ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ತಯಾರಿಗೆ ವೃತ್ತಪತ್ರಿಕೆ ಓದು

Last Updated 31 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗೆ ವೃತ್ತಪತ್ರಿಕೆ ಓದುವುದೂ ಒಂದು ಕಲೆ. ಇದು ನಿಮ್ಮ ಅಧ್ಯಯನಕ್ಕೆ ಪೂರಕವಾದ ವಿಭಿನ್ನ ಮಾಹಿತಿಯನ್ನು ನೀಡುತ್ತದೆ. ಕ್ರಮಬದ್ದವಾದ ಹಾಗೂ ನಿಯಮಿತವಾದ ಪತ್ರಿಕಾ ಓದು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಖಚಿತವಾದ ಅಧ್ಯಯನ ಸಂಪನ್ಮೂಲವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಬಹುತೇಕ ಸ್ಪರ್ಧಾರ್ಥಿಗಳು ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ನೋಟ್ಸ್/ ಗೈಡ್‌ಗಳನ್ನು ಅಲವಂಬಿಸುತ್ತಾರೆ. ಆದರೆ ಒಂದಿಷ್ಟು ಪೂರ್ವ ತಯಾರಿ ಮಾಡಿಕೊಂಡರೆ ಅಂತಹ ನೂರಾರು ಟಿಪ್ಪಣಿಗಳನ್ನು ತಮಗೆ ಅನುಕೂಲಕರ ರೀತಿಯಲ್ಲಿ ತಾವೇ ಸಿದ್ಧಪಡಿಸಿಕೊಳ್ಳಬಹುದು. ಪರೀಕ್ಷಾ ತಯಾರಿಗೆ ಇರುವ ಒಂದು ಪ್ರಬಲ ಸಂಗ್ರಹಯೋಗ್ಯ ಆಕರವೆಂದರೆ ವೃತ್ತಪತ್ರಿಕೆಗಳು.

ಪತ್ರಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಸುಲಭವಾಗಿ ದೊರೆಯುವುದರಿಂದ ಎಲ್ಲಾ ಪರೀಕ್ಷಾರ್ಥಿಗಳಿಗೆ ಬಹುದೊಡ್ಡ ಜ್ಞಾನ ಸಂಪನ್ಮೂಲಗಳಾಗಿವೆ. ಪತ್ರಿಕಾ ಓದಿನ ಕಾರ್ಯತಂತ್ರ ಖಂಡಿತವಾಗಿ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಹಾಗಾದರೆ ಪತ್ರಿಕೆ ಹೇಗೆ ಓದುವುದು? ಯಾವ ಪತ್ರಿಕೆ ಓದಬೇಕು? ಎಷ್ಟು ಸಮಯ ಓದಬೇಕು? ಇತ್ಯಾದಿ ಪ್ರಶ್ನೆಗಳು ಸಹಜ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ.

ಪತ್ರಿಕೆ ಓದು ಏಕೆ ಮುಖ್ಯ?
ವೃತ್ತಪತ್ರಿಕೆಗಳನ್ನು ನಿಯಮಿತವಾಗಿ ಓದುವುದರಿಂದ ಪರೀಕ್ಷೆಯ ಗುರಿ ಸ್ಪಷ್ಟವಾಗುತ್ತದೆ. ಅನುಭವಿ ಪತ್ರಕರ್ತರು ಹಾಗೂ ಅಂಕಣಕಾರರು ಬರೆಯುವ ಬರಹಗಳು ಪರೀಕ್ಷಾ ದೃಷ್ಟಿಯಿಂದ ಮಹತ್ವ ಪಡೆದಿವೆ. ಅಲ್ಲದೇ ಕೆಲವು ಪತ್ರಿಕೆಗಳು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೊರ ತರುವ ಪುರವಣಿಗಳೂ ಸಹ ಉತ್ತಮ ಬರಹಗಳನ್ನು ಒಳಗೊಂಡಿರುತ್ತವೆ. ಈ ಬರಹಗಳು ನಿರ್ದಿಷ್ಟ ಪರಿಕಲ್ಪನೆಯ ಮೇಲೆ ದೀರ್ಘಕಾಲದ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಜೊತೆಗೆ ಉನ್ನತ ಹಂತದ ನವೀನ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಹೊಂದಿರುತ್ತವೆ. ಪ್ರಚಲಿತ ಘಟನೆಗಳು ಹಾಗೂ ಅದಕ್ಕೆ ಪೂರಕವಾದ ಸಂಗತಿಗಳು, ಅಂಕಿ– ಅಂಶಗಳನ್ನು ಹೊಂದಿರುತ್ತವೆ. ಲೇಖನಗಳಲ್ಲಿ ಬಳಸಿರುವ ಭಾಷೆ, ವ್ಯಾಕರಣ ಬಳಕೆ ಉನ್ನತ ಗುಣಮಟ್ಟದ್ದಾಗಿರುತ್ತದೆ. ವಿವಿಧ ಪರೀಕ್ಷೆಗಳ ಮೌಖಿಕ ಮತ್ತು ಲಿಖಿತ ಸಾಮರ್ಥ್ಯದ ಪರೀಕ್ಷೆಗೆ ಅಗತ್ಯ ಮಾಹಿತಿ ನೀಡುತ್ತವೆ.

ಪತ್ರಿಕೆಯಲ್ಲಿ ಏನನ್ನು ಓದಬೇಕು?: ಪತ್ರಿಕೆ ಓದಲು ಪ್ರಾರಂಭಿಸುವ ಮೊದಲು ನೀವು ಗುರಿಯಿರಿಸಿರುವ ಪರೀಕ್ಷೆಯ 3–4 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ. ಅಲ್ಲಿ ಕೇಳಲಾಗಿರುವ ಪ್ರಶ್ನೆಗಳ ಸ್ವರೂಪವನ್ನು ಅರಿಯಿರಿ. ನಂತರ ವೃತ್ತಪತ್ರಿಕೆ ಓದಲು ಪ್ರಾರಂಭಿಸಿ. ಪತ್ರಿಕೆಯಲ್ಲಿ ಸಾಮಾನ್ಯವಾಗಿ ವಿವಿಧ ವಿಭಾಗಗಳು ಕಂಡುಬರುತ್ತವೆ. ಪರೀಕ್ಷೆಗೆ ಅಗತ್ಯವಾದ ವಿಭಾಗವನ್ನು ಓದಲು ಹೆಚ್ಚು ಪ್ರಾಶಸ್ತ್ಯ ನೀಡಿ.

ಪತ್ರಿಕೆಯ ಅಧ್ಯಯನ ಹೇಗೆ?: ಪರೀಕ್ಷಾರ್ಥಿಗಳು ಪತ್ರಿಕೆಗಳನ್ನು ಕಾದಂಬರಿಯಂತೆ ವೇಗವಾಗಿ ಓದಬಾರದು. ಬದಲಾಗಿ ನಿಧಾನವಾಗಿ ಪತ್ರಿಕೆಯ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಓದಬೇಕು. ಪತ್ರಿಕಾ ಓದಿಗಾಗಿ ಪ್ರತಿದಿನ ಕನಿಷ್ಠ 90– 120 ನಿಮಿಷಗಳನ್ನು ಮೀಸಲಿಡಬೇಕು. ಓದಿನ ವೇಳೆ ಪ್ರತಿ ವಿಭಾಗಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಟಿಪ್ಪಣಿ ಮಾಡಿಕೊಂಡರೆ ಪರೀಕ್ಷಾ ಸಮಯದಲ್ಲಿ ತುಂಬಾ ಸಹಕಾರಿಯಾಗುತ್ತದೆ.

ಆರ್ಥಿಕತೆ ಮತ್ತು ವ್ಯವಹಾರ: ಈ ವಿಭಾಗದಲ್ಲಿ ಇತ್ತೀಚಿನ ಬಜೆಟ್, ಹಣದುಬ್ಬರ, ಜಿಡಿಪಿ, ಅಂತರರಾಷ್ಟ್ರೀಯ ವ್ಯವಹಾರಗಳು, ಉದ್ಯಮಗಳ ವಿಲೀನ ಮತ್ತು ಸ್ವಾಧೀನಗಳು, ವ್ಯವಹಾರದ ಮುಖ್ಯಸ್ಥರ ಹೆಸರು, ಹೊಸ ನೇಮಕಾತಿಗಳು ಮುಂತಾದ ಸ್ಥೂಲ ಆರ್ಥಿಕ ಸೂಚಕಗಳ ವಿವರಗಳನ್ನು ಓದಿ ಟಿಪ್ಪಣಿ ಮಾಡಿಕೊಳ್ಳಿ. ಈ ವಿಭಾಗದಲ್ಲಿ ಹಣದುಬ್ಬರ ಮತ್ತು ಅಂಕಿ–ಅಂಶ ಸಂಗ್ರಹದ ಮೇಲೆ ಪ್ರಶ್ನೆಯನ್ನು ಕೇಳುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಅದಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ.

ರಾಜಕೀಯ: ಈ ವಿಭಾಗದಲ್ಲಿ ಹೊಸ ಕಾನೂನುಗಳು, ಮಸೂದೆಗಳು ಮತ್ತು ಸಾಂವಿಧಾನಿಕ ತಿದ್ದುಪಡಿಗಳನ್ನು ಗಮನಿಸಿ. ಅಲ್ಲದೇ ಇತ್ತೀಚೆಗೆ ನಡೆದ ಅಥವಾ ಮುಂಬರುವ ಚುನಾವಣೆಗಳ ಬಗ್ಗೆ ಮತ್ತು ಕೆಂದ್ರ ಸರ್ಕಾರ/ ರಾಜ್ಯ ಸರ್ಕಾರಗಳು ಇತ್ತೀಚೆಗೆ ಪ್ರಾರಂಭಿಸಿದ ಯೋಜನೆಗಳ ಬಗ್ಗೆ ಓದಿ ಟಿಪ್ಪಣಿ ಮಾಡಿಕೊಳ್ಳಿ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿನ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ಹೆಸರು ಮತ್ತು ಅವರ ಕಾರ್ಯ ವಿಧಾನಗಳ ಬಗ್ಗೆ ಇರುವ ಮಾಹಿತಿ ಗಮನಿಸಿ.

ಅಂತರರಾಷ್ಟ್ರೀಯ: ಅಂತರರಾಷ್ಟ್ರೀಯ ಚುನಾವಣೆಗಳು, ಪ್ರಾದೇಶಿಕ ಒಪ್ಪಂದಗಳು, ಜಾಗತಿಕ ಸಭೆಗಳು, ಅಂತರರಾಷ್ಟ್ರೀಯ ಸಂಬಂಧಗಳು, ವಿದೇಶಿ ವ್ಯವಹಾರಗಳು, ಆರ್ಥಿಕ ವಿನಿಮಯಗಳು, ರಾಜಕೀಯ ಹಾಗೂ ಇನ್ನಿತರೇ ಸಂಘರ್ಷಗಳು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂಬಂಧಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿರುವ ವ್ಯಕ್ತಿಗಳು ಇನ್ನಿತರೇ ಮಾಹಿತಿಗಳನ್ನು ಈ ವಿಭಾಗದಿಂದ ಓದಿ ಟಿಪ್ಪಣಿ ಮಾಡಿಕೊಳ್ಳಿ.

ಕ್ರೀಡೆ: ಈ ವಿಭಾಗದಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ವಿವಿಧ ಕ್ರೀಡಾಪಟುಗಳ ಹೆಸರು, ಸಾಧನೆಯ ವಿವರಗಳು, ಇತ್ತೀಚೆಗೆ ನಡೆದ ಕ್ರೀಡೆ ಮತ್ತು ಪಂದ್ಯಾವಳಿಗಳ ವಿಜೇತರ ಹೆಸರುಗಳನ್ನು ಗಮನಿಸಿ ಟಿಪ್ಪಣಿ ಮಾಡಿಕೊಳ್ಳಿ.

ಇತರೆ: ಹೊಸ ತಾಂತ್ರಿಕ ಬೆಳವಣಿಗೆಗಳು, ವಿಜ್ಞಾನದ ಹೊಸ ಆವಿಷ್ಕಾರಗಳು, ಸಾಂಸ್ಕೃತಿಕ ಉತ್ಸವಗಳು, ಸಾಹಿತ್ಯಿಕ ಬೆಳವಣಿಗೆಗಳು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ದಿನಾಚರಣೆಗಳು ಇತ್ಯಾದಿ ಮಾಹಿತಿಗಳನ್ನು ಗಮನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT