ಶನಿವಾರ, ಅಕ್ಟೋಬರ್ 23, 2021
22 °C

ಜ್ಞಾನಾರ್ಜನೆಯ ಜೊತೆ ಸಂಪಾದನೆ

ಪ್ರದೀಪ್ ವೆಂಕಟರಾಮ್ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷ ಕೋವಿಡ್ ಪಿಡುಗಿನ ಮಧ್ಯದಲ್ಲಿ, ಹೆಸರಾಂತ ಇ-ಕಾಮರ್ಸ್ ಕಂಪನಿ ತನ್ನ ಇಡೀ ಜಾಲತಾಣವನ್ನು ಇಂಗ್ಲಿಷ್‌ನಿಂದ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಿಗೆ ಅನುವಾದ ಮಾಡುವ ಯೋಜನೆಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಬೇಕಿತ್ತು. ಹಾಗಾಗಿ, ನಾನು ಅನಿಲ್ ಸೇರಿದಂತೆ ಅನೇಕ ವಿದ್ಯಾರ್ಥಿಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಂಡೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ, ನಾಲ್ಕು ತಿಂಗಳುಗಳವರೆಗೆ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದ ಅನಿಲ್‌ ಎರಡು ಲಕ್ಷ ಸಂಪಾದಿಸಿದ. ಇಂತಹ ಅರೆಕಾಲಿಕ ವೃತ್ತಿಯ ಅವಕಾಶಗಳು ಹೆಚ್ಚಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ಭಾಷೆ ಮತ್ತು ವಿಷಯಾಭಿವೃದ್ಧಿ ವಲಯದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ.

ಅರೆಕಾಲಿಕ ಕೆಲಸವನ್ನು ಏಕೆ ಮಾಡಬೇಕು?

ಸಾಮಾನ್ಯವಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಪಂಚದ ಹೊರಗಿನ ಜೀವನವನ್ನು ಮರೆತು ಬದುಕುವುದು ಸಹಜ. ಆದರೆ, ಒಂದು ಕ್ಷಣ ಯೋಚಿಸಿ; ಅರೆಕಾಲಿಕ ಉದ್ಯೋಗಗಳು ನಿಮ್ಮನ್ನು ವೃತ್ತಿಪರ ಜೀವನಕ್ಕಾಗಿ ಸಿದ್ಧಪಡಿಸುವುದರ ಜೊತೆಗೆ ನಿಮ್ಮ ವ್ಯಕ್ತಿತ್ವದ ಮೌಲ್ಯವನ್ನು ವೃದ್ಧಿಸಿ ಒಂದು ಹೊಸ ಜಗತ್ತನ್ನೇ ನಿಮಗೆ ಪರಿಚಯಿಸುತ್ತವೆ. ಪ್ರಮುಖವಾಗಿ, ಶಿಕ್ಷಣವೂ ಒಂದು ವ್ಯಾಪಾರವಾಗಿರುವ ಈ ಕಾಲಘಟ್ಟದಲ್ಲಿ, ಶಿಕ್ಷಣದ ನಿರ್ವಹಣೆ ದುಬಾರಿಯಾಗಿರುವುದರಿಂದ, ನಿಮ್ಮ ಅರೆಕಾಲಿಕ ಆದಾಯವು ಕುಟುಂಬದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ.

ಯಾವ ರೀತಿಯ ಉದ್ಯೋಗಗಳು?

ಆಯ್ಕೆಯಲ್ಲಿ ವಿಪುಲತೆ ಮತ್ತು ವೈವಿಧ್ಯತೆಯಿರುವ ಕಾರಣದಿಂದ ವಿದ್ಯಾಭ್ಯಾಸದ ನಂತರ ನಿಮ್ಮ ವೃತ್ತಿಯೋಜನೆಗೆ ಅನುಗುಣವಾಗಿ ಅರೆಕಾಲಿಕ ಕೆಲಸವನ್ನು ಆರಿಸಿಕೊಳ್ಳಬಹುದು.

ಜಾಲತಾಣಗಳು, ಬ್ಲಾಗ್‌ಗಳು, ವಿಡಿಯೊಗಳಿಗಾಗಿ ವಿಷಯಾಭಿವೃದ್ಧಿ: ಭಾಷೆ ಮತ್ತು ಬರವಣಿಗೆಯಲ್ಲಿ ಪರಿಣತಿಯಿದ್ದರೆ ಮನೆಯಿಂದಲೇ ಮಾಡಬಹುದಾದ ಅನೇಕ ಅವಕಾಶಗಳಿವೆ. ಮೂಲ ವಿಷಯದ ಬರವಣಿಗೆ, ಅಸ್ತಿತ್ವದಲ್ಲಿರುವ ವಿಷಯವನ್ನು ಡಿಜಿಟಲೀಕರಣಗೊಳಿಸುವ ಕಾರ್ಯಗಳು ಲಾಭದಾಯಕ ಮತ್ತು ತೃಪ್ತಿಕರ.

ಭಾಷೆಯ ಸೇವೆಗಳು: ಹೆಚ್ಚಿನ ಬೇಡಿಕೆಯಿರುವ ಮತ್ತೊಂದು ಸಂಬಂಧಿತ ಕ್ಷೇತ್ರವೆಂದರೆ ಅನುವಾದ, ಟ್ರಾನ್ಸ್‌ಸ್ಕ್ರಿಪ್ಷನ್, ವಾಯ್ಸ್ಓವರ್, ಉಪಶೀರ್ಷಿಕೆಗಳು ಇತ್ಯಾದಿ.

ದತ್ತಾಂಶ ನಿರ್ವಹಣೆ: ಉತ್ಪನ್ನಗಳನ್ನು ಮಾರಾಟ ಮಾಡಲು ಕಂಪನಿಗಳು ಗ್ರಾಹಕರ ದತ್ತಾಂಶವನ್ನು ವ್ಯಾಪಕವಾಗಿ ಬಳಸುತ್ತವೆ. ಹಾಗಾಗಿ, ಕೆಲವು ದಶಕಗಳಿಂದಲೂ ದತ್ತಾಂಶದ ರಚನೆ, ಸಂಗ್ರಹಣೆ, ಪರಿಷ್ಕರಣೆ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳನ್ನು ನಿಯೋಜಿಸಲಾಗುತ್ತದೆ.

ಗ್ರಾಹಕ ಸಂಬಂಧಿತ ಸಂಶೋಧನೆ ಮತ್ತು ಸೇವೆಗಳು: ಗ್ರಾಹಕರ ಮಾಹಿತಿ, ಒಲವು, ಅಭಿಪ್ರಾಯ, ಪ್ರತಿಕ್ರಿಯೆ ಮತ್ತು ಆದ್ಯತೆಯ ಅಧ್ಯಯನ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಮಾರುಕಟ್ಟೆಯ ಚಟುವಟಿಕೆಗಳು: ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಪ್ರಚಾರ, ವಸ್ತು ಪ್ರದರ್ಶನ, ಸಮ್ಮೇಳನ ಇತ್ಯಾದಿಗಳಂತಹ ಮಾರುಕಟ್ಟೆಯ ಚಟುವಟಿಕೆಗಳಿಗೆ ಅಲ್ಪಾವಧಿಯಲ್ಲಿ ಸಾಕಷ್ಟು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಕಾರ್ಯಗಳಲ್ಲಿಯೂ ವಿದ್ಯಾರ್ಥಿಗಳನ್ನು ನಿಯೋಜಿಸಲಾಗುತ್ತದೆ. ಟಿಕೆಟಿಂಗ್, ಅತಿಥಿಗಳ ಸ್ವಾಗತ, ಮೇಲ್ವಿಚಾರಣೆ ಮತ್ತು ನಿರ್ವಹಣೆಯಂತಹ ಅನೇಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ನಿಯೋಜನೆ ಉಪಯುಕ್ತ.

ಆತಿಥ್ಯದ ಸೇವೆಗಳು: ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳು ಎಂದಿನಿಂದಲೂ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗಗಳನ್ನು ನೀಡುವ ಸಾಂಪ್ರದಾಯಿಕ ಮೂಲವಾಗಿವೆ. ಈಗ ಬದಲಾಗುತ್ತಿರುವ ಜೀವನ ಶೈಲಿಯಿಂದ ಈ ಕ್ಷೇತ್ರಗಳ ಅಭಿವೃದ್ಧಿಯಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳು ಇನ್ನೂ ಹೆಚ್ಚಾಗಿವೆ.

ಮಾಧ್ಯಮ: ಮುದ್ರಣ, ಎಲೆಕ್ಟ್ರಾನಿಕ್ಸ್ ಮತ್ತು ಆನ್‌ಲೈನ್ ಮಾಧ್ಯಮಗಳ ಪ್ರಸರಣೆ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಈ ಕ್ಷೇತ್ರದಲ್ಲಿನ ಅವಕಾಶಗಳೂ ಸಹ ವಿಪುಲವಾಗಿದೆ.

ಬೋಧನೆ: ಜ್ಞಾನ ಮತ್ತು ಕೌಶಲಗಳನ್ನು ಚುರುಕುಗೊಳಿಸುವುದರ ಜೊತೆಗೆ ಯುವ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಆರ್ಥಿಕವಾಗಿಯೂ ಲಾಭದಾಯಕ.

ಇಂತಹ ಅರೆಕಾಲಿಕ ಉದ್ಯೋಗಗಳಿಂದ ತಿಂಗಳಿಗೆ 10 ಸಾವಿರದಿಂದ 40 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದು. ಹಾಗಾಗಿ, ಕಾಲೇಜು ಮತ್ತು ಹಾಸ್ಟೆಲ್ ಶುಲ್ಕಗಳು, ಪುಸ್ತಕಗಳು, ಹೆಚ್ಚುವರಿ ಕೋರ್ಸ್‌ಗಳು ಸೇರಿದಂತೆ ಅನೇಕ ಖರ್ಚು– ವೆಚ್ಚಗಳಿಗೆ ಈ ಆದಾಯ ನೆರವಾಗಬಲ್ಲದು.

ಉಜ್ವಲ ಭವಿಷ್ಯದ ಕನಸುಗಳನ್ನು ಕಾಣುತ್ತಿರುವ ವಿದ್ಯಾರ್ಥಿಗಳು ಈ ಅವಕಾಶಗಳ ಸದುಪಯೋಗದಿಂದ ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದಿಂದ ಶೈಕ್ಷಣಿಕ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ಸಾಧಿಸಬಹುದು.

(ಲೇಖಕರು: ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು