ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಪ್ರಾವೀಣ್ಯಕ್ಕೆ ಕೃತಕ ಬುದ್ಧಿಮತ್ತೆ

Last Updated 20 ಜೂನ್ 2021, 19:30 IST
ಅಕ್ಷರ ಗಾತ್ರ

ಕಲಿಕೆಯಲ್ಲಿ ಬಹಳಷ್ಟು ಮಾದರಿಗಳಿವೆ. ಈಗಂತೂ ತಂತ್ರಜ್ಞಾನ ಆಧಾರಿತ ಮಾದರಿಗಳು ಹೆಚ್ಚು ಜನಪ್ರಿಯವಾಗಿದ್ದು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಗ್ನರಾಗುವಂತೆ ಮಾಡಲು ಹಲವಾರು ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬರವಣಿಗೆಯಲ್ಲದೇ, ದೃಶ್ಯ ಮತ್ತು ಶ್ರಾವ್ಯ ಹಾಗೂ ಆಂಗಿಕ ಭಾಷೆಯ ಮೂಲಕವೂ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಬೇಕಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಯು ಕಲಿತಿರುವ ಕೌಶಲಗಳನ್ನು ಸರಿಯಾದ ರೀತಿಯಲ್ಲಿ ಬಳಸಲು ಉತ್ತೇಜನ ನೀಡಬೇಕಾಗುತ್ತದೆ. ಅಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇದರಿಂದ ಹೆಚ್ಚಿನ ಮಟ್ಟದಲ್ಲಿ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು.

ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ), ವರ್ಚುವಲ್‌ ರಿಯಾಲಿಟಿ (ವಿಆರ್‌) ಮತ್ತು ಎಆರ್‌ನಂತಹ ತಂತ್ರಜ್ಞಾನಗಳು ಇ– ಕಲಿಕೆಯಲ್ಲಿ ಹೆಚ್ಚಿನ ಮಟ್ಟದ ಬದಲಾವಣೆಯನ್ನು ತಂದಿವೆ. ಇದು ವಿದ್ಯಾರ್ಥಿಯು ಕಲಿಕೆಯಲ್ಲಿ ಹೆಚ್ಚು ತಲ್ಲೀನವಾಗುವಂತೆ ಪ್ರೇರೇಪಿಸುತ್ತದೆ. ಉದಾಹರಣೆಗೆ ವಿದೇಶಿ ಭಾಷೆಯನ್ನು ಒಬ್ಬ ವಿದ್ಯಾರ್ಥಿಗೆ ಕಲಿಸಬೇಕಾದರೆ ಕೋರ್ಸ್‌ನಲ್ಲಿರುವ ವಿಷಯಗಳ ಜೊತೆ ಇವೆಲ್ಲ ತಂತ್ರಜ್ಞಾನಗಳನ್ನು ಬಳಸಿ ಬೋಧನೆ ಮಾಡಬೇಕಾಗುತ್ತದೆ. ಹಾಗೆಯೇ ಕಲಿತಿರುವುದನ್ನು ಬಳಸುವಂತಹ ವಾತಾವರಣ ಕಲ್ಪಿಸಬೇಕಾಗುತ್ತದೆ. ನಂತರ ವಿದ್ಯಾರ್ಥಿಯು ಅದನ್ನು ಈ ಜಗತ್ತಿಗೆ ತೆರೆದುಕೊಂಡು ಕೌಶಲಗಳ ಬಳಕೆ ಮಾಡುತ್ತ ಅದರಲ್ಲಿ ಪಾರಂಗತನಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬರವಣಿಗೆ, ದೃಶ್ಯ– ಶ್ರಾವ್ಯ, ಆಂಗಿಕ ಭಾಷೆಯ ಬಳಕೆ ಅತ್ಯಗತ್ಯ.

ಚಟುವಟಿಕೆಯನ್ನು ಹೆಚ್ಚಿಸಬೇಕು: ವಿದ್ಯಾರ್ಥಿಗೆ ಹೊಸ ವಿಷಯವನ್ನು ಕಲಿಸಬೇಕಾದರೆ ನಿರಂತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಹ ವಾತಾವರಣ ಸೃಷ್ಟಿಸಬೇಕು. ಅಂದರೆ ಬೇರೆಯವರ ಜೊತೆಗೆ ಹೆಚ್ಚು ಸಂವಾದ ನಡೆಸುವಂತಹ, ಸಮಾಜದಲ್ಲಿ ಏನು ನಡೆಯುತ್ತದೆಯೋ ಅಂತಹ ವಾತಾವರಣ ಇರಬೇಕು. ಉದಾಹರಣೆಗೆ ಕಚೇರಿಯಲ್ಲಿ ಇತರ ಉದ್ಯೋಗಿಗಳ ಜೊತೆ ನೇರಾ ನೇರ ಸಂವಹನ ನಡೆಸುವಂತಹ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದರೆ ಅಂತಹ ಕೌಶಲವನ್ನು ದೃಶ್ಯ– ಶ್ರಾವ್ಯದ ಮೂಲಕ ಕಲಿಸುವ ಪದ್ಧತಿ ನೆರವಾಗುತ್ತದೆ. ವಿದ್ಯಾರ್ಥಿ ಕಂಪ್ಯೂಟರ್‌ ಮೂಲಕ ಕಲಿತಿದ್ದನ್ನು ವಾಸ್ತವತೆಗೆ ತೆರೆದುಕೊಂಡು ಅಭ್ಯಾಸ ಮಾಡಿದರೆ ಇಂತಹ ಕೌಶಲ ಸಿದ್ಧಿಸುತ್ತದೆ.

ಮಾಡಿ ತಿಳಿ: ನೋಡಿ ಕಲಿತಿದ್ದನ್ನು ಮಾಡಿ ತಿಳಿಯಬೇಕು. ಏಕಾಗ್ರತೆ ಅಥವಾ ಕಲಿಕಾ ವಿಷಯದಲ್ಲಿ ತಲ್ಲೀನರಾಗಬೇಕಾದರೆ ಅಧ್ಯಯನದಲ್ಲಿ ಕಲಿತ ವಿಷಯವನ್ನು ಅಥವಾ ನೋಡಿ ಕಲಿತಿದ್ದನ್ನು ಅಭ್ಯಾಸ ಮಾಡಿ ಪ್ರಯೋಗಕ್ಕೆ ಇಳಿಸಬೇಕು. ಉದಾಹರಣೆಗೆ ಸಾಫ್ಟ್‌ವೇರ್‌ ಮೂಲಕ ಸಮಸ್ಯೆ ಬಗೆಹರಿಸುವುದನ್ನು ಕಲಿತಿರಬಹುದು. ಆದರೆ ಅದನ್ನು ನಿಜವಾದ ಕೆಲಸದ ವಾತಾವರಣಕ್ಕೆ ಅನ್ವಯಿಸಬೇಕು. ಪಠ್ಯದಲ್ಲಿ ಅಧ್ಯಯನದ ವಿಷಯದ ಜೊತೆಗೆ ವರ್ಚುವಲ್‌ ತರಗತಿ ಮಾದರಿಯನ್ನು ಅಳವಡಿಸಿದರೆ ಇಂತಹ ಕೌಶಲವನ್ನು ಕಲಿಯಬಹುದು. ಹಾಗೆಯೇ ಪ್ರಯೋಗಾಲಯದಲ್ಲಿ ಕಲಿತಿದ್ದರ ಜೊತೆಗೆ ಇತರ ಕೌಶಲಗಳನ್ನು ಸೇರಿಸಿದರೆ ಹೊಸ ಅನುಭವ ಪಡೆದು ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬಹುದು.

ಆಂತರಿಕ ಚಟುವಟಿಕೆ: ತಾಂತ್ರಿಕ ಕೌಶಲದ ಕುರಿತು ಕಲಿಕಾರ್ಥಿಯು ತಕ್ಷಣದ ಪ್ರತಿಕ್ರಿಯೆ ನೀಡಬೇಕಾದರೆ ಪರಸ್ಪರ ಪೂರಕ ಚಟುವಟಿಕೆಗಳಲ್ಲಿ ನುರಿತಿರಬೇಕು. ಅಂದರೆ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವ ಕೌಶಲ ಕಲಿತಿದ್ದರೆ ಮಾತ್ರ ಅದರ ಕುರಿತು, ಅದರಲ್ಲಿ ಅಡಗಿರುವ ಟೂಲ್‌ಗಳ ಬಗ್ಗೆ ಮಾತನಾಡಲು ಸಾಧ್ಯ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ವಿದ್ಯಾರ್ಥಿಯ ನೆರವಿಗೆ ಬರುತ್ತದೆ. ನಿಜವಾದ ಕಾರ್ಯಕ್ಷೇತ್ರದಲ್ಲಿ ಯಾವೆಲ್ಲ ಸಮಸ್ಯೆಗಳನ್ನು ಎದುರಿಸಬೇಕು ಎಂಬಂತಹ ವಾತಾವರಣವನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಬಹುದು. ಆಗ ವಿದ್ಯಾರ್ಥಿಗೆ ಅದರ ಒಳಹೊರಗು ಅರ್ಥವಾಗುತ್ತದೆ.

ವಿದ್ಯಾರ್ಥಿ ತಾನು ಕಲಿತಿರುವುದನ್ನು ಪದೇ ಪದೇ ಪುನರಾವರ್ತಿಸಬೇಕಾಗುತ್ತದೆ. ಇದರಿಂದ ಆ ವಿಷಯದಲ್ಲಿ ಪ್ರಾವೀಣ್ಯತೆ ಸಾಧಿಸಬಹುದು; ಅದನ್ನು ಪರಿಣಾಮಕಾರಿಯಾಗಿ ಬಳಸಬಹುದು. ಇದಕ್ಕಾಗಿ ಅಂದರೆ ಹೆಚ್ಚು ಪರಿಣಾಮಕಾರಿ ಕಲಿಕೆಗೆ ಅಲ್ಪಾವಧಿ ಕೋರ್ಸ್‌ಗಳ ಮೊರೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT