ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜಿಡಿಬಿಎಫ್‌ ಕೋರ್ಸ್‌: ಶೈಕ್ಷಣಿಕ ಸಾಲದ ಪ್ರಕ್ರಿಯೆ

Last Updated 8 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬ್ಯಾಂಕ್ ಆಫ್ ಇಂಡಿಯಾ(ಬಿಒಐ), ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಪ್ರೊಬೇಷನರಿ ಆಫೀಸರ್ಸ್‌ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಈ ನೇಮಕಕ್ಕೆ ಮುನ್ನ ಆಯ್ಕೆಯಾದ ಅಭ್ಯರ್ಥಿಯು ಕಡ್ಡಾಯವಾಗಿ ಒಂದು ವರ್ಷ ಅವಧಿಯ ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಬಿಎಫ್‌) ಕೋರ್ಸ್ ಮಾಡಬೇಕು. ಇದು ಬ್ಯಾಂಕ್‌ನ ಹೊಸ ನಿಯಮವಾಗಿದೆ.

ಈ ಕುರಿತು ಹಿಂದಿನ ಸಂಚಿಕೆಯ ಲೇಖನದಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಲಾಗಿತ್ತು. ಈಗ ಈ ಸಂಚಿಕೆಯಲ್ಲಿ ಪಿಜಿಡಿಬಿಎಫ್‌ ಕೋರ್ಸ್‌ಗೆ ತಗಲುವ ಶುಲ್ಕ, ಪಾವತಿಸುವ ವಿಧಾನ, ಉದ್ಯೋಗದ ಒಪ್ಪಂದ ಸೇರಿದಂತೆ ನೇಮಕಾತಿಯ ನಂತರದ ಪ್ರಕ್ರಿಯೆಗಳ ಕುರಿತು ಒಂದಿಷ್ಟು ಅರಿಯೋಣ.

ಕೋರ್ಸ್ ಶುಲ್ಕ ಎಷ್ಟು ?

ಪಿಜಿಡಿಬಿಎಫ್‌, ಒಂದು ವರ್ಷದ ಅವಧಿಯ ಕೋರ್ಸ್‌. ಇದಕ್ಕೆ ₹ 3,50,000 + GST ಶುಲ್ಕವಿದೆ. ಈ ಶುಲ್ಕದಲ್ಲಿ ವೈಯಕ್ತಿಕ ತರಗತಿ ಮತ್ತು ಕಂಪ್ಯೂಟರ್ ಲ್ಯಾಬ್ ಸೌಲಭ್ಯಗಳು, ಸುಧಾರಿತ ಲೈಬ್ರರಿ ಸೌಲಭ್ಯಗಳು, ವಸತಿ ಸೌಕರ್ಯಗಳು(Sharing Based), ಎಲ್ಲಾ ಬೋರ್ಡಿಂಗ್ ಸೌಲಭ್ಯಗಳು (ಉಪಹಾರ, ಮಧ್ಯಾಹ್ನ ಊಟ, ರಾತ್ರಿಯ ಊಟ), ತರಬೇತಿಯ ವೇಳೆ ಹಾಸ್ಟೆಲ್‌ನಿಂದ ತರಗತಿಯ ತರಬೇತಿ ಸಂಸ್ಥೆಗೆ ಓಡಾಡುವ ಸಾರಿಗೆ ವ್ಯವಸ್ಥೆಯೂ ಸೇರಿದೆ. ಇದರಲ್ಲಿ ಅಭ್ಯರ್ಥಿಯ ವೈಯಕ್ತಿಕ ವೆಚ್ಚಗಳು ಸೇರಿರುವುದಿಲ್ಲ.

ಶಿಕ್ಷಣ ಸಾಲ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸ್ವಂತ ಹಣ ಅಥವಾ ಅರ್ಹತೆಗೆ ಒಳಪಟ್ಟು ಇದೇ ಬ್ಯಾಂಕ್‌ನಿಂದ ನಿಯಮಾನುಸಾರ ಶಿಕ್ಷಣ ಸಾಲ ಪಡೆದು ಕೋರ್ಸ್ ಶುಲ್ಕ ಪಾವತಿಸಬಹುದು. ಕೋರ್ಸ್‌ ಶುಲ್ಕದಷ್ಟು ಮಾತ್ರ ಗರಿಷ್ಠ ಸಾಲ ನೀಡಲಾಗುತ್ತದೆ. ಲ್ಯಾಪ್‌ಟಾಪ್ ಖರೀದಿಗೆ ಸಾಲ ಬಯಸಿದರೆ, ಬ್ಯಾಂಕ್‌ ₹50,000 ಅಥವಾ ಲ್ಯಾಪ್‌ಟಾಪ್‌ನ ವಾಸ್ತವಿಕ ವೆಚ್ಚಕ್ಕೆ ಸೀಮಿತವಾಗಿ ಸಾಲ ನೀಡುತ್ತದೆ.

ಕೋರ್ಸ್‌ಗೆ ಸೇರಿದ ನಂತರ ಅಭ್ಯರ್ಥಿಯ ದಾಖಲೆಗಳು / ರುಜುವಾತುಗಳಲ್ಲಿ ವ್ಯತ್ಯಾಸ ಕಂಡು ಬಂದರೆ, ಅಂಥವರ ಉಮೇದುವಾರಿಕೆ ರದ್ದುಗೊಳಿಸಿ, ಕೋರ್ಸ್ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇಂಥ ಸಂದರ್ಭದಲ್ಲಿ ಅಭ್ಯರ್ಥಿಯು ಕೋರ್ಸ್ ಶುಲ್ಕಕ್ಕಾಗಿ ಬ್ಯಾಂಕ್‌ನಿಂದ ಶಿಕ್ಷಣ ಸಾಲ ಪಡೆದಿದ್ದರೆ, ಅದನ್ನು ನವೀಕೃತ ಬಡ್ಡಿಯೊಂದಿಗೆ ಪೂರ್ಣ ಹಿಂದಿರುಗಿಸಬೇಕು.

ಕೋರ್ಸ್ ಅವಧಿಯಲ್ಲಿ ಶುಲ್ಕ ಪಾವತಿ ನಿಲ್ಲಿಸಿದರೆ, ಈಗಾಗಲೇ ಪಾವತಿಸಿದ ಶುಲ್ಕವನ್ನೂ ಅಭ್ಯರ್ಥಿಗೆ ಹಿಂದಿರುಗಿಸುವುದಿಲ್ಲ. ಹಾಗೆಯೇ ಈ ಫಾರ್ಮ್‌ಗಾಗಿ ಬ್ಯಾಂಕ್‌ಗೆ ಸಾಲ ಪಡೆದರೆ, ಅಭ್ಯರ್ಥಿಯು, ಇತರ ಶುಲ್ಕಗಳೊಂದಿಗೆ ನವೀಕೃತ ಬಡ್ಡಿಯೊಂದಿಗೆ ಸಂಪೂರ್ಣವಾಗಿ ಮರು ಪಾವತಿಸಬೇಕು.‌

ಸೆಕ್ಯುರಿಟಿ ಬಾಂಡ್

ಕೋರ್ಸ್‌ಗೆ ಸೇರುವ ಸಮಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ ಮೂರು (3) ವರ್ಷಗಳ ಸೇವಾ ಅವಧಿಗೆ ಬ್ಯಾಂಕ್‌ಗೆ ಸೇವೆ ಸಲ್ಲಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಬೇಕು.

ಭದ್ರತಾ ಠೇವಣಿ

ನಿಯಮಿತ ಆಧಾರದ ಮೇಲೆ ಆಯ್ಕೆಯಾದ JMGS-I ನಲ್ಲಿನ ಅಧಿಕಾರಿಗಳು 3 ವರ್ಷಗಳ ತೃಪ್ತಿದಾಯಕ ಸೇವೆಯ ನಂತರ ಮರುಪಾವತಿಸಬಹುದಾದ ಮೊತ್ತ ₹1,00,000ವನ್ನು ಭದ್ರತಾ ಠೇವಣಿ ಇಡಬೇಕಾಗುತ್ತದೆ. 3 ವರ್ಷಗಳು ಪೂರ್ಣಗೊಳ್ಳುವ ಮೊದಲು ಬ್ಯಾಂಕ್‌ ತೊರೆದರೆ ಹೇಳಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಕೋರ್ಸ್ ಶುಲ್ಕದ ಮರುಪಾವತಿ

ಸಾಮಾನ್ಯ ಉದ್ಯೋಗಿಯಾಗಿ ಬ್ಯಾಂಕ್‌ನಲ್ಲಿ 5 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಕೋರ್ಸ್‌ಗೆ ಭರಿಸಿದ್ದ ಶುಲ್ಕವನ್ನು ಬ್ಯಾಂಕ್‌ ಅಭ್ಯರ್ಥಿಗೆ ಹಿಂದಿರುಗಿಸುತ್ತದೆ. ಶುಲ್ಕ ಪಾವತಿಸಲು ಶಿಕ್ಷಣ ಸಾಲ ಪಡೆದ ಅಭ್ಯರ್ಥಿಗಳಿಗೆ ಸಾಲದ ಮೊತ್ತವನ್ನು ಅವರ ಸಾಲದ ಖಾತೆಗೆ ಮರುಪಾವತಿ ಮಾಡಲಾಗುತ್ತದೆ.

ಕೋರ್ಸ್ ಪಠ್ಯಕ್ರಮ

ಪಿಜಿಡಿಬಿಎಫ್‌ ಕೋರ್ಸ್‌ನ ಅವಧಿ ಒಂದು ವರ್ಷ. ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಮೌಲ್ಯ ಮಾಪನ ನಡೆಯುತ್ತದೆ. ಒಟ್ಟು ನಾಲ್ಕು ತ್ರೈಮಾಸಿಕಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಮೊದಲ ಮೂರು ತ್ರೈಮಾಸಿಕಗಳು ಕ್ಯಾಂಪಸ್‌ನಲ್ಲಿರುತ್ತವೆ. ಕೊನೆಯ ತ್ರೈಮಾಸಿಕವು ಬ್ಯಾಂಕಿನ ಸ್ವಂತ ಶಾಖೆಗಳು/ಕಚೇರಿಗಳಲ್ಲಿ ಉದ್ಯೋಗ ತರಬೇತಿಯಲ್ಲಿರುತ್ತದೆ.

ವೇತನಗಳು/ಸ್ಟೈಫಂಡ್

ಕೋರ್ಸ್‌ ಕಲಿಕೆಯ ಅವಧಿಯಲ್ಲಿ ಮೊದಲ ಮೂರು ತ್ರೈಮಾಸಿಕಗಳಲ್ಲಿ ಅಂದರೆ ಸಂಸ್ಥೆಯಲ್ಲಿ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗೆ ತಿಂಗಳಿಗೆ ₹2,500 ಮತ್ತು ಕೊನೆಯ ತ್ರೈಮಾಸಿಕದಲ್ಲಿ ₹15,000 ಸ್ಟೈಫಂಡ್ ನೀಡಲಾಗುತ್ತದೆ

ಬ್ಯಾಂಕಿನ ಸೇವಾ ದೃಢೀಕರಣ

ಸಾಮಾನ್ಯ ಬ್ಯಾಂಕಿಂಗ್ ಸ್ಟ್ರೀಮ್‌ನಲ್ಲಿ ಜ್ಯೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್‌ ಸ್ಕೇಲ್‌ –1(JMGS-I) ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವ ಮುನ್ನ ಮೊದಲು ಬ್ಯಾಂಕ್ ಪ್ರತ್ಯೇಕ ಲಿಖಿತ/ಆನ್‌ಲೈನ್ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಬಹುದು ಮತ್ತು ಬ್ಯಾಂಕಿನ ಸೇವೆಗಳಲ್ಲಿ ದೃಢೀಕರಣವು ಬ್ಯಾಂಕಿನ ಮಾನದಂಡಗಳ ಪ್ರಕಾರ ಹೇಳಿದ ಪರೀಕ್ಷೆಗೆ ಅರ್ಹತೆ ಪಡೆಯಲು ಒಳಪಟ್ಟಿರುತ್ತದೆ.

(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT