ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ: ಮುಚ್ಚುತ್ತಿರುವ ಶಾಲೆಗಳ ಪಟ್ಟಿಯೇ ವ್ಯವಸ್ಥೆಯ ಕೈಗನ್ನಡಿ -ಶಾಸಕಿ ಅತಿಶಿ

ಎಎಪಿ ದೆಹಲಿ ಶಾಸಕಿ ಅತಿಶಿ ಮರ್ಲೆನಾ ಸಂದರ್ಶನ
Last Updated 13 ಆಗಸ್ಟ್ 2021, 19:06 IST
ಅಕ್ಷರ ಗಾತ್ರ

ಬೆಂಗಳೂರು: ‘ದೆಹಲಿ ಸರ್ಕಾರ ಹೊಸ ಸರ್ಕಾರಿ ಶಾಲೆಗಳನ್ನು ತೆರೆಯುತ್ತಿದೆ. ಕರ್ನಾಟಕದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಪಟ್ಟಿ ಹೆಚ್ಚುತ್ತಿದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. . .’

ದೆಹಲಿ ಮತ್ತು ಕರ್ನಾಟಕದ ಸರ್ಕಾರಿ ಶಾಲೆಗಳ ಬಗೆಗಿನ ವ್ಯತ್ಯಾಸದ ಬಗ್ಗೆ ಹೀಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದವರು ದೆಹಲಿಯ ಶಿಕ್ಷಣ ಕ್ರಾಂತಿಯ ರೂವಾರಿಯೂ ಆಗಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕಿ ಅತಿಶಿ ಮರ್ಲೆನಾ.

ಬೆಂಗಳೂರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಿದರು.

*ಕೋವಿಡ್‌ ಕಾಲದಲ್ಲಿ ದೆಹಲಿಯ ಶಿಕ್ಷಣ ವ್ಯವಸ್ಥೆ ಹೇಗಿತ್ತು? ಸರ್ಕಾರಿ ಶಾಲೆ ಮಕ್ಕಳಿಗಾಗಿ ಕೈಗೊಂಡ ಕ್ರಮಗಳು?

‘ದೆಹಲಿಯಲ್ಲಿ ಕೋವಿಡ್‌ ತೀವ್ರಗೊಂಡಿದ್ದಾಗ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿ ಮಾಡಿದೆವು. ಮಕ್ಕಳ ಕಲಿಕಾ ವರದಿಯನ್ನು ಪ್ರತಿ ವಾರ ತಾಳೆ ಹಾಕಲಾಯಿತು. ಮೊಬೈಲ್, ಸಂದೇಶಗಳ ಮೂಲಕ ಪೋಷಕರನ್ನು ತಲುಪಿ, ಮಕ್ಕಳಿಗೆ ಅಗತ್ಯ ಕಲಿಕೆಗೆ ಅವರ ಸಹಾಯವನ್ನೂ ಪಡೆದೆವು. ಮಕ್ಕಳು ಕಲಿಕೆಯಿಂದ ದೂರ ಉಳಿಯಲಿಲ್ಲ’.

*ಮೂರನೇ ಅಲೆಯ ಸಂಭವ ಇದೆ. ಶಾಲೆ ತೆರೆಯುವ ಬಗ್ಗೆ ನಿಮ್ಮ ಅಭಿಪ್ರಾಯ?

‘ಸೋಂಕಿನ ಮಧ್ಯೆ ಶಾಲೆ ತೆರೆಯುವುದು ದುಸ್ಸಾಹಸ.ಕೋವಿಡ್‌ನಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಭೌತಿಕವಾದ ಬೀಗ ಬಿದ್ದಿದೆ. ವರ್ಷಕ್ಕೆ ಒಮ್ಮೆ ಬೇಸಿಗೆ ರಜೆ ಕಾಣುತ್ತಿದ್ದ ಮಕ್ಕಳು ದೀರ್ಘ ರಜೆಯಲ್ಲಿದ್ದಾರೆ. ಆನ್‌ಲೈನ್‌ ಶಿಕ್ಷಣದಿಂದ ಅವರು ಕಲಿತಿದ್ದು ಏನು? ಎಂಬುದನ್ನು ಶಾಲೆ ಬಾಗಿಲು ತೆರೆದ ನಂತರ ಮೊದಲು ದೃಢಪಡಿಸಿಕೊಳ್ಳಬೇಕು’.

* ‘ಬ್ರಿಡ್ಜ್‌ ಕೋರ್ಸ್‌’ನ ರೂಪರೇಷೆಗಳೇನು?

‘ಕೋವಿಡ್‌ ಕಾಲಿಟ್ಟ ಬಳಿಕ ಮಕ್ಕಳು ಶಾಲೆಗಳನ್ನು ಮರೆತಿದ್ದಾರೆ. ಈಗ ಶಾಲೆ ತೆರೆದು ಮುಂದಿನ ತರಗತಿಗಳಿಗೆ ಮಕ್ಕಳನ್ನು ದೂಡುವ ಮುನ್ನ ಅವರ ಕಲಿಕಾ ಮಟ್ಟ ದೃಢಪಡಿಸಿಕೊಳ್ಳಲು ‘ಬ್ರಿಡ್ಜ್‌ ಕೋರ್ಸ್‌’ ಆರಂಭಿಸುವುದು ಸೂಕ್ತ’. ಶಾಲೆಗಳನ್ನು ಪುನಾರಂಭಿಸಿದಾಗ ಮಕ್ಕಳು ಮುಂದಿನ ತರಗತಿಗಳಿಗೆ ತೇರ್ಗಡೆಯಾಗಲು ಅರ್ಹರಿದ್ದಾರಾ? ಅವರ ಕಲಿಕಾ ಗುಣಮಟ್ಟ ಯಾವ ಹಂತದಲ್ಲಿದೆ? ಎಂಬುದನ್ನು ತಿಳಿದುಕೊಳ್ಳಲು ‘ಬ್ರಿಡ್ಜ್ ಕೋರ್ಸ್‌’ ನೆರವಾಗಲಿದೆ. ಪ್ರತಿ ವಿಷಯಗಳ ಮೂಲ ಅಂಶಗಳನ್ನು ಈ ಕೋರ್ಸ್‌ ಮೂಲಕ ತರಬೇತಿ ನೀಡುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಸಮತೋಲನಕ್ಕೆ ಬರಲಿದೆ. ದೆಹಲಿಯಲ್ಲಿ ಈಗ ಇದೇ ಯೋಜನೆ ರೂಪಿಸಲಾಗಿದೆ’.

*ದೆಹಲಿ ಮತ್ತು ಕರ್ನಾಟಕದ ಶಿಕ್ಷಣ ವ್ಯವಸ್ಥೆಗಳಲ್ಲಿ ನೀವು ಕಂಡ ವ್ಯತ್ಯಾಸಗಳೇನು?

‘ಸರ್ಕಾರಿ ಶಾಲೆಗಳನ್ನೂ ಉತ್ತಮವಾಗಿ ನಡೆಸಬಹುದು ಎನ್ನುವುದನ್ನು ದೆಹಲಿ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ನಿರೂಪಿಸಿದೆ. ಫಲಿತಾಂಶಗಳಲ್ಲಿ ಖಾಸಗಿ ಶಾಲಾ ಮಕ್ಕಳನ್ನು ಸರ್ಕಾರಿ ಶಾಲೆ ಮಕ್ಕಳು ಹಿಂದಿಕ್ಕಿದ್ದಾರೆ. ಆದರೆ, ಕರ್ನಾಟಕದಲ್ಲಿ ಶೇ 64 ಶಾಲೆಗಳಲ್ಲಿ ಈಗಲೂ ಶೌಚಾಲಯದ ವ್ಯವಸ್ಥೆಯೇ ಇಲ್ಲ.

*ಸರ್ಕಾರಿ ಶಾಲೆಗಳ ಅಭಿವೃದ್ಧಿ ವಿಫಲಗೊಂಡಿರುವುದು ಎಲ್ಲಿ?

‘ಪ್ರತಿ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಘೋಷಿಸಲಾಗುತ್ತಿದೆ. ಪ್ರತಿ ವರ್ಷ ಅದರ ಪ್ರಮಾಣ ಏರುತ್ತಲೇ ಇದೆ. ಆದರೆ, ಈವರೆಗೆ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಉತ್ತಮ ಕಲಿಕೆ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳ ಕೊರತೆ ಇದೆ ಎಂದರೆ ಘೋಷಿಸಿದ ಹಣವೆಲ್ಲ ಎಲ್ಲಿ ತಲುಪಿದೆ? ಮೂಲ ಸೌಕರ್ಯಗಳಿಲ್ಲದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುವುದು ಸಹಜ. ಆದರೆ, ಮಕ್ಕಳ ಕೊರತೆಯಿಂದ ಶಾಲೆ ಮುಚ್ಚಿದೆ ಎನ್ನುವ ಸರ್ಕಾರದ ಉತ್ತರ ವಿಪರ್ಯಾಸ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT