂವಿಧಾನದ 102ನೇ ವಿಧಿಯನ್ವಯ ಲೋಕಸಭೆಯ ಸ್ಪೀಕರ್ ಆಯ್ಕೆ ನಡೆಯುತ್ತದೆ.

l ಲೋಕಸಭೆಯು ನೇರ ಚುನಾವಣೆ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳಿಂದ ಕೂಡಿದೆ. ಅದಕ್ಕಾಗಿಯೇ ಇದನ್ನು ‘ಜನಪ್ರಿಯ ಚೇಂಬರ್’ ಎಂದು ಕರೆಯಲಾಗುತ್ತದೆ.

l ಸಾಮಾನ್ಯವಾಗಿ ಒಂದು ವರ್ಷದಲ್ಲಿ ಲೋಕಸಭೆಯ ಮೂರು ಅಧಿವೇಶನಗಳು ನಡೆಯುತ್ತವೆ ಅವುಗಳೆಂದರೆ: ಬಜೆಟ್ ಅಧಿವೇಶನ (ಫೆಬ್ರುವರಿ–ಮೇ), ಮಾನ್ಸೂನ್ ಅಧಿವೇಶನ (ಜುಲೈ–ಆಗಸ್ಟ್), ಚಳಿಗಾಲದ ಅಧಿವೇಶನ (ನವೆಂಬರ್–ಡಿಸೆಂಬರ್).

l ಭಾರತದ ಚುನಾವಣಾ ಆಯೋಗ (ECI)  ಸ್ವಾಯತ್ತ ಪ್ರಾಧಿಕಾರವಾಗಿದೆ.

l ಚುನಾವಣಾ ಆಯೋಗದ ಮೂಲ ಕಾಯ್ದೆಯ ಪ್ರಕಾರ ಒಬ್ಬ ಚುನಾವಣಾ ಆಯುಕ್ತರನ್ನು ಮಾತ್ರ ನೇಮಕ ಮಾಡಲು ಅವಕಾಶವಿತ್ತು. 1989ರವರೆಗೆ ಅದೇ ಪದ್ಧತಿ ಚಾಲ್ತಿಯಲ್ಲಿತ್ತು. 1989ರ ಚುನಾವಣೆ ಸಂದರ್ಭದಲ್ಲಿ ಎದುರಾದ ಬಿಕ್ಕಟ್ಟುಗಳ ಕಾರಣದಿಂದ ಇನ್ನೂ ಇಬ್ಬರು ಆಯುಕ್ತರನ್ನು ನೇಮಕ ಮಾಡಲಾಗಿತ್ತು. 90ರ ದಶಕದಲ್ಲಿ ಕಾನೂನುಗಳಿಗೆ ತಿದ್ದುಪಡಿ ತಂದು ಒಟ್ಟು ಮೂವರು ಆಯುಕ್ತರನ್ನು ನೇಮಕ ಮಾಡುತ್ತಾ ಬರಲಾಗಿದೆ.

l ಭಾರತದ ಚುನಾವಣಾ ಆಯೋಗದ ಮೊದಲ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಆಗಿದ್ದರು. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಆಗಿದ್ದು, ಜ್ಞಾನೇಶ್‌ ಕುಮಾರ್‌ ಮತ್ತು ಸುಖ್ಬೀರ್‌ ಸಿಂಗ್‌ ಸಂಧು ಚುನಾವಣಾ ಆಯುಕ್ತರಾಗಿದ್ದಾರೆ.

l ಚುನಾವಣಾ ಅಕ್ರಮ ತಡೆಯಲು 1997ರ ಸಾರ್ವತ್ರಿಕ ಚುನಾವಣೆಗಳಿಂದ ಮತಪೆಟ್ಟಿಗೆಗಳ ಬದಲಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಬಳಸಲಾಗುತ್ತಿದೆ.

l ನಾಗಾಲ್ಯಾಂಡ್‌ನಲ್ಲಿ 14 ಆಗಸ್ಟ್ 2014ರಂದು ಮೊದಲಬಾರಿಗೆ VVPAT (Voter Verifiable Paper Audit Trail) ಅನ್ನು ಪರಿಚಯಿಸಲಾಯಿತು.

l VVPAT ಮೂಲಕ ರಚಿಸಲಾದ ಸ್ಲಿಪ್ ಮತದಾರರಿಗೆ ಅವರ ಮತವನ್ನು ಯಾವ ಪಕ್ಷ ಅಥವಾ ಅಭ್ಯರ್ಥಿಗೆ ನೀಡಲಾಗಿದೆ, ಅವರ ಹೆಸರು, ಅವರ ಕ್ಷೇತ್ರ ಮತ್ತು ಅವರ ಮತಗಟ್ಟೆ ಸಂಖ್ಯೆಯನ್ನು ತಿಳಿಸುತ್ತದೆ.

l 2014ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ, VVPAT ಅನ್ನು ಪ್ರಾಯೋಗಿಕವಾಗಿ ಲಕ್ನೋ, ಗಾಂಧಿನಗರ, ಬೆಂಗಳೂರು ದಕ್ಷಿಣ, ಚೆನ್ನೈ ಸೆಂಟ್ರಲ್, ಜಾಧವ್‌ಪುರ, ರಾಯ್‌ಪುರ, ಪಟ್ನಾ ಸಾಹಿಬ್ ಮತ್ತು ಮಿಜೋರಾಂ ಈ 8 ಲೋಕಸಭಾ ಕ್ಷೇತ್ರಗಳಲ್ಲಿ ಬಳಸಲಾಯಿತು.

l ಭಾರತೀಯ ಚುನಾವಣಾ ಆಯೋಗ 2024ರ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಮನೆಯಿಂದಲೇ ಮತದಾನ’ ಮಾಡುವ ವ್ಯವಸ್ಥೆ ಜಾರಿಗೊಳಿಸಿದೆ.

l 1961ರಲ್ಲಿ ಜಾರಿಗೊಳಿಸಿದ್ದ ‘ನಿಯಮ 49–O’ ಮತದಾರ ತನ್ನ ಮತವನ್ನು ಚಲಾಯಿಸದೇ ಇರಲು ನಿರ್ಧರಿಸಿದಾಗ ಮತ್ತು ಈ ಸತ್ಯವನ್ನು ಆತ / ಆಕೆ ದಾಖಲಿಸಲು ನಿರ್ಧರಿಸಿದಾಗ ಅನುಸರಿಸಬೇಕಾದ ಕಾರ್ಯವಿಧಾನ ಒಳಗೊಂಡಿತ್ತು. ಈ ನಿಯಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸೆಪ್ಟೆಂಬರ್ 2013ರಲ್ಲಿ ಸುಪ್ರೀಂ ಕೋರ್ಟ್ ಘೋಷಿಸಿತು.

l ನಂತರ 27 ಸೆಪ್ಟೆಂಬರ್ 2013 ರಂದು, ಸುಪ್ರೀಂಕೋರ್ಟ್‌ ‘ಮೇಲಿನ ಯಾವುದೂ ಅಲ್ಲ’ (NOTA) ಆಯ್ಕೆಯನ್ನು ಚಲಾಯಿಸುವ ಮೂಲಕ ಋಣಾತ್ಮಕ ಮತ ಚಲಾಯಿಸುವ ಹಕ್ಕು ನಾಗರಿಕರಿಗೆ ಇದೆ ಎಂದು ತೀರ್ಪು ನೀಡಿತು.

l ನವೆಂಬರ್ 2013ರಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ‘NOTA’ವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.

l 2024ರ ಲೋಕಸಭಾ ಚುನಾವಣೆ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಹಾಗೂ ಸುದೀರ್ಘ ಅವಧಿಯ ಚುನಾವಣೆಯಾಗಿದ್ದು, 7 ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 19ರಂದು ಆರಂಭವಾಯಿತು. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು ವೆಚ್ಚ ₹ 1 ಲಕ್ಷ ಕೋಟಿ ಮೀರಲಿದೆ ಎಂದು ಅಂದಾಜಿಸಲಾಗಿದೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT