ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಹೊರೆ ವಿದೇಶಾಂಗ ನೀತಿಯಲ್ಲೂ ಭಾರತದೊಂದಿಗೆ ಚೀನಾ ಪ್ರತಿಸ್ಪರ್ಧೆ!

Published 10 ಏಪ್ರಿಲ್ 2024, 21:36 IST
Last Updated 10 ಏಪ್ರಿಲ್ 2024, 21:36 IST
ಅಕ್ಷರ ಗಾತ್ರ

ಭಾರತಕ್ಕೆ ಮಗ್ಗಲು ಮುಳ್ಳಾಗಿರುವ ಚೀನಾ ಕೆಲವೊಮ್ಮೆ ದುರುದ್ದೇಶಪೂರಿತವಾಗಿ ಮತ್ತೊಮ್ಮೆ ದಕ್ಷಿಣ ಏಷ್ಯಾದಲ್ಲಿ ತನ್ನದೇ ‘ಪಾರಮ್ಯ’ ಇದೆ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ನೆರೆಹೊರೆ ವಿದೇಶಾಂಗ ನೀತಿಯಲ್ಲೂ ಪ್ರತಿಸ್ಪರ್ಧೆಗೆ ಇಳಿಯುತ್ತಿದೆ. ಈಚೆಗೆ ಚೀನಾ ಭಾರತದ ರಾಜ್ಯ ಅರುಣಾಚಲಪ್ರದೇಶ ತನಗೇ ಸೇರಿದ್ದು ಎಂದು ಹೇಳಿ, 30ಕ್ಕೂ ಹೆಚ್ಚು ಪ್ರದೇಶಗಳಿಗೆ ಚೀನಿ ಹೆಸರು ಇಡುವ ಮೂಲಕ ಉದ್ಧಟತನ ಮೆರೆದು ಮತ್ತೊಮ್ಮೆ ಭಾರತದ ಅಸ್ಮಿತೆಗೆ ಧಕ್ಕೆಯನ್ನುಂಟು ಮಾಡಿದೆ.

ಕೇವಲ ಅರುಣಾಚಲಪ್ರದೇಶ ವಿವಾದ ಮಾತ್ರವಲ್ಲ, ಇನ್ನೂ ಹಲವು ವಿಷಯಗಳಲ್ಲಿ ಚೀನಾ ಭಾರತದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ತನ್ನ ಅಭಿಪ್ರಾಯವೇ ಸರಿ ಎಂದು ವಾದಿಸುತ್ತ ಭಾರತದ ಮೇಲೂ ಆ ಅಭಿಪ್ರಾಯಗಳನ್ನು ಹೇರುವ ಪ್ರಯತ್ನವನ್ನು ಚೀನಾ ನಿರಂತರವಾಗಿ ಮಾಡುತ್ತ ಬಂದಿದೆ. LAC ಗೆ (ವಾಸ್ತವಿಕ ನಿಯಂತ್ರಣ ರೇಖೆ) ಸಂಬಂಧಿಸಿದ ಗಡಿ ವಿವಾದ, ಗಾಲ್ವನ್‌ ಕಣಿವೆ ಸಂಘರ್ಷ, ಬುಮ್‌ಲಾ ಪಾಸ್‌ ಸಂಘರ್ಷ, ಪ್ಯಾಂಗಾಂಗ್‌ ಸಂಘರ್ಷ, ಭಾರತದ ನೆಲದಲ್ಲಿ ಹಳ್ಳಿಗಳು, ರಸ್ತೆ–ಹೆದ್ದಾರಿಗಳ ನಿರ್ಮಾಣ, ‘ಅಕ್ಸಾಯ್ ಚಿನ್’ ವಿವಾದ, ಬಫರ್‌ ಝೋನ್‌ ವಿವಾದ, ಒನ್‌ ಚೀನಾ ನಿರ್ಮಾಣದ ಹೇಳಿಕೆ ವಿವಾದ.. ಹೀಗೆ ಹಲವು ವಿಷಯಗಳಲ್ಲಿ ಚೀನಾ ಭಾರತವನ್ನು ಗುರಿಯಾಗಿಸುತ್ತಲೇ ಬಂದಿದೆ.

ಈ ನಿಟ್ಟಿನಲ್ಲಿ ಭಾರತದ ಸುತ್ತಲೂ ಇರುವ ನೆರೆಹೊರೆ ರಾಷ್ಟ್ರಗಳು ಹಾಗೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಥವಾ ಹೊಂದಿದ್ದ ರಾಷ್ಟ್ರಗಳ ಮೇಲೆ ಮೇಲೆ ತನ್ನ ‘ಪ್ರಭಾವ’ ಬೀರಿ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ.

ಚೀನಾ ‘ಅತ್ಯಾಪ್ತ’ ಪಾಕ್‌!: 

ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಚೀನಾ ತನ್ನ ‘ಪರಮ ಮಿತ್ರ’ ಎಂದು ಘೋಷಿಸಿದೆ. ‘ಬೆಲ್ಟ್ ಮತ್ತು ರೋಡ್’ ಉಪಕ್ರಮ ಹಾಗೂ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳ ಮೂಲಕ ಚೀನಾ ಪಾಕಿಸ್ತಾನವನ್ನು ತನಗೆ ‘ಅತ್ಯಾಪ್ತ’ವಾಗಿಸಿಕೊಂಡಿದೆ. ಈ ಯೋಜನೆಯಡಿ ನಿರ್ಮಿಸಿದ ರಸ್ತೆ ಭಾರತ ತನ್ನ ಹಕ್ಕು ಸಾಧಿಸುವ ವಿವಾದಿತ ‘ಪಾಕ್‌ ಆಕ್ರಮಿತ ಕಾಶ್ಮೀರ’ ಮೂಲಕ ಸಾಗುತ್ತವೆ. ಈ ರಸ್ತೆ ಸಂಪರ್ಕದ ಮೂಲಕ ಬಲೂಚಿಸ್ತಾನದ ಆಯಕಟ್ಟಿನ ‘ಗ್ವಾದರ್’ ಬಂದರಿನ ಮೇಲೂ ಚೀನಾ ಹಿಡಿತ ಸಾಧಿಸಿದೆ. ಈ ಮೂಲಕ ಅಪಘಾನಿಸ್ತಾನಕ್ಕೂ ಅಡಿ ಇಡುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ. ಪಾಕಿಸ್ತಾನ ಚೀನಾ ನಿರ್ಮಿತ ಯುದ್ಧ ಡ್ರೋನ್‌ಗಳು ಮತ್ತಿತರ ಮಿಲಿಟರಿ ಸಾಮಗ್ರಿಗಳನ್ನು ಖರೀದಿಸಿದೆ. ಅಲ್ಲದೇ, ದಕ್ಷಿಣ ಚೀನಾ ಸಮುದ್ರ, ತೈವಾನ್, ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ವಿಷಯಗಳಲ್ಲಿ ಚೀನಾದ ನಿಲುವನ್ನು ಅನುಮೋದಿಸಿ, ಭಾರತದ ನಿಲುವನ್ನು ವಿರೋಧಿಸಿದೆ.

ಚೀನಾದ ಸಾಲದ ಸುಳಿಯಲ್ಲಿ ಶ್ರೀಲಂಕಾ: 

ಕೋವಿಡ್‌ ಮತ್ತು ರಾಜಕೀಯ ಅಸ್ಥಿರತೆಯಿಂದ ಕಂಗಾಲಾಗಿದ್ದ ಶ್ರೀಲಂಕಾಗೆ ಆರ್ಥಿಕ ನೆರವಿನ ಹೆಸರಿನಲ್ಲಿ ಸಾಲ ನೀಡಿದ್ದ ಚೀನಾ, ಶ್ರೀಲಂಕಾವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಈಗಾಗಲೇ ತಾನು ಮಾಡಿದ ಈ ‘ಉಪಕಾರಕ್ಕೆ’ ಪ್ರತಿಯಾಗಿ ಚೀನಾ ಶ್ರೀಲಂಕಾದ ರಾಜಧಾನಿ ಕೊಲಂಬೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಅಲ್ಲದೇ, ಶ್ರೀಲಂಕಾದ ಆಯಕಟ್ಟಿನ ಹಂಬನ್‌ತೋಟ ಬಂದರನ್ನು 99 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿದೆ. ಈ ಬಂದರ ಮೂಲಕ ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ನೌಕಾಪಡೆಯ ಉಪಸ್ಥಿತಿಯನ್ನು ಸಮರ್ಥವಾಗಿ ಹೆಚ್ಚಿಸಿಕೊಂಡಿದೆ. ಈಗಾಗಲೇ ಚೀನಾ ಈ ಬಂದರಿನಲ್ಲಿ 13 ನೌಕೆಗಳನ್ನು ನಿಯೋಜಿಸಿದ್ದು, ಅದರಲ್ಲಿ 8 ನೌಕೆಗಳು ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿವೆ.

ನೇಪಾಳ ಮೇಲೂ ‘ಚೀನಾ’ ಪ್ರಭಾವ:

1950 ರ ಇಂಡೋ–ನೇಪಾಳ ಶಾಂತಿ ಮತ್ತು ಸೌಹಾರ್ದ ಒಪ್ಪಂದದಡಿ ಭಾರತ ಮತ್ತು ನೇಪಾಳ ನಿಕಟ ಸಂಬಂಧ ಹೊಂದಿದ ನಂತರ ಇದನ್ನು ಚೀನಾ ಇದನ್ನು ‘ತನ್ನ ಗಡಿ ಭಾಗದಲ್ಲಿ ಭಾರತೀಯ ಪ್ರಭಾವದ ಅನಪೇಕ್ಷಿತ ವಿಸ್ತರಣೆ’ ಎಂದು ವ್ಯಾಖ್ಯಾನಿಸಿ ಭಾರತ–ನೇಪಾಳ ಸಂಬಂಧಕ್ಕೆ ಹುಳಿಹಿಂಡಲು ಪ್ರಯತ್ನಿಸಿದೆ. 1962 ರ ಭಾರತ–ಚೀನಾ ಯುದ್ಧದ ನಂತರ ನೇಪಾಳದ ರಾಜ ಮಹೇಂದ್ರ ಅವರು ಕಾಲಾಪಾನಿ ಪ್ರದೇಶವನ್ನು ಭಾರತಕ್ಕೆ ನೀಡಿದ್ದರು. ಆದರೆ, ಈಚೆಗೆ ನೇಪಾಳದ ಪ್ರಧಾನಿ ಕೆಪಿ ಒಲಿ ಚೀನಾದತ್ತ ಒಲವು ತೋರಿದ್ದು, ನೇಪಾಳ ತನ್ನ ಹೊಸ ರಾಜಕೀಯ ನಕ್ಷೆಯಲ್ಲಿ ಈಗ ಭಾರತದ ಉತ್ತರಾಖಂಡ ರಾಜ್ಯದ ಭಾಗವಾಗಿರುವ ಕಾಲಾಪಾನಿ ಮಾತ್ರವಲ್ಲದೇ, ಲಿಂಪಿಯಾಧುರಾ ಮತ್ತು ಲಿಪುಲೇಖ್, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಸುಸ್ತಾ ಪ್ರದೇಶಗಳನ್ನು ನೇಪಾಳದ ಭಾಗಗಳೆಂದು ಪ್ರತಿಪಾದಿಸಿದೆ.

ಮಾಲ್ಡೀವ್ಸ್‌ ಮೇಲೂ ಚೀನಾ ಛಾಪು:

ಈ ಮುಂಚೆ ಭಾರತದ ಮಿತ್ರ ರಾಷ್ಟ್ರವಾಗಿದ್ದ ಮಾಲ್ಡೀವ್ಸ್‌ ಕೂಡ ಅಲ್ಲಿನ ಹಾಲಿ ಅಧ್ಯಕ್ಷ ಮೊಹಮದ್‌ ಮೊಯಿಜು ಅಧಿಕಾರಕ್ಕೆ ಬಂದ ನಂತರ ಚೀನಾದತ್ತ ವಾಲಿದ್ದು, ಭಾರತದೊಂದಿಗಿನ ಸಂಬಂಧಗಳನ್ನು ಒಂದೊಂದಾಗಿ ಕಳಚಿಕೊಳ್ಳುತ್ತಿದ್ದಾರೆ. ಈಚೆಗಷ್ಟೇ ಭಾರತದ ಸೈನ್ಯವನ್ನು ಮಾಲ್ಡೀವ್ಸ್‌ ವಾಪಸ್‌ ಕಳುಹಿಸಿದ್ದನ್ನು ನಾವು ಈ ನಿಟ್ಟಿನಲ್ಲಿ ಸ್ಮರಿಸಬಹುದು.

ಭೂತಾನ್‌–ಭಾರತ ಸಂಬಂಧಕ್ಕೆ ಅಡ್ಡಗಾಲು

ಭಾರತ ಭೂತಾನ್‌ ಜೊತೆ ಉತ್ತಮ ಬಾಂಧವ್ಯ ರೂಪಿಸಿಕೊಂಡಿದ್ದು, ಭೂತಾನ್‌ ಆರ್ಥಿಕತೆಯ ಪುನಶ್ಚೇತನಕ್ಕೆ ₹ 10 ಸಾವಿರ ಕೋಟಿ ನೆರವು ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಭಾರತ–ಭೂತಾನ್ ಆರ್ಥಿಕ ಸಹಕಾರದ ಭಾಗವಾಗಿ, ರುಪೇ ಹಾಗೂ ಯುಪಿಐ ಮೂಲಕ ಅಲ್ಲಿನ ಹಣಕಾಸಿನ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ನೆರವಾಗುವ ಉದ್ದೇಶವೂ ಇದೆ. ಆದರೆ, ಭಾರತ ಮತ್ತು ಭೂತಾನ್ ನಡುವಿನ ಸಂಬಂಧಕ್ಕೆ ತೊಡಕಾಗಿ ನಿಂತಿರುವ ಚೀನಾ, ಧೋಕ್ಲಾಂನಲ್ಲಿ ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿ ಸೇರುವಲ್ಲಿ, ಈಗ ಇರುವುದಕ್ಕಿಂತ ದಕ್ಷಿಣಕ್ಕೆ ತನ್ನ ಗಡಿ ವಿಸ್ತರಿಸಿಕೊಳ್ಳಬೇಕು ಎಂದು ಬಯಸುತ್ತಿದೆ.

ಭಾರತದ ಪರ್ಯಾಯ ಕ್ರಮಗಳು: 

ಚೀನಾದ ಈ ನಿಲುವಿಗೆ ಪರ್ಯಾಯವಾಗಿ ಭಾರತ ಚೀನಾದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ಫಿಲಿಪ್ಪೀನ್ಸ್‌ ಹಾಗೂ  ತೈವಾನ್ ದೇಶಗಳ ಸಾರ್ವಭೌಮತ್ವ ಎತ್ತಿಹಿಡಿಯಲು ಭಾರತ ನೆರವಾಗಲಿದೆ ಎಂದು ಹೇಳಿಕೆ ನೀಡಿ ಚೀನಾಗೆ ರಾಜತಾಂತ್ರಿಕ ಟಾಂಗ್‌ ನೀಡಿದೆ. ಶ್ರೀಲಂಕಾದಲ್ಲಿ ಇಂಧನ ಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ 11 ಮಿಲಿಯನ್ ಡಾಲರ್‌ ಹೂಡಿಕೆ ಮಾಡುವುದಾಗಿ ಈಚೆಗೆ ಭಾರತ ಘೋಷಿಸಿದೆ.

ಸೆಶೆಲ್ಸ್‌ ದೇಶದ ಅಸಂಪ್ಷನ್ ದ್ವೀಪಗಳಲ್ಲಿ ಏರ್‌ಸ್ಟ್ರಿಪ್ ಮತ್ತು ವೈಮಾನಿಕ ನೆಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಸಹಾಯ ಮಾಡಿದೆ. ಈ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಚೀನಾ ತೆಗೆದುಕೊಂಡಿರುವ ಉಪಕ್ರಮಗಳ ಹಿನ್ನೆಲೆಯಲ್ಲಿ ಭಾರತದ ಈ ಕ್ರಮ ನಿರ್ಣಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT