ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಿಗಳ ಪದೋನ್ನತಿಗೆ, ಕೌಶಲ ಹೆಚ್ಚಳಕ್ಕೆ ‘ಇ– ಎಂಬಿಎ‘ ಕೋರ್ಸ್‌

Last Updated 14 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಪದವೀಧರರು ಹಾಗೂ ಉದ್ಯೋಗಿಗಳು, ಕೌಶಲ ಹೆಚ್ಚಿಸಿಕೊಳ್ಳ ಬಯಸುವವರು ಇ– ಎಂಬಿಎ ಕೋರ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಪರಿಶ್ರಮವೂ ಅಗತ್ಯ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಕೋರ್ಸ್‌ ಇ-ಎಂಬಿಎ (ಎಕ್ಸಿಕ್ಯುಟಿವ್ ಎಂಬಿಎ). ಸಾಮಾನ್ಯವಾಗಿ ಪದವೀಧರರು, ಈಗಾಗಲೇ ಯಾವುದಾದರೂ ವೃತ್ತಿಯಲ್ಲಿರುವ ಉದ್ಯೋಗಿಗಳು ತಾವಿರುವ ಸಂಸ್ಥೆಯಲ್ಲಿಯೇ ಉನ್ನತ ಹುದ್ದೆಗೆ ಪದೋನ್ನತಿ ಬಯಸುವವರು ಹಾಗೂ ತಮ್ಮ ವೃತ್ತಿಗೆ ಸಂಬಂಧಿಸಿದ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಇ-ಎಂಬಿಎ ತರಗತಿಗೆ ಸೇರಿಕೊಳ್ಳಬಹುದು.

ತರಬೇತಿ ಹೇಗೆ?

ಇ-ಎಂಬಿಎ ಕೋರ್ಸ್‌ ಸಂಜೆ ಹಾಗೂ ಪ್ರತಿ ವಾರಾಂತ್ಯದಲ್ಲಿ ಬೋಧನೆ, ಆನ್‌ಲೈನ್ ತರಗತಿಗಳು, ನಿರ್ದಿಷ್ಟ ಟ್ಯುಟೋರಿಯಲ್‌ಗಳು ಮತ್ತು ಸಾಂಧರ್ಭಿಕ ಪೂರ್ಣ ದಿನದ ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ಎರಡು ವರ್ಷಗಳ ಪೂರ್ಣಾವಧಿ ಎಂಬಿಎಗೆ ಹೋಲಿಸಿದರೆ ಅತ್ಯಂತ ಕಠಿಣ ಪರಿಶ್ರಮದ ಮೂಲಕ ಈ ಕೋರ್ಸ್‌ ಅನ್ನು ಮುಗಿಸಬೇಕಾಗುತ್ತದೆ.

ಕೋರ್ಸ್‌ ಪ್ರಯೋಜನ

1. ಉತ್ತಮ ನಾಯಕತ್ವ ಕೌಶಲ ರೂಢಿಸಿಕೊಳ್ಳಬಹುದು: ವೃತ್ತಿಪರ ಉದ್ಯೋಗಿಗಳು ಈ ಕೋರ್ಸ್‌ನಲ್ಲಿ ಮ್ಯಾನೇಜ್‌ಮೆಂಟ್, ಸಂಘಟನಾ ನಡವಳಿಕೆ, ನಾಯಕತ್ವ ಮುಂತಾದ ವಿಷಯಗಳನ್ನು ಅಭ್ಯಸಿಸಬೇಕಾಗುತ್ತದೆ. ಈ ವಿಷಯಗಳನ್ನು ಓದುವಾಗ ಕೇಸ್ ಸ್ಟಡಿ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಇಲ್ಲಿ ಅವರು ಯಶಸ್ವಿ ಉದ್ಯಮಿಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸುವ ಜೊತೆಗೆ ತಾವು ಕೂಡ ಸಂಸ್ಥೆಯಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

2. ವಿಶ್ಲೇಷಣಾತ್ಮಕ ಚಿಂತನೆ: ಸಂಸ್ಥೆಯ ನಾಯಕನಾಗಿ ವಿಶ್ಲೇಷಣಾ ಕೌಶಲಗಳನ್ನು ಹೊಂದುವುದು ತುಂಬಾ ಅವಶ್ಯಕ. ವ್ಯವಹಾರದಲ್ಲಿನ ಆಗುಹೋಗುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇ-ಎಂಬಿಎ ವಿದ್ಯಾರ್ಥಿಗಳು ‘ಕ್ವಾಂಟಿಟೇಟಿವ್ ಟೆಕ್ನಿಕ್ಸ್‌’ ಎಂಬ ವಿಷಯವನ್ನು ಅಭ್ಯಸಿಸಬೇಕಾಗುತ್ತದೆ. ಈ ಕೋರ್ಸ್ ಮಾಡುವುದರಿಂದ ಹೆಚ್ಚು ಪರಿಣತಿಯನ್ನು ಪಡೆಯಬಹುದು.

3. ಸಂವಹನ ಕೌಶಲ: ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವರು, ಗ್ರಾಹಕರು, ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳೊಡನೆ ಉತ್ತಮ ರೀತಿಯಲ್ಲಿ ಮಾತನಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಕಂಪನಿಯಲ್ಲಿ ಸಿ-ಸೂಟ್ ಸ್ಥಾನದಲ್ಲಿರುವರಿಗೆ ಉತ್ತಮ ಸಂವಹನದ ಕಲೆ ಅತ್ಯವಶ್ಯಕ. ಈ ಕೌಶಲವನ್ನು ಸುಧಾರಿಸಿಕೊಳ್ಳಲು ಇ-ಎಂಬಿಎ ಕೋರ್ಸ್‌ ಅವಶ್ಯಕತೆ ಇದೆ.

ಸಮಸ್ಯೆ ಪರಿಹರಿಸುವ ಕೌಶಲಗಳು

ನೀವು ಉದ್ಯೋಗಿಯಾಗಿದ್ದುಕೊಂಡೇ ಇ-ಎಂಬಿಎ ಕೋರ್ಸ್ ಅನ್ನು ಯಶಸ್ವಿಯಾಗಿ ಮುಗಿಸಬಹುದು. ಈ ಕೋರ್ಸ್‌ನ ವಿಶೇಷತೆ ಏನೆಂದರೆ ನೀವು ಕೋರ್ಸ್‌ನಲ್ಲಿ ಕಲಿಯುತ್ತಿರುವುದನ್ನು ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಗಳಿಗೆ ಅನ್ವಯಿಸಿ ಇನ್ನೂ ಹೆಚ್ಚಿನ ಕೌಶಲ ಹಾಗೂ ಜ್ಞಾನವನ್ನು ಪಡೆಯಬಹುದು. ವೃತ್ತಿಯಲ್ಲಿನ ಪ್ರಸ್ತುತ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಸಂಸ್ಥೆಗಳು ಎದುರಿಸುವ ದಿನನಿತ್ಯದ ಸಮಸ್ಯೆಗಳನ್ನು ಸಹ ಬೇರೆ ಬೇರೆ ವಿಧಾನಗಳಲ್ಲಿ ಅಭ್ಯಸಿಸಿ ಹಾಗೂ ಪರಿಹಾರ ಅನ್ವಯಿಸಿ ಕಂಪನಿಗೆ ಲಾಭ ತಂದುಕೊಡಬಹುದು.

ಹೆಚ್ಚುವ ಆತ್ಮವಿಶ್ವಾಸ

ಈ ಕೋರ್ಸ್‌ಗೆ ಸೇರ ಬಯಸುವವರು ಎಲ್ಲರೂ ಬ್ಯುಸಿನೆಸ್ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿರುವುದಿಲ್ಲ. ಹೀಗಾಗಿ, ವ್ಯವಹಾರದ ಮೂಲ ಕಲ್ಪನೆ, ಉದ್ದೇಶಗಳು, ಕಂಪನಿಗೆ ಲಾಭ ತಂದು ಕೊಡುವ ವಿಚಾರಗಳನ್ನು ಕೂಲಂಕಷವಾಗಿ ಚರ್ಚಿಸುವ ಅವಕಾಶ ಇರುತ್ತದೆ. ಈ ಕೋರ್ಸ್‌ನಲ್ಲಿ ಅತೀ ಕಡಿಮೆ ಅವಧಿಯಲ್ಲಿಯೇ ವ್ಯವಹಾರ ಕೌಶಲಗಳನ್ನು ಕರಗತ ಮಾಡಿಕೊಂಡು ಹೆಚ್ಚಿನ ಆತ್ಮವಿಶ್ವಾಸದಿಂದ ಕಂಪನಿಯ ಏಳಿಗೆಗೆ ಕಾರಣರಾಗಬಹುದು.

ಕೋರ್ಸ್‌ ಅವಧಿ: 18ರಿಂದ 24 ತಿಂಗಳು

ಇ-ಎಂಬಿಎ ಕೋರ್ಸ್‌ ಇರುವ ಕೆಲವು ವಿದ್ಯಾಸಂಸ್ಥೆಗಳು

ದೇಶದ ಎಲ್ಲ ಐಐಎಂಗಳು

ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್– ದೆಹಲಿ ವಿಶ್ವವಿದ್ಯಾಲಯ

ಐಎಂಡಿ ಘಾಜಿಯಾಬಾದ್

ಎನ್ಎಂಐಎಂ - ಮುಂಬೈ

ಗ್ರೇಟ್ ಲೇಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ – ಚೆನ್ನೈ

ಸಿಂಬಯಾಸಿಸ್ - ಪುಣೆ

ಗೋವಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಗೋವಾ

ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್, ಗುರುಗ್ರಾಮ

ಎಸ್‌ಡಿಎಂ, ಐಎಂಡಿ, ಜೆಎಸ್ಎಸ್‌ ಸೈನ್ಸ್ ಅಂಡ್ ಟೆಕ್ನಾಲಾಜಿಕಲ್ ವಿಶ್ವವಿದ್ಯಾಲಯ ಮೈಸೂರು

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಎಂಬಿಎ ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT