ಮಂಗಳವಾರ, ನವೆಂಬರ್ 29, 2022
21 °C

60 ದಿನಗಳಲ್ಲಿ ಐಎಎಸ್ ಪ್ರಿಲಿಮ್ಸ್ ತಯಾರಿ

ಆರ್.ಬಿ. ಗುರುಬಸವರಾಜ Updated:

ಅಕ್ಷರ ಗಾತ್ರ : | |

Prajavani

ಐಎಎಸ್‌ ಪ್ರಿಲಿಮ್ಸ್‌ ಎಂದರೆ ಒಂದು ರೀತಿಯ ಸ್ಕ್ರೀನಿಂಗ್‌ ಇದ್ದಂತೆ. ಇದಕ್ಕಾಗಿ ಕಠಿಣ ತಯಾರಿ ಇರಲೇಬೇಕು. ಈ ತಯಾರಿಯನ್ನು 60 ದಿನಗಳಲ್ಲಿ ಮಾಡುವುದು ಹೇಗೆ?

ಪದವಿ ನಂತರ ಬಹುತೇಕ ಯುವ ಜನರು ಐಎಎಸ್ ಪರೀಕ್ಷೆ ಬರೆಯಲು ಹಾತೊರೆಯುತ್ತಾರೆ. ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಂಡಿರುತ್ತಾರೆ. ಪ್ರಿಲಿಮ್ಸ್ ಪರೀಕ್ಷೆಯು ಐಎಎಸ್ ಕನಸಿನ ಕೋಟೆಯ ಮುಖ್ಯದ್ವಾರವಾಗಿದೆ. ಇದೊಂದು ಸ್ಕ್ರೀನಿಂಗ್ ಪರೀಕ್ಷೆಯಾಗಿದ್ದು, ಹೆಚ್ಚಿನ ಅಭ್ಯರ್ಥಿಗಳು ಇಲ್ಲಿಂದ ಮುಂದೆ ಹೋಗುವುದೇ ಇಲ್ಲ. ಏಕೆಂದರೆ ಇದು ಕಠಿಣ ಪರೀಕ್ಷೆ ಎಂಬುದೇ ಬಹುತೇಕರ ಅಭಿಪ್ರಾಯ. ನಿಜ ಅರ್ಥದಲ್ಲಿ ಹೇಳುವುದಾದರೆ ಯಾವ ಪರೀಕ್ಷೆಯೂ ಕಠಿಣವಲ್ಲ. ಆಯಾ ಪರೀಕ್ಷೆಗೆ ಅನುಗುಣವಾದ ಅಭ್ಯಾಸದ ಕೊರತೆಯಿಂದ ಅದು ಕಠಿಣ ಎನಿಸುತ್ತದೆ. ಈ ಬಾರಿ ಪ್ರಿಲಿಮ್ಸ್ ಪರೀಕ್ಷಾರ್ಥಿಗಳಿಗೆ ಒಂದು ಸುವರ್ಣಾವಕಾಶ ದೊರೆತಿದೆ. ಜೂನ್ 2021ರಲ್ಲಿ ನಡೆಯಬೇಕಾಗಿದ್ದ ಪ್ರಿಲಿಮ್ಸ್ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಿರುವುದು ಕೆಲವು ಪರೀಕ್ಷಾರ್ಥಿಗಳಿಗೆ ಕಿರಿಕಿರಿಯುಂಟು ಮಾಡಿದರೆ ಬಹುತೇಕ ಪರೀಕ್ಷಾರ್ಥಿಗಳಿಗೆ ವರದಾನವಾಗಿದೆ. ಪರೀಕ್ಷೆಗೆ ಸಿದ್ಧತೆ ನಡೆಸಲು ಇನ್ನಷ್ಟು ದಿನಗಳ ಸಮಯಾವಕಾಶ ದೊರೆತಿದೆ. ಇದನ್ನು ಸರಿಯಾಗಿ ನಿಭಾಯಿಸುವ ಯೋಜನೆ ಮತ್ತು ತಂತ್ರಗಾರಿಕೆಯನ್ನು ಅರಿತು ಸಿದ್ಧತೆ ಮಾಡಿಕೊಂಡರೆ ಖಂಡಿತವಾಗಿಯೂ ಉತ್ತಮ ಯಶಸ್ಸು ಲಭಿಸುತ್ತದೆ.

60 ದಿನಗಳ ಯೋಜನೆ

ಐಎಎಸ್ ಪ್ರಿಲಿಮ್ಸ್ ಪರೀಕ್ಷೆಗೆ ಸುಮಾರು 60 ದಿನಗಳು (ಇದೇ ವರ್ಷದ ಅಕ್ಟೋಬರ್‌ 10 ಎಂದು ಯುಪಿಎಸ್‌ಸಿ ಪ್ರಕಟಿಸಿದೆ) ಉಳಿದಿವೆ. ಇದಕ್ಕೆ ನಿಖರವಾದ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ. ಯೋಜನೆಯು ಸಾಧ್ಯವಾದಷ್ಟೂ ಅನುಷ್ಠಾನಕ್ಕೆ ಸಮೀಪವಾಗಿರಲಿ. ಪ್ರಸ್ತುತ ದೊರೆತ ಸಮಯವನ್ನು ಯಾರು ಸದುಪಯೋಗ ಪಡಿಸಿಕೊಳ್ಳುವರೋ ಯಶಸ್ಸು ಅವರಿಗೆ ಲಭಿಸುತ್ತದೆ. ಅದಕ್ಕಾಗಿ ದಿನಕ್ಕೆ ಕನಿಷ್ಠ 10 ಗಂಟೆಗಳ ಪರಿಣಾಮಕಾರಿ ಅಧ್ಯಯನ ಅಗತ್ಯ ಎಂಬುದು ನೆನಪಿರಲಿ. ಪರಿಣಾಮಕಾರಿ ಅಧ್ಯಯನ ಎಂದರೆ ಪೂರ್ಣ ಏಕಾಗ್ರತೆಯಿಂದ ವಿಷಯ ಗ್ರಹಿಸುವುದಾಗಿದೆ. ಹೊರಗಿನ ಅನಪೇಕ್ಷಿತ ಸಂಪರ್ಕಗಳಿಗೆ ತಡೆಯೊಡ್ಡುವುದು ಅಗತ್ಯ. ಅಂದರೆ ಫೋನ್ ಕರೆಗಳು, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಸಾರ್ವಜನಿಕ ಸಂಪರ್ಕವನ್ನು ಕೆಲವು ದಿನಗಳ ಮಟ್ಟಿಗಾದರೂ ಮುಂದೂಡುವುದು ಅಗತ್ಯ. ಅದಕ್ಕಾಗಿ ಕೆಳಗಿನ ಒಂದಿಷ್ಟು ಚಟುವಟಿಕೆಗಳನ್ನು ಅನುಸರಿಸುವುದು ಅಗತ್ಯ. ಇರುವ 60 ದಿನಗಳನ್ನು ಅಧ್ಯಯನದ ಮಹತ್ವಕ್ಕೆ ಅನುಗುಣವಾಗಿ ವಿಭಾಗಿಸಿಕೊಳ್ಳಬೇಕು. ಮೊದಲ 45 ದಿನಗಳು ವಿಷಯಗಳ ಪರಿಣಾಮಕಾರಿ ಅಧ್ಯಯನಕ್ಕೆ ಮೀಸಲಿಡಿ. ನಂತರ 10 ದಿನಗಳನ್ನು ಪುನರಾವರ್ತನೆಗೆ ಹಾಗೂ ಉಳಿದ 5 ದಿನಗಳು ಸಂಪೂರ್ಣವಾಗಿ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದಕ್ಕೆ ಮೀಸಲಿಡಿ.

ನಿಗದಿತ ದಿನಚರಿ

ಸ್ಥಿರವಾದ ದಿನಚರಿ ಐಎಎಸ್ ಪರೀಕ್ಷಾ ಯಶಸ್ಸಿನ ಮೊದಲ ಮೆಟ್ಟಿಲು. ಹತ್ತು ಗಂಟೆಗಳ ಅಧ್ಯಯನದ ವೇಳಾಪಟ್ಟಿ ಸಿದ್ಧ ಮಾಡಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಅಭ್ಯಾಸ ಮಾಡಬೇಕಾದ ಅಂಶಗಳನ್ನು ಮೂರುಭಾಗಗಳಾಗಿ ಮಾಡಿಕೊಂಡು ವೇಳಾಪಟ್ಟಿ ಸಿದ್ಧಪಡಿಸಿಕೊಂಡರೆ ಉತ್ತಮ– ಮುಖ್ಯ ವಿಷಯಗಳು, ಪ್ರಚಲಿತ ಘಟನೆಗಳು ಮತ್ತು ಸ್ವಯಂ ಪರೀಕ್ಷೆ. 6 ಗಂಟೆಗಳು ಮುಖ್ಯ ವಿಷಯಗಳ ಅಧ್ಯಯನ, 3 ಗಂಟೆಗಳು ಪ್ರಚಲಿತ ಘಟನೆಗಳ ಅಧ್ಯಯನ ಹಾಗೂ ಒಂದು ಗಂಟೆ ಸ್ವಯಂ ಪರೀಕ್ಷೆಗೆ ಮೀಸಲಿಟ್ಟರೆ ಉತ್ತಮ.

ವಿಷಯದ ಆಳವಾದ ಅಧ್ಯಯನ

ಪ್ರಿಲಿಮ್ಸ್ ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮವನ್ನು ಗಮನಿಸಿ ವಿಷಯಗಳ ಅಧ್ಯಯನಕ್ಕೆ ತೊಡಗಬೇಕು. ಪಠ್ಯಕ್ರಮಕ್ಕೆ ನಿಗದಿಪಡಿಸಿದ ವಿಷಯಗಳ ಆಳವಾದ ಅಧ್ಯಯನ ಅಗತ್ಯ. ವಿಷಯಕ್ಕೆ ಸಂಬಂಧಿಸಿದ ಆಕರ ಗ್ರಂಥಗಳನ್ನು ಹೊಂದಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಆಕರ ಗ್ರಂಥಗಳನ್ನು ಜೋಡಿಸಿಕೊಳ್ಳಿ. ವಿಷಯಗಳ ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಿ. ಅದಕ್ಕಾಗಿ 6-12ನೇ ತರಗತಿಯ ರಾಜ್ಯ ಮತ್ತು ರಾಷ್ಟ್ರೀಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಅಭ್ಯಸಿಸಿ. ವಿಷಯಗಳ ವ್ಯಾಪಕ ಅಧ್ಯಯನಕ್ಕೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಠ್ಯಪುಸ್ತಕಗಳ ಅಧ್ಯಯನ ಅಗತ್ಯ.

ಟಿಪ್ಪಣಿ ತಯಾರಿಕೆ

ಅಧ್ಯಯನದ ವೇಳೆ ಟಿಪ್ಪಣಿ ತಯಾರಿಸಿಕೊಳ್ಳುವುದು ಬಹಳ ಪರಿಣಾಮಕಾರಿ ಅಧ್ಯಯನ ತಂತ್ರವಾಗಿದೆ. ಮೂಲ ವಿಷಯಗಳು ಹಾಗೂ ಪ್ರಚಲಿತ ವಿಷಯಗಳ ಅಧ್ಯಯನ ಮಾಡುವಾಗ ಪರಿಕಲ್ಪನೆಯನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳಲು ಟಿಪ್ಪಣಿ ತಯಾರಿ ಅಗತ್ಯ. ವಿಷಯಗಳನ್ನು ಮೈಂಡ್ ಮ್ಯಾಪ್, ಫ್ಲೋಚಾರ್ಟ್, ಬುಲೆಟ್ ಪಾಯಿಂಟ್ಸ್, ಆಲೇಖಗಳ ರೂಪದಲ್ಲಿ ಟಿಪ್ಪಣಿ ಮಾಡಿಕೊಂಡರೆ ಪುನರಾವರ್ತನೆ ಅಧ್ಯಯನಕ್ಕೆ ತುಂಬಾ ಸಹಕಾರಿಯಾಗುತ್ತದೆ.

ಪುನರಾವರ್ತನೆ

ಐಎಎಸ್ ಸಿದ್ಧತೆಗೆ ಪುನರಾವರ್ತನೆ ಪ್ರಮುಖ ಆಧಾರ ಸ್ತಂಭವಾಗಿದೆ. 45 ದಿನಗಳಲ್ಲಿ ಅಧ್ಯಯನ ಮಾಡಿದ ಟಿಪ್ಪಣಿಗಳನ್ನು ಪುನರಾವರ್ತನೆಗಾಗಿ ಬಳಸಿಕೊಳ್ಳಬೇಕು. ಇದರಲ್ಲಿನ ಪ್ರಮುಖ ಅಂಶಗಳನ್ನು ಅಧ್ಯಯನ ಮಾಡುತ್ತಾ ವಿಷಯವನ್ನು ಪರಿಷ್ಕರಣೆ ಮಾಡಿಕೊಳ್ಳಬೇಕು. ಅಗತ್ಯ ಎನಿಸಿದರೆ ಟಿಪ್ಪಣಿಯನ್ನು ಕೂಡ ಪರಿಷ್ಕರಣೆ ಮಾಡಿಕೊಳ್ಳಿ. ಪರಿಕಲ್ಪನೆ ಕುರಿತ ಹೊಸ ಜ್ಞಾನವನ್ನು ಸೇರಿಸಿಕೊಳ್ಳಿ.

ಸ್ವಯಂ ಪರೀಕ್ಷೆ

ಪ್ರತಿದಿನ 9 ಗಂಟೆಗಳಲ್ಲಿ ಅಧ್ಯಯನ ಮಾಡಿದ ವಿಷಯವನ್ನು ಆಧರಿಸಿ ಸ್ವಯಂ ಪರೀಕ್ಷೆ ನಡೆಸಿಕೊಳ್ಳಿ. ಇದರಿಂದ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ತಿಳಿಯುತ್ತವೆ. ದೌರ್ಬಲ್ಯಗಳನ್ನು ಸಾಮರ್ಥ್ಯಗಳನ್ನಾಗಿಸಿಕೊಳ್ಳಿ. 55 ದಿನಗಳ ಅಭ್ಯಾಸದ ನಂತರ ಉಳಿದ 5 ದಿನಗಳನ್ನು ಸಂಪೂರ್ಣವಾಗಿ ಅಣಕು ಪರೀಕ್ಷೆಗೆ ಬಳಸಿಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಳಸಿಕೊಂಡು ಪ್ರತಿದಿನವೂ ಅಣಕು ಪರೀಕ್ಷೆ ನಡೆಸಿಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.

ಆರೋಗ್ಯ ಮತ್ತು ಅಧ್ಯಯನ

ಪರಿಣಾಮಕಾರಿ ಅಧ್ಯಯನಕ್ಕೆ ಆರೋಗ್ಯ ಬಹಳ ಮುಖ್ಯ. ಲಘುವಾದ ಪೌಷ್ಟಿಕ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿ. ಕನಿಷ್ಠ 4 ಲೀಟರ್ ನೀರು ಕುಡಿಯಿರಿ. 6 ಗಂಟೆಗಳ ನಿದ್ದೆ, ಲಘು ವ್ಯಾಯಾಮ, ಯೋಗ, ಧ್ಯಾನ ಪ್ರಾಣಾಯಾಮಗಳು ದಿನಚರಿಯಲ್ಲಿರಲಿ. ವಿಷಯಗಳ ಮಧ್ಯೆ ಕನಿಷ್ಠ 10-15 ನಿಮಿಷಗಳ ಬಿಡುವು ಇರಲಿ.

ಪ್ರಚಲಿತ ವಿದ್ಯಮಾನಗಳು

ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಲು ಇರುವ ಮುಖ್ಯ ಆಕರವೆಂದರೆ ವೃತ್ತಪತ್ರಿಕೆಗಳು. ಅದರಲ್ಲಿನ ಘಟನೆಗಳನ್ನು ವಿಷಯವಾರು ವಿಂಗಡಣೆ ಮಾಡಿಕೊಂಡು ಅಧ್ಯಯನಕ್ಕೆ ತೊಡಗಬೇಕು. ಪ್ರಚಲಿತ ಘಟನೆಗಳನ್ನಾಧರಿಸಿ ಮೂಲ ವಿಷಯಗಳ ಅಧ್ಯಯನ ಮಾಡಬೇಕು. ಪರಿಕಲ್ಪನೆಯನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳಬೇಕು. ಇಂದು ಬಹುತೇಕ ವೃತ್ತಪತ್ರಿಕೆಗಳು ಇ-ಆವೃತ್ತಿಗಳಲ್ಲಿ ದೊರೆಯುತ್ತವೆ. ಅವುಗಳನ್ನು ಬಳಸಿಕೊಂಡು ವಿಷಯಗಳ ಅಧ್ಯಯನ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು