ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ–ಕೋರ್ಸ್‌ ಆಯ್ಕೆಯ ಗೊಂದಲ ನಿವಾರಣೆ ಹೇಗೆ?

ಪ್ರದೀಪ್ ಕುಮಾರ್ ವಿ ಅವರ ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ ಅಂಕಣ
Published 12 ಫೆಬ್ರುವರಿ 2024, 0:37 IST
Last Updated 12 ಫೆಬ್ರುವರಿ 2024, 0:37 IST
ಅಕ್ಷರ ಗಾತ್ರ

l 1. ನಾನೀಗ ದ್ವಿತೀಯ ಪಿಯುಸಿ ಮಾಡುತ್ತಿದ್ದು ಮುಂದೆ ಬಿಟೆಕ್ (ಕಂಪ್ಯೂಟರ್ ಸೈನ್ಸ್) ಮಾಡುವುದೇ ಅಥವಾ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಮಾಡುವುದೇ ಎಂಬ ಗೊಂದಲದಲ್ಲಿದ್ದೇನೆ.

–ಹೆಸರು, ಊರು ತಿಳಿಸಿಲ್ಲ.

ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್‌ಗಳು ಬೇಡಿಕೆಯಲ್ಲಿರುವ ಕಂಪ್ಯೂಟರ್ ಸೈನ್ಸ್ (ಸಿಎಸ್) ಕ್ಷೇತ್ರಕ್ಕೆ ಸಂಬಂಧಿಸಿವೆ, ಎಂಜಿನಿಯರಿಂಗ್‌ (ಸಿಎಸ್) ಮತ್ತು ಬಿ.ಎಸ್ಸಿ (ಸಿಎಸ್) ಕೋರ್ಸ್‌ಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿವೆ.

ಎಂಜಿನಿಯರಿಂಗ್‌ ಕೋರ್ಸ್‌ಗಳು ಕಂಪ್ಯೂಟರ್ ವಿಜ್ಞಾನದ ತಾಂತ್ರಿಕತೆಯತ್ತ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಹಾಗೂ, ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಮೂಲ ಎಂಜಿನಿಯರಿಂಗ್‌ ಕೋರ್ಸ್‌ಗಳ ವಿಷಯಸೂಚಿಯಿರುತ್ತದೆ. ಮೂರನೇ ಸೆಮಿಸ್ಟರ್‌ನಿಂದ ನೀವು ಆಯ್ಕೆ ಮಾಡಿರುವ ವಿಷಯದ ಕಲಿಕೆ ಪ್ರಾರಂಭವಾಗುತ್ತದೆ.

ಬಿ.ಎಸ್ಸಿ (ಸಿಎಸ್) ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಈ ವಿಷಯಗಳಲ್ಲಿ ಹೆಚ್ಚಿನ ತಜ್ಞತೆಗಾಗಿ ಅಥವಾ ಸಂಶೋಧನೆ ಮಾಡುವ ಆಸಕ್ತಿಯಿದ್ದರೆ, ನಾಲ್ಕು ವರ್ಷದ ಬಿ.ಎಸ್ಸಿ ನಂತರ ನೇರವಾಗಿ ಪಿ.ಎಚ್‌ಡಿ ಮಾಡಬಹದು.

ಪ್ರಮುಖವಾಗಿ ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

l 2. ನಾನು ಈ ವರ್ಷ ನೀಟ್ ಮತ್ತು ಸಿಇಟಿ ಪರೀಕ್ಷೆ ಬರೆಯುತ್ತಿದ್ದು, ಮೆಡಿಕಲ್ ಮತ್ತು ಎಂಜಿನಿಯರಿಂಗ್‌ ಎರಡೂ ಕೋರ್ಸ್‌ಗಳಿಗೆ ಪ್ರವೇಶ ಸಿಕ್ಕರೆ, ಮುಂದಿನ ನಿರ್ಧಾರ ಮಾಡುವುದು ಹೇಗೆ? ದಯವಿಟ್ಟು ತಿಳಿಸಿ.

–ಹೆಸರು, ಊರು ತಿಳಿಸಿಲ್ಲ.

ಮೆಡಿಕಲ್ ಮತ್ತು ಎಂಜಿನಿಯರಿಂಗ್‌ ಎರಡೂ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಬೇಡಿಕೆ ಇದೆ. ಹಾಗಾಗಿ, ಈ ಎರಡೂ ಕ್ಷೇತ್ರಗಳು ಪಿಯುಸಿ ನಂತರ ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವಿಲ್ಲ. ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ನಿಮ್ಮಲ್ಲಿ ಸೇವಾ ಮನೋಭಾವ, ಅನುಭೂತಿ, ಸಮರ್ಪಣಾ ಮನೋಭಾವ, ನಿರಂತರ ಪರಿಶ್ರಮ, ಜ್ಞಾಪಕ ಶಕ್ತಿ, ತಾಳ್ಮೆಯಿರಬೇಕು.ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಯಶಸ್ಸಿಗಾಗಿ ತಾರ್ಕಿಕ ಪ್ರತಿಪಾದನಾ ಕೌಶಲ, ಗಣಿತದಲ್ಲಿ ಸ್ವಾಭಾವಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿವರಗಳಿಗೆ ಗಮನ ಇತ್ಯಾದಿ ಕೌಶಲಗಳಿರಬೇಕು. ಹಾಗಾಗಿ, ನಿಮ್ಮ ಆಕಾಂಕ್ಷೆ, ಆಸಕ್ತಿ, ಅಭಿರುಚಿ, ಕೌಶಲಗಳ ಮೌಲ್ಯಮಾಪನ ಮಾಡಿ ನಿರ್ಧಾರ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://youtu.be/oyUMPrEKPPU

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT