ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆರೆದ ಪುಸ್ತಕ ಪರೀಕ್ಷೆಯ ಸವಾಲುಗಳೇನು?

ಬೇದ್ರೆ ಮಂಜುನಾಥ, ಮೈಸೂರು
Published 30 ಜೂನ್ 2024, 23:39 IST
Last Updated 30 ಜೂನ್ 2024, 23:39 IST
ಅಕ್ಷರ ಗಾತ್ರ

ಭಾರತೀಯ ಶಿಕ್ಷಕರಿಗೆ ಇದು ಬಹುದೊಡ್ಡ ಸವಾಲು.  ಪಠ್ಯಪುಸ್ತಕದಲ್ಲಿರುವ  ಪರಿಕಲ್ಪನೆಗಳು ಮತ್ತು ಮೂಲಾಂಶಗಳು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುವುದರ ಜೊತೆಗೆ ಪ್ರಯೋಗಗಳನ್ನು ಒಳಗೊಂಡಂತೆ ವಿಶೇಷವಾದ ಮೌಲ್ಯಾಂಕನ ವಿಧಾನ ರೂಪಿಸುವುದು ಹಳೆಯ ಪದ್ಧತಿಗೆ ಒಗ್ಗಿಕೊಂಡ ಶಿಕ್ಷಕರಿಗೆ ಕಷ್ಟವಾದ ಕೆಲಸ. 

ಸುಮ್ಮನೇ ಮನಬಂದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಯತ್ನಿಸುವಂತಿಲ್ಲ.  ಪ್ರಶ್ನೆಗಳಿಗೆ ಪಠ್ಯಪುಸ್ತಕದಲ್ಲಿ ಮುದ್ರಿತವಾಗಿರುವ ವಾಕ್ಯಗಳನ್ನು ಯಾಥಾ ನಕಲು ಮಾಡುವಂತಿಲ್ಲ!

ವಿದ್ಯಾರ್ಥಿಗಳು ಹೊಸತನ್ನು ಕಲಿಯುವಂತೆ ಪ್ರೇರೇಪಣೆ ನೀಡುವಲ್ಲಿ ಈ ವಿಧಾನ ಸಫಲವಾಗುವುದಿಲ್ಲ.  ಹೇಗೂ ಪಠ್ಯಪುಸ್ತಕ  ಇಲ್ಲವೇ ಅಧ್ಯಯನ ಸಾಮಗ್ರಿಯನ್ನು ನೋಡಿಕೊಂಡು ಉತ್ತರಿಸಲು ಅವಕಾಶವಿರುವುದರಿಂದ ಪಠ್ಯವಿಷಯವನ್ನು ಓದಿ, ಅರ್ಥಮಾಡಿಕೊಂಡು, ಜ್ಞಾಪಕದಲ್ಲಿ ಇಟ್ಟುಕೊಂಡು, ಉತ್ತರಿಸುವ ಅಂತಃಪ್ರೇರಣೆಯು ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಇಲ್ಲವಾಗುತ್ತದೆ.

ಯಾವ ಪ್ರಶ್ನೆಗೆ ಎಲ್ಲಿ ಉತ್ತರ ಇದೆ ಎಂದು ಪಠ್ಯಪುಸ್ತಕವನ್ನು ತಡಕಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅರೆಬರೆ ಉತ್ತರಗಳನ್ನು ನೀಡುವ ಮತ್ತು ನಿಗದಿತ ಸಮಯದೊಳಗೆ ಸೂಕ್ತ ಉತ್ತರ ಹುಡುಕಲು ಸೋಲುವ ಸಾಧ್ಯತೆಗಳಿರುವುದರಿಂದ ಸಮಯ ನಿರ್ವಹಣೆ ಸವಾಲು ಎದುರಾಗುತ್ತದೆ. 

ಈ ವಿಧಾನದಲ್ಲಿ ವಿದ್ಯಾರ್ಥಿಗಳಲ್ಲಿ ಅಸಮಾನತೆ ಹೆಚ್ಚುವ ಸಾದ್ಯತೆಗಳಿವೆ.  ಪಠ್ಯಪುಸ್ತಕ ಅಥವಾ ಅತ್ಯುತ್ತಮ ಅಧ್ಯಯನ ಸಾಮಗ್ರಿ ಎಲ್ಲರಿಗೂ ಲಭ್ಯವಾಗದಿರುವ ಸಾಧ್ಯತೆಗಳು ಮತ್ತು ಹಣಕೊಟ್ಟು ಉತ್ತಮ ಸಾಮಗ್ರಿ ಕೊಂಡುಕೊಳ್ಳುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗಿಂತ ಹೆಚ್ಚು ಅಂಕಗಳಿಸುವ ಸಾಧ್ಯತೆಗಳು ಇರುವುದರಿಂದ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.  ವಿದ್ಯಾರ್ಥಿಗಳು ಪುಸ್ತಕಗಳಿಂದ ಇಲ್ಲವೇ ಅನಧೀಕೃತ ಪಠ್ಯಪೂರಕ ಸಾಮಗ್ರಿಯಿಂದ ವಾಕ್ಯಗಳನ್ನು ಯಥಾವತ್ತಾಗಿ ಬಳಸುವುದರಿಂದ ಕೃತಿಚೌರ್ಯದ ಸಾಧ್ಯತೆ ಹೆಚ್ಚಿದೆ.

ಇದರಿಂದಾಗಿ ಸಾಗಾಣಿಕೆಯ ಸಮಸ್ಯೆ ಕೂಡಾ ಉಂಟಾಗಬಹುದು. ತೆರೆದ ಪುಸ್ತಕ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಪಠ್ಯಪುಸ್ತಕದೊಂದಿಗೆ ಹೆಚ್ಚಿನ ಅಧ್ಯಯನ ಸಾಮಗ್ರಿಯನ್ನು ಪರೀಕ್ಷಾ ಕೇಂದ್ರಕ್ಕೆ ತರುವ ಅವಶ್ಯಕತೆ ಹೆಚ್ಚಾಗಲಿದ್ದು ಅವುಗಳನ್ನು ಸಾಗಿಸುವುದು ತಲೆನೋವಿನ ಸಂಗತಿಯಾಗಬಹುದು.


ಸಮಸ್ಯೆಗಳಿಗೆ ಪರಿಹಾರ ಏನು?

ಪ್ರೊ. ಯಶ್‌ಪಾಲ್ ಸಮಿತಿಯ ವರದಿಯಲ್ಲಿ ಸೂಚಿಸಲಾಗಿರುವ ಒತ್ತಡ ರಹಿತ ಕಲಿಕೆ ಅಥವಾ ಸಂತಸ ಕಲಿಕೆಯನ್ನು ಪ್ರೋತ್ಸಾಹಿಸಲು ತೆರೆದ ಪುಸ್ತಕ ಮೌಲ್ಯಾಂಕನವನ್ನು ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. 

ಪಾಶ್ಚಾತ್ಯ ದೇಶಗಳಲ್ಲಿನ ಕಲಿಕಾ ಮಟ್ಟವನ್ನು ಭಾರತೀಯ ವಿದ್ಯಾರ್ಥಿಗಳೂ ಮುಟ್ಟಬೇಕು ಎಂಬ ಹುಮ್ಮಸ್ಸಿನಲ್ಲಿ ವಿವಿಧ ರೀತಿಯ ಕಠಿಣತಮ ಪರೀಕ್ಷೆಗಳನ್ನು ನಡೆಸುವುದನ್ನು ನಿಲ್ಲಿಸಿ ಕಲಿಕೆಯತ್ತ ಮುಖಮಾಡಲು ಇದರಿಂದ ಅನುಕೂಲವಾಗುತ್ತದೆ.
ಕಲಿಕೆಯಲ್ಲಿ ವಿಮರ್ಶಾತ್ಮಕ ವಿಧಾನವನ್ನು ಅಳವಡಿಸುವುದು, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಕಲಿಕೆಯನ್ನು ಆಪ್ತವಾಗಿಸಬೇಕು ಮತ್ತು ಕೇವಲ ಪಠ್ಯಕ್ರಮವನ್ನು ಪೂರ್ತಿಗೊಳಿಸಿ ಪರೀಕ್ಷೆಗೆ ಸಿದ್ಧಗೊಳಿಸುವುದನ್ನು ಕೈಬಿಡಬೇಕು ಎಂಬುದು ಇದರ ಸಾರಾಂಶವಾಗಿದೆ.

ತೆರೆದ ಪುಸ್ತಕ ಮೌಲ್ಯಾಂಕನದ ಗರಿಷ್ಟ ಪ್ರಯೋಜನ ಪಡೆದುಕೊಳ್ಳಲು ಪಠ್ಯಕ್ರಮದಲ್ಲಿರುವ ಪರಿಕಲ್ಪನೆಗಳನ್ನ ಅರ್ಥಮಾಡಿಕೊಳ್ಳುವಂತೆ ಮತ್ತು ಸೂಕ್ತ ಸಮಯದಲ್ಲಿ ಅದನ್ನು ಹುಡುಕಿ ಸ್ವಂತ ವಾಕ್ಯಗಳಲ್ಲಿ ಉತ್ತರಿಸುವಂತೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಬೇಕು.  ಅಂಕಗಳಿಕೆಯ ಜೊತೆಗೆ ಸಂತಸ ಕಲಿಕೆಗೆ ಆದ್ಯತೆ ನೀಡಬೇಕು. ಸಾಂಪ್ರದಾಯಿಕ ಚಾಕ್ ಅಂಡ್ ಟಾಕ್ ವಿಧಾನವನ್ನು ಬದಿಗಿರಿಸಿ, ಗಿಳಿಪಾಠದ ಗೀಳನ್ನು ತೊರೆದು, ಹೊಸ ರೀತಿಯಲ್ಲಿ ಪಠ್ಯಕ್ರಮದಲ್ಲಿನ ಪರಿಕಲ್ಪನೆಗಳನ್ನು ವಿವರಿಸಿ, ಅದಕ್ಕೆ ಸೂಕ್ತವಾದ ಪ್ರಶ್ನೆಗಳನ್ನು, ಪ್ರಯೋಗಗಳನ್ನು ರೂಪಿಸುವಂತೆ ಶಿಕ್ಷಕರನ್ನು ತರಬೇತುಗೊಳಿಸಬೇಕು.

ಬಹುಶಃ ತೆರೆದ ಪುಸ್ತಕ ಮೌಲ್ಯಾಂಕನ ಎಂದರೆ ‘ಕಾಪಿ ಹೊಡೆಯುವುದು’, ‘ನೋಡಿಕೊಂಡು ಬರೆದು ಪಾಸುಮಾಡುವುದು’, ಎಂಬ ಉಡಾಫೆಯನ್ನು ತೊರೆದು ಕಲಿಕೆಯ ಗುಣಮಟ್ಟವನ್ನು ಖಾತ್ರಿಮಾಡಿಕೊಳ್ಳಲು ಇರುವ ನೂತನ ವಿಧಾನ ಎಂದು ಪರಿಗಣಿಸಿ, ಪಾಠಗಳಿಗೆ ಜೀವ ತುಂಬುವ ‘ಶಿಕ್ಷಕರು’ ಭವಿಷ್ಯದ ಸಾಧಕರನ್ನು ಸೃಷ್ಟಿಸಬಲ್ಲರು, ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT