'ನಾನು ಮೂರನೇ ವರ್ಷದ ಫಾರ್ಮ್.ಡಿ ಕೋರ್ಸ್ ಮಾಡುತ್ತಿದ್ದೇನೆ. ಮುಂದೆ ಬ್ರಿಟನ್/ಅಮೆರಿಕ ದೇಶಗಳಲ್ಲಿ ವೃತ್ತಿಯನ್ನು ಅರಸಬೇಕು ಎಂದುಕೊಂಡಿರುವೆ. ಆ ದೇಶಗಳಲ್ಲಿ ಏನೋ ಪರವಾನಗಿ ಪಡೆಯಬೇಕು ಎಂಬ ಮಾನದಂಡವಿದೆಯಂತೆ. ಅದಕ್ಕಾಗಿ ಅರ್ಹತಾ ಪರೀಕ್ಷೆಯೂ ಇದೆ ಎಂದು ಕೇಳಿರುವೆ. ಈ ಬಗ್ಗೆ ಮಾರ್ಗದರ್ಶನ ನೀಡಿ... ’
***
ನಾನು ಬಿ.ಫಾರ್ಮಾ ಮುಗಿಸಿ ಎಂ.ಫಾರ್ಮಾ ಮಾಡಬೇಕೆಂದಿದ್ದೇನೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ ಬೇಡಿಕೆಯಿದೆಯೇ? ಸೌದಿ ಅರೇಬಿಯಾದಲ್ಲಿ ಫಾರ್ಮಸಿ ಓದಿದವರಿಗೆ ಹೆಚ್ಚು ಉದ್ಯೋಗಾವಕಾಶಗಳಿವೆ ಎಂದು ಕೇಳಿರುವೆ. ಈ ಬಗ್ಗೆ ಮಾಹಿತಿ ನೀಡಿ..
ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ವೃತ್ತಿಯೋಜನೆ ಕಾರ್ಯಾಗಾರಗಳಲ್ಲಿ ಅನೇಕರು ಫಾರ್ಮಸಿ ಕೋರ್ಸ್ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಒಂದು ಕಾಲದಲ್ಲಿ ಡಿ.ಫಾರ್ಮ್ ಮುಗಿಸಿದ ಬಹಳ ಮಂದಿ ಔಷಧ ಅಂಗಡಿ ತೆರೆಯುತ್ತಿದ್ದರು. ಇಲ್ಲವೇ ಮೆಡಿಕಲ್ ರೆಪ್ರೆಸೆಂಟೆಟಿವ್ ಆಗುತ್ತಿದ್ದರು. ಆದರೆ, ಈಗೀಗ ಫಾರ್ಮಸಿ ಕ್ಷೇತ್ರ ವಿಸ್ತಾರಗೊಳ್ಳುತ್ತಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಇದೇ ವೇಳೆ, ವೈದ್ಯಕೀಯ ಪದವಿ ಕಲಿಯಲು ಅವಕಾಶ ಸಿಗದವರು, ಪ್ಯಾರಾಮೆಡಿಕಲ್ ಕ್ಷೇತ್ರ ಪರ್ಯಾಯ ಆಯ್ಕೆಯಾಗಿದ್ದರೂ ವೈವಿಧ್ಯಮಯ ವೃತ್ತಿಯ ಅವಕಾಶಗಳಿರುವ ಫಾರ್ಮಸಿ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ.
ನಮ್ಮ ದೇಶದ ಫಾರ್ಮಸಿ ಉದ್ಯಮದಲ್ಲಿನ ಉತ್ಪಾದನಾ ಮೌಲ್ಯ ಸುಮಾರು ₹3 ಲಕ್ಷ ಕೋಟಿ ದಾಟುತ್ತದೆ. ಇಡೀ ಜಗತ್ತಿನ ಫಾರ್ಮಾ ಉದ್ಯಮದ ಒಟ್ಟು ಉತ್ಪಾದನೆಯಲ್ಲಿ, ಭಾರತ ಮೂರನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಸುಮಾರು 3000ಕ್ಕೂ ಹೆಚ್ಚಿನ ಫಾರ್ಮಾ ಕಂಪನಿಗಳಿದ್ದು, 10,000ಕ್ಕೂ ಹೆಚ್ಚಿನ ಉತ್ಪಾದನಾ ಕಾರ್ಖಾನೆಗಳಿವೆ.
ಇಷ್ಟೊಂದು ಬೃಹತ್ ಪ್ರಮಾಣದ ಉತ್ಪಾದನೆಗೆ ಕಾರಣಗಳೂ ಇವೆ; ದೇಶದ ಆಂತರಿಕ ಬೇಡಿಕೆಯ ಜೊತೆಗೆ ಅಮೆರಿಕ, ಯೂರೋಪ್, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳಿಗೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಔಷಧಗಳೇ ರಫ್ತಾಗುತ್ತವೆ. ಅದೇ ರೀತಿ, ದೇಶದಲ್ಲಿ ಸುಮಾರು, 703 ಮೆಡಿಕಲ್ ಕಾಲೇಜುಗಳು, 75 ಸಾವಿರಕ್ಕೂ ಹೆಚ್ಚಿನ ಆಸ್ಪತ್ರೆಗಳು ಮತ್ತು 8 ಲಕ್ಷಕ್ಕೂ ಹೆಚ್ಚಿನ ಔಷಧದ ಅಂಗಡಿಗಳಿವೆ ಎಂದು ಹೇಳಲಾಗುತ್ತದೆ. ಈ ಕಾರಣಗಳೂ ವಿದ್ಯಾರ್ಥಿಗಳನ್ನು ಫಾರ್ಮ ಕ್ಷೇತ್ರ ಸೆಳೆಯುತ್ತಿದೆ.
ಫಾರ್ಮ ಔದ್ಯೋಗಿಕ ಕ್ಷೇತ್ರದಲ್ಲಿ ನೂತನ ಔಷಧಗಳ ಪ್ರಯೋಗಗಳು ನಡೆಯುತ್ತಿವೆ. ಸೂತ್ರೀಕರಣ ಮತ್ತು ರಚನೆ, ಉತ್ಪಾದನೆ, ಗುಣಮಟ್ಟದ ನಿಯಂತ್ರಣ, ಸರಕುಗಳ ಸಂಗ್ರಹಣೆ ಮತ್ತು ಸಾಗಣೆ, ಪ್ರಚಾರ ಮತ್ತು ಮಾರಾಟ ಮುಂತಾದ ವಿಭಾಗಳಲ್ಲಿ ಫಾರ್ಮ ಪದವೀಧರರಿಗೆ ಬೇಡಿಕೆಯಿದೆ.
ಮೆಡಿಕಲ್ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್, ಸರ್ಕಾರದ ಡ್ರಗ್ ಇನ್‌ಸ್ಪೆಕ್ಟರ್ ಹುದ್ದೆಗಳನ್ನೂ ಫಾರ್ಮ ಪದವೀಧರರು ಪಡೆದುಕೊಳ್ಳಬಹುದು. ಔಷಧಿಗಳ ಉತ್ಪಾದನೆ, ಸಂರಕ್ಷಣೆ, ಪ್ಯಾಕಿಂಗ್ ಮತ್ತು ಮಾರಾಟ ಪ್ರಕ್ರಿಯೆಗಳು ಕ್ರಮಬದ್ಧವಾಗಿ ನಡೆಯುತ್ತಿದೆಯೇ ಎನ್ನುವುದರ ಮೇಲ್ವಿಚಾರಣೆ ಮತ್ತು ನಿಯಂತ್ರಣದಂತಹ ಪ್ರಮುಖ ಜವಾಬ್ದಾರಿಯನ್ನು ಡ್ರಗ್ ಇನ್‌ಸ್ಪೆಕ್ಟರ್‌ಗಳು ನಿರ್ವಹಿಸುತ್ತಾರೆ. ಸೌಂದರ್ಯವರ್ಧಕ ಉತ್ಪಾದನಾ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳು, ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್‌ನಂತಹ ಕ್ಷೇತ್ರಗಳಲ್ಲಿಯೂ ಅಪಾರವಾದ ಅವಕಾಶಗಳಿವೆ.
ಬಿ.ಫಾರ್ಮ ಪದವಿಯ ನಂತರ ಔಷಧಿಗಳ ಮಾರಾಟಕ್ಕೆ ಡ್ರಗ್ ಕಂಟ್ರೋಲ್ ಇಲಾಖೆಯಿಂದ ಸಿಗುವ ಪರವಾನಗಿಯಿಂದ ಮೆಡಿಕಲ್ ಸ್ಟೋರ್ ವ್ಯವಹಾರವನ್ನು ನಡೆಸಬಹುದು. ಅನುಭವ ಮತ್ತು ನಿಬಂಧನೆಗಳ ಪ್ರಕಾರ ಔಷಧಿಗಳ ಉತ್ಪಾದನೆ ಮತ್ತು ಸಗಟು ವ್ಯಾಪಾರಕ್ಕೂ ಪರವಾನಗಿಯನ್ನು ಪಡೆದು ಉದ್ಯಮಿಗಳಾಗಬಹುದು.
ಎಲ್ಲಾ ಪದವೀಧರರಿಗೆ ಅನ್ವಯವಾಗುವ ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ಆರ್‌ಆರ್‌ಬಿ (ರೈಲ್ವೇಸ್), ಎಸ್‌ಎಸ್‌ಸಿ(ಸಿಬ್ಬಂದಿ ನೇಮಕಾತಿ ಆಯೋಗ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ಅನ್ಯ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.
ಬಿ.ಫಾರ್ಮಾ ಕೋರ್ಸ್‌ನಲ್ಲಿ ಅನಾಟಮಿ, ರೆಮಿಡಿಯಲ್ ಬಯಾಲಜಿ, ಬಯೋಕೆಮಿಸ್ಟ್ರಿ, ಮೆಡಿಸಿನಲ್ ಕೆಮಿಸ್ಟ್ರಿ, ಫಾರ್ಮಾಸ್ಯೂಟಿಕ್ಸ್, ಫಾರ್ಮಾಕಾಲಜಿ, ಪ್ಯಾಥೊ ಫಿಸಿಯಾಲಜಿ, ಇಂಡಸ್ಟ್ರಿಯಲ್ ಫಾರ್ಮಸಿ, ಕಾಸ್ಮೆಟಿಕ್ ಸೈನ್ಸ್, ಫಾರ್ಮ ಮಾರ್ಕೆಟಿಂಗ್ ಇತ್ಯಾದಿ ವಿಷಯಗಳ ಸಂಪೂರ್ಣ ಕಲಿಕೆಯಾಗುತ್ತದೆ.
ಈ ಕೋರ್ಸ್ ಕಲಿಯಲು ವಿದ್ಯಾರ್ಥಿಗಳು, ಪಿಯುಸಿ/ 10+2 ತರಗತಿಯಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವವಿಜ್ಞಾನ (ಅಥವಾ ಗಣಿತ) ವಿಷಯಗಳನ್ನು ಓದಿರಬೇಕು. ವಿದ್ಯಾರ್ಥಿಗಳು ಪಿಯುಸಿ ನಂತರ ನಾಲ್ಕು ವರ್ಷದ ಬಿ.ಫಾರ್ಮಾ ಅಥವಾ ಎರಡು ವರ್ಷದ ಡಿ.ಫಾರ್ಮಾ ಮಾಡಬಹುದು.
ಡಿ.ಫಾರ್ಮಾ ನಂತರ ಲ್ಯಾಟರಲ್ ಎಂಟ್ರಿ ಮೂಲಕ ಎರಡನೇ ವರ್ಷದ ಬಿ.ಫಾರ್ಮಾ ಕೋರ್ಸ್‌ಗೆ ಸೇರಬಹುದು. ಬಿ.ಫಾರ್ಮಾ ಕೋರ್ಸಿಗೆ ಸಿಇಟಿ ಪ್ರವೇಶ ಪ್ರಕ್ರಿಯೆ ಮೂಲಕ ಸೀಟ್ ಹಂಚಿಕೆಯಾಗುತ್ತದೆ. ಪ್ರಮುಖವಾಗಿ, ಈ ವೃತ್ತಿಯಲ್ಲಿ ಯಶಸ್ವಿಯಾಗಲು ಫಾರ್ಮಾ ವಿಷಯದ ಬಗ್ಗೆ ಒಲವು, ವಿವರಗಳಿಗೆ ಗಮನ, ಅಂತರ್‌ವೈಯಕ್ತಿಕ ನೈಪುಣ್ಯತೆ, ಸಂವಹನ, ವಿಶ್ಲೇಷಣೆ ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.
ಈ ಕ್ಷೇತ್ರದಲ್ಲಿ ತಜ್ಞತೆಯನ್ನು ಬಯಸುವ ಬಿ.ಫಾರ್ಮಾ ಪದವೀಧರರು ಎಂ.ಫಾರ್ಮಾ ಮಾಡಬಹುದು. ಅಥವಾ ನೇರವಾಗಿ ಫಾರ್ಮ್.ಡಿ (ಡಾಕ್ಟರೇಟ್ ಇನ್ ಫಾರ್ಮಸಿ) ಕೋರ್ಸ್ ಮಾಡಿ ಉನ್ನತ ಹುದ್ದೆಗಳನ್ನು ಪಡೆಯಬಹುದು. ಫಾರ್ಮಾ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಲಿಚ್ಛಿಸುವ ಅಭ್ಯರ್ಥಿಗಳು ಪಿಎಚ್.ಡಿ ಮಾಡಬಹುದು.
ಫಾರ್ಮಾ ಕ್ಷೇತ್ರದ ಪ್ರಮುಖ ಸಂಸ್ಥೆಗಳು
1. ಸನ್ ಫಾರ್ಮ 2. ಡಿವಿಸ್ ಲ್ಯಾಬ್
3. ಸಿಪ್ಲಾ 4. ಡಾಕ್ಟರ್ ರೆಡ್ಡಿಸ್,
5. ಟೊರೆಂಟ್ ಫಾರ್ಮ 6. ಲುಪಿನ್
7. ಅರಬಿಂದೋ ಫಾರ್ಮ 8. ಝೈಡಸ್ ಕ್ಯಾಡಿಲ
9. ಪಿರಾಮಲ್ ಹೆಲ್ತ್ಕೇರ್ 10. ಗ್ಲೆನ್‌ಮಾರ್ಕ್ ಫಾರ್ಮ
ಈ ಕ್ಷೇತ್ರದ ಪದವೀಧರರಿಗೆ ವಿದೇಶಗಳಲ್ಲಿ ವೃತ್ತಿಯನ್ನು ಅರಸುವ ಆಕರ್ಷಕ ಅವಕಾಶಗಳಿವೆ. ಅಮೆರಿಕ, ಯೂರೋಪ್, ಬ್ರಿಟನ್, ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮುಂತಾದ ದೇಶಗಳಲ್ಲಿ ವೃತ್ತಿಯನ್ನು ಅರಸಬೇಕಾದರೆ, ಸ್ಥಳೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಸ್ಥಳೀಯ ವೃತ್ತಿಪರ ಅರ್ಹತಾ ಪರೀಕ್ಷೆ, ಫಾರ್ಮಸಿ ಲೈಸೆನ್ಸ್ ಪರೀಕ್ಷೆ ಇತ್ಯಾದಿ ಪ್ರಕ್ರಿಯೆಗಳಿರುತ್ತವೆ.
ಫಾರ್ಮ್.ಡಿ ಕೋರ್ಸ್ (ಡಾಕ್ಟರೇಟ್ ಕೋರ್ಸ್) ಮಾಡಿದ ನಂತರ ಅಮೆರಿಕ ದೇಶದಲ್ಲಿ ವೃತ್ತಿಯನ್ನು ಅರಸಬೇಕಾದರೆ, ಮೊದಲು ಇಂಗ್ಲಿಷ್ ಭಾಷಾ ಪರಿಣತಿ (The Test of English Language as a Foreign Language – ಟಿಒಇಎಫ್‌ಎಲ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನಂತರ ಸ್ಥಳೀಯ ಅರ್ಹತಾ ಪರೀಕ್ಷೆ ( Foreign Pharmacy Graduate Equivalency Examination– ಎಫ್‌ಪಿಜಿಇ) ಯಲ್ಲಿ ಉತ್ತೀಣರಾಗಬೇಕು. ಇದಾದ ನಂತರ, ನಾರ್ತ್ ಅಮೆರಿಕ ಫಾರ್ಮಾಸಿಸ್ಟ್ ಲೈಸೆನ್ಸ್ (ಎನ್‌ಎಪಿಎಲ್‌ಇ) ಎಕ್ಸಾಂ ಮೂಲಕ ಫಾರ್ಮಸಿ ಲೈಸೆನ್ಸ್ ಪಡೆಯಬೇಕು. ಬ್ರಿಟನ್ ದೇಶದಲ್ಲಿಯೂ ಸ್ಥಳೀಯ ಅರ್ಹತಾ ಪರೀಕ್ಷೆ ಮತ್ತು ಪ್ರಾಯೋಗಿಕ ತರಬೇತಿಯ ನಂತರ ಲೈಸೆನ್ಸ್ ಪಡೆಯಬಹುದು.
ಪ್ರಕ್ರಿಯೆ/ಪರೀಕ್ಷೆಗಳ ಸಂಕ್ಷಿಪ್ತ ವಿವರಗಳಿಗಾಗಿ ಗಮನಿಸಿ:
ಟಿಒಇಎಫ್‌ಎಲ್: https://www.ets.org/toefl.html
ಐಇಎಲ್‌ಟಿಎಸ್: https://www.ieltsidpindia.com/
ಆಸ್ಟ್ರೇಲಿಯಾ: https://www.pharmacycouncil.org.au/
ಲೇಖನ– ಪ್ರದೀಪ್ ವೆಂಕಟರಾಮ್
(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.