ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್‌–ಕೆ ‘ಯುಗೇಟ್‌’, ‘ಯುನಿ–ಗೇಜ್‌’ ‍ಪ್ರವೇಶ ಪರೀಕ್ಷೆ ಮೇ 28ರಂದು

22 ಸಾವಿರ ಎಂಜಿನಿಯರಿಂಗ್‌ ಸೀಟು ಲಭ್ಯ
Last Updated 4 ಮಾರ್ಚ್ 2023, 0:15 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ 150 ಎಂಜಿನಿಯರಿಂಗ್‌ ಕಾಲೇಜು ಮತ್ತು ದೇಶದ 55ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶಕ್ಕೆ ಕಾಮೆಡ್‌–ಕೆ ಯುಗೇಟ್‌ (COMED–K UGET) ಮತ್ತು ಯುನಿ– ಗೇಜ್‌ (Uni-GAUGE) ಪ್ರವೇಶ ಪರೀಕ್ಷೆ ಮೇ 28ರಂದು ನಡೆಯಲಿದೆ.

ಕರ್ನಾಟಕದ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ (KUPECA)ದೊಂದಿಗೆ ಸಂಯೋಜಿತ ವಾಗಿರುವ ಕಾಲೇಜುಗಳು ಮತ್ತು ಬಿಇ/ಬಿಟೆಕ್‌ ಕೋರ್ಸ್‌ ಹೊಂದಿರುವ ಯುನಿ–ಗೇಜ್‌ ಸದಸ್ಯ ವಿಶ್ವವಿದ್ಯಾಲಯಗಳಿಗೆ ಈ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಕುಮಾರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದ 150ಕ್ಕೂ ಹೆಚ್ಚು ನಗರಗಳ 400 ಪರೀಕ್ಷಾ ಕೇಂದ್ರಗಳಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯಲಿದೆ. ಮಂಗಳೂರಿನಲ್ಲಿ 5, ಉಡುಪಿಯಲ್ಲಿ 4 ಹಾಗೂ ಪುತ್ತೂರಿನಲ್ಲಿ 1 ಪರೀಕ್ಷಾ ಕೇಂದ್ರ ಇದೆ.

ರಾಜ್ಯ ಸರ್ಕಾರ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಶೇ 45ರಷ್ಟು ಸೀಟುಗಳನ್ನು ನೀಡಿದೆ. ಈ ಕೋಟಾದಲ್ಲಿ ರಾಜ್ಯದಲ್ಲಿ 22 ಸಾವಿರದಷ್ಟು ಸೀಟು ಲಭ್ಯವಿದ್ದು, ಅವುಗಳ ಭರ್ತಿಗಾಗಿ ನಡೆಯುವ ಈ ಪರೀಕ್ಷೆಗೆ ದೇಶದ ಯಾವುದೇ ಭಾಗದ ವಿದ್ಯಾರ್ಥಿ ಹಾಜರಾಗಿ ಪ್ರವೇಶ ಪಡೆಯಬಹುದಾಗಿದೆ ಎಂದರು.

ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಏ. 24ರ ವರೆಗೆ ಆನ್‌ಲೈನ್‌ ಮೂಲಕ www.comedk.org, www.unigauge.com ನಲ್ಲಿ ಅರ್ಜಿ ಸಲ್ಲಿಸಬಹುದು. 1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆ ಇದೆ. ಪರೀಕ್ಷೆ ನಂತರ ಮೆರಿಟ್‌ ಆಧಾರದ ಮೇಲೆ ಕೇಂದ್ರೀಕೃತ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಎರಾ ಫೌಂಡೇಶನ್‌ ಸಿಇಒ ಪಿ.ಮುರಳಿಧರ್ ಹೇಳಿದರು.

ರಾಜ್ಯ ಸರ್ಕಾರಿ ಕೋಟಾದ ಪ್ರವೇಶಕ್ಕೆ ರಾಜ್ಯ ಸರ್ಕಾರ ಸಿಇಟಿ ನಡೆಸಲಿದೆ.

ರಾಜ್ಯದಲ್ಲಿ 8 ಕಾಮೆಡ್‌ ಕರೇಸ್‌ ಕೇಂದ್ರ: ಕಾಮೆಡ್‌–ಕೆ ಈ ವರ್ಷ ರಾಜ್ಯದ ಎಂಟು ಕಾಮೆಡ್‌–ಕರೇಸ್‌ (COMED KARES) ಇನೊವೇಷನ್‌ ಹಬ್‌ ಪ್ರಾರಂಭಿಸಿದೆ. ಇದರಲ್ಲಿ ಭಾಗವಹಿಸುವ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೌಶಲವೃದ್ಧಿ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ 4, ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿಯಲ್ಲಿ ತಲಾ ಒಂದು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಾ.ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT