ವಿದ್ಯಾರ್ಥಿಗಳು ನಿಗದಿತ ಪಠ್ಯಕ್ರಮದಿಂದ ಆಚೆಗೂ ಪಡೆಯಬೇಕಾದ ಜ್ಞಾನಕ್ಕೆ ಪೂರಕವಾಗುವ ‘ಭಾರತೀಯ ಜ್ಞಾನ ವ್ಯವಸ್ಥೆ’ಯ (ಐಕೆಎಸ್) ಅಳವಡಿಕೆಗೆ ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಹಾಗಿದ್ದರೆ, ಯಾವುದೆಲ್ಲ ಜ್ಞಾನ ಪರಂಪರೆ?

ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ಜ್ಞಾನ ಪರಂಪರೆಯನ್ನು ಪರಿಚಯಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಪ್ರಮುಖ ಆಶಯಗಳಲ್ಲಿ ಒಂದು. 2020ಕ್ಕಿಂತ ಹಿಂದಿನ ಶಿಕ್ಷಣ ನೀತಿಗಳಲ್ಲೂ ಇಂತಹ ಪ್ರಸ್ತಾಪ ಇತ್ತು. ವಿಜ್ಞಾನ, ಕಲೆ, ವಾಣಿಜ್ಯ ಸೇರಿದಂತೆ ಎಲ್ಲ ಕೋರ್ಸುಗಳಲ್ಲೂ ನಿಗದಿತ ಪಠ್ಯಕ್ರಮದಿಂದ ಆಚೆಗೂ ತಿಳಿಯಬೇಕಾದ ಹಲವು ವಿಷಯಗಳು ಇರುತ್ತವೆ. ನಮ್ಮ ಶಿಕ್ಷಣ ನೀತಿ ಶಿಫಾರಸು ಮಾಡಿರುವ ಭಾರತೀಯ ಜ್ಞಾನ ವ್ಯವಸ್ಥೆಯು (ಐಕೆಎಸ್) ಅಂತಹ ಹಲವು ಜ್ಞಾನ ಪ್ರಸ್ಥಾನಗಳ ಪ್ರಸರಣಕ್ಕೆ ನೆರವಾಗಬಲ್ಲದು. ಆದರೆ ಅಂತಹ ಕ್ರಮಕ್ಕೆ ಮುಂದಾಗುವ ಮುನ್ನ, ಭಾರತೀಯ ಜ್ಞಾನ ಪರಂಪರೆ ಎಂದರೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ.

ಭಾರತೀಯ ಸಂಸ್ಕೃತಿ- ಪರಂಪರೆ, ಕಲೆ-ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿರುವುದೇನೋ ಸರಿ. ಆದರೆ ಅಂತಹದ್ದೊಂದು ನೀತಿಯನ್ನು ರೂಪಿಸುವುದು ಒಂದು ಸವಾಲಾದರೆ, ಅದನ್ನು ಅನುಷ್ಠಾನಕ್ಕೆ ತರುವುದು ಇನ್ನೂ ಮಿಗಿಲಾದ ಸವಾಲೇ ಆಗಿರುತ್ತದೆ. ನಮ್ಮೀ ಬಹುತ್ವದ ಭಾರತದಲ್ಲಿ ಇಂತಹ ಹೊಸ ಕ್ರಮಗಳನ್ನು ಪರಿಚಯಿಸುವ ಪ್ರಕ್ರಿಯೆಯು ಹಲವು ತೊಡಕುಗಳನ್ನು ಎದುರಿಸುತ್ತದೆ, ಹಲವು ಅಪಾಯಗಳನ್ನು ಸೃಷ್ಟಿಸುತ್ತದೆ. ಅವುಗಳನ್ನು ಒಂದೊಂದಾಗಿ ಪರಿಶೀಲಿಸೋಣ.

ಮೊದಲಿಗೆ, ಭಾರತೀಯ ಸಂದರ್ಭದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬಹುಮಟ್ಟಿಗೆ ಜಾತಿಕೇಂದ್ರಿತ, ಧರ್ಮಕೇಂದ್ರಿತ ಹಾಗೂ ಸಿದ್ಧಾಂತಕೇಂದ್ರಿತ ಸಮುದಾಯಗಳು ನಿಯಂತ್ರಿಸುತ್ತಿವೆ. ಇಂತಹ ಸಂಸ್ಥೆಗಳು ಭಾರತೀಯ ಮತ್ತು ಅದರ ಮೂಲಕ ವಿಶ್ವಾತ್ಮಕ ಮೌಲ್ಯಗಳನ್ನು ಪ್ರಸರಿಸುವ ಬದಲು, ಐಕೆಎಸ್ನಂತಹ ಉಪಕ್ರಮವನ್ನು ಜಾತಿ, ನಂಬಿಕೆ, ಧರ್ಮ ಅಥವಾ ಸಿದ್ಧಾಂತದ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಇಂತಹ ವ್ಯವಸ್ಥೆಯಲ್ಲಿ ಐಕೆಎಸ್ನ ಅನುಷ್ಠಾನವು ವಿದ್ಯಾರ್ಥಿಗಳ ಚಿಂತನೆಯ ವ್ಯಾಪ್ತಿಯನ್ನು ವಿಸ್ತರಿಸದೇ ಕುಬ್ಜಗೊಳಿಸುವ ಸಾಧ್ಯತೆ ಇರುತ್ತದೆ.

ಎರಡನೆಯದಾಗಿ, ಯಾವುದೇ ಜಾತಿ, ಧರ್ಮ ಅಥವಾ ಸಿದ್ಧಾಂತದ ಕುದುರೆಯನ್ನು ಏರದ ಸಾಮಾನ್ಯ ಶೈಕ್ಷಣಿಕ ಸಂಸ್ಥೆಗಳು, ಪ್ರಚಲಿತದಲ್ಲಿರುವ ಸಿದ್ಧ ನಮೂನೆಗಳನ್ನೇ ಭಾರತೀಯ ಜ್ಞಾನ ಪರಂಪರೆ ಎಂದು ತಿಳಿದು ಅವನ್ನೇ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬಹುದು. ಇದು ಅಪಾಯಕಾರಿ ನಡೆ. ಏಕೆಂದರೆ, ದೇಶದ ಹಲವು ಜ್ಞಾನ ಪ್ರಸ್ಥಾನಗಳು ಶತಶತಮಾನಗಳಿಂದಲೂ ಪರಸ್ಪರ ವಾಗ್ವಾದದಲ್ಲಿ, ತಾರ್ಕಿಕ ಹಾಗೂ ಬೌದ್ಧಿಕ ಮೇಲಾಟದಲ್ಲಿ ತೊಡಗಿಕೊಂಡಿವೆ. ಒಂದು ಪ್ರಸ್ಥಾನದವರು ತಮ್ಮ ಪ್ರತಿಪಾದನೆಯೇ ಅಂತಿಮ ಸತ್ಯ ಎಂದು ಪ್ರತಿಪಾದಿಸಬಹುದು. ಆದರೆ ಅಂತಹ ಸಿದ್ಧಾಂತ ನಿರಾಧಾರವಾದುದಾಗಿರಬಹುದು. ಉದಾಹರಣೆಗೆ, ವಾಸ್ತವ ಜಗತ್ತಿನ ಕುರಿತು ಶಂಕರ ಮತ್ತು ಮಧ್ವರ ನಡುವೆ ಸೈದ್ಧಾಂತಿಕ ಭೇದವಿದೆ ಎನ್ನಲಾಗುತ್ತದೆ. ನಿಜವೇನೆಂದರೆ ಅವರಿಬ್ಬರ ನಡುವೆ 400 ವರ್ಷಗಳ ಅಂತರವಿದೆ. ಆದಿಶಂಕರರು ಬರೆದಿರುವ ಕೃತಿಗಳನ್ನು ಮಧ್ವಾಚಾರ್ಯ ಓದಿದ್ದರೆನ್ನಲು ಯಾವುದೇ ಪುರಾವೆ ದೊರೆತಿಲ್ಲ. 8ನೇ ಶತಮಾನದ ಶಂಕರರ ವಿಚಾರಗಳು ತಮ್ಮ ಕಾಲದಲ್ಲಿ (12ನೇ ಶತಮಾನದಲ್ಲಿ) ಪಡೆದುಕೊಂಡ ಬದಲಾದ ವ್ಯಾಖ್ಯಾನಗಳನ್ನಷ್ಟೇ ಮಧ್ವಾಚಾರ್ಯರು ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿ ಖಂಡಿಸಿರುವುದು.

ಮೂರನೆಯದಾಗಿ, ನಮ್ಮ ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ವಿಭಾಗಗಳು ಅಂಗೀಕರಿಸಿಕೊಂಡಿರುವ ದ್ವೈತ, ಅದ್ವೈತ, ಸಾಂಖ್ಯ, ಯೋಗ, ವೇದಾಂತ, ಮೀಮಾಂಸೆಯಂತಹ ವಿಷಯಗಳೇ ನಿಜವಾದ ಭಾರತೀಯ ಜ್ಞಾನ ಪರಂಪರೆ ಎಂಬ ತಿಳಿವಳಿಕೆ ಸಹ ಪೂರ್ವಗ್ರಹಪೀಡಿತವಾದುದು. ವಚನಕಾರರು, ತತ್ವಪದಕಾರರು, ತಾಂತ್ರಿಕರು, ನಾಥಯೋಗಿಗಳು, ನೀಲಗಾರರು... ಹೀಗೆ ನಮ್ಮ ಜ್ಞಾನಪರಂಪರೆಗೆ ಸ್ಥಳೀಯ ವೈಶಿಷ್ಟ್ಯ ಇದೆ. ಭಾರತದ ಉದ್ದಗಲಕ್ಕೂ ಕಾಣಸಿಗುವ ಇಂತಹ ದೇಸೀ ವಿವೇಕ ಸಹ ನಮ್ಮ ಜ್ಞಾನಪರಂಪರೆಯನ್ನು ಸಮೃದ್ಧಗೊಳಿಸಿದೆ, ವೈವಿಧ್ಯಪೂರ್ಣವಾಗಿಸಿದೆ. ಈ ಬಹುತ್ವವನ್ನು ಒಳಗೊಳ್ಳದ ಐಕೆಎಸ್ ಪಠ್ಯಕ್ರಮವು ಭವಿಷ್ಯದಲ್ಲಿ ಅಪ್ರಸ್ತುತವಾಗುತ್ತದೆ.

ನಾಲ್ಕನೆಯದಾಗಿ, ಭಾರತವು ಆಧ್ಯಾತ್ಮಿಕತೆಯ ತವರು ಎಂಬ ಚರ್ವಿತ ಚರ್ವಣ ನಂಬಿಕೆಯೊಂದಿದೆ. ಆದರೆ ಭಾರತೀಯ ಜ್ಞಾನ ಪರಂಪರೆ ಎಂದ ಮಾತ್ರಕ್ಕೆ ಅದು ಅಧ್ಯಾತ್ಮ ಜ್ಞಾನವೇ ಎಂದು ಭಾವಿಸಬೇಕಿಲ್ಲ. ನಮ್ಮಲ್ಲಿ ಜನಪದ ವೈದ್ಯವಿದೆ, ಸಾಂಪ್ರದಾಯಿಕ ಕೃಷಿ ಪದ್ಧತಿ ಇದೆ, ಜನಪದ ಸಂಗೀತ, ಕಲೆ, ಜೀವನ ಪದ್ಧತಿಗಳಿವೆ. ಅಧ್ಯಾತ್ಮ ಎಂದೊಡನೆ, ಜನಸಮೂಹದಿಂದ ದೂರವಿದ್ದು ಯಾವುದೋ ಅಮೂರ್ತ ಜ್ಞಾನವನ್ನು ಸಂಪಾದಿಸುವುದೇ ಆಗಬೇಕೆಂದಿಲ್ಲ. ವ್ಯಕ್ತಿಯು ಪ್ರತಿಭೆ, ಪರಿಶ್ರಮದಿಂದ ತನ್ನ ಸುತ್ತಲಿನ ಬದುಕಿಗೆ, ಸಮಾಜಕ್ಕೆ ಕೊಡುಗೆ ನೀಡುವ ಮೂಲಕವೂ ಕೃತಕೃತ್ಯನಾಗುತ್ತಾನೆ. ಇಂತಹ ಭಾವವು ಒಂದು ವಿಮೋಚನೆಯ ಅನುಭವ ನೀಡುವುದರಿಂದ ಜನಪದರ ಕಾಯಕವೂ ಅಧ್ಯಾತ್ಮವೇ ಆಗಿದೆ.

ಐದನೆಯ ಮತ್ತು ಅತ್ಯಂತ ಪ್ರಾಯೋಗಿಕ ತೊಡಕೆಂದರೆ, ಜ್ಞಾನ ಪರಂಪರೆಯ ಕಲಿಕೆಯನ್ನು ಪಠ್ಯಕ್ರಮದೊಂದಿಗೆ ಅಳವಡಿಸುವುದು. ಶಾಲಾ–ಕಾಲೇಜು ಮಕ್ಕಳ ಮೇಲೆ ಈಗಾಗಲೇ ಅಗತ್ಯಕ್ಕಿಂತಲೂ ಅಧಿಕ ಪ್ರಮಾಣದ ಬೌದ್ಧಿಕ ಹೊರೆ ಇದೆ. ಸಾಲದೆಂದು ಇದರ ಮೇಲೆ ಐಕೆಎಸ್ ಎಂಬ ಹೆಚ್ಚುವರಿ ಉಪಕ್ರಮದಿಂದ ಮಕ್ಕಳು ಇನ್ನಷ್ಟು ಬಳಲುವುದಿಲ್ಲವೇ ಎಂಬ ಪ್ರಶ್ನೆಯನ್ನು ಶಿಕ್ಷಣ ವ್ಯವಸ್ಥೆಯ ಪಾಲುದಾರರು ಕೇಳುತ್ತಿದ್ದಾರೆ. ಸುಗಂಧದ ಪರಿಮಳವು ಹೂವಿಗೆ ಭಾರವಾಗದ ರೀತಿಯಲ್ಲಿ ಅದರೊಳಗೆ ನೆಲಸಿರುತ್ತದೆ. ಹಾಗೆಯೇ ಭಾರತೀಯ ಜ್ಞಾನ ಪರಂಪರೆಯನ್ನು ಪ್ರಧಾನ ಪಠ್ಯದೊಳಗೆ ಅಳವಡಿಸುವ ಸಾಧ್ಯತೆಗಳನ್ನು ಹುಡುಕಿ ಕೊಳ್ಳುವುದೇ ಇದಕ್ಕೆ ಏಕಮಾತ್ರ ಪರಿಹಾರವಾಗಿದೆ.

ಉದಾಹರಣೆಗೆ, ಭೌತಶಾಸ್ತ್ರದ ಪಾಠ ಮಾಡುವಾಗ ಜೊತೆ ಜೊತೆಗೆ ಕಪಿಲರ ಸಾಂಖ್ಯ ದರ್ಶನವನ್ನು ಪರಿಚಯಿಸಬಹುದು, ಖಗೋಳ ವಿಜ್ಞಾನದ ಪಾಠದಲ್ಲಿ ಭಾಸ್ಕರ, ಆರ್ಯಭಟಾದಿಗಳ ವಿಚಾರಗಳನ್ನು ಪ್ರಸ್ತಾಪಿಸ ಬಹುದು. ಹರಿದಾಸರು, ಶಿವಶರಣರ ರಚನೆಗಳನ್ನು ಬೋಧಿಸುವಾಗ ಬುದ್ಧನ ಉಪದೇಶಗಳನ್ನು, ಯೇಸುವಿನ ವಾಣಿಯನ್ನು ಅಥವಾ ಉಪನಿಷತ್ತಿನ ಒಳನೋಟಗಳನ್ನು ಅದರೊಳಗೆ ತರಬಹುದು. ವಾಸ್ತವದಲ್ಲಿ, ವಿದ್ಯಾರ್ಥಿಗಳ ಗ್ರಹಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ಈ ಬಗೆಯ ಅಂತಃಶಿಸ್ತೀಯ ಬೋಧನೆಯೇ ಐಕೆಎಸ್ ಅನುಷ್ಠಾನದ ಮೂಲ ಆಶಯವಾಗಿದೆ.

ನಮ್ಮ ಐಐಟಿಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಈ ಹೊಸ ಜ್ಞಾನಸೃಷ್ಟಿಯ ಪ್ರಕ್ರಿಯೆಗೆ ನಮ್ಮ ಪ್ರಾಚೀನ ಪರಂಪರೆಯ ಸ್ವರೂಪ ಹಾಗೂ ಮಿತಿಗಳ ಕುರಿತು ಸ್ಪಷ್ಟ ತಿಳಿವಳಿಕೆಯ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಇಂದು ಭಾರತದ ಹಾಗೂ ಹೊರದೇಶಗಳ ವಿಶ್ವವಿದ್ಯಾಲಯಗಳು ಮೆಟಾಫಿಸಿಕ್ಸ್ (ಆದಿಭೌತಶಾಸ್ತ್ರ) ವಿಭಾಗವನ್ನು ತೆರೆಯಲಾರಂಭಿಸಿವೆ. ಭವಿಷ್ಯದ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಭಾರತೀಯ ಜ್ಞಾನ ಪರಂಪರೆಗೆ ಹೆಚ್ಚಿನ ಪ್ರಾಮುಖ್ಯ ಸಿಗಲಿದೆ. ಈ ಪರಂಪರೆಯನ್ನು ಒಂದು ಸಿದ್ಧ ಪಠ್ಯಕ್ರಮದಂತೆ ನೋಡದೆ, ನಿರಂತರವಾಗಿ ನಡೆಯಲಿರುವ ಜ್ಞಾನಮಾರ್ಗದ ಒಂದು ಪ್ರಕ್ರಿಯೆಯಂತೆ ನೋಡಿದಾಗ, ಪ್ರಧಾನ ಪಠ್ಯಕ್ರಮಕ್ಕೆ ಪೂರಕವಾದ ಅಂತಃಶಿಸ್ತೀಯ ಅಧ್ಯಯನವೆಂದು ಪರಿಭಾವಿಸಿದಾಗ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇದರ ಅನುಷ್ಠಾನ ಸುಗಮವಾಗುತ್ತದೆ.

ಲೇಖಕ: ಸಹ ಪ್ರಾಧ್ಯಾಪಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.