ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಪೆಟ್ರೋಲಿಯಂ ಎಂಜಿನಿಯರಿಂಗ್‌: ಅವಕಾಶಗಳಿವೆಯೇ?

Published 17 ಸೆಪ್ಟೆಂಬರ್ 2023, 23:30 IST
Last Updated 17 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನಾನು 2021ರಲ್ಲಿ ಬಿ.ಟೆಕ್ (ಪೆಟ್ರೋಲಿಯಮ್ ಎಂಜಿನಿಯರಿಂಗ್) ಪದವಿಯನ್ನು ಮಾಡಿದ್ದರೂ, ಈವರೆಗೆ ಈ ಕ್ಷೇತ್ರದಲ್ಲಿ ಉದ್ಯೋಗ ಸಿಕ್ಕಿಲ್ಲ. ಉತ್ತಮ ಉದ್ಯೋಗವನ್ನು ಪಡೆದು ಬದುಕಿನಲ್ಲಿ ನೆಲೆಯೂರಲು ಇನ್ನು ಯಾವ ಕೋರ್ಸ್ ಮಾಡಬೇಕು? – ದಯಾನಂದ್, ಬೆಂಗಳೂರು.

ಪೆಟ್ರೋಲಿಯಮ್ ಎಂಜಿನಿಯರಿಂಗ್ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ, ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್- ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಇತ್ಯಾದಿ ಕೌಶಲಗಳೂ ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು. ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬಂಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‌ಲೈನ್ ತರಗತಿಗಳು, ಸಾಧಕರ ಯಶಸ್ಸಿನ ಕಥೆಗಳು, ವಿಡಿಯೊಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು.

ಅಚ್ಚುಕಟ್ಟಾದ ಬಯೋಡೇಟ ಬರೆಯುವುದರ ಬಗ್ಗೆ ಮತ್ತು ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ:

ಪ್ರ

ನಾನು ಪಿಯುಸಿ ಮಾಡುತ್ತಿದ್ದು ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದೇನೆ. ಹಾಗಾಗಿ, ಓದುವ ವಿಧಾನಗಳ ಮಾಹಿತಿ ನೀಡಿ – ಹೆಸರು, ಊರು ತಿಳಿಸಿಲ್ಲ.

ಸಕಾರಾತ್ಮಕವಾದ ಆಲೋಚನೆಯಿಂದ ಈ ಪ್ರಶ್ನೆಯನ್ನು ಕೇಳಿರುವ ನಿಮಗೆ ಅಭಿನಂದನೆಗಳು. ಕಾಲೇಜುಗಳಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯಿಂದ ಪ್ರಸ್ತುತ ಕಲಿಕೆಯ ವಿಧಾನಗಳು ಮೇಲ್ನೋಟಕ್ಕೆ ನಿಷ್ಪರಿಣಾಮಕಾರಿ ಎನಿಸುವುದು ಸಹಜ. ವೃತ್ತಿ ಜೀವನದ ಕನಸುಗಳು ನನಸಾಗಬೇಕಾದರೆ, ನಿಮ್ಮ ಕಲಿಕೆ ಪರಿಣಾಮಕಾರಿಯಾಗಬೇಕು.

ಹಾಗಾಗಿ, ಈ ಐದು ಕಾರ್ಯತಂತ್ರಗಳನ್ನು ಬಳಸಿ:

  1. ಸಮೀಕ್ಷೆ: ಆಳವಾದ ಓದುವಿಕೆಗೆ ಮೊದಲು ಓದುವ ವಸ್ತುವಿನ ಸಾರಾಂಶ/ಅಧ್ಯಾಯವನ್ನು ಅರ್ಥಮಾಡಿಕೊಳ್ಳುವುದು. ಸಮೀಕ್ಷೆಗಾಗಿ ಒಟ್ಟು ಸಮಯದ ಶೇ 10 ಬೇಕಾಗುತ್ತದೆ.

  2. ಪ್ರಶ್ನಿಸುವಿಕೆ: ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದಲ್ಲಿನ ಒಳನೋಟವನ್ನು ಪಡೆದು ಕಲಿಕೆ ಪರಿಣಾಮಕಾರಿಯಾಗುತ್ತದೆ. ಪ್ರಶ್ನಿಸುವಿಕೆಗೆ ಒಟ್ಟು ಸಮಯದ ಶೇ 10 ಬೇಕಾಗುತ್ತದೆ.

  3. ಓದುವಿಕೆ: ಈ ಪ್ರಕ್ರಿಯೆಯನ್ನು ಚಾರಣಕ್ಕೆ ಹೋಲಿಸಬಹುದು; ಕಷ್ಟಕರವಾದ ವಿಷಯವನ್ನು ನಿಧಾನವಾಗಿಯೂ (ನಿಧಾನವಾಗಿ ಏರುವುದು), ತಿಳಿದಿರುವ ಅಥವಾ ಸುಲಭದ ವಿಷಯವನ್ನು ತ್ವರಿತವಾಗಿಯೂ (ತ್ವರಿತವಾಗಿ ಇಳಿಯುವುದು) ಮತ್ತು ಪ್ರಚೋದನಕಾರಿ, ವಾದ, ಪರಿಕಲ್ಪನಾ ವಿಷಯವನ್ನು ಎಚ್ಚರಿಕೆಯಿಂದ ಓದುವುದು (ಅಪಾಯವಿರುವಲ್ಲಿ ಎಚ್ಚರಿಕೆಯಿಂದ). ಈ ರೀತಿ ಓದುವುದಕ್ಕೆ ಒಟ್ಟು ಸಮಯದ ಶೇ 50 ಮೀಸಲಿಡಿ.

  4. ಪುನರುಚ್ಛಾರಣೆ: ಓದಿದ ನಂತರ ಪುಸ್ತಕವನ್ನು ತೆಗೆದಿಟ್ಟು, ಮುಖ್ಯ ಅಂಶಗಳು ಮತ್ತು ಪ್ರಮುಖ ವಿವರಗಳನ್ನು ಪುನರುಚ್ಛರಿಸುವುದು ಅಥವಾ ಟಿಪ್ಪಣಿ ಬರೆಯುವುದು ಪರಿಣಾಮಕಾರಿ ಕಲಿಕೆಗೆ ಅಗತ್ಯ. ಇದಕ್ಕಾಗಿ, ಒಟ್ಟು ಸಮಯದ ಶೇ 20 ಮೀಸಲಿಡಿ.

  5. ಪುನರಾವರ್ತನೆ: ಕೊನೆಯ ಹಂತದಲ್ಲಿ, ಮೊದಲ ನಾಲ್ಕು ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಬೇಕು. ಈ ಪ್ರಕ್ರಿಯೆಗೆ, ಒಟ್ಟು ಸಮಯದ ಶೇ 10 ಬೇಕಾಗುತ್ತದೆ. ಒಂದು ವೇಳೆ, ನಿಮ್ಮ ಕಲಿಕೆ ಅಸಮರ್ಪಕವೆನಿಸಿದರೆ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಓದುವ ಕಾರ್ಯತಂತ್ರಗಳ ಜೊತೆಗೆ, ಕಣ್ಣುಗಳಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿದೆ.

ಪ್ರ

ಸರ್, ನಾನು ಇತ್ತೀಚೆಗೆ ದ್ವಿತೀಯ ಪಿಯುಸಿ ಮುಗಿಸಿ ಬಿ.ಎಸ್ಸಿ ಮಾಡುತ್ತಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಗೆ ಈಗಿನಿಂದಲೇ ಯಾವ ರೀತಿಯಾಗಿ ತಯಾರಿ ಮಾಡಬೇಕೆಂದು ತಿಳಿಸಿ – ಹೆಸರು, ಊರು ತಿಳಿಸಿಲ್ಲ.

ಯುಪಿಎಸ್‌ಸಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.

  1. ಪೂರ್ವಭಾವಿ ಪರೀಕ್ಷೆ (ಬಹು ಆಯ್ಕೆ ಮಾದರಿ).

  2. ಮುಖ್ಯ ಪರೀಕ್ಷೆ (ಪ್ರಬಂಧ ರೂಪದ ಲಿಖಿತ ಪರೀಕ್ಷೆ).

  3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಈ ಸಲಹೆಗಳನ್ನು ಗಮನಿಸಿ:

  • ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

  • ಮುಖ್ಯ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.

  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಅಣಕು- ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.

  • ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕೃಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

  • ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ವಿಡಿಯೊಗಳನ್ನು ವೀಕ್ಷಿಸಿ. ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.

  • ಖುದ್ದಾಗಿ ತಯಾರಿಯಾಗಿ ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ; ಹಾಗಾಗಿ, ಕೋಚಿಂಗ್ ಕಡ್ದಾಯವಲ್ಲ. ಆದರೂ, ಕೋಚಿಂಗ್ ಸೆಂಟರ್‌ಗಳು ನೀಡುವ ಮಾರ್ಗದರ್ಶನ ಉಪಯುಕ್ತ. ಅಂತಿಮ ಆಯ್ಕೆ ನಿಮ್ಮದು.

ಪ್ರ

ನಾನು ಪಿಯುಸಿ ನಂತರ, ಮುಂಬೈ ಹಿಂದಿ ವಿದ್ಯಾಪೀಠ ನಡೆಸುವ ಮೂರು ವರ್ಷದ ಬಿಎ (ಹಿಂದಿ) ಕೋರ್ಸ್ ಮಾಡಿ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದೇನೆ. ನಾನು, ಪದವಿ ಅರ್ಹತೆ ಬೇಕಾಗುವ ಹುದ್ದೆಗಳಿಗೆ ಅರ್ಜಿ ಹಾಕಬಹುದೇ? ಹಾಗೂ, ನಾನು ಪದವೀಧರ ಎಂದು ಹೇಳಿಕೊಳ್ಳಬಹುದೇ? – ಆರ್.ವಿ.ಜಿ. ರಾಯಚೂರು.

ನಮಗಿರುವ ಮಾಹಿತಿಯಂತೆ, ಮುಂಬೈ ಹಿಂದಿ ವಿದ್ಯಾಪೀಠ ಒಂದು ಖಾಸಗಿ ಸಂಸ್ಥೆ. ಈ ಸಂಸ್ಥೆಗೆ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೆಂಟ್ರಲ್ ಹಿಂದಿ ಡೈರೆಕ್ಟೋರೇಟ್, ಶಿಕ್ಷಣ ಇಲಾಖೆಯ ಮಾನ್ಯತೆ ಇದ್ದರೂ ಸಹ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಇರುವುದಿಲ್ಲ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ನೀವು ಮಾಡಿರುವ ಕೋರ್ಸ್ ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳು ನೀಡುವ ಬಿಎ ಪದವಿಗೆ ಸಮಾನ ಎಂದು ಹೇಳಲಾಗುವುದಿಲ್ಲ. ಆದರೂ ಸಹ, ಪದವಿ ವಿದ್ಯಾರ್ಹತೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ದಾಖಲೆ ಪರಿಶೀಲನೆ/ಸಂದರ್ಶನದ ಸಮಯದಲ್ಲಿ ನಿಮ್ಮ ವಿದ್ಯಾರ್ಹತೆಯನ್ನು ಸಾಬೀತು ಮಾಡಲು ಹೆಚ್ಚಿನ ದಾಖಲೆ/ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT