ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಸರ್ಕಾರಿ ಶಾಲೆಗೂ ಕ್ಯೂ ನಿಲ್ತಾರೆ ಕಣ್ರೀ...!

Last Updated 27 ಮೇ 2019, 19:30 IST
ಅಕ್ಷರ ಗಾತ್ರ

ಏಪ್ರಿಲ್ 11 ಬಂದರೆ ಸಾಕು, ಈ ಶಾಲೆಯ ಆವರಣದಲ್ಲಿ ಸದಾ ಜನಜಂಗುಳಿ. ಅಪ್ಪ–ಅಮ್ಮನೊಂದಿಗೆ ಬರುವ ಬೆರಗುಗಣ್ಣಿನ ಚಿಣ್ಣರಿಗೆ ಹೈಸ್ಕೂಲ್ ಮೆಟ್ಟಿಲೇರುವ ಸಂಭ್ರಮ. ‘ಈ ಶಾಲೆಯಲ್ಲಿ ಸೀಟು ಸಿಕ್ಕರೆ ನಾನೇ ಅದೃಷ್ಟಶಾಲಿ’ ಎಂದು ಮನದೊಳಗೆ ನೆಚ್ಚಿನ ದೇವರನ್ನೆಲ್ಲ ನೆನಪಿಸಿಕೊಳ್ಳುತ್ತ ವಿದ್ಯಾ ದೇಗುಲ ಪ್ರವೇಶಿಸುತ್ತಾರೆ.

ಹೌದು, ಈ ಸರ್ಕಾರಿ ಶಾಲೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವುದು ಸುಲಭವಲ್ಲ. ಏಪ್ರಿಲ್ 10ಕ್ಕೆ 7ನೇ ತರಗತಿ ಫಲಿತಾಂಶ ಘೋಷಿಸುವುದನ್ನೇ ಕಾಯುವ ಪಾಲಕರು, ಮರುದಿನ ಬೆಳ್ಳಂಬೆಳಿಗ್ಗೆ ಊರಿನ ಹಾಲ್ಟಿಂಗ್ ಬಸ್ ಹತ್ತಿ, ಪ್ರವೇಶ ಅರ್ಜಿ ಪಡೆದುಕೊಳ್ಳಲು ಪೇಟೆಗೆ ಬರುತ್ತಾರೆ. ನಗರದ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದವರೂ ಈ ಸರ್ಕಾರಿ ಶಾಲೆಯಡೆಗೆ ಮುಖ ಮಾಡುತ್ತಾರೆ.

ಇದು ಉತ್ತರ ಕನ್ನಡ ಜಿಲ್ಲೆ ಶಿರಸಿ ಪಟ್ಟಣದಲ್ಲಿರುವ ಮಾರಿಕಾಂಬಾ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜಿನ ಗರಿಮೆ. ಇಲ್ಲಿ ಹೈಸ್ಕೂಲು ಪ್ರವೇಶಕ್ಕೆ ಇರುವಷ್ಟೇ ಪೈಪೋಟಿ ಪಿಯುಸಿ ಪ್ರವೇಶಕ್ಕೂ ಇದೆ. ಈ ಅಕ್ಷರ ದೇಗುಲದಲ್ಲಿ ಸರಿಸುಮಾರು 3000 ವಿದ್ಯಾರ್ಥಿಗಳಿದ್ದಾರೆ.

ವೆರ್ನಾಕ್ಯುಲರ್‌ನಿಂದ ದೇಶೀಯತೆಯೆಡೆಗೆ..

1865ರಲ್ಲಿ ಬ್ರಿಟಿಷರು ಶಿರಸಿ, ಹಳಿಯಾಳ ಮತ್ತು ಕುಮಟಾದಲ್ಲಿ ‘ಆಂಗ್ಲೊ ವೆರ್ನಾಕ್ಯುಲರ್ ಸ್ಕೂಲ್’ ತೆರೆದರು. ಈ ಬಗ್ಗೆ ಕರ್ನಾಟಕ ಗೆಝೆಟಿಯರ್‌ನಲ್ಲಿ ಉಲ್ಲೇಖವಿದೆ. ಅಂದಿನ ಆಂಗ್ಲೊ ವೆರ್ನಾಕ್ಯುಲರ್ ಸ್ಕೂಲ್‌ ಇಂದಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ. ಸ್ವಾತಂತ್ರ್ಯ ನಂತರ ನಗರ ಸ್ಥಳೀಯ ಸಂಸ್ಥೆಗಳು ರಚನೆಗೊಂಡ ಮೇಲೆ, ಆಗ ಶಿರಸಿಯಲ್ಲಿ ಅಸ್ತಿತ್ವಕ್ಕೆ ಬಂದ ಪುರಸಭೆ, ಈ ಶಿಕ್ಷಣ ಸಂಸ್ಥೆಗೆ ನೆಲದ ಅಧಿದೇವತೆಯಾಗಿರುವ ಮಾರಿಕಾಂಬೆಯ ಹೆಸರಿಟ್ಟು ಮರುನಾಮಕರಣ ಮಾಡಿತು. ಪ್ರೌಢ ಶಿಕ್ಷಣಕ್ಕೆ ಸೀಮಿತವಾಗಿದ್ದ ಶಾಲೆಯಲ್ಲಿ, 1983ರಿಂದ ಪಿಯುಸಿ ವಿಭಾಗ ಆರಂಭಗೊಂಡು, ವಿದ್ಯಾರ್ಥಿಗಳು ಇಲ್ಲಿಯೇ ಶಿಕ್ಷಣ ಮುಂದುವರಿಸಲು ಅನುಕೂಲವಾಗಿದೆ.

ಒಂದೂವರೆ ಶತಮಾನದ ಸುದೀರ್ಘ ಕಾಲಚಕ್ರವನ್ನು ದಾಟಿ ಈ ಶಿಕ್ಷಣ ಸಂಸ್ಥೆಯು ಸ್ಥಾಯಿಯಾಗಿ ನಿಂತಿದೆ. ‘8ನೇ ತರಗತಿಗೆ ಸೇರಲು ಪ್ರತಿವರ್ಷ ಸರಾಸರಿ 800 ಮಕ್ಕಳು ಪ್ರವೇಶ ಅರ್ಜಿ ಪಡೆದುಕೊಳ್ಳುತ್ತಾರೆ.
ಅರ್ಹತೆ ಆಧಾರದಲ್ಲಿ ಗರಿಷ್ಠ 400 ಮಕ್ಕಳಿಗೆ ಅವಕಾಶ ಕಲ್ಪಿಸುತ್ತೇವೆ. ಸುತ್ತಮುತ್ತಲ ಹಳ್ಳಿಗಳ ಮಕ್ಕಳಷ್ಟೇ ಅಲ್ಲ, ಸಮೀಪದ ತಾಲ್ಲೂಕು, ಹೊರ ಜಿಲ್ಲೆಗಳ ಮಕ್ಕಳಿಗೂ ಈ ಶಾಲೆಗೆ ಸೇರುವ ಆಸೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಮುಗಿಸಿದವರು, ಮುಂದಿನ ತರಗತಿಯ ಪ್ರವೇಶ ಕೇಳಿ ಬರುತ್ತಾರೆ.

ಹೀಗಾಗಿ, 9ನೇ ತರಗತಿಗೆ 300ಕ್ಕೂ ಅಧಿಕ ಅರ್ಜಿಗಳು ಬರುತ್ತವೆ’ ಎನ್ನುತ್ತಾರೆ ಪ್ರೌಢಶಾಲೆಯ ಉಪಪ್ರಾಚಾರ್ಯ ನಾಗರಾಜ ನಾಯ್ಕ.

ಏನಿದರ ವಿಶೇಷತೆ?

8ನೇ ತರಗತಿಯಲ್ಲಿ ಕನ್ನಡ ಮಾಧ್ಯಮದ ಐದು ವಿಭಾಗಗಳಿದ್ದರೆ, ಇಂಗ್ಲಿಷ್‌ ಮಾಧ್ಯಮ ಕಲಿಕೆಯ ಆಸಕ್ತರಿಗೆ ಎರಡು ವಿಭಾಗಗಳು ಮೀಸಲಿವೆ. ಸ್ಮಾರ್ಟ್ ಕ್ಲಾಸ್‌, ಪ್ರೊಜೆಕ್ಟರ್‌ ಮೂಲಕ ಪಾಠ ಹೇಳುವ ವ್ಯವಸ್ಥೆ ಇಲ್ಲಿದೆ. ಸಾಹಿತ್ಯದ ಒಲವಿನ ಮಕ್ಕಳು ವಾಚನಾಲಯದಲ್ಲಿರುವ ಪುಸ್ತಕಗಳನ್ನು ನೋಡಿಯೇ ಇಲ್ಲಿ ಕಲಿಯಲು ಬರುತ್ತಾರೆ. ಸಂಶೋಧನೆ ಹಂಬಲಿಸುವವರು ಪ್ರಯೋಗಾಲಯ, ಅಟಲ್‌ಜೀ ಟಿಂಕರಿಂಗ್ ಲ್ಯಾಬ್‌ಗೆ ಆಕರ್ಷಿತರಾಗುತ್ತಾರೆ.

‘ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದಾಗ ರಾಜ್ಯಕ್ಕೆ ಹತ್ತರೊಳಗಿನ ಸ್ಥಾನ ಪಡೆದ ಆರೆಂಟು ಮಕ್ಕಳು ನಮ್ಮ ಶಾಲೆಯವರಿರುತ್ತಾರೆ. ಪ್ರತಿಭಾ ಕಾರಂಜಿ, ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು ಬಹುಮಾನ ಬಿಟ್ಟುಕೊಟ್ಟವರೇ ಅಲ್ಲ. ಖೋಖೋದಲ್ಲಿ ನಿರಂತರ 25 ವರ್ಷಗಳಿಂದ ತಾಲ್ಲೂಕು ಮಟ್ಟದ ವೀರಾಗ್ರಣಿ ಉಳಿಸಿಕೊಂಡು ಬಂದಿದ್ದಾರೆ. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಸತತ ಮೂರು ವರ್ಷ ರಾಜ್ಯಕ್ಕೆ ಪ್ರಥಮರಾಗಿದ್ದಾರೆ’ ಎನ್ನುವಾಗ ನಾಗರಾಜ ಅವರ ಮುಖದಲ್ಲಿ ಸಂತೃಪ್ತ ಭಾವ.

ಬೋಗಿಗಳನ್ನು ಜೋಡಿಸಿದ ಟ್ರೇನಿನಂತೆ ಕಾಣುವ ಮೂರು ಬೃಹದಾಕಾರದ ಕಟ್ಟಡಗಳಿವೆ. ಮುಂದಿರುವುದು ಹಳೆಯ ಕಟ್ಟಡ. ಇದು ಶಾಲಾ ತರಗತಿಗಳಿಗಷ್ಟೇ ಅಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳು, ಹಲವಾರು ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಮತ ಪೆಟ್ಟಿಗೆಗಳನ್ನು ಕೂಡಿಡಲು ಮೊದಲು ನೆನಪಾಗುವುದೇ ಮಾರಿಕಾಂಬಾ ಪ್ರೌಢಶಾಲೆ. ಮಳೆಗಾಲದಲ್ಲಿ ಪೋಲಾಗುವ ನೀರನ್ನು ಹಿಡಿದಿಟ್ಟುಕೊಳ್ಳಲು ‘ಶಿರಸಿ ಜೀವಜಲ ಕಾರ್ಯಪಡೆ’ ಇಲ್ಲೊಂದು ಮಳೆನೀರು ಸಂಗ್ರಹ ತೊಟ್ಟಿ ನಿರ್ಮಿಸಿದೆ.

1500 ಮಕ್ಕಳಿರುವ ಈ ಶಾಲೆಯಲ್ಲಿ ಕೊಂಚವೂ ಕೊಂಕಿಲ್ಲದೇ ಬಿಸಿಯೂಟ ನಡೆಯುತ್ತದೆ. 20 ನಿಮಿಷಗಳಲ್ಲಿ ಮಕ್ಕಳು ಮಧ್ಯಾಹ್ನದ ಊಟ ಮುಗಿಸಿ, ತರಗತಿಯ ಕೊಠಡಿ ಸೇರುತ್ತಾರೆ, ಇನ್ನೊಂದಿಷ್ಟು ಉತ್ಸಾಹಿಗಳು ಆಟದ ಮೈದಾನಕ್ಕೆ ನುಗ್ಗುತ್ತಾರೆ.

ಶತಮಾನೋತ್ತರ ಸುವರ್ಣ ಸಡಗರದಲ್ಲಿರುವ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳ ಸೆಳೆತವನ್ನು ಮೀರಿ ನಿಂತಿದೆ. ಕಳೆದ ರಾಜ್ಯೋತ್ಸವ ಭಾಷಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರಿಕಾಂಬಾ ಶಾಲೆಯನ್ನು ಮಾದರಿ ಶಾಲೆಯೆಂದು ಉಲ್ಲೇಖಿಸಿದ್ದರು. ಎಲ್ಲ ಉಚಿತಗಳ ಜತೆಗೆ ತಂತ್ರಜ್ಞಾನ, ಶಿಕ್ಷಣ ಪೂರಕ ಸೌಲಭ್ಯಗಳನ್ನು ಒದಗಿಸಿದರೆ, ಪಾಲಕರು ಸರ್ಕಾರಿ ಶಾಲೆಗೇ ಮಕ್ಕಳನ್ನು ಕಳುಹಿಸಬಲ್ಲರು ಎಂಬುದಕ್ಕೆ ಈ ಶಾಲೆ ಉದಾಹರಣೆಯಾಗಿದೆ.

ಇಲ್ಲಿ ಕಲಿತವರು..

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ್, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತರಾಗಿದ್ದ ಎಂ.ಆರ್.ಹೆಗಡೆ, ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಅವರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT