ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟೇಷನಲ್‌ ಸಮಾಜ ವಿಜ್ಞಾನ ಕೋರ್ಸ್‌

ಪ್ರೊ ಇಂದಿರಾ ರಾಮರಾವ್
Published 22 ಏಪ್ರಿಲ್ 2024, 1:00 IST
Last Updated 22 ಏಪ್ರಿಲ್ 2024, 1:00 IST
ಅಕ್ಷರ ಗಾತ್ರ
ಸಮಾಜ ವಿಜ್ಞಾನ ಎಂದರ್ ಬರೀ ಸಿದ್ಧಾಂತ ಎನ್ನುವುದು ಒಂದು ಮಿಥ್ಯೆ, ಮಾಹಿತಿ ತಂತ್ರಜ್ಞಾನವನ್ನು ಸಮಾಜಮುಖಿಯಾಗಿ ಮಾಡಲು ಸಮಾಜ ವಿಜ್ಞಾನಗಳ ಜ್ಞಾನ ಅಗತ್ಯ ಎಂಬ ತತ್ವವನ್ನು ಅಳವಡಿಸಿ ಕೊಂಡಿರುವ ಈ ಕೋರ್ಸು ಹೊಸ ಉದ್ಯೋಗಾವಕಾಶಗಳನ್ನು ತೆರೆದಿಡುತ್ತದೆ

ಕಂಪ್ಯೂಟೇಷನಲ್ ಸಮಾಜ ವಿಜ್ಞಾನಗಳಲ್ಲಿನ ಬಿಎಸ್ಸಿ ಆನರ್ಸ್, ಸಮಾಜ ವಿಜ್ಞಾನಗಳ ಅರಿವಿನೊಂದಿಗೆ ಸಂಖ್ಯಾ ಶಾಸ್ತ್ರ ಮತ್ತು ದತ್ತಾಂಶಗಳನ್ನು ಬಳಸಿ ಸಾಮಾಜಿಕ ಅಭಿವೃದ್ಧಿಗೆ ಪೂರಕವಾದ ಹೆಜ್ಜೆಗಳನಿಡುವಲ್ಲಿ ಬೇಕಿರುವ ತರಬೇತಿಯನ್ನು  ನೀಡಲಾಗುತ್ತದೆ. 

ನಾಲ್ಕು ವರ್ಷಗಳ ಎಂಟು ಸೆಮೆಸ್ಟರ್ ಗಳಿರುವ ಈ ಕೋರ್ಸ್‌ನಲ್ಲಿ ಮೊದಲನೆಯ ಸೆಮಿಸ್ಟರ್‌ನಲ್ಲಿ, ಗಣಿತ, ಸಂಖ್ಯಾಶಾಸ್ತ್ರ, ಸಮಾಜಶಾಸ್ತ್ರ ಸಾರ್ವಜನಿಕ ನೀತಿ, ಸಮುದಾಯಗಳ ರಚನೆ, ಸಾಮಾಜಿಕ ಬದಲಾವಣೆಗೆ ಸ್ಪಂದಿಸುವ ವಿಧಗಳ ಬಗ್ಗೆ ಅರಿವು ನೀಡಲಾಗುತ್ತದೆ.

ಎರಡನೆಯ ಸೆಮಿಸ್ಟರ್‌ನಲ್ಲಿ ದತ್ತಾಂಶ ವಿಜ್ಞಾನ, ಗಣಕವಿಜ್ಞಾನ, ಅರ್ಥಶಾಸ್ತ್ರ,  ಲಿಂಗ ವ್ಯವಸ್ಥೆ,  ಸಾಮಾಜಿಕ ವಿಜ್ಞಾನಗಳಲ್ಲಿ ಸಂಶೋಧನೆ, ಗುಣಾತ್ಮಕ ಸಂಶೋಧನಾ ವಿಧಾನಗಲ್ಲಿ ಕಂಪ್ಯೂಟರ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕ  ಅನುಭವ, ಕಂಪ್ಯೂಟರ್ ಭಾಷೆಯಾದ  ಪೈತಾನ್ ಕಲಿಕೆ, ಕಂಪ್ಯೂಟರ್ನಲ್ಲಿ ಸಂಖ್ಯಾಶಾಸ್ತ್ರದ ದತ್ತಾಂಶ ಅನ್ವಯಿಸಲು ಅನುಕೂಲವಾದ 'ಆರ್' ಬಳಕೆ, ಸಮಾನತೆ ಮತ್ತು ಸಮತೆಯ ಪರಿಕಲ್ಪನೆಗಳ ಪರಿಚಯ ಮತ್ತು ಸಾರ್ವಜನಿಕ ನೀತಿ ಅಭಿವೃದ್ಧಿ ಪಡಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ.

ಮೂರನೇ ಸೆಮಿಸ್ಟರ್‌ನಲ್ಲಿ ಕೃತಕ ಬುದ್ದಿ (artificial intelligence)ಮತ್ತು ಅದರ  ಅಭಿವೃದ್ಧಿ ಮತ್ತು ಬಳಕೆ ಯ ಬಗ್ಗೆ ಅರಿವು, ಸಾಮಾಜಿಕ ಅಂತರ್ ಸಂಬಂಧಗಳನ್ನು ಅರಿಯುವಲ್ಲಿ ‘ಗ್ರಾಫ್’ ಸಿದ್ಧಾಂತದ  ಬಳಕೆ,  ಸಾಂಸ್ಕೃತಿಕ ಮತ್ತು ಸಾಮಾಜಿಕ ಮಾನವಶಾಸ್ತ್ರ, ಕಂಪ್ಯೂಟರ್ ತಂತ್ರಾಂಶಗಳಲ್ಲಿ ಯಾವ  ಕ್ರಮದಲ್ಲಿ  ವಿಷಯಗಳು ಲಭ್ಯವಾಗುತ್ತವೆ (algorithm) ಮತ್ತು ಇವುಗಳ ಸಾಮಾಜಿಕ ಪರಿಣಾಮಗಳ ಬಗ್ಗೆಯ ಚರ್ಚೆಗಳು, ಇದಲ್ಲದೆ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ತಂತ್ರಜ್ಞಾನದ ಸಂಬಂಧಗಳ ಬಗ್ಗೆ ಚರ್ಚೆ ಇದೆ.

ಸಮಾನತೆಯ ಸಮಾಜದ ಕಡೆಗೆ ಸಂಘರ್ಷ ಪರಿಹಾರ ವಿಧಾನಗಳನ್ನು ಹೇಗೆ ಬಳಸ ಬಹುದು ಎಂಬುವುದರ ಬಗ್ಗೆ ಅರಿವು ಮೂಡಿಸುವ ತರಬೇತಿ ನೀಡಲಾಗುತ್ತದೆ.

ನಾಲ್ಕನೇ ಸೆಮಿಸ್ಟರ್‌ನಲ್ಲಿ ಕೃತಕ ಬುದ್ಧಿಮತ್ತೆಯ ಭಾಗವಾದ ಯಂತ್ರಗಳನ್ನು ಬಳಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಸಾಮಾಜಿಕ ಮತ್ತು ಮಾಹಿತಿ ವಿಜ್ಞಾನಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳನ್ನು ಟ್ರೈನ್ ಮಾಡಲಾಗುತ್ತದೆ. ಅದರ ಜೊತೆಯಲ್ಲಿ,  ಸಾಮಾಜಿಕ ನಡವಳಿಕೆ ಮತ್ತು ಕಂಪ್ಯೂಟೇಶನಲ್ ವ್ಯವಸ್ಥೆಗಳ ಬಳಕೆಗೆ  ಸಂಬಂಧಿಸಿದ ಮಾಹಿತಿ ಮತ್ತು ತರಪೇತಿ ವಿದ್ಯಾರ್ಥಿಗಳಿಗೆ ಸಿಗುತ್ತದೆ. ವ್ಯಕ್ತಿಗಳು ಕಂಪ್ಯೂಟರ್ ಯುಗದಲ್ಲಿ  ಸಾಮಾಜಿಕವಾಗಿ, ಲಿಂಗಾಧಾರಿತವಾಗಿ ತಮ್ಮನ್ನು ಗುರುತಿಸಿಕೊಳ್ಳುವ ವ್ಯವಸ್ಥೆಯ ಬಗೆಗಿನ ಸಿದ್ಧಾಂತಗಳು, ದತ್ತಾಂಶಗಳನ್ನು ಅನೇಕ ಜಾಲತಾಣಗಳಿಂದ ಆಯ್ದು ತೆಗೆದು ಬಳಸುವ ಮಾದರಿಗಳ ಬಗ್ಗೆಯೂ ಪರಿಚಯವನ್ನು ನೀಡಲಾಗುತ್ತದೆ. 


ಐದನೆಯ ಸೆಮೆಸ್ಟರಿನಲ್ಲಿ ಆಧುನಿಕೋತ್ತರ ಸಂಸ್ಕೃತಿಗಳು, ನವ ವರ್ಗಗಳ  ಪರಿಚಯ, ಮನುಷ್ಯ ಕೇಂದ್ರಿತ ವ್ಯವಸ್ಥೆಗಳು, ಸಮಾಜ ವಿಜ್ಞಾನ ಗಳಲ್ಲಿ ವಿವಿಧತೆ ಮತ್ತು ಒಳಗೊಳ್ಳುವಿಕೆಯ ಅಂಶಗಳ ಬಗ್ಗೆಯ ಚರ್ಚೆಗಳಿರುತ್ತವೆ.

ದತ್ತಾಂಶಗಳ  ಮೇಲ್ವಿಚಾರಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ.  ಆರೋಗ್ಯವನ್ನು ಸಮಾಜಶಾಸ್ತ್ರೀಯ ದೃಷ್ಟಿ ಕೋನದಿಂದ ವಿಶ್ಲೇಷಿಸುವ ತರಬೇತಿ ನೀಡಲಾಗುತ್ತದೆ .  ಚಲನೆ ಮತ್ತು ವಲಸೆಯ ಸಾಮಾಜಿಕ, ಆರ್ಥಿಕ, ರಾಜಕೀಯ ಹಿನ್ನೆಲೆಗಳನ್ನು ಚರ್ಚಿಸಲಾಗುತ್ತದೆ. ಸಾಂಸ್ಕೃತಿಕ ಮಾದರಿಗಳ ಪರಿಚಯ, ಆಡಳಿತಾತ್ಮಕತೆ ಹಾಗು ಕಾನೂನಿನ ನಡುವಣ ಸಂಬಂಧದ ಅರಿವು ನೀಡಲಾಗುತ್ತದೆ. ಸಮ್ಮರ್ ಇಂಟರ್ನ್ಶಿಪ್ ನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ತೊಡಗಿಕೊಂಡು ವರದಿಯನ್ನು ತಯಾರಿಸಬೇಕು. 

ಅಂತಿಮವರ್ಷದ ಮೊದಲ ಸೆಮಿಸ್ಟರ್‌ನಲ್ಲಿ  ಆರೋಗ್ಯದ ಬಗ್ಗೆ, ಚಾಲನೆ ಮತ್ತು ವಲಸೆಯ ಬಗ್ಗೆ ಲಭ್ಯವಿರುವ ಸಾಮಾಜಿಕ ಅರಿವನ್ನು ತಂತ್ರಜ್ಞಾನ ಬಳಕೆಯಲ್ಲಿ ಸೇರಿಸಿಕೊಂಡು ಸಾಮಾಜಿಕ ಮತ್ತು ಆರೋಗ್ಯ ವ್ಯವಸ್ಥೆಯ ರೂಪಿಸುವ ದಿಕ್ಕಿನಲ್ಲಿ ತರಬೇತಿ ನೀಡಲಾಗುತ್ತದೆ. ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳ ಬಗ್ಗೆ ಆಳವಾದ ಜ್ಞಾನ ನೀಡಲಾಗುತ್ತದೆ. 

ಕೊನೆಯ ಭಾಗದಲ್ಲಿ ಸೂಕ್ಷ್ಮ(micro) ಅರ್ಥಶಾಸ್ತ್ರದ ಬಗ್ಗೆ ಪರಿಚಯ ನೀಡುವುದರ ಜೊತೆಗೆ,  ಜೀವನೋಪಾಯಕ್ಕೆ ಸಂಬಂಧಿಸಿದಂತೆ ಜೀವನ ಹಾಗು ಉದ್ಯಮಶೀಲತಾ ಕೌಶಲಗಳ ಅಭಿವೃದ್ಧಿಗೆ ಸಂಭಂದಿಸಿದ ಅಭಿವೃದ್ಧಿಯ ರಾಜಕೀಯ ಅರ್ಥಶಾಸ್ತ್ರದ ಚರ್ಚೆಗಳ ಪರಿಚಯ ನೀಡಲಾಗುತ್ತದೆ. ಆರ್ಥಿಕ ವಿಶ್ಲೇಷಣೆಯ ಮೂಲಕ ಲಭ್ಯವಾದ ದತ್ತಾಂಶಗಳನ್ನು ಗಣಿತ ಶಾಸ್ತ್ರ ಹಾಗೂ ಸಂಖ್ಯಾ ಶಾಸ್ತ್ರಗಳ ವಿಶ್ಲೇಷಣೆಗೆ ಒಡ್ಡುವ ವಿಧಾನಗಳ ಪರಿಚಯ ನೀಡಲಾಗುತ್ತದೆ. ಇದರ ಜೊತೆಗೆ ಈಗಾಗಲೇ ಕಲಿತ ವಿಷಯಗಳ ಆಧಾರದ  ಮೇಲೆ ವಿದ್ಯಾರ್ಥಿಗಳು ಬೇಸಿಗೆ ಇಂಟರ್ನ್ಶಿಪ್ ಕಡ್ಡಾಯವಾಗಿ ಕೈಗೊಳ್ಳಬೇಕು. ಅಂತಿಮ ಸೆಮಿಸ್ಟರ್ ನಲ್ಲಿ  ಕ್ಷೇತ್ರಾಧ್ಯಯನ ಆಧಾರಿತ ಸಂಶೋಧನೆಯನ್ನು ಕೈಗೊಂಡು ವರದಿಯನ್ನು ಸಲ್ಲಿಸಬೇಕು.

ಈ ಕೋರ್ಸಿನ ಎಂಟು ಸೆಮಿಸ್ಟರ್‌ಗಳಲ್ಲಿಯೂ ಕಂಪ್ಯೂಟರ್ ತಂತ್ರಜ್ಞಾನ ಹಾಗೂ ಸಮಾಜ ವಿಜ್ಞಾನಗಳ ಜ್ಞಾನದ ಒಂದು ಸಮಿಶ್ರಣ ಇದೆ. ವಿಶೇಷವಾಗಿ ಸಾಮಾಜಿಕ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮತೆಯನ್ನು ಬೆಳೆಸುವುದರ ಜೊತೆಗೆ ಸಮಕಾಲೀನ ಜಗತ್ತಿನಲ್ಲಿ ಅಗಾಧ ಪ್ರಮಾಣದಲ್ಲಿ ಲಭ್ಯವಿರುವ ಪರಿಮಾಣ ತ್ಮಕ ಮಾಹಿತಿಯನ್ನು ಸಾಮಾಜಿಕ ವಾಸ್ತವಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುವ ಕೌಶಲಗಳನ್ನು ಈ ಕೋರ್ಸು ನೀಡಲಿದೆ. ಮೂಲತಃ ಈ ವಿಶಿಷ್ಟ ಕೋರ್ಸು ಬಹುಶಿಸ್ತೀಯ ಅಧ್ಯಯನ ವಿಧಾನವನ್ನು ಅಳವಡಿಸಿ ಕೊಂಡು, ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಸಾಮಾಜಿಕ ವಾಸ್ತವಗಳನ್ನು ಅರ್ಹ ಮಾಡಿಕೊಳ್ಳಲು ತರಬೇತಿಯನ್ನು ನೀಡುತ್ತದೆ.

ಕಲೆ, ವಿಜ್ಞಾನ ಮತ್ತು ವಾಣಿಜ್ಯದ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಬಹುದಾಗಿದೆ. ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು. ತರಗತಿ ಆರಂಭವಾಗುವ ಮುನ್ನ bridge course ನೀಡಲಾಗುತ್ತದೆ. ಸಮಾಜ ವಿಜ್ಞಾನಗಳ ಮೂಲ ಪರಿಕಲ್ಪನೆಗಳ ಬಗ್ಗೆ  8-10 ಗಂಟೆಗಳ ಅವಧಿಯಲ್ಲಿ ಪರಿಚಯಾತ್ಮಕ ನೋಟವನ್ನು ನೀಡಲಾಗುತ್ತದೆ. ಸದ್ಯ ಈ ಕೋರ್ಸ್‌ ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಪರಿಚಯಿಸಲಾಗಿದೆ.

ಕಂಪ್ಯೂಟರ್ ಆಧಾರಿತ ಉದ್ಯೋಗ ಗಳನ್ನು ಸಮಾಜ ವಿಜ್ಞಾನ ಕ್ಷೇತ್ರಕ್ಕೆ ಈ ಕೋರ್ಸು ತೆರೆಯು ತ್ತದೆ.  ಈ ಕೋರ್ಸು ಬರುವ ದಿನಗಳಲ್ಲಿ ಕಾರ್ಪೊರೇಟ್ ವಲಯ, ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು, multi-speciality ಆಸ್ಪತ್ರೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಬೃಹತ್ ಸಂಖ್ಯಾತ್ಮಕ ಮಾಹಿತಿಯ ವಿಶ್ಲೇಷಣೆಯಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ತೆರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT