ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷಾ ವಿಷಯಕ್ಕೆ ಸಿದ್ಧತೆ ಹೇಗೆ?

Last Updated 24 ಜೂನ್ 2021, 5:20 IST
ಅಕ್ಷರ ಗಾತ್ರ

ಪ್ರತಿವರ್ಷ ರೈಲ್ವೆ, ಬ್ಯಾಂಕ್, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್ ನೇಮಕಾತಿ ಪರೀಕ್ಷೆಗಳು ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸುತ್ತಿರುತ್ತಾರೆ. ವಿವಿಧ ಇಲಾಖೆಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ‘ಸಾಮಾನ್ಯ ಜ್ಞಾನ’ದ ಜೊತೆಗೆ ‘ಸಾಮಾನ್ಯ ಕನ್ನಡ’ ಮತ್ತು ‘ಕಡ್ಡಾಯ ಕನ್ನಡ’ ಪ್ರಶ್ನೆಪತ್ರಿಕೆಗಳು ಇರಲಿದ್ದು, ಇವು ಅಭ್ಯರ್ಥಿಗಳ ಭಾಷಾ ಹಿಡಿತವನ್ನು ಪರೀಕ್ಷಿಸುವ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ.

ಪ್ರಸ್ತುತ ಪೊಲೀಸ್ ಇಲಾಖಾ ಪರೀಕ್ಷೆಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ಇದರ ತಯಾರಿಯಲ್ಲಿ ‘ಕಡ್ಡಾಯ ಕನ್ನಡ’ ಮತ್ತು ‘ಸಾಮಾನ್ಯ ಕನ್ನಡ’ ಪತ್ರಿಕೆಗಳನ್ನು ನಿರ್ಲಕ್ಷಿಸುವಂತಿಲ್ಲ. ಈ ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನಡೆಸಲಾಗುವುದು. ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಪ್ರಶ್ನೆಗಳನ್ನು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಕೇಳಲಾಗುತ್ತದೆ. ಆದರೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಸ್ಪರ್ಧಾರ್ಥಿಗಳು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ.

ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ನಿಮ್ಮ ಕನ್ನಡ ಭಾಷಾ ಜ್ಞಾನದ ಬಗ್ಗೆ 100 ಅಂಕದ ಪ್ರಶ್ನೆಗಳು ಇರುತ್ತವೆ. ಪ್ರೌಢಶಾಲೆಯಿಂದ ಪದವಿ ಹಂತದವರೆಗೆ ಅಭ್ಯರ್ಥಿಯು ಪಡೆದಿರುವ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತವೆ.

* ಕನ್ನಡ ವ್ಯಾಕರಣದ ಗ್ರಹಿಕೆ

* ಕಾಗುಣಿತ ಮತ್ತು ಪದಗಳನ್ನು ಬಳಸುವ ಸಾಮರ್ಥ್ಯ

* ವಿರುದ್ಧಾರ್ಥಕ ಪದಗಳು, ಸಮಾನಾರ್ಥಕ ಪದಗಳ ಪರಿಜ್ಞಾನಗಳ ಕುರಿತ ಪ್ರಶ್ನೆಗಳು

* ಭಾಷೆಯ ಅರಿವು ಮತ್ತು ಗ್ರಹಿಸುವ ಸಾಮರ್ಥ್ಯ ಮೊದಲಾದವುಗಳ ಮೂಲಕ ಅಭ್ಯರ್ಥಿಯ ಭಾಷಾ ಪರಿಣತಿಯನ್ನು ಪರೀಕ್ಷಿಸಲಾಗುತ್ತದೆ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯಷ್ಟೇ ಮಹತ್ವವನ್ನು ಸಾಮಾನ್ಯ ಕನ್ನಡ ಪತ್ರಿಕೆಗೂ ನೀಡಿದರೆ ಮಾತ್ರ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯ. ಕೆಪಿಎಸ್‌ಸಿ ನಡೆಸುವ ಪಿಎಸ್‌ಐ, ಕೆಎಎಸ್ ಮುಖ್ಯ ಪರೀಕ್ಷೆಗಳಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಗಳಿರುತ್ತವೆ. ಈ ಪರೀಕ್ಷೆಯಲ್ಲಿ ಮಾತ್ರ ವಿವರಣಾತ್ಮಕ ಉತ್ತರಗಳನ್ನು ನೀಡಬೇಕಾಗುತ್ತದೆ. ಇದು ಬರವಣಿಗೆ ಆಧಾರಿತ ಪತ್ರಿಕೆಯಾಗಿದ್ದು, ಇದರಲ್ಲಿ ಬರಹದ ಕೌಶಲವನ್ನು ಪರೀಕ್ಷಿಸಲಾಗುತ್ತದೆ.

ಈ ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಸ್ಪರ್ಧಾರ್ಥಿಯ ಬರಹದ ಕೌಶಲಗಳನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತವೆ.

* ಅಭ್ಯರ್ಥಿಯ ವಿಷಯದ ಸಮಗ್ರ ಗ್ರಹಿಕೆಯ ಸಾಮರ್ಥ್ಯ

* ಪದ ಪ್ರಯೋಗ ಮತ್ತು ಪದ ಜ್ಞಾನ

* ವಿಷಯವನ್ನು ಸಂಕ್ಷೇಪಿಸುವುದು

* ಲಘು ಪ್ರಬಂಧ

* ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ

ಈ ಲಿಖಿತ ಪರೀಕ್ಷೆಗಳಲ್ಲಿ ಸ್ಪರ್ಧಾರ್ಥಿಗಳ ಭಾಷಾ ಸಾಮರ್ಥ್ಯವನ್ನು ಅಳೆಯಲಾಗುತ್ತದೆ.

ಸಾಮಾನ್ಯ ಕನ್ನಡ ಮತ್ತು ಕಡ್ಡಾಯ ಕನ್ನಡ ಪರೀಕ್ಷೆಯ ಸಿದ್ಧತೆಗೆ ಸಲಹೆಗಳು

* ಸ್ಪರ್ಧಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪರೀಕ್ಷೆಯ ಪಠ್ಯಕ್ರಮವನ್ನು ಸಂಗ್ರಹಿಸಿ, ಸಮಗ್ರವಾಗಿ ಗ್ರಹಿಸಬೇಕು.

* ಉತ್ತಮ ಬರವಣಿಗೆ ರೂಢಿಸಿಕೊಳ್ಳಲು ದಿನಪತ್ರಿಕೆಗಳ ಸಂಪಾದಕೀಯ ಅಂಕಣವನ್ನು ಸಂಗ್ರಹಿಸಿ ನೋಟ್ಸ್ ಮಾಡಿಕೊಳ್ಳಬೇಕು.

* ಹಳೆಯ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಬರೆದು ಅಭ್ಯಸಿಸಬೇಕು.

* ಇದು ಭಾಷಾ ವಿಷಯವಾಗಿರುವುದರಿಂದ ಓದಿನಷ್ಟೇ ಬರವಣಿಗೆಗೂ ಒತ್ತು ನೀಡಬೇಕು.

* ತಂತ್ರಜ್ಞಾನ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಬಳಸಿಕೊಳ್ಳಬೇಕು.

* ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು.

* ಸಾಮಾನ್ಯ ಜ್ಞಾನ ಪತ್ರಿಕೆಯಷ್ಟೇ ಸಾಮಾನ್ಯ ಕನ್ನಡ, ಕಡ್ಡಾಯ ಕನ್ನಡ ಪತ್ರಿಕೆಗಳಿಗೂ ಮಹತ್ವವನ್ನು ನೀಡಿ ಅಭ್ಯಸಿಸಬೇಕು.

(ಲೇಖಕಿ: ಸಹಾಯಕ ಪ್ರಾಧ್ಯಾಪಕರು, ವಿಜಯ ಪದವಿಪೂರ್ವ ಕಾಲೇಜು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT