ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರದಲ್ಲಿ ಅವಕಾಶಗಳಿಗೆ ಅಗ್ರಿಕಲ್ಚರ್ ಎಂಜಿನಿಯರಿಂಗ್ ಕೋರ್ಸ್‌

Last Updated 6 ಜೂನ್ 2021, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವುದು ಮತ್ತು ಉತ್ಪನ್ನಗಳ ಪ್ರಮಾಣ ಹೆಚ್ಚುತ್ತಿರುವುದು ಸಂತಸದ ಸಂಗತಿ. ಕೃಷಿಯ ಬಗ್ಗೆ ಅಧಿಕೃತ ಹಾಗೂ ವೈಜ್ಞಾನಿಕ ಅಧ್ಯಯನವೇ ಇದಕ್ಕೆ ಕಾರಣ. ಕೃಷಿ ವಿಜ್ಞಾನದ ಜೊತೆಗೆ ಎಂಜಿನಿಯರಿಂಗ್ ಅಧ್ಯಯನವೂ ಇತ್ತೀಚಿಗೆ ಹೆಚ್ಚು ಖ್ಯಾತಿ ಪಡೆಯುತ್ತಿದೆ. ಅಂತಹ ಕೋರ್ಸ್ ಎಂದರೆ ಕೃಷಿ ಎಂಜಿನಿಯರಿಂಗ್ ಅಧ್ಯಯನ.

ವಿಶೇಷತೆ ಏನು?
ಅಗ್ರಿಕಲ್ಚರ್ ಎಂಜಿನಿಯರಿಂಗ್ ಜೈವಿಕ ವಿಜ್ಞಾನ ಹಾಗೂ ಎಂಜಿನಿಯರಿಂಗ್ ತತ್ವಗಳ ಸಂಯೋಜನೆಯಾಗಿದೆ. ಇದು ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಮೆಕ್ಯಾನಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ಮತ್ತು ರಾಸಾಯನಿಕ ಎಂಜಿನಿಯರಿಂಗ್‌ನಂತಹ ಇತರೆ ಕ್ಷೇತ್ರಗಳ ಸಂಯೋಜನೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಕೃಷಿ ಎಂಜಿನಿಯರ್‌ಗಳ ಪ್ರಮುಖ ಪಾತ್ರವೆಂದರೆ ಉತ್ತಮ ಎಂಜಿನಿಯರಿಂಗ್ ವಿಧಾನಗಳು, ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನ ಆಧಾರಿತ ಸಲಕರಣೆಗಳ ಮೂಲಕ ಕೃಷಿ ಉತ್ಪಾದನೆಯನ್ನು ಸುಧಾರಿಸುವುದು. ಇದಕ್ಕಾಗಿ ವಾಸ್ತವತೆಯನ್ನು ಅರಿತು ಭವಿಷ್ಯಕ್ಕೆ ಬೇಕಾದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಚಿತ್ತ ಹರಿಸಬೇಕಾಗಿದೆ. ಅಲ್ಲದೇ ಕೃಷಿ ಯಂತ್ರೋಪಕರಣಗಳು, ಗ್ರಾಮೀಣ ವಿದ್ಯುದೀಕರಣ, ಜೈವಿಕ ಅನಿಲ, ಕೃಷಿ ಉತ್ಪನ್ನಗಳ ಹೆಚ್ಚಳದಲ್ಲಿ ತಂತ್ರಜ್ಞಾನದ ಅಳವಡಿಕೆ.. ಹೀಗೆ ಹಲವಾರು ವೃತ್ತಿಪರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ವಿಪುಲ ಅವಕಾಶಗಳಿವೆ. ವೃತ್ತಿ ನೈಪುಣ್ಯತೆ ಪಡೆಯಲು ಬೇಕಾದ ಸಕಲ ಅವಕಾಶಗಳು ಇಲ್ಲಿವೆ.

ಪ್ರವೇಶಾರ್ಹತೆ
ಅಗ್ರಿಕಲ್ಚರ್ ಎಂಜಿನಿಯರಿಂಗ್ ಕೋರ್ಸ್ ಸೇರಲು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳನ್ನು ಅಭ್ಯಸಿಸಿರಬೇಕು. ಜೊತೆಗೆ ಸಂಬಂಧಿಸಿದ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ದ ಕಾಲೇಜುಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಪದವಿ ಹಂತಕ್ಕೆ ಜೆಇಇ ಮೇನ್‌, ಕೆ–ಸೆಟ್‌, ಎಐಇಇಇ ಇತ್ಯಾದಿ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕು. ಸ್ನಾತಕೋತ್ತರ ಹಂತಕ್ಕೆ ಐಸಿಎಆರ್‌– ಎಐಇಇಎ ಪಿಜಿ, ಗೇಟ್‌ ಪ್ರವೇಶ ಪರೀಕ್ಷೆ ಬರೆಯುವುದು ಅಗತ್ಯ.

ಕೃಷಿ ಎಂಜಿನಿಯರಿಂಗ್ ಕೋರ್ಸ್‌ ನಂತರ ಅಂದರೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಹಾಗೂ ಕೌಶಲಗಳನ್ನು ಗಳಿಸಿದ ನಂತರ ಕೃಷಿ ಹಾಗೂ ಕೃಷಿಯೇತರ ಕ್ಷೇತ್ರದಲ್ಲಿ ವಿವಿಧ ಉದ್ಯೋಗಗಳು ಲಭ್ಯ ಇವೆ. ನಿಮ್ಮ ಆಸಕ್ತಿಯ ಆಧಾರದ ಮೇಲೆ ನಿಮ್ಮ ಆಯ್ಕೆ ಮಾಡಬಹುದು. ಕೃಷಿ ಎಂಜಿನಿಯರ್, ಕೃಷಿ ಇನ್‌ಸ್ಪೆಕ್ಟರ್, ಕೃಷಿ ತಜ್ಞ, ಫಾರ್ಮ /ಶಾಪ್ ಮ್ಯಾನೇಜರ್, ಕೃಷಿ ಮೇಲ್ವಿಚಾರಕ, ಕೃಷಿ ವಿಜ್ಞಾನಿ.. ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಬಹುದು.

ಉದ್ಯೋಗಾವಕಾಶಗಳು
ಕೃಷಿ ಎಂಜಿನಿಯರ್‌ಗೆ ವಿಪುಲ ಉದ್ಯೋಗಾವಕಾಶಗಳಿವೆ. ಇದೊಂದು ಸವಾಲಿನ ಕೆಲಸವಾದರೂ ಸಾಕಷ್ಟು ಅವಕಾಶಗಳಿರುವ ಕ್ಷೇತ್ರವಾಗಿದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ತಾಂತ್ರಿಕ ತಜ್ಞರಾಗಿ ಕೆಲಸ ಮಾಡಬಹುದು. ಕೃಷಿ ಎಂಜಿನಿಯರ್ ಆದವರು ತಮ್ಮದೇ ಆದ ಕೃಷಿ ಯಂತ್ರಗಳು ಮತ್ತು ಉಪಕರಣಗಳ ಸಣ್ಣ ಉತ್ಪದನಾ ಘಟಕ ಪ್ರಾರಂಭಿಸಬಹುದು ಅಥವಾ ಅಂತಹ ಘಟಕಗಳ ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಬಹುದು. ಸರ್ಕಾರಿ ಮತ್ತು ಖಾಸಗಿ ಕೃಷಿ ಸೇವಾ ವಲಯಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ.

ಉದ್ಯೋಗಾವಕಾಶದ ಕ್ಷೇತ್ರಗಳು: ಸರ್ಕಾರಿ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು, ನಾನ್ ಕಾರ್ಪೊರೇಟೆಡ್ ಕೃಷಿ ಇಲಾಖೆ, ಚಹಾ ಮತ್ತು ಕಾಫಿ ತೋಟಗಳು, ಕೃಷಿ ಉದ್ಯಮ, ಕೃಷಿ ಯಂತ್ರೋಪಕರಣ ಉತ್ಪಾದನಾ ಘಟಕಗಳು, ಡೇರಿ ಆಹಾರ ನಿಗಮಗಳು, ಕೃಷಿ ಹಣಕಾಸು ನಿಗಮಗಳು, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಕನ್ಸಲ್ಟೆನ್ಸಿಗಳು, ಜಲ ನಿರ್ವಹಣಾ ಘಟಕಗಳು.

ಮದರ್ ಡೇರಿ, ಅಮುಲ್ ಡೇರಿ, ನೆಸ್ಲೆ ಇಂಡಿಯಾ, ನಬಾರ್ಡ್, ಕೃಷಿ ಸರಕು ಘಟಕಗಳು, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್, ರಾಷ್ಟ್ರೀಯ ಬೀಜ ನಿಗಮ, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿ.

ಕೋರ್ಸ್ ಇರುವ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಕಾಲೇಜ್ ಆಫ್ ಅಗ್ರಿಕಲ್ಚರ್, ಬೆಂಗಳೂರು, ಕಾಲೇಜ್ ಆಫ್ ಅಗ್ರಿಕಲ್ಚರ್ ಎಂಜಿನಿಯರಿಂಗ್‌, ರಾಯಚೂರು, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ರಾಯಚೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT