ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಪರಿಶ್ರಮ, ಸತತ ಪ್ರಯತ್ನ ಅಗತ್ಯ: ಕೆ.ಆರ್‌. ಕಲ್ಪಶ್ರೀ

ಕಠಿಣ ಪರಿಶ್ರಮ, ಸಕಾರಾತ್ಮಕ ಮನೋಭಾವ ಇರಲಿ
Last Updated 29 ಜೂನ್ 2022, 22:30 IST
ಅಕ್ಷರ ಗಾತ್ರ

* ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೀರಿ, ನಿಮ್ಮ ಮುಂದಿನ ಹೆಜ್ಜೆ?

ಗ್ರಾಮೀಣ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ತಂತ್ರಜ್ಞಾನ ಆಧಾರಿತ, ಇಂಟರ್ನೆಟ್, ಸ್ಮಾರ್ಟ್ ಬೋರ್ಡ್ ಒಳಗೊಂಡ ಉತ್ತಮ‌ ಬೋಧನಾ ಸಾಮಗ್ರಿ ಪೂರೈಸುವ ಕೆಲಸ ಮಾಡಬೇಕು. ಅವಕಾಶ ದೊರೆತರೆ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ.

* ಯುಪಿಎಸ್‌ಸಿ ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆಗಳನ್ನು ಎಷ್ಟನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದಿರಿ?

5ನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದೆ.ಎಂಜಿನಿಯರಿಂಗ್‌ ಪದವಿ ಮುಗಿಸುವ ವರೆಗೂ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಹೀಗಾಗಿ ಮೊದಲ ಸಲ ಯಾವುದೇ ತಯಾರಿ ಇಲ್ಲದೆ ಪರೀಕ್ಷೆ ಬರೆದಿದ್ದೆ.

ಐಚ್ಛಿಕ ವಿಷಯವಾಗಿ ಭೂಗೋಳ ಆಯ್ಕೆ ಮಾಡಿಕೊಂಡಿದ್ದರಿಂದ ಪ್ರಾರಂಭದಲ್ಲಿ ಕಷ್ಟ ಆಯ್ತು. ಎಲ್ಲ ವಿಷಯ ತಿಳಿದುಕೊಂಡು ಪಠ್ಯ ಮುಗಿಸಲು ಸಮಯ ಹಿಡಿಯಿತು. ಗುಂಪು ಚರ್ಚೆ, ಅಣಕು ಪರೀಕ್ಷೆಯನ್ನು ಹೆಚ್ಚಾಗಿ ಎದುರಿಸಿದಂತೆಲ್ಲಾ ಮುಖ್ಯ ಪರೀಕ್ಷೆ ಬರೆಯಲು ಸುಲಭವಾಯಿತು.

* ನೀವು ಬಳಸುತ್ತಿದ್ದ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ

ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ನಡೆಸುವವರು ಮುಖ್ಯವಾಗಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಸಮಾಜ ವಿಜ್ಞಾನ, ಗಣಿತ ಪುಸ್ತಕಗಳನ್ನು ಓದಬೇಕು. ಅದರಿಂದ ಪ್ರಿಲಿಮ್ಸ್‌ ಪರೀಕ್ಷೆ ಬರೆಯಲು ತುಂಬಾ ಸಹಾಯವಾಗಲಿದೆ. ಇನ್ನುಳಿದಂತೆ ವಿಜ್ಞಾನ, ರಾಜ್ಯಶಾಸ್ತ್ರ, ಸಂವಿಧಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿವಿಧ ಲೇಖಕರು ಬರೆದ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದೆ. ಇವುಗಳ ಜೊತೆಗೆ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಪ್ರೋತ್ಸಾಹದಾಯಕ ಪುಸ್ತಕ ಓದುತ್ತಿದ್ದೆ.

ಪ್ರಿಲಿಮ್ಸ್‌ನಲ್ಲಿ 15ರಿಂದ 20 ಪ್ರಶ್ನೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಇರುತ್ತವೆ. ಪ್ರಚಲಿತ ವಿದ್ಯಮಾನಗ ಳಿಗಾಗಿ ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿ ಪತ್ರಿಕೆ ಓದುವುದು ತುಂಬಾ ಮುಖ್ಯ.

* ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚುವರಿ ಕೋಚಿಂಗ್‌ ಅಗತ್ಯವಿದೆಯೇ? ನೀವು ಕೋಚಿಂಗ್‌ಗೆ ಹೋಗಿ‌ದ್ದಿರಾ? ಯಾವ ರೀತಿ ಕೋಚಿಂಗ್ ತರಬೇತಿ ನೆರವಾಗುತ್ತದೆ?

ಕೋಚಿಂಗ್ ಇಲ್ಲದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಇತ್ತೀಚೆಗೆಯ್ಯೂಟ್ಯೂಬ್‌ನಲ್ಲಿ ಎಲ್ಲ ರೀತಿಯ ಕೋಚಿಂಗ್ ಕ್ಲಾಸ್‌ ಸಿಗುತ್ತವೆ. ಅವುಗಳ ಬಳಕೆಯಿಂದ ತಯಾರಿ ನಡೆಸಬಹುದು. ಆದರೆ, ನಮಗೊಂದು ಸೂಕ್ತ ಮಾರ್ಗದರ್ಶಕರ ಅವಶ್ಯಕತೆ ಇದೆ ಎನ್ನುವವರಿಗೆ ಕೋಚಿಂಗ್ ಬೇಕಾಗುತ್ತದೆ. ಅಲ್ಲಿ, ಯಾವುದನ್ನು ಓದಬೇಕು, ಯಾವುದು ಬೇಡ ಎಂಬ ಮಾರ್ಗದರ್ಶನ ಸಿಗುತ್ತದೆ.

* ಎಷ್ಟು ಸಮಯದಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಿ? ಸಿದ್ಧತೆಗೆ ಸಮಯ ಹೊಂದಾಣಿಕೆ ಹೇಗೆ ಮಾಡಿಕೊಂಡಿರಿ?

2017-18 ಅಭ್ಯಾಸ ಶುರು ಮಾಡಿದ್ದೆ. ಎರಡು ಬಾರಿ ಮುಖ್ಯ ಪರೀಕ್ಷೆ ಬರೆದು, ಒಮ್ಮೆ ಸಂದರ್ಶನದವರೆಗೆ ಹೋಗಿದ್ದೆ. ನಿರಂತರ ಓದಿಗಿಂತ ಮಧ್ಯೆ ವಿರಾಮ ತೆಗೆದುಕೊಳ್ಳಬೇಕು. ಬೆಳಿಗ್ಗೆ ಧ್ಯಾನ, ಯೋಗ ಮಾಡುವುದು ಏಕಾಗ್ರತೆಯಿಂದ ಇರಲು ಸಹಾಯವಾಗುತ್ತದೆ. ದಿನ ಮತ್ತು ವಾರದ ವೇಳಾಪಟ್ಟಿ ತಯಾರಿಸಿಕೊಂಡು, ಅದರ ಪ್ರಕಾರವೇ ಅಧ್ಯಯನ ಮಾಡಬೇಕು. ಇಂತಿಷ್ಟು ಪಠ್ಯ ಓದಿ ಮುಗಿಸುತ್ತೇನೆ ಎಂದು ಗುರಿಯಿಟ್ಟುಕೊಂಡು ಓದಬೇಕು.

ಕನಿಷ್ಠ ನಿತ್ಯ 6 ಗಂಟೆಯಾದರೂ ಓದಬೇಕು. ನಾನು ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವಾಗ 17 ರಿಂದ 18 ಗಂಟೆ ಕಾಲ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ನನಗೆ ಓದಿನ ಒತ್ತಡ ಕಡಿಮೆಯಾಗಲು ಬ್ಯಾಡ್ಮಿಂಟನ್‌, ಈಜು ಸಹಾಯವಾಯಿತು.

* ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ?

ಕಠಿಣ ಪರಿಶ್ರಮ, ಸಕಾರಾತ್ಮಕ ಮನೋಭಾವ, ತಾಳ್ಮೆ ತುಂಬಾ ಮುಖ್ಯ. ಎಲ್ಲರೂ ಒಂದೇ ಸಲ‌ ಉತ್ತೀರ್ಣರಾಗುವುದಿಲ್ಲ. ಕಠಿಣ ಶ್ರಮ, ಪ್ರಾಮಾಣಿಕ ಪ್ರಯತ್ನದ ಜೊತೆಗೆ, ಹಿಂದೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಂದ ಸಲಹೆ ಪಡೆಯಬಹುದು. ಯುಪಿಎಸ್‌ಸಿ ಜೊತೆಗೆ ಇತರೆ ಪರೀಕ್ಷೆಗಳನ್ನು ಬರೆಯುವುದು ರೂಢಿ ಮಾಡಿಕೊಳ್ಳಬೇಕು. ಇಂಥ ಅಭ್ಯಾಸಗಳು ಪರೀಕ್ಷೆಯ ಯಶಸ್ಸಿಗೆ ನೆರವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT