ಗುರುವಾರ , ಸೆಪ್ಟೆಂಬರ್ 16, 2021
24 °C

ಕಲಿಕೆಗೆ ಮೆಟ್ಟಿಲು ಸಂಗೀತ, ಕಲೆ

ಪ್ರೊ. ಎಸ್‌.ಕೆ. ಜಾರ್ಜ್‌ Updated:

ಅಕ್ಷರ ಗಾತ್ರ : | |

Prajavani

ಮಕ್ಕಳಿಗೆ ಪ್ರೀತಿಯಿಂದ ಕಲಿಸಿ, ಕಲಿಕೆಯಲ್ಲಿ ಸ್ವಾತಂತ್ರ್ಯ ನೀಡಿ. ಇದರಿಂದ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ ಎಂಬುದನ್ನು ಚಿಂತಕರು ಹೇಳುತ್ತಲೇ ಬಂದಿದ್ದಾರೆ. ಇದರ ಜೊತೆಗೆ ಕಲ್ಪನೆ ಹಾಗೂ ಸೃಜನಶೀಲತೆ ಮೂಲಕ ಪ್ರತಿಯೊಂದು ಮಗುವಿನ ಸರ್ವಾಂಗೀಣ ವಿಕಾಸಕ್ಕೆ ನೆರವಾಗಲು ಸಾಧ್ಯ ಎಂಬುದು ಕೂಡ ಸಾಬೀತಾಗಿದೆ. ಈ ತರಹದ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡ ಬಯಸುವ ಪೋಷಕರು ‘ವಾಲ್ಡಾರ್ಫ್‌’ ವಿಧಾನವನ್ನು ಯತ್ನಿಸಬಹುದು.

ವಾಲ್ಡಾರ್ಫ್‌ ವಿಧಾನವು ಮಕ್ಕಳಿಗೆ ಸಮಗ್ರವಾಗಿ ಶಿಕ್ಷಣ ಕಲಿಸುವುದು. ಅಂದರೆ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಸಂಪೂರ್ಣ ಕಲಿಕೆಯನ್ನು ಇದು ಒಳಗೊಂಡಿದೆ. ಕಲಿಕೆಯಲ್ಲಿ ಪಠ್ಯವಲ್ಲದೇ ಕಲೆ, ಸಂಗೀತ, ದೈಹಿಕ ಹಾಗೂ ಪ್ರಾಯೋಗಿಕ ಚಟುವಟಿಕೆಗಳಿರುತ್ತವೆ. ಹಾಗೆಯೇ ಪ್ರಕೃತಿಯ ಬಗ್ಗೆ ಪಾಠಗಳೂ ಇರುತ್ತವೆ. ಚಿತ್ರಕಲೆ, ಶಿಲ್ಪಕಲೆ, ಕಸೂತಿ, ಅಡುಗೆ, ಹೊಲಿಗೆ ಮೊದಲಾದವುಗಳ ಬಗ್ಗೆ ಕಲಿಸುವ ಮೂಲಕ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಉದ್ದೇಶ. ಮಕ್ಕಳಿಗೆ ಪರೀಕ್ಷೆ ನಡೆಸುವುದು ಅಥವಾ ಅಂಕ ನೀಡುವ ಅಗತ್ಯವಿಲ್ಲ ಎಂದು ಈ ವಿಧಾನ ಪ್ರತಿಪಾದಿಸುತ್ತದೆ. ಶಿಕ್ಷಣದ ಕುರಿತು ಆಸ್ಟ್ರಿಯಾದ ರುಡಾಲ್ಫ್‌ ಸ್ಟೀನರ್‌ ಚಿಂತನೆಗಳನ್ನು ಆಧರಿಸಿ 20ನೇ ಶತಮಾನದ ಆರಂಭದಲ್ಲಿ ಈ ಶಿಕ್ಷಣ ಪದ್ಧತಿಯನ್ನು ಆರಂಭಿಸಲಾಯಿತು. ಈಗ ಬೆಂಗಳೂರು ಸೇರಿದಂತೆ ಭಾರತದ ಬಹುತೇಕ ದೊಡ್ಡ ನಗರಗಳಲ್ಲಿ ಈ ತರಹದ ಶಾಲೆಗಳಿವೆ.

ಶಾಲೆಯಲ್ಲಿ ಮನೆಯಂತಹ ವಾತಾವರಣ ಕಲ್ಪಿಸುವುದರಿಂದ ಯಾವುದೇ ಭಯ, ಹಿಂಜರಿಕೆಯಿಲ್ಲದೇ ಮಕ್ಕಳು ಕಲಿಕೆಯಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತಾರೆ. 2–3 ವರ್ಷದ ಮಕ್ಕಳಿಂದ 7– 8 ವರ್ಷ ವಯಸ್ಸಿನವರೆಗಿನ ಮಕ್ಕಳು ತಮ್ಮಲ್ಲಿರುವ ಸಾಮರ್ಥ್ಯ, ಆಸಕ್ತಿ ಕಂಡುಕೊಳ್ಳುವುದು ಸಂಪೂರ್ಣ ಸ್ವಾತಂತ್ರ್ಯವಿರುವ ಕಲಿಕಾ ವಾತಾವರಣವನ್ನು ಒದಗಿಸಿದಾಗಲೇ.

ಮಕ್ಕಳು ಯಾವ ವಯಸ್ಸಿನವರು, ಅವರ ಕಲಿಕಾ ಸಾಮರ್ಥ್ಯ ಎಷ್ಟಿದೆ ಎಂಬುದರ ಮೇಲೆ ಪಠ್ಯವನ್ನು ರೂಪಿಸಲಾಗುತ್ತದೆ. ಅದು ಅವರ ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಉದಾಹರಣೆಗೆ ಚಿಕ್ಕ ಮಕ್ಕಳು ತಮ್ಮ ಓರಗೆಯ ಮಕ್ಕಳೊಂದಿಗೆ ಆಟವಾಡುತ್ತ, ನಿಧಾನವಾಗಿ ಸಾಮಾಜಿಕ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ. ಹಾಗೆಯೇ ಈ ಒಳಾಂಗಣ ಅಥವಾ ಹೊರಾಂಗಣ ಆಟದಲ್ಲಿ ಹೆಚ್ಚಾಗಿ ಸೃಜನಶೀಲತೆ, ಕಲ್ಪನೆಯನ್ನು ಉತ್ತೇಜಿಸುವಂತಹ ಉದ್ದೇಶವಿರುತ್ತದೆ. ಮಕ್ಕಳು ಮಣ್ಣಿನಲ್ಲಿ ಆಟವಾಡಲು ಬಿಡುವುದು ಕೂಡ ಇದೇ ಉದ್ದೇಶವನ್ನು ಹೊಂದಿದೆ.

ಕುತೂಹಲ ತಣಿಸಿ: ಮಕ್ಕಳು ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಮತ್ತು ಅನುಭವಿಸಿ ಕಲಿಯುತ್ತಾರೆ. ಹಾಗೆಯೇ ಅವರಿಗೆ ಕುತೂಹಲ ಕೂಡ ಹೆಚ್ಚು. ಉದಾಹರಣೆಗೆ ಮಕ್ಕಳಿಗೆ ಅಕ್ಷರ ಕಲಿಸಬೇಕಾದರೆ ಚಿತ್ರವನ್ನು ತೋರಿಸಿ ಅಥವಾ ಕಥೆ ಹೇಳಿ ಕಲಿಸಬೇಕಾಗುತ್ತದೆ. ಅ– ಅರಸ ಅಥವಾ ಎ ಫಾರ್‌ ಆ್ಯಪಲ್‌ ಎಂದು ಲಾಗಾಯ್ತಿನಿಂದಲೇ ಕಲಿಸಲಾಗುತ್ತಿದೆ. ಹಾಗೆ ಹೇಳುತ್ತಲೇ ಅಕ್ಷರವನ್ನು ತೋರಿಸಿ ಅವರಲ್ಲಿ ಒಂದು ಕಲ್ಪನೆಯನ್ನು ಮೂಡಿಸುತ್ತೇವೆ. ನಂತರ ಆ ಅಕ್ಷರವನ್ನು ಅವರು ನಕಲು ಮಾಡಿ ತಿದ್ದಲು ಶುರು ಮಾಡುತ್ತಾರೆ. ಗೋಡೆಯ ಮೇಲೆ, ಸಿಕ್ಕಸಿಕ್ಕಲ್ಲಿ ಗೀಚಲು ಶುರು ಮಾಡುತ್ತಾರೆ. ಹಾಗೆಯೇ ವಿಜ್ಞಾನವನ್ನು ಕೂಡ ಅವರಿಗೆ ಅನುಭವಕ್ಕೆ ತಂದು ಕಲಿಸುವುದು ಪದ್ಧತಿ.

ಹೆಚ್ಚಿನ ವಾಲ್ಡಾರ್ಫ್‌ ಶಾಲೆಗಳಲ್ಲಿ ಐದನೇ ತರಗತಿಯವರೆಗೂ ಪಠ್ಯ ಪುಸ್ತಕಗಳಿರುವುದಿಲ್ಲ. ಹೀಗಾಗಿ ತಾವು ಕಲಿತಿದ್ದನ್ನು ಮಕ್ಕಳು ಕಲೆ, ಹಾಡು, ಬರವಣಿಗೆ ಮೂಲಕ ವ್ಯಕ್ತಪಡಿಸುತ್ತಾರೆ. ಹಾಗೆಯೇ ಪಠ್ಯದಲ್ಲಿ ಕಲಿತಿದ್ದನ್ನು ಇತರ ಚಟುವಟಿಕೆಯಲ್ಲಿ ತೋರಿಸುವ ಮೂಲಕ ಅವರ ಮನಸ್ಸಿನಲ್ಲಿ ಅದು ಕೂರುವಂತೆ, ನೆನಪಿರುವಂತೆ ಮಾಡಲಾಗುತ್ತದೆ. ಉದಾಹರಣೆಗೆ ವಿಜ್ಞಾನ ಪುಸ್ತಕದಲ್ಲಿ ಚಿಟ್ಟೆಯ ಬಗ್ಗೆ ಕಲಿತರೆ ನಂತರ ಹಾಡು, ನೃತ್ಯದಲ್ಲಿ, ಚಿತ್ರಕಲೆ– ಪೇಪರ್‌ ಕ್ರಾಫ್ಟ್‌ನಲ್ಲಿ ಇನ್ನಷ್ಟು ಮನದಟ್ಟು ಮಾಡಿಕೊಳ್ಳುತ್ತಾರೆ. ವರ್ಕ್‌ಶೀಟ್‌ಗಳನ್ನೂ ಬಳಸಲಾಗುತ್ತದೆ.

ಈ ರೀತಿ ಕಲಿತ ಮಗು ಮುಖ್ಯ ವಾಹಿನಿಯ ಶಾಲೆಗೆ ಹೋಗಲು ಆರಂಭಿಸಿದಾಗ ಹೊಂದಿಕೊಳ್ಳುವ ಬಗ್ಗೆ ಪೋಷಕರಲ್ಲಿ ಅನುಮಾನ ಮೂಡುವುದು ಸಹಜ. ಆದರೆ ಚಿಕ್ಕ ಮಕ್ಕಳಲ್ಲಿ ಆಟದ ಮೂಲಕ ಪಾಠ ಕಲಿಸಿದರೆ, ಐದನೇ ತರಗತಿಯ ನಂತರ ಪಠ್ಯವನ್ನು ಅವಲಂಬಿಸಿಯೇ ಶಿಕ್ಷಣ ನೀಡಲಾಗುತ್ತದೆ. ಐದನೇ ತರಗತಿಯವರೆಗೂ ಕೂಡ ಪರೀಕ್ಷೆ ಬರೆಯುವ ವಿಧಾನವಿಲ್ಲ ಎಂಬುದನ್ನು ಬಿಟ್ಟರೆ, ಅವರಿಗೆ ಪ್ರಶ್ನೆ ಕೇಳುತ್ತ, ಉತ್ತರ ದೊರಕಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಮುಖ್ಯವಾದ ಅಂಶ ಏನೆಂದರೆ ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಪಠ್ಯದ ಆಧಾರದ ಮೇಲೆ ಕಲಿಕೆ ಶುರು ಮಾಡುವುದು. ಆಗ ಅವರು ಭಾಷೆ, ಗಣಿತ, ವಿಜ್ಞಾನ ಯಾವುದೇ ಇರಲಿ ಹೆಚ್ಚು ಆತ್ಮವಿಶ್ವಾಸದಿಂದ ಕಲಿಯಲು ಶುರು ಮಾಡುತ್ತಾರೆ. ಕಲಿಕೆಯನ್ನು ಆನಂದಿಸುವುದನ್ನು ಮಕ್ಕಳು ಕಲಿಯುತ್ತಾರೆ. ಹೀಗಾಗಿ ಬೇರೆ ಶಾಲೆಗೆ ಹೋದರೂ ಕೂಡ ಅಲ್ಲಿರುವ ಪಠ್ಯಕ್ರಮಕ್ಕೆ ಹೊಂದಿಕೊಳ್ಳುತ್ತಾರೆ ಎನ್ನುವುದು ತಜ್ಞರ ಅಭಿಮತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು