ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಿಸಂ ಮಕ್ಕಳ ಶಿಕ್ಷಣಕ್ಕೆ ‘ಪ್ರೀತಿಯೇ ಜೀವಾಳ’

Published 12 ನವೆಂಬರ್ 2023, 22:46 IST
Last Updated 12 ನವೆಂಬರ್ 2023, 22:46 IST
ಅಕ್ಷರ ಗಾತ್ರ

ಆಟಿಸಂ ಲಕ್ಷಣ ಹೊಂದಿರುವ ಮಕ್ಕಳ ಪೋಷಕರು ಒತ್ತಡಕ್ಕೊಳಗಾಗಬಾರದು. ಕಲಿಸುವ ಶಿಕ್ಷಕರು ಸೇವಾ ಮನೋಭಾವದೊಟ್ಟಿಗೆ ಪ್ರೀತಿಯ ಹೊಳೆಯನ್ನೇ ಹರಿಸಿದಾಗ, ಮಗು ಸ್ವಾವಲಂಬಿಯಾಗುವತ್ತ ದಿಟ್ಟ ಹೆಜ್ಜೆಯಿಡಲಿದೆ

ಯಾರೊಂದಿಗೂ ಬೆರೆಯಲು ಇಷ್ಟಪಡದ, ಸಮಾಜದೊಂದಿಗೆ ಸಂವಾದಿಸಲು ಹಿಂದೇಟು ಹಾಕುವ, ಎಲ್ಲದಕ್ಕೂ ಪೋಷಕರನ್ನೇ ಅವಲಂಬಿಸುವ ಆಟಿಸಂ (ಸ್ವಲೀನ) ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವುದು ಇಂದಿಗೂ ಹರಸಾಹಸದ ಕೆಲಸ.

ಶೈಶವದಿಂದಲೇ ಆಟಿಸಂಗೀಡಾಗುವ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸಲು ಚಿಕಿತ್ಸೆಯ ಜೊತೆಗೆ ಕಲಿಕೆಯೂ ಅತ್ಯಗತ್ಯ. ತುಸು ದುಬಾರಿಯಾಗಿಯೇ ಇರುವ ಈ ಎರಡೂ ಇಂಥವರಿಗೆ ಅವಶ್ಯ. ಜೊತೆಗೆ ಸಾಕಷ್ಟು ಸಮಯ, ಸಂಯಮ, ಅಪಾರ ಪ್ರೀತಿಯೂ ಇದರೊಳಗಿರಬೇಕು.

ಹುಟ್ಟಿನಿಂದಲೇ ಕೆಲವು ಮಕ್ಕಳಿಗೆ ಆಟಿಸಂ ಬಾಧಿಸುವುದುಂಟು. ಎರಡು ವರ್ಷದೊಳಗೆ ಆಯಾ ಕುಟುಂಬದವರು ಇದನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ತಜ್ಞ ವೈದ್ಯರನ್ನು ಮೂರ್ನಾಲ್ಕು ಬಾರಿ ಭೇಟಿಯಾಗಿ ಸಮಾಲೋಚಿಸಿದರೆ, ಅಂತಹ ಮಗುವಿಗೆ ಅತ್ಯಗತ್ಯವಾಗಿ ಬೇಕಿರುವ ಚಿಕಿತ್ಸೆ ಹಾಗೂ ಶಿಕ್ಷಣ ಕೊಡಿಸಲು ಸಹಕಾರಿ ಆಗಲಿದೆ. ಜೊತೆಗೆ ಮಗುವಿನ ಸಕಾಲಿಕ ಬೆಳವಣಿಗೆಗೂ ಪೂರಕ.

ಪ್ರತಿ ಮಗುವಿಗೂ ಕಲಿಕೆಯನ್ನು ಆರಂಭಿಸುವಂತೆಯೇ ಆಟಿಸಂಗೀಡಾದ ಮಕ್ಕಳಿಗೂ ಎರಡೂವರೆ, ಮೂರು ವರ್ಷದಿಂದಲೇ ಶಿಕ್ಷಣ ನೀಡಲಾಗುತ್ತಿದೆ. ಕಲಿಕೆ ಆರಂಭಿಸುವುದಕ್ಕೂ ಮುನ್ನ ಕೆಲವೊಂದು ಪರೀಕ್ಷೆ, ಮೌಲ್ಯಮಾಪನ ಕಡ್ಡಾಯ. ನರ ಹಾಗೂ ಮಕ್ಕಳ ತಜ್ಞ ವೈದ್ಯರು ಹಾಗೂ ವಿಶೇಷ ಶಾಲೆಗಳಲ್ಲಿನ ಅನುಭವಿ ಶಿಕ್ಷಕರೇ ಮಾಡಬೇಕಾದ ಮೊದಲ ಕೆಲಸವಿದು.

ಮಗುವೊಂದು ಆಟಿಸಂನ ಯಾವ ರೀತಿಯ ಲಕ್ಷಣದಿಂದ ಬಳಲುತ್ತಿದೆ. ಅದರ ಪ್ರಮಾಣ ತುಸು ಇದೆಯೋ? ಪರಿಹರಿ ಸಬಹುದೋ? ಗಂಭೀರವಾಗಿದೆಯೋ? ಎಂಬುದನ್ನು ನಿರ್ಧರಿಸಿ ಚಿಕಿತ್ಸೆ ಮತ್ತು ಕಲಿಕೆಯನ್ನು ಏಕಕಾಲಕ್ಕೆ ಆರಂಭಿಸಬೇಕಿದೆ. ಈಚೆಗೆ ಯೋಗ ಹಾಗೂ ಆಯುರ್ವೇದವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಪ್ರಯತ್ನ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ (ಬೆಟ್ಟದಾಸನಪುರ ಮುಖ್ಯ ರಸ್ತೆ) ಸರ್ವಂ ಶಾಲೆಯಲ್ಲಿ ನಡೆದಿದೆ. ಯಶಸ್ಸೂ ಸಿಕ್ಕಿದೆ. 

ಆಟಿಸಂ ಕುರಿತಂತೆ

ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ. ಇದು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆ. ಮೆದುಳಿನ ಸಾಮಾನ್ಯ ಬೆಳವಣಿಗೆಯನ್ನು ಕುಂಠಿತಗೊಳಿಸಿ ಮಗುವಿನ ಸಂವಹನ, ಸಾಮಾಜಿಕ ಒಡನಾಟ, ಗ್ರಹಿಕೆ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುತ್ತದೆ. ಬುದ್ಧಿಮಾಂದ್ಯತೆ, ಅತಿ ಕ್ರಿಯಾಶೀಲತೆ, ಚಲನವಲನದಲ್ಲಿನ ಅಡೆತಡೆಗಳು, ಮೂರ್ಛೆ ಹೊಂದುವುದು, ಕಲಿಯುವ ತೊಂದರೆ, ಶ್ರವಣ ಅಥವಾ ದೃಷ್ಟಿದೋಷ ಸೇರಿದಂತೆ ಇನ್ನಿತರ ಸಮಸ್ಯೆಗಳು ಆಟಿಸಂನೊಂದಿಗೆ ಕಾಣಿಸಿಕೊಳ್ಳಬಹುದು. ಅರ್ಥಪೂರ್ಣವಾಗಿ ಮಾತನಾಡಲು, ಭಾವನೆ ಹೇಳಿಕೊಳ್ಳಲು, ಸಂವಹನ ನಡೆಸಲು ಕಷ್ಟಪಡುವುದು. ಕೆಲವೊಂದು ಪದಗಳ ಪುನರುಚ್ಚಾರ, ಹಾವಭಾವಗಳಲ್ಲಿ ಪುನರಾವರ್ತನೆ. ಮಾತನಾಡುವಾಗ ಸಂಜ್ಞೆ ಬಳಸುವಿಕೆ, ಎದುರಿರುವವರ ಮಾತಿಗೆ ಸ್ಪಂದಿಸದಿರುವುದು,  ಮಾರ್ಗದರ್ಶನ, ಸೂಚನೆ ಪಾಲಿಸಲು ಸಾಧ್ಯವಾಗದಿರುವುದು. ಬದಲಾವಣೆಗೆ ಒಗ್ಗಿಕೊಳ್ಳದಿರುವುದು, ಸಮಾಜದೊಂದಿಗೆ ಒಡನಾಟವಿಟ್ಟುಕೊಳ್ಳದೇ ಏಕಾಂಗಿಯಾಗಿರಲು ಬಯಸುವುದು. ಸ್ವಭಾವದಲ್ಲಿ ಆಕ್ರಮಣಶೀಲತೆ ಮತ್ತು ಉದ್ವೇಗತೆ, ಆಹಾರ ಸೇವನೆಯಲ್ಲೂ ಸಮಸ್ಯೆ, ಅನೈಚ್ಛಿಕ ಮೂತ್ರಸ್ರಾವವೂ.. ಆಟಿಸಂನ ಲಕ್ಷಣವಾಗಿದೆ.

ಸೇವಾ ಮನೋಭಾವ

ತುಸು ಹಾಗೂ ಪರಿಹರಿಸಬಹುದು ಎಂಬಂತಹ ಆಟಿಸಂ ಲಕ್ಷಣಗಳುಳ್ಳ ಮಕ್ಕಳಿಗೆ ವಿಶೇಷ ಶಾಲೆಗಳಲ್ಲೂ ‌ಸಾಮಾನ್ಯ ಶಿಕ್ಷಕರೇ ನರ್ಸರಿ ಹಂತದಲ್ಲಿ ಕಲಿಸುತ್ತಾರೆ. ಹೆಚ್ಚಿನ ಕಾಳಜಿ ವಹಿಸಿ ವಿವಿಧ ಚಟುವಟಿಕೆಗಳಲ್ಲಿ ತಲ್ಲೀನರನ್ನಾಗಿಸುತ್ತಾರೆ. ಮಗು ವೊಂದು ಯಾವ ಸಮಸ್ಯೆಯಿಂದ ಬಳಲುತ್ತಿರುತ್ತದೆಯೋ; ಅದನ್ನು ಪರಿಹರಿಸಲಿಕ್ಕಾಗಿ ವಿವಿಧ ಚಿಕಿತ್ಸೆಯೊಟ್ಟಿಗೆ ಕಲಿಕೆಯ ಮೂಲಕವೂ ಯತ್ನಿಸುತ್ತಾರೆ.   ಈ ಹಂತದಲ್ಲೇ ಕೆಲವೊಂದು ಮಕ್ಕಳು ಸ್ವಾವಲಂಬಿಗಳಾಗುತ್ತವೆ. ಮುಂದಿನ ಕಲಿಕೆಗೆ ಕುತೂಹಲಿಗಳಾಗುತ್ತವೆ.

ಪ್ರಾಥಮಿಕ ಹಂತದಲ್ಲಿ ಸಾಮಾನ್ಯ ಮಗು ಹಾಗೂ ವಿಶೇಷ ಮಗುವಿಗೂ ಬೋಧಿಸುವ ಸಾಮರ್ಥ್ಯ ಹೊಂದಿರುವ ಶಿಕ್ಷಕರು ಕಲಿಸುತ್ತಾರೆ. ಈ ಹಂತದಲ್ಲಿ ಮಗುವಿನ ಸ್ಪಂದನೆ ಉತ್ತಮವಾಗಿದ್ದು, ಕಲಿಕೆಯು ಆಸಕ್ತಿಯಿಂದ ಇದ್ದರೆ, ಅದು ಸಮಾಜದೊಟ್ಟಿಗೆ ಒಡನಾಡಲು ಶುರು ಮಾಡುತ್ತದೆ. ತನ್ನ ಭವಿಷ್ಯ ರೂಪಿಸಿಕೊಳ್ಳಲು ಮುಂದಡಿಯಿಡಲಿದೆ ಎನ್ನುತ್ತಾರೆ ಆಟಿಸಂ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ ಮಹರ್ಷಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿರುವ ಹಾಗೂ ಸ್ವಲೀನ ಮಕ್ಕಳಿಗೆ ಯೋಗ ಕಲಿಸಿಕೊಡುವ ಯೋಗಾಚಾರ್ಯ ಮಹೇಶ್ ನಟರಾಜನ್.

ಶ್ಯಾಡೋ ಟೀಚರ್

ಗಂಭೀರ ಲಕ್ಷಣ ಇರುವ ಮಕ್ಕಳಿಗೆ ಕಲಿಸುವುದೇ ಸವಾಲಿನದ್ದು. ಇಂತಹ ಮಕ್ಕಳಿಗೆ ಸಕಲವನ್ನೂ ಹೇಳಿಕೊಡಬೇಕಿದೆ. ಅಕ್ಷರ ಕಲಿಸುವುದಕ್ಕೂ ಮುನ್ನವೇ ಸ್ವಭಾವ, ನಡವಳಿಕೆ, ಸ್ಪಂದನೆ, ಭಾವನೆ, ಮಾತು.. ಕಲಿಸಬೇಕು. ಇದು ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರ ಸಾರಥ್ಯದಲ್ಲೇ ನಡೆಯಬೇಕು. ಈ ಶಿಕ್ಷಕರಿಗೆ ಶ್ಯಾಡೋ ಶಿಕ್ಷಕರ (ಛಾಯಾ ಶಿಕ್ಷಕರ) ಸಾಥ್ ಬೇಕಿದೆ. ಈ ಮಕ್ಕಳು ಸ್ಪಂದಿಸುವುದೇ ಇಲ್ಲ. ಯಾವೊಂದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಇಂತಹ ಪ್ರತಿ ಮಗುವಿಗೆ ಒಬ್ಬ ಶ್ಯಾಡೋ ಟೀಚರ್‌ನ ಅವಶ್ಯಕತೆಯಿದೆ. ವಿಶೇಷ ಶಿಕ್ಷಕರು ಹೇಳುವುದನ್ನು ಛಾಯಾ ಶಿಕ್ಷಕ ಮಗುವಿನ ಜೊತೆಗಿದ್ದು ಅಭ್ಯಾಸ ಮಾಡಿಸಬೇಕು. ಸ್ಪಂದನೆ ಸಿಗುವ ತನಕವೂ ಈ ಅಭ್ಯಾಸ ನಿರಂತರವಾಗಿರಬೇಕು. ಇದಕ್ಕೆ ಸಾಕಷ್ಟು ಸಮಯ ಬೇಕಿದೆ. ಸ್ವಲೀನ ಮಗುವೊಂದು ಸ್ವಾವಲಂಬಿಯಾಗಲು ಇದು ಅವಶ್ಯವೂ ಆಗಿದೆ. ಇಲ್ಲಿ ಮಗುವನ್ನು ಸ್ವಾವಲಂಬಿಯನ್ನಾಗಿಸುವುದೇ ಪ್ರಮುಖ ಧ್ಯೇಯೋದ್ದೇಶ. ನಂತರವಷ್ಟೇ ಆಟೋಟ, ಹಾಡು–ನೃತ್ಯ, ಅಕ್ಷರ ಕಲಿಕೆ ಎನ್ನುತ್ತಾರೆ ಆಟಿಸಂ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸರ್ವಂ ಶಾಲೆಯ ಸಂಸ್ಥಾಪಕಿ ಎಂ.ಸ್ವಾತಿ.

ಯೋಗ–ಆಯುರ್ವೇದ

‘ಮಗುವೊಂದು ನಮ್ಮ ಶಾಲೆ ಪ್ರವೇಶಿಸುತ್ತಿದ್ದಂತೆ ವೈದ್ಯರ ವರದಿಯನ್ನು ಅಧ್ಯಯನ ಮಾಡುತ್ತೇವೆ. ಯಾವ ಲಕ್ಷಣಗಳನ್ನು ಹೊಂದಿದೆ ಎಂಬುದನ್ನು ಕೂಲಂಕಷವಾಗಿ ಅರಿಯುತ್ತೇವೆ. ನಂತರ ಯೋಗಾಚಾರ್ಯರು ಪೋಷಕರೊಂದಿಗೆ ಸಮಾಲೋಚಿಸುತ್ತಾರೆ. ಮಗುವಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಯಾವ ಯೋಗಾಸನದಿಂದ ಪ್ರಯೋಜನವಾಗಲಿದೆ. ಆಯುರ್ವೇದ ಪದ್ಧತಿಯಂತೆ ಯಾವ ಚಿಕಿತ್ಸೆ ಕೊಡಬೇಕು ಎಂಬುದನ್ನು ನಿರ್ಧರಿಸಿ ಅದರಂತೆ ವೇಳಾಪಟ್ಟಿ ನಿಗದಿಯಾಗಲಿದೆ’ ಎನ್ನುತ್ತಾರೆ ಸ್ವಾತಿ.

‘ಆಟಿಸಂಗೂ ನರಮಂಡಲಕ್ಕೂ ನೇರ ಸಂಬಂಧವಿದೆ. ಮೆದುಳಿನಲ್ಲಿನ ನರತಂತುಗಳು ಸಂದೇಶ ರವಾನಿಸಿದಾಗ; ದೇಹವು ಅದನ್ನು ಸ್ವೀಕರಿಸಿ ಕಾರ್ಯಗತಗೊಳಿಸಲು ಅವಶ್ಯವಿರುವ ಕೆಲವು ಸಂಪರ್ಕ ತಪ್ಪಿರುತ್ತದೆ. ಇದೇ ಸಮಸ್ಯೆಯಾಗಿ ಕಾಡುತ್ತದೆ. ಇದನ್ನು ಪತ್ತೆ ಹಚ್ಚಿ, ಸೂಕ್ತವಾದ ಸರಳ ಯೋಗಾಸನವನ್ನು ಮಗುವಿಗೆ ಕಲಿಸುತ್ತೇವೆ. ನಿತ್ಯವೂ 45 ನಿಮಿಷ ಯೋಗಾಸನಕ್ಕೆ ಮೀಸಲು. ಇದು ಪರಿಣಾಮಕಾರಿಯಾಗಿ ಮಗುವಿನ ದೇಹವನ್ನು ಹುರಿಗೊಳಿಸಿ, ಚಲನಶೀಲಗೊಳಿಸಲಿದೆ’ ಎಂದು ಯೋಗಾಚಾರ್ಯ ಮಹೇಶ್ ತಿಳಿಸಿದರು.

‘ಕೆಲವೊಂದು ಮಕ್ಕಳಿಗೆ ಆಹಾರದ್ದೇ ಸಮಸ್ಯೆ. ಜೀರ್ಣವಾಗಲ್ಲ. ಹಸಿವಾಗಲ್ಲ. ಇಂತಹವರಿಗೆ ಆಯುರ್ವೇದ ಚಿಕಿತ್ಸೆ ನೀಡಲಾಗುವುದು. ಡಯಟ್‌ ಪ್ಲ್ಯಾನ್‌, ನ್ಯೂಟ್ರಿಷಿಯನ್‌ ಪ್ಲ್ಯಾನ್‌ ಅನುಷ್ಠಾನಗೊಳಿಸಲಾಗುವುದು. ಕಷಾಯ, ಚೂರ್ಣ ತಿನ್ನಿಸಲಾಗುವುದು. ಪಂಚಕರ್ಮ ಚಿಕಿತ್ಸೆಯನ್ನು ನೀಡುತ್ತೇವೆ. ಹೊರಗೆ ದುಬಾರಿಯಾಗುವುದರಿಂದ ಪೋಷಕರಿಗೆ ನಾವೇ ತರಬೇತಿ ನೀಡುತ್ತೇವೆ. ಯೋಗವನ್ನು ಕಲಿಸಿಕೊಟ್ಟು ನಿತ್ಯವೂ ಮನೆಯಲ್ಲೇ ಮಾಡಿಸುವಂತೆ ಹೇಳುತ್ತೇವೆ’ ಎಂದು ಅವರು ಹೇಳಿದರು.

ಆಟಿಸಂಗೊಳಗಾದ ಮಕ್ಕಳ ಪೋಷಕರಿಗೂ ಯೋಗ ಕಲಿಕೆ

ಆಟಿಸಂಗೊಳಗಾದ ಮಕ್ಕಳ ಪೋಷಕರಿಗೂ ಯೋಗ ಕಲಿಕೆ


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT