ಭಾನುವಾರ, ಸೆಪ್ಟೆಂಬರ್ 19, 2021
30 °C

ಅಭಿರುಚಿಗೆ ಆಸಕ್ತಿಗೆ ಆಫ್‌ಬೀಟ್ ಕೋರ್ಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಣ ಎಂದರೆ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಎನ್ನುವ ಕಾಲ ಈಗ ಬದಲಾಗಿದೆ. ವ್ಯಕ್ತಿಯ ಅಭಿರುಚಿ ಹಾಗೂ ಆಸಕ್ತಿಗೆ ಹೊಂದುವಂತಹ ಹಲವು ಆಫ್‌ಬೀಟ್ ಹಾಗೂ ಡಿಪ್ಲೊಮಾ ಕೋರ್ಸ್‌ಗಳಿವೆ. ಫ್ಯಾಂಟಸಿ ವರ್ಲ್ಡ್‌, ಟೀ ಟೇಸ್ಟಿಂಗ್‌, ಪೆಟ್‌ ಗ್ರೂಮಿಂಗ್‌ನಂತಹ ಹಲವು ಕೋರ್ಸ್‌ಗಳು ಈಗ ಭಾರತದಲ್ಲೂ ಬೇಡಿಕೆ ಪಡೆದುಕೊಳ್ಳುತ್ತಿವೆ. ಈ ವಿಷಯಗಳಿಗೆ ಸಂಬಂಧಿಸಿ ಹಲವು ಭಾರತೀಯ ವಿಶ್ವವಿದ್ಯಾಲಯಗಳು ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಿವೆ. 

ಟೀ ಟೇಸ್ಟಿಂಗ್‌

ಇದು ಟೀಯ ಸ್ವಾದ ಹಾಗೂ ಗುಣಮಟ್ಟವನ್ನು ಪರಿಶೀಲಿಸುವ ಕೋರ್ಸ್‌. ವಿವಿಧ ಬಗೆಯ ಟೀಗಳ ರುಚಿ ನೋಡಿ ಅವುಗಳ ಗುಣಮಟ್ಟ ಪರಿಶೀಲನೆ ಮಾಡುವ ಈ ಕೋರ್ಸ್ ಭಾರತದಲ್ಲಿ ಬೇಡಿಕೆಯ ಕೋರ್ಸ್‌ಗಳಲ್ಲಿ ಒಂದಾಗಿದೆ. ದಿಪ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಸ್ಟಡೀಸ್, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಚರಿಸ್ಟಿಕ್ ಸ್ಟಡೀಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್‌ಮೆಂಟ್, ಅಸ್ಸಾಂ ಅಗ್ರಿಕಲ್ಚರ್ ಯೂನಿವರ್ಸಿಟಿಗಳಲ್ಲಿ ಈ ಕೋರ್ಸ್ ಇದೆ. 

ಬೊಂಬೆಯಾಟ

ಬಹಳ ಹಿಂದಿನಿಂದಲೂ ಭಾರತದಲ್ಲಿ ಮನರಂಜನೆ ನೀಡುವ ಉದ್ದೇಶದಿಂದ ಬೊಂಬೆಯಾಟ ಹೆಚ್ಚು ಖ್ಯಾತಿ ಪಡೆದಿತ್ತು. ಈ ಬೊಂಬೆಯಾಟದ ಮೂಲಕವೇ ಮಕ್ಕಳಿಗೆ ನೈತಿಕ ಶಿಕ್ಷಣದ ಕುರಿತು ಪಾಠ ಹೇಳಲಾಗುತ್ತಿತ್ತು. ಈಗ ಪಪೆಟ್ರಿ ಅಥವಾ ಬೊಂಬೆಯಾಟವನ್ನೇ ವೃತ್ತಿಪರ ಕೋರ್ಸ್ ಆಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕೋಲ್ಕತ್ತಾ ಪಪೆಟ್‌ ಥಿಯೇಟರ್, ಮುಂಬೈ ಯೂನಿರ್ವಸಿಟಿ ಆಫ್ ಇಂಡಿಯಾ ಈ ಕೋರ್ಸ್‌ ಅನ್ನು ಪರಿಚಯಿಸಿವೆ. ಫೈನ್ ಆರ್ಟ್ಸ್‌ ಭಾಗವಾಗಿರುವ ಬೊಂಬೆಯಾಟದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನೂ ಮಾಡಬಹುದಾಗಿದೆ. 

ಪೆಟ್ ಗ್ರೂಮಿಂಗ್

ಮನುಷ್ಯರು ಸಲೂನ್, ಬ್ಯೂಟಿಪಾರ್ಲರ್‌ಗಳಿಗೆ ಹೋಗಿ ತಮ್ಮ ಅಂದ–ಚೆಂದ ಹೆಚ್ಚಿಸಿಕೊಳ್ಳುವಂತೆ ಸಾಕುಪ್ರಾಣಿಗಳ ಅಂದವನ್ನು ಹೆಚ್ಚಿಸಲು ಸಲೂನ್‌ಗಳು ಇರುತ್ತವೆ. ಅಲ್ಲಿ ಅವುಗಳಿಗೆ ಸ್ನಾನ ಮಾಡಿಸುವುದು, ಬ್ರಷ್ ಮಾಡಿಸುವುದು, ಅವುಗಳನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವುದು, ಹೇರ್ ಕಟಿಂಗ್, ಟ್ರಿಮ್ಮಿಂಗ್ ಮಾಡುವುದು ಮುಂತಾದವನ್ನು ಪೆಟ್ ಗ್ರೂಮರ್‌ಗಳು ಮಾಡುತ್ತಾರೆ. ಹಿಂದೆಲ್ಲಾ ವಿದೇಶಗಳಲ್ಲಿ ಹೆಚ್ಚು ಪ್ರಾಮುಖ್ಯ ಪಡೆದಿದ್ದ ಈ ಕೋರ್ಸ್‌ಗೆ ಈಗ ಭಾರತದಲ್ಲೂ ಬೇಡಿಕೆ ಹೆಚ್ಚುತ್ತಿದೆ. ಭಾರತದಲ್ಲಿನ ಅನೇಕ ವಿಶ್ವವಿದ್ಯಾಲಯಗಳು ಈಗ ಪೆಟ್ ಗ್ರೂಮಿಂಗ್ ಡಿಪ್ಲೋಮಾ ಕೋರ್ಸ್‌ಗಳನ್ನು ಆರಂಭಿಸಿವೆ. ಪಿಯುಸಿ ಅಥವಾ ಡಿಗ್ರಿ ಮುಗಿಸಿದ ಬಳಿಕವೂ ಈ ಕೋರ್ಸ್ ಮಾಡಬಹುದು. 

ಪರ್ವತಾರೋಹಣ- ಸಾಹಸ ಶಿಕ್ಷಣ

ನಿಮಗೆ ಟ್ರೆಕ್ಕಿಂಗ್ ಮಾಡುವುದು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಇದ್ದರೆ ನೀವು ಈ ಕೋರ್ಸ್ ಮಾಡಬಹುದು. ಗುಡ್ಡ ಹತ್ತುವುದು, ಸಾಹಸ ಜಲಕ್ರೀಡೆಗಳು ಮುಂತಾದವುಗಳನ್ನು ಈ ಕೋರ್ಸ್ ಒಳಗೊಂಡಿದೆ. ಈ ಕೋರ್ಸ್ ಮಾಡುವ ಮೂಲಕ ತರಬೇತುದಾರರಾಗಿ ಕೂಡ ವೃತ್ತಿ ಆರಂಭಿಸಬಹುದು. ವಿದೇಶಗಳಲ್ಲೂ ಈ ಕೋರ್ಸ್ ಮಾಡಿದವರಿಗೆ ಹೆಚ್ಚಿನ ಬೇಡಿಕೆ ಇದೆ. 

ಝೋಂಬಿ ಅಧ್ಯಯನ

ಝೋಂಬಿಯ ಕುರಿತು ಹಲವು ಸಿನಿಮಾಗಳು, ಟಿವಿ ಷೋಗಳು, ಪುಸ್ತಕಗಳು ಹಾಗೂ ವಿಡಿಯೊ ಗೇಮ್‌ಗಳು ಇವೆ. ಈ ಝೋಂಬಿ ಆವತರಣಿಕೆಗಳಿಗೆ ಸಂಬಂಧಿಸಿ ಹಾರರ್ ಸ್ಕ್ರಿಪ್ಟ್ ಬರೆಯುವುದು, ಹಾರರ್ ಸ್ಥಳಗಳನ್ನು ಗುರುತು ಮಾಡುವುದು ಮುಂತಾದ ಕೆಲಸಗಳನ್ನು ಝೋಂಬಿ ಅಧ್ಯಯನ ಮಾಡಿದವರು ಮಾಡುತ್ತಾರೆ. ಇತ್ತೀಚೆಗೆ ಝೋಂಬಿ ಕುರಿತಾದ ಗೇಮ್‌ಗಳು ಹೆಚ್ಚುತ್ತಿರುವ ಕಾರಣ ಅದರ ಮೇಲೂ ಕೆಲಸ ಮಾಡಬಹುದು. ಇದಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು ಈ ಕೋರ್ಸ್ ಮಾಡಿದವರಿಗೆ ಬೇಡಿಕೆಯೂ ಹೆಚ್ಚಿದೆ. 

ಆಲ್ಕೋಹಾಲ್ ಟೆಕ್ನಾಲಜಿ

ಆಲ್ಕೋಹಾಲ್ ಅಥವಾ ಮದ್ಯ ಎನ್ನುವುದು ಪ್ರಪಂಚದಲ್ಲೇ ಅತೀ ಹೆಚ್ಚು ಆದಾಯ ತಂದುಕೊಡುವುದಾಗಿದೆ. ಆಲ್ಕೋಹಾಲ್ ಟೆಕ್ನಾಲಜಿಯಲ್ಲಿ ಮದ್ಯ ತಯಾರಿಯ ತಂತ್ರಜ್ಞಾನದ ಕುರಿತು ವಿವರವಾದ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಆಲ್ಕೋಹಾಲ್ ತಯಾರಿಕಾ ಕ್ಷೇತ್ರ ಎನ್ನುವುದು ಹೆಚ್ಚು ಬೇಡಿಕೆಯಲ್ಲಿರುವ ಕ್ಷೇತ್ರವಾದ ಈ ಕೋರ್ಸ್‌ಗೂ ಬೇಡಿಕೆ ಹೆಚ್ಚಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು