ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆಯಲ್ಲಿ ಸ್ಪಷ್ಟತೆಯಿರಲಿ...

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-4
Last Updated 9 ನವೆಂಬರ್ 2022, 20:15 IST
ಅಕ್ಷರ ಗಾತ್ರ

ಸಂವಹನ ತಜ್ಞ ಹೆರಾಲ್ಡ್ ಲಾಸ್ವೆಲ್ ಸಂವಹನವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ; ‘ಯಾರು, ಯಾರಿಗೆ ಏನನ್ನು ಹೇಳುತ್ತಾರೆ, ಯಾವ ಮಾಧ್ಯಮದಲ್ಲಿ ಹೇಳುತ್ತಾರೆ ಹಾಗೂ ಅದು ಯಾವ ಪರಿಣಾಮ ಬೀರುತ್ತದೆ ಅದೇ ಸಂವಹನ’. ಇದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಬರೆಯುವ ಉತ್ತರಕ್ಕೂ ನೇರವಾಗಿ ಸಂಬಂಧಪಡುತ್ತದೆ.

ನೀವು ಉತ್ತರ ಬರೆಯುವುದು ಯಾರಿಗೆ? ಅದೇನೂ ಸಾರ್ವಜನಿಕರಿಗಲ್ಲ. ಹತ್ತಾರು ಜನ ಅದನ್ನು ಓದಿ ಪ್ರತಿಕ್ರಿಯಿಸುವುದಕ್ಕೂ ಅಲ್ಲ. ಅದು ಕೇವಲ ಒಬ್ಬರಿಗಾಗಿ. ಆದರೆ ದುರಂತವೆಂದರೆ ನಿಮ್ಮ ಉತ್ತರಗಳನ್ನು ನೋಡುವವರು ಯಾರೆಂದು ನಿಮಗೆ ಗೊತ್ತಿರುವುದಿಲ್ಲ! ಅಂಥ ಅನಾಮಿಕ ಮೌಲ್ಯಮಾಪಕನಿಗಾಗಿ ನೀವು ಬರೆಯುವುದು.

ನೆನಪಿಡಿ; ಆ ಮೌಲ್ಯಮಾಪಕ ಕಂಪ್ಯೂಟರ್ ಅಲ್ಲ. ಮನುಷ್ಯ. ಎಲ್ಲಾ ಭಾವನೆಗಳಿಂದ ಪ್ರಭಾವಿತವಾಗುವ ಅಪ್ಪಟ ಮನುಷ್ಯ. ಹೀಗಾಗಿ ಅವನಿಂದ ಸೈ ಎನಿಸಿಕೊಳ್ಳುವುದು ಬಹಳ ಮುಖ್ಯ. ಅವನು ಅಂಕ ನೀಡುವಾಗ ಅರ್ಧ ಅಂಕ ಕಡಿಮೆ ಅಥವಾ ನಿಮ್ಮ ಬರವಣಿಗೆ ಮೆಚ್ಚಿ ಒಂದು ಅಂಕ ಹೆಚ್ಚು ನೀಡಿದರೆ, ಅದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಮ್ಮ ರ‍್ಯಾಂಕನ್ನು ಬುಡಮೇಲು ಮಾಡಬಲ್ಲದು!

ಪರಿಣಾಮಕಾರಿ ಸಂವಹನ

ಆದ್ದರಿಂದ ಪರೀಕ್ಷೆಯಲ್ಲಿ ಉತ್ತರ ಬರೆಯುವ ಕ್ರಿಯೆಯಲ್ಲಿ ಸಂವಹನದ ಮಹತ್ವವನ್ನು ಅರಿಯಬೇಕು. ನಾವು ಬರೆಯುವ ಉತ್ತರ, ಪರೀಕ್ಷಕ ನಿಗೆ ನಾವು ಬಯಸಿದ ರೀತಿಯಲ್ಲೇ ತಲುಪಬೇಕು. ಅದೇ ಅರ್ಥವನ್ನು ನೀಡಬೇಕು. ಅದರಲ್ಲಿ ಯಾವುದೇ ಗೊಂದಲವಿರಬಾರದು. ಯಶಸ್ವಿ ಸಂವಹನದ ಸೂತ್ರವೆಂದರೆ ಕಳಿಸಿದ ಸಂದೇಶವೇ ತಲುಪುವ ಸಂದೇಶವೂ ಆಗಿರುವುದು. ಅಂದರೆ ನೀವು ಯಾವ ಉದ್ದೇಶದಿಂದ ಏನನ್ನು ಉತ್ತರವಾಗಿ ಬರೆದಿದ್ದೀರೋ ಅದೇ ಅರ್ಥದಲ್ಲಿ ಉತ್ತರವು ಮೌಲ್ಯಮಾಪಕನಿಗೆ ತಲುಪಬೇಕು. ಈ ಸಂವಹನ ಕ್ರಿಯೆಯಲ್ಲಿ ನಿಮ್ಮ ಉತ್ತರ ಸಂದೇಶವಾದರೆ ಪರೀಕ್ಷೆಯ ಉತ್ತರ ಪತ್ರಿಕೆಗಳೇ ವಾಹಿನಿಗಳು ಅಥವಾ ಮಾಧ್ಯಮಗಳು. ನೀವು ಹೇಳಲು ಹೊರಟಿದ್ದನ್ನು ಅತ್ಯಂತ ಪರಿಣಾಮಕಾರಿಯಾಗಿ ಪರೀಕ್ಷಕನಿಗೆ ಅರ್ಥವಾಗಿಸುವುದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಮಗಿರುವ ಸವಾಲು.

ಯಾವುದೇ ಉತ್ತರ ನೇರವಾಗಿರಬೇಕು, ಸರಳ ವಾಗಿರಬೇಕು, ಮೊದಲ ನೋಟಕ್ಕೆ ಪರೀಕ್ಷಕನನ್ನು ಸೆಳೆಯಬೇಕು, ಅವನು/ಅವಳು ಅಹುದಹುದು ಎನ್ನುವಂತಿರಬೇಕು, ಪರೀಕ್ಷಕನಿಗೆ ಈ ಅಭ್ಯರ್ಥಿ ಉತ್ತರ ಗೊತ್ತಿಲ್ಲದೇ ಡಬ್ಬಿ ಬಡಿಯುತ್ತಿದ್ದಾನೆ, ತನ್ನನ್ನು ಯಾಮಾರಿಸಲು ಪ್ರಯತ್ನಿಸುತ್ತಿದ್ದಾನೆ ಎನಿಸಬಾರದು, ಇವು ಸಂವಹನದ ದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮ.

ಅಂದರೆ ನೀವು ಬರೆಯುವ ಉತ್ತರ ನಿಮ್ಮ ಜಾಣ್ಮೆಯ ಪ್ರತೀಕವಾಗಬೇಕೇ ವಿನಾ ನಿಮ್ಮ ಪಾಂಡಿತ್ಯದ ಪ್ರದರ್ಶನವಾಗಬಾರದು. ಇಲ್ಲಿನ ಪ್ರಶ್ನೆಗಳು ಎಷ್ಟೋ ವೇಳೆ ನಿಮ್ಮ ನೇರ ಅಭಿಪ್ರಾಯವನ್ನು ಬಯಸುತ್ತವೆ. ಅದು ಪರೀಕ್ಷಕನ ಅಭಿಪ್ರಾಯಗಳಿಗೆ ತದ್ವಿರುದ್ಧವಾಗಿರುವ ಸಾಧ್ಯತೆಯೂ ಇರುತ್ತದೆ. ಹೀಗೆ ಅಭಿಪ್ರಾಯ ವ್ಯಕ್ತಪಡಿಸುವಾಗ ನಿಮ್ಮ ಉತ್ತರಗಳು ನಿಮ್ಮ ಚಿಂತನಾ ಕ್ರಮದ, ವಾದ ಸರಣಿಯ, ಪ್ರತಿನಿಧಿಯಾಗಿರಬೇಕು ಆದರೆ ಅಹಂಕಾರದ ಪ್ರದರ್ಶನವಾಗಬಾರದು. ನಿಮ್ಮ ವಾದ ಅವನಿಗೆ ಇಷ್ಟವಾಗದಿದ್ದಾಗಲೂ ನಿಮ್ಮ ಅಭಿಪ್ರಾಯವನ್ನು ಗೌರವಿಸುವ ಔದಾರ್ಯ ಪರೀಕ್ಷಕನಲ್ಲಿ ಹುಟ್ಟಲು ಕಾರಣವಾಗಬೇಕು. ಯಾವ ಕಾರಣಕ್ಕೂ ಉತ್ತರವು ಪರೀಕ್ಷಕನಿಗೆ ಮುಜುಗರ ಉಂಟುಮಾಡುವಂತಿರಬಾರದು.

ಉತ್ತರಿಸುವ ರೀತಿ

ಗಣಿತದ ಅಥವಾ ವಿಜ್ಞಾನದ ಪರೀಕ್ಷೆಗಳನ್ನು ಬಿಟ್ಟರೆ ಕಲೆ ಮತ್ತು ಮಾನವಿಕಗಳ ಪರೀಕ್ಷೆಗಳಲ್ಲಿ ಒಂದು ಪ್ರಶ್ನೆಗೆ ಒಂದೇ ಉತ್ತರವೆಂಬುದಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಉತ್ತರಗಳು ಬದಲಾಗಬಹುದು. ಕೆಲವೊಮ್ಮೆ ಉತ್ತರ ಒಂದೇ ಇದ್ದಾಗಲೂ ಹೇಳುವ ರೀತಿಯಲ್ಲಿ ವ್ಯತ್ಯಾಸಗಳಿರಬಹುದು. ಹೇಳುತ್ತೇವೆ; ಗಣಿತದಲ್ಲಿ 2+2 ಸೇರಿದರೆ ನಾಲ್ಕು ಆಗುತ್ತದೆ ಎಂಬುದು ನಿಜ. ಆದರೆ ಕಲೆಯಲ್ಲಿ ಅಥವಾ ಮಾನವಿಕಗಳಲ್ಲಿ ಹಾಗೆ ಆಗಬೇಕಿಲ್ಲ. ಐದೂ ಆಗಬಹುದು ಮೂರೂ ಆಗಬಹುದು!

ಒಬ್ಬ ಕಲಾವಿದ ಬಿಡಿಸಿದ ಚಿತ್ರ ಅದು ಸರ್ವಶ್ರೇಷ್ಠ ಎನ್ನಲು ಸಾಧ್ಯವಿಲ್ಲ. ಅದಕ್ಕಿಂತ ಚೆನ್ನಾಗಿ ಬಿಡಿಸಬಲ್ಲ ಕಲಾವಿದ ಬರಬಹುದು. ಹಾಗೆಯೇ ವ್ಯಕ್ತಿನಿಷ್ಠ ಉತ್ತರಗಳನ್ನು ಬಯಸುವ ಪರೀಕ್ಷೆಗಳಲ್ಲಿ ಒಬ್ಬರು ಬರೆದುದೇ ಅತ್ಯುತ್ತಮ ಎನ್ನಲು ಸಾಧ್ಯವಿಲ್ಲ. ಒಂದು ಪ್ರಶ್ನೆಗೆ ಸ್ಥೂಲವಾಗಿ ಉತ್ತರ ಹೇಳಬಹುದೇ ವಿನಾ ಅದು ಇಷ್ಟು ಹಾಗೂ ಇಷ್ಟು ಮಾತ್ರ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಹೀಗಾಗಿ ಇಂಥ ಪರೀಕ್ಷೆಗಳಲ್ಲಿ ಸರಿಯುತ್ತರ ಬರೆಯುವುದಷ್ಟೇ ಅಲ್ಲ, ಅದನ್ನು ಹೇಗೆ ಬರೆಯುತ್ತೀರಿ, ನಿಮ್ಮ ವಾದವನ್ನು ಹೇಗೆ ಸಮರ್ಥಿಸುತ್ತೀರಿ ಎಂಬುದು ಬಹಳ ಮುಖ್ಯ ವಾಗುತ್ತದೆ. ಸಂವಹನವೇ ಹಲವು ಅಭ್ಯರ್ಥಿಗಳ ಉತ್ತರಗಳಲ್ಲಿ ವ್ಯತ್ಯಾಸ ಉಂಟು ಮಾಡಿದಾಗ ಅಂಕಗಳಲ್ಲೂ ವ್ಯತ್ಯಾಸ ಉಂಟುಮಾಡುತ್ತದೆ ಎಂಬುದನ್ನು ಮರೆಯಬಾರದು.

ಅಂತಿಮವಾಗಿ ಹೇಳುವುದಾದರೆ ನಿಮ್ಮ ಉತ್ತರ ನಿಮ್ಮ ಅತ್ಯುತ್ತಮ ಸಂವಹನವಾಗಬೇಕು. ಅದು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಪರೀಕ್ಷಕನ ಮನಸ್ಸಿನಲ್ಲಿ ಉಂಟುಮಾಡಬೇಕು. ಏನು ಬರೆಯುತ್ತಿದ್ದೀರೆಂಬ ಸ್ಪಷ್ಟತೆ ನಿಮಗಿರಬೇಕು. ನಿಮಗೇ ಸ್ಪಷ್ಟತೆಯಿಲ್ಲದಿದ್ದರೆ ಪರೀಕ್ಷಕನನ್ನು ಗೆಲ್ಲಲಾ ರದು. ಅದು ನಿಮ್ಮನ್ನು ಪ್ರಕಾಶಿಸಬೇಕು. ಕತ್ತಲ ಕೂಪಕ್ಕೆ ತಳ್ಳಬಾರದು.

(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ,
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT