ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೇ ಮಾಡಿ ನೋಡಿ: ದೂರದರ್ಶಕ ತಯಾರಿಕೆ ಹೇಗೆ?

Last Updated 6 ಜೂನ್ 2022, 0:30 IST
ಅಕ್ಷರ ಗಾತ್ರ

ದೂರದರ್ಶಕ ಅಥವಾ ಟೆಲಿಸ್ಕೋಪ್ ಎಂದು ಕೂಡಲೇ ನೆನಪಿಗೆ ಬರುವುದು ವಿಜ್ಞಾನಿ ಗೆಲಿಲಿಯೊ ಹೆಸರು. ಏಕೆಂದರೆ, ನಿಮ್ನ ಮತ್ತು ಪೀನಮಸೂರಗಳನ್ನು ಉಪಯೋಗಿಸಿ ದೂರದರ್ಶಕವನ್ನು ತಯಾರಿಸಿದ ಮೊದಲ ವಿಜ್ಞಾನಿ ಅವರು.

ದೂರದಲ್ಲಿರುವ ವಸ್ತುಗಳನ್ನು ತೀರ ಸಮೀಪದಿಂದ ನೋಡುವಂತಹ ಈ ದೂರದರ್ಶಕವನ್ನು ಕಂಡು ಹಿಡಿದ ಗೆಲಿಲಿಯೊಗೆ ಅಭಿನಂದನೆ ಸಲ್ಲಿಸಬೇಕು.

ಅಂದ ಹಾಗೆ, ಈ ದೂರದರ್ಶಕಗಳಲ್ಲಿ ಬೇರೆ ಬೇರೆ ವಿಧಗಳಿವೆ. ಮಸೂರಗಳನ್ನು ಉಪಯೋಗಿಸಿ ತಯಾರಿಸಿದ ದೂರದರ್ಶಕಗಳಿಗೆ ವಕ್ರೀಭವನ ದೂರದರ್ಶಕ ಎನ್ನುತ್ತಾರೆ. ನಿಮ್ನ ದರ್ಪಣ ಅಂದರೆ ಕನ್ನಡಿ ಬಳಸಿ ತಯಾರಿಸುವುದಕ್ಕೆ ಪ್ರತಿಫಲನ ದೂರದರ್ಶಕಗಳು ಎಂದೂ ಕರೆಯುತ್ತಾರೆ.

ದೂರದರ್ಶಕದ ಸಾಮರ್ಥ್ಯ ಅಥವಾ ಗಾತ್ರವನ್ನು ಸಾಮಾನ್ಯವಾಗಿ ಆಬ್ಜೆಕ್ಟಿವ್‌ ಲೆನ್ಸ್‌(objective lens) ಅಂದರೆ ವಸ್ತು ಮಸೂರದ ವ್ಯಾಸದಿಂದ ಸೂಚಿಸುತ್ತಾರೆ. ದೂರದರ್ಶಕದ ಸಾಮರ್ಥ್ಯವು, ಮಸೂರದ ಗಾತ್ರ ಹೆಚ್ಚಾದಂತೆ ಹೆಚ್ಚುತ್ತಾ ಹೋಗುತ್ತದೆ.

ಸಾಮಾನ್ಯವಾಗಿ M=F/fe ಸೂತ್ರವನ್ನು ದೂರದರ್ಶಕ ಒಳಗೊಂಡಿರುತ್ತದೆ. ಅಂದರೆ M ಪ್ರತಿಬಿಂಬ, F ಸಂಗಮದೂರ (ಫೋಕಲ್ ಲೆನ್ತ್‌), fe ನೇತ್ರ ಮಸೂರದ(eye piece)ಸಂಗಮ ದೂರ ಎಂದು ತಿಳಿಯಬೇಕು.

ಈಗ ನಾವು ಮಸೂರಗಳನ್ನು ಬಳಸಿ ಸರಳವಾಗಿ ತಯಾರಿಸಬಹುದಾದ ವಕ್ರೀಭವನ ದೂರದರ್ಶಕ ರಚನಾ ವಿಧಾನ ತಿಳಿಯೋಣ.

ಬೇಕಾಗುವ ಪರಿಕರಗಳು

1. ಪೀನಮಸೂರ 50 ಸೆಂ. ಮೀ ಸಂಗಮದೂರ(F L)

2. 10x ಅಕ್ಷಿ ಮಸೂರ (eye piece)

3. 2 ಇಂಚು ವ್ಯಾಸದ ಪಿ.ವಿ.ಸಿ.ಕೊಳವೆ (50 ಸೆಂ. ಮೀ ಸಂಗಮದೂರ)

4. ಎರಡು ಪೈಪ್‌ ತುದಿ ಮುಚ್ಚುವ ಮುಚ್ಚಳ (endcap)

5. 15 ಸೆಂ. ಮೀ ಉದ್ದದ 3/4 ಇಂಚು ಪಿ.ವಿ.ಸಿ ಕೊಳವೆ.

ತಯಾರಿಸುವ ವಿಧಾನ

50 ಸೆಂ. ಮೀ ಉದ್ದದ ಪಿ.ವಿ.ಸಿ ಕೊಳವೆಯನ್ನು ಸರಿಯಾಗಿ ಕತ್ತರಿಸಿಕೊಳ್ಳಿ.

ಸುಮಾರು 50 ಸೆಂ. ಮೀ ಸಂಗಮದೂರದ ವಸ್ತು ಮಸೂರವನ್ನು(objective lens) ತೆಗೆದುಕೊಂಡು ಸಂಗಮದೂರ ಕಂಡು ಹಿಡಿದು, ಒಂದು end cap ನಲ್ಲಿ ಮಸೂರಕ್ಕಿಂತ ಸ್ವಲ್ಪ ಅಗಲದ ರಂಧ್ರ ಮಾಡಿ ವಸ್ತು ಮಸೂರವನ್ನುಸಿಕ್ಕಿಸಿ.

ವಸ್ತು ಮಸೂರ ಸಿಕ್ಕಿಸಿದ ಎಂಡ್‌ಕ್ಯಾಪ್‌ ಅನ್ನು ಕೊಳವೆಯ ಒಂದು ಕಡೆ ಫಿಕ್ಸ್ ಮಾಡಿ.

ಈಗ ವಸ್ತು ಮಸೂರವನ್ನು 15 ಸೆಂ.ಮೀ ಉದ್ದದ 3/4 ಇಂಚಿನ ಕೊಳವೆಯ ಒಂದು ಭಾಗಕ್ಕೆ ಸಿಕ್ಕಿಸಿ. ಅದನ್ನು ರಂಧ್ರ ಮಾಡಿರುವ ಇನ್ನೊಂದು ಎಂಡ್‌ ಕ್ಯಾಪ್‌ಗೆ ಸೇರಿಸಿ, ಹಾಗೆಯೇ ದೊಡ್ಡ ಕೊಳವೆಗೆ ಸಿಕ್ಕಿಸಿ. ಈಗ ವಕ್ರೀಭವನ ದೂರದರ್ಶಕ ತಯಾರಿಯಾಯಿತು.

ದೂರದರ್ಶಕದ ಅಕ್ಷಿ ಮಸೂರ (Eye piece) ಇರುವ ಭಾಗದಿಂದ ದೂರದ ವಸ್ತುಗಳನ್ನು ನೋಡಿ. ವಸ್ತುಗಳು ಸ್ಪಷ್ಟವಾಗಿ ಕಾಣುವ ತನಕ ಅಕ್ಷಿ ಮಸೂರವನ್ನು ಹಿಂದಕ್ಕೆ ಮುಂದಕ್ಕೆ ಸರಿದಾಡಿಸಿ. ದೂರದ ವಸ್ತುಗಳು ತುಂಬಾ ಹತ್ತಿರಕ್ಕೆ ಬಂದಂತೆ ಕಾಣುತ್ತವೆ.

ರಾತ್ರಿ ವೇಳೆ ಈ ರೀತಿಯ ಗೆಲಿಲಿಯೊ ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈ, ಕಂದಕಗಳು, ಗುಡ್ಡ ಬೆಟ್ಟಗಳನ್ನು ಸ್ಪಷ್ಟವಾಗಿ ನೋಡಬಹುದು. ಇದನ್ನು ಪಕ್ಷಿ ವೀಕ್ಷಣೆಗೆ ಬಳಸಬಹುದು.

ಆಕ್ರೊಮ್ಯಾಟಿಕ್‌ ಲೆನ್ಸ್‌(Achromatic lens) ಬಳಸಿದರೆ ಇನ್ನೂ ಉತ್ತಮ ದೂರದರ್ಶಕ ತಯಾರಿಸಬಹುದು. ಇದು ದೊರೆಯುವುದು ದುರ್ಲಭ.

ದೂರದರ್ಶಕ ತಯಾರಿ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9448565534

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT