ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಬಿ.ಕಾಂ ಪದವೀಧರರು ಸಾಫ್ಟ್‌ವೇರ್ ಎಂಜಿನಿಯರ್ ಆಗಬಹುದೇ?

Last Updated 19 ಸೆಪ್ಟೆಂಬರ್ 2022, 2:08 IST
ಅಕ್ಷರ ಗಾತ್ರ

1. ಬಿಕಾಂ ಪದವಿ ಹೊಂದಿದವರು ಕೂಡ ಸಾಫ್ಟ್‌ ವೇರ್‌ ಎಂಜಿನಿಯರ್ ಆಗಬಹುದೇ? ‌ಇದಕ್ಕೆ ಏನು ಓದಬೇಕು?ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಬೇಡಿಕೆ ಹೇಗಿದೆ?

ಅಮೋಘ, ತುಮಕೂರು.

‘ಸಾಫ್ಟ್‌ವೇರ್‌ ಎಂಜಿನಿಯರಿಂಗ್‌’ ಬೇಡಿಕೆಯಲ್ಲಿರುವ ಕ್ಷೇತ್ರ. ನೀವು ಪಿಯುಸಿ/ಪದವಿಯಲ್ಲಿ ಗಣಿತವನ್ನು ಓದಿ, ಕನಿಷ್ಠ ಶೇ 50 ಅಂಕಗಳನ್ನು ಗಳಿಸಿದ್ದರೆ, ಆಯ್ದ ಕೆಲವು ಕಾಲೇಜುಗಳಲ್ಲಿ ಎಂಸಿಎ ಮಾಡಿ ಸಾಫ್ಟ್‌ವೇರ್‌ ವೃತ್ತಿಯನ್ನು ಅರಸಬಹುದು. ಗಣಿತ ಓದಿಲ್ಲದಿದ್ದರೆ, ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್‌ಗಳಾದ ಮಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ ಕೋರ್ಸ್‌ಗಳನ್ನು ಮಾಡಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

2. ನಾನು ಬಿಕಾಂ ಪದವಿ ಮುಗಿಸಿದ್ದೇನೆ. ಮುಂದೆ ಬಿ.ಇಡಿ ಮಾಡಬೇಕಾ ಅಥವಾ ಎಂ.ಕಾಂ ಪದವಿಗೆ ಹೋಗಬೇಕಾ ಎನ್ನುವ ಗೊಂದಲವಿದೆ. ಎಲ್ಲದಕ್ಕೂ ಹಣಕಾಸಿನ ತೊಂದರೆ ಅಡ್ಡಿಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾನು ಏನು ಮಾಡಬಹುದು?

ಊರು, ಹೆಸರು ತಿಳಿಸಿಲ್ಲ.

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ವೃತ್ತಿಯ ಬಗ್ಗೆ ಚಿಂತಿಸಿ. ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವ ರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಜೊತೆಗೆ, ನಿಮಗೆ ಸಹಾಯವಾಗಬಹುದಾದ ಅನೇಕ ಅರೆಕಾಲಿಕ ಕೆಲಸಗಳನ್ನು ಕೂಡಾ ಮಾಡಬಹುದು. ವೃತ್ತಿ ಯೋಜನೆಯನ್ನು ಮಾಡುವ ಪ್ರಕ್ರಿಯೆ ಕುರಿತ ಈ ವಿಡಿಯೊ ವೀಕ್ಷಿಸಿ:

3. ನಾನು ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಕಾರಣಾಂತರದಿಂದ ಬಿಎ ಪದವಿಯನ್ನು ದೂರಶಿಕ್ಷಣದಲ್ಲಿ ಕಲಿತಿದ್ದೇನೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ (2009) ಉತ್ತೀರ್ಣನಾಗಿದ್ದು, ಇನ್ನೂ ಹೆಚ್ಚಿನ ಅಂಕ ಪಡೆಯುವ ಆಸಕ್ತಿ ಹೊಂದಿದ್ದೇನೆ. ಈಗ ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆ ಬರೆಯಲು ಸಾಧ್ಯವಿದೆಯೇ?

ಶಿವಕುಮಾರ್, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೊದಲ ಬಾರಿ ಬರೆದ ಎರಡು ವರ್ಷಗಳ ಒಳಗೆ ಮರು ಪರೀಕ್ಷೆಯನ್ನು ಬರೆಯಬಹುದು. ಖಚಿತವಾದ ಮಾಹಿತಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಸಂಪರ್ಕಿಸಿ.

4. ನಾನು ಬಿಕಾಂ ಮುಗಿಸಿ ಬಿ.ಇಡಿ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ, ನನ್ನ ಇಷ್ಟದ ವಿಷಯ ಸಮಾಜ ವಿಜ್ಞಾನ. ಇಲ್ಲಿಯವರೆಗೆ ಅಪ್ಪ ಅಮ್ಮ ಹೇಳಿದ್ದನ್ನು ಓದಿದ್ದೇನೆ. ಇನ್ನು ಮುಂದೆ ನನ್ನ ಇಷ್ಟದ ವಿಷಯ ತೆಗೆದುಕೊಂಡು, ಅದರಲ್ಲಿ ಮುಂದುವರಿಯುವುದು ಹೇಗೆ ಎಂದು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು. ನಂತರ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ, ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.

ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ. ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್‌ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ.

5. ನಾನು ಎಂಜಿನಿಯರಿಂಗ್ (ಕಂಪ್ಯೂಟರ್ ವಿಜ್ಞಾನ) ಮಾಡಬೇಕು ಅಂದುಕೊಡಿದ್ದೇನೆ. ಇದರ ಜೊತೆಗೆ ಪೂರಕ ಕೋರ್ಸ್ ಇದೆಯೇ ?

ಹೆಸರು, ಊರು ತಿಳಿಸಿಲ್ಲ.

ಕಂಪ್ಯೂಟರ್ ವಿಜ್ಞಾನ ವಿಸ್ತಾರವಾದ ಕ್ಶೇತ್ರ. ಉದಾಹರಣೆಗೆ, ಮಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪ್ರೋಗ್ರಾಮಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ನೆಟ್‌ವರ್ಕಿಂಗ್, ಗೇಮ್ಸ್, ಗ್ರಾಫಿಕ್ಸ್ ಇತ್ಯಾದಿ ವಿಭಾಗಗಳಿವೆ. ಬಿಇ/ಬಿಟೆಕ್ ಜೊತೆಗೆ ಕೌಶಲಾಭಿವೃದ್ಧಿಗಾಗಿ, ನಿಮ್ಮ ಆಸಕ್ತಿಯ ಅನುಸಾರ ಮೇಲೆ ಉಲ್ಲೇಖಿಸಿದ ವಿಭಾಗಗಳಲ್ಲಿ ಅರೆಕಾಲಿಕ ಕೋರ್ಸ್ ಮಾಡುವುದು ಒಳ್ಳೆಯದು. ನಂತರ ಹೆಚ್ಚಿನ ತಜ್ಞತೆಗಾಗಿ, ಎಂ.ಇ/ಎಂ.ಟೆಕ್ ಕೋರ್ಸ್ ಮಾಡಬಹುದು.

6. ನನ್ನ ಪ್ರೌಢಶಾಲೆಯ ದಾಖಲೆಗಳಲ್ಲಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂದಿದೆ. ಆದರೆ, ದಾಖಲಾತಿ ದಿನಾಂಕ ಮತ್ತು ಶಾಲೆ ಬಿಟ್ಟ ದಿನಾಂಕದ ವರ್ಷ 2011 ಮತ್ತು 2014ರ ಬದಲು, 2011 ಎಂದು ಮಾತ್ರ ನಮೂದಿಸಲಾಗಿದೆ. ಸೆಪ್ಟೆಂಬರ್ 23ರಂದು ನನಗೆ ಎಸ್‌ಡಿಎ ದಾಖಲಾತಿ ಪರಿಶೀಲನೆ ಇದೆ. ಇದರಿಂದ ತೊಂದರೆಯಾಗುತ್ತದೆಯೆ? ಸರಿಪಡಿಸುವುದು ಹೇಗೆ?

ಸಂದೀಪ್, ಹೊಸದುರ್ಗ.

ನಮ್ಮ ಅಭಿಪ್ರಾಯದಂತೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಸರಿಯಾದ ಮಾಹಿತಿಯಿದ್ದರೆ ದಾಖಲಾತಿ ಪರಿಶೀಲನೆಯಲ್ಲಿ ತೊಂದರೆ ಯಾಗಲಾರದು. ಈಗ ಸಮಯದ ಅಭಾವ ವಿರುವುದರಿಂದ, ಎಸ್‌ಡಿಎ ಪ್ರಕ್ರಿಯೆಯ ನಂತರ ಅಗತ್ಯವೆನಿಸಿದರೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಸಂಪರ್ಕಿಸಿ.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

3. ಓದಿ ಉತ್ತಮ ಅಂಕ ಪಡೆಯುವುದು ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗಲೆಂದು. ಅಂದರೆ, ಎಲ್ಲರೂ ಓದುವುವುದು ಹಣದ ಚೀಲ ಹಿಡಿಯುವುದಕ್ಕಾಗಿಯೇ; ಯಾರಿಗೂ ಜ್ಞಾನಾರ್ಜನೆ ಬೇಕಿಲ್ಲ ಅನಿಸುತ್ತದೆ. ಆದರೂ, ಚೆನ್ನಾಗಿ ಕಲಿತು ಜೀವನದಲ್ಲಿ ಮುಂದೆ ಬರುವುದು ಹೇಗೆ ಎಂದು ಹೇಳಿಕೊಡುವಿರಾ ‌?

ನಿಂಗಪ್ಪ, ನ್ಯಾಮತಿ.

ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಮೂರು ಮೂಲಭೂತ ಅಂಶಗಳ ಅಗತ್ಯವಿದೆ. ಒಂದು, ನಮಗಿಷ್ಟವಿರುವ ವಿಷಯದ ಬಗ್ಗೆ ಜ್ಞಾನಾರ್ಜನೆ ಮಾಡುವುದು. ಎರಡು, ನಾವು ಕಲಿತ ಜ್ಞಾನವನ್ನು ವೃತ್ತಿಯಲ್ಲಿ ಉಪಯೋಗಿಸಲು ಅಗತ್ಯವಾದ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳನ್ನು (ಉದಾಹರಣೆಗೆ, ಸೇವಾ ಮನೋಭಾವ, ಜ್ಞಾಪಕ ಶಕ್ತಿ, ಗಣಿತದಲ್ಲಿ ತಜ್ಞತೆ, ಸಂಖ್ಯಾಶಾಸ್ತ್ರ ತಜ್ಞತೆ, ಕ್ರಮಾವಳಿ, ವಿಶ್ಲೇಷಾತ್ಮಕ ಕೌಶಲ, ದತ್ತಾಂಶ ನಿರ್ವಹಣೆ, ಯೋಜನೆಯ ನಿರ್ವಹಣೆ, ನಾಯಕತ್ವದ ಸಾಮರ್ಥ್ಯ ಇತ್ಯಾದಿ) ಬೆಳೆಸಿಕೊಳ್ಳುವುದು. ಮೂರನೆಯ ಮತ್ತು ಅತಿ ಮುಖ್ಯವಾದ ಅಂಶ, ನಿಮ್ಮ ಮನೋಭಾವ ಅಥವಾ ನಿಮ್ಮ ನಿಲುವುಗಳು (ಪ್ರಾಮಾಣಿಕತೆ, ನಿಷ್ಠೆ, ಸ್ವಯಂ ಪ್ರೇರಣೆ, ಆಶಾಭಾವನೆ, ಉತ್ಸಾಹ, ದೃಢತೆ, ಸಹಕಾರ ಇತ್ಯಾದಿ).

ಇವೆಲ್ಲದರ ಜೊತೆಗೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳನ್ನು ಸಾಧಿಸುವ ಆತ್ಮವಿಶ್ವಾಸವಿದ್ದರೆ, ನೀವು ಯಶಸ್ಸನ್ನು ಗಳಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ:
http://www.vpradeepkumar.com/master-the-triangle-of-success-knowledge-skills-attitudes/‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT