ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್: ಐಒಟಿಯಲ್ಲಿ ಅವಕಾಶ ಅಗಾಧ

Last Updated 21 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕೃ ತಕ ಬುದ್ಧಿಮತ್ತೆ (ಎಐ), ಆಟೋಮೋಟಿವ್ ತಂತ್ರಜ್ಞಾನ, ಆಟೋಮೇಷನ್, ಐಒಟಿ, 5ಜಿ, ಏರೋಸ್ಪೇಸ್ ಮತ್ತು ಸೈಬರ್ ಸೆಕ್ಯೂರಿಟಿಯಂತಹ ನವೀನ ಕ್ಷೇತ್ರಗಳ ಏರುಗತಿಯಿಂದಾಗಿ ಎಂಜಿನಿಯರಿಂಗ್ ಕ್ಷೇತ್ರವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಎಂಜಿನಿಯರಿಂಗ್ ಕ್ಷೇತ್ರ ಅಗಾಧವಾಗಿದ್ದು, ಎಂಜಿನಿಯರಿಂಗ್‌ ಎಂದರೆ ಕೇವಲ ಕಂಪ್ಯೂಟರ್ ಸೈನ್ಸ್ ಮಾತ್ರವಲ್ಲ; ವಿವಿಧ ರೀತಿಯ ಎಂಜಿನಿಯರಿಂಗ್ ಪದವಿಗಳಿಂದಾಗಿ ವೃತ್ತಿ ಆಯ್ಕೆಗಳೂ ವಿಪುಲವಾಗಿವೆ.

ಹಲವಾರು ಆಯ್ಕೆಗಳಿರುವುದರಿಂದ ಸೂಕ್ತವಾದ ಕೋರ್ಸ್‌ ಅನ್ನು ಅಂತಿಮಗೊಳಿಸುವುದು ಸುಲಭವಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ನಿರ್ಧರಿಸಲು ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸುವುದು ಅತ್ಯಗತ್ಯ. ಅದರಂತೆ ಯಾವ ಸಂಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳು ಎಲ್ಲಿವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಎಂಜಿನಿಯರಿಂಗ್ ಪದವಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ಮತ್ತು ನಿರ್ಣಾಯಕ ಅಂಶವೆಂದರೆ ಆಯ್ಕೆ ಮಾಡಿಕೊಂಡ ಕೋರ್ಸ್‌ಗೆ ಪ್ರಾದೇಶಿಕವಾಗಿ ಮತ್ತು ಅಂತರರಾಷ್ಟ್ರೀಯವಾಗಿ ವೃತ್ತಿ ಭವಿಷ್ಯ ಹೇಗಿದೆ ಎಂಬುದರ ಬಗ್ಗೆ ತಿಳಿದಿರಬೇಕಾಗುತ್ತದೆ.

5ಜಿ, ರೊಬೋಟಿಕ್ಸ್‌

ಜಗತ್ತು ಹೊಸ ಸ್ತರದತ್ತ ದಾಪುಗಾಲು ಇಡುತ್ತಿರುವ ಈ ಸಂದರ್ಭದಲ್ಲಿ ಮನುಷ್ಯ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಅವಲಂಬಿಸಿದ್ದಾನೆ. ಎಂಜಿನಿಯರಿಂಗ್‌ನ ಪ್ರತಿಯೊಂದು ಕ್ಷೇತ್ರವೂ ಭವಿಷ್ಯದಲ್ಲಿ ನಮ್ಮ ಬಳಕೆಗೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಣತಿಯನ್ನು ಒಳಗೊಂಡಿರುತ್ತದೆ. ಅಧಿಕ ವೇಗದಲ್ಲಿ ಡೇಟಾ ಪ್ರಸರಣ ಮಾಡುವ 5ಜಿ ಸಂವಹನದ ತಂತ್ರಜ್ಞಾನದಿಂದ ಹಿಡಿದು ಪುನರಾವರ್ತಿತವಾದ ಮಾನವ ಉದ್ಯೋಗಗಳನ್ನು ಬದಲಿಸುವ ಸುಧಾರಿತ ರೊಬೋಟಿಕ್ಸ್ ತಂತ್ರಜ್ಞಾನದವರೆಗೂ ಇದರ ಹರವು ವ್ಯಾಪಿಸಿದೆ. ಪ್ರತಿಯೊಂದು ಉದ್ಯಮವೂ ಇಂತಹ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸಿದೆ.

ಪರಿಣತರ ಪ್ರಕಾರ ಡೇಟಾ ಮತ್ತು ಕೌಶಲಗಳು ಮುಂಬರುವ ವರ್ಷಗಳಲ್ಲಿ ಪ್ರಗತಿಗೆ ಕಾರಣವಾಗುವ ಪ್ರಮುಖ ಅಂಶಗಳು. ಈ ಹಿನ್ನೆಲೆಯಲ್ಲಿ ಡೇಟಾದಲ್ಲಿನ ಮೌಲ್ಯಗಳು ಮತ್ತು ಅದರ ಸುರಕ್ಷತೆಯು ಈ ಸಂದರ್ಭದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪರಿಣಾಮಕಾರಿಯಾದ ಸಂವಹನಕ್ಕಾಗಿ ಹೆಚ್ಚಿನ ಬ್ಯಾಂಡ್‌ವಿಡ್ತ್ ಮತ್ತೊಂದು ಪ್ರಮುಖವಾದ ಸಂಶೋಧನಾ ಕ್ಷೇತ್ರ. ಕಡಿಮೆ ಬ್ಯಾಂಡ್‌ವಿಡ್ತ್ ಬಳಸಿ ಗರಿಷ್ಠ ಡೇಟಾವನ್ನು ಹೆಚ್ಚಿನ ಸುರಕ್ಷತೆಯೊಂದಿಗೆ ರವಾನಿಸುವುದು ಸಂಶೋಧನೆಯ ಹಿಂದಿರುವ ಉದ್ದೇಶ.

ಐಒಟಿ ತಂತ್ರಜ್ಞಾನ

ಸಂಚಾರ ಮತ್ತು ಪೊಲೀಸರಿಗೆ ನೆರವಾಗುವ ಡ್ರೋನ್‌ ಮಾನಿಟರಿಂಗ್, ಐಒಟಿ ಮತ್ತು ಸ್ಮಾರ್ಟ್ ಸಾಧನಗಳನ್ನು ಬಳಸಿಕೊಂಡು ತಕ್ಷಣಕ್ಕೆ ನೀಡಲಾಗುವ ಆರೋಗ್ಯ ಅಪ್‌ಡೇಟ್‌ಗಳು, ಪರಿಣಾಮಕಾರಿಯಾದ ಶಿಕ್ಷಣಕ್ಕಾಗಿ ವರ್ಚುವಲ್ ರಿಯಾಲಿಟಿ.. ಇವೆಲ್ಲವೂ ಭವಿಷ್ಯದಲ್ಲಿ ಮಹತ್ವ ಎನಿಸುವಂತಹ ತಂತ್ರಜ್ಞಾನಗಳು. ಇವೆಲ್ಲವುಗಳಿಗೂ ಸುಧಾರಿತ ಮತ್ತು ಅಪ್‌ಡೇಟ್‌ ಮಾಡುವಂತಹ ಎಂಜಿನಿಯರಿಂಗ್ ಕೌಶಲಗಳ ಅಗತ್ಯವಿದೆ. ಇದು ಎಂಜಿನಿಯರ್‌ಗಳಿಗೆ ಹಿಂದೆಂದಿಗಿಂತಲೂ ವ್ಯಾಪಕವಾದ ವೃತ್ತಿ ಆಯ್ಕೆಗಳನ್ನು ಒದಗಿಸಿದೆ.

ವೈರ್‌ಲೆಸ್ ಕಮ್ಯೂನಿಕೇಷನ್, ರೊಬೋಟಿಕ್ಸ್, ಇಂಟರ್‌ನೆಟ್‌ ಆಫ್ ಥಿಂಗ್ಸ್, ಮೊಬೈಲ್ ಕಮ್ಯೂನಿಕೇಷನ್ ಮೊದಲಾದ ಉಪ ಕೋರ್ಸ್‌ಗಳನ್ನು ಕೂಡ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಏರೋಸ್ಪೇಸ್, ಕೆಮಿಕಲ್, ಮೆಕ್ಯಾನಿಕಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ಗಳಿಗೂ ಅವುಗಳದ್ದೇ ಆದ ಮಹತ್ವವಿದೆ. ಇದಲ್ಲದೇ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ಗಳನ್ನು ಸಂಯೋಜಿಸುವ ಎಂಜಿನಿಯರಿಂಗ್ ಪದವಿ ಪಡೆಯಬಹುದು. ವಿಎಲ್‌ಎಸ್‌ಐ ವಿನ್ಯಾಸ, ಎಂಬೆಡೆಡ್ ಸಿಸ್ಟಮ್ಸ್, ಪವರ್ ಇಂಡಸ್ಟ್ರಿ ಅಪ್ಲಿಕೇಶನ್‌ಗಳು ಮತ್ತು ಐಒಟಿಯಂತಹ ಹಾರ್ಡ್‌ವೇರ್ ವಿನ್ಯಾಸ ಕ್ಷೇತ್ರಗಳು ಭವಿಷ್ಯದ ಎಂಜಿನಿಯರ್‌ಗಳಿಗೆ ಸಾಕಷ್ಟು ಅವಕಾಶಗಳ ಬಾಗಿಲನ್ನು ತೆರೆಯಬಹುದು.

ಸೈಬರ್‌ ಸೆಕ್ಯೂರಿಟಿ

ಭವಿಷ್ಯದ ತಂತ್ರಜ್ಞಾನಗಳಾದ 5ಜಿ ಕಮ್ಯೂನಿಕೇಷನ್, ರೊಬೋಟಿಕ್ಸ್, ಸೈಬರ್ ಸೆಕ್ಯೂರಿಟಿ, ಮಶಿನ್ ಲರ್ನಿಂಗ್, ವರ್ಚುವಲ್ ರಿಯಾಲಿಟಿ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪದವಿ ಪಡೆದವರು ಇ-ಕಾಮರ್ಸ್, ಆರೋಗ್ಯ, ಸರ್ಕಾರಿ ಕ್ಷೇತ್ರಗಳು, ರೊಬೋಟಿಕ್ ಉತ್ಪಾದನೆ, ಡಿಜಿಟಲ್ ಕಲಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ವೃತ್ತಿಯನ್ನು ಹುಡುಕಿಕೊಳ್ಳಬಹುದು.

ಆರೋಗ್ಯ ಕ್ಷೇತ್ರದಲ್ಲಿ ರೊಬೋಟಿಕ್ಸ್ ಯೋಜನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ- ಮೆಕ್ಯಾನಿಕಲ್ ಎಂಜಿನಿಯರ್‌ ಯೋಜಿಸುವ ಭೌತಿಕ ವಿನ್ಯಾಸದೊಂದಿಗೆ, ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ರೂಪಿಸುವ ಸಂವಹನದ ಅಂಶವು ಕಂಪ್ಯೂಟರ್ ಎಂಜಿನಿಯರ್ ಅಭಿವೃದ್ಧಿಪಡಿಸಿದ ಕೋಡ್‌ನೊಂದಿಗೆ ನಡೆಯುತ್ತದೆ. ರಾಸಾಯನಿಕ ಮತ್ತು ಬಯೋಮೆಡಿಕಲ್ ಎಂಜಿನಿಯರ್‌ ಕಾರ್ಯನಿರ್ವಹಣೆಯು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಅದೇ ರೀತಿ ಎಂಜಿನಿಯರಿಂಗ್‌ನ ಪ್ರತಿಯೊಂದು ಕ್ಷೇತ್ರವೂ ಭವಿಷ್ಯದ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

(ಲೇಖಕರು: ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ಮತ್ತು ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮ್ಸ್ ಅಂಡ್‌ ಅಸೋಸಿಯೇಟ್ ಡೈರೆಕ್ಟರ್ (ಐಸಿಪಿಸಿ ಏಷ್ಯಾ ಸೈಟ್), ಅಮೃತಾ ವಿಶ್ವ ವಿದ್ಯಾಪೀಠಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT