ಬೇಸಿಗೆ ರಜೆಯಲ್ಲಿ ತಮ್ಮ ಮಗಳಿಗೆ ಓದಲು ಒಂದು ಮಕ್ಕಳ ಪುಸ್ತಕವನ್ನು ಶಿಫಾರಸು ಮಾಡುವಂತೆ ನನ್ನ ವೈದ್ಯ ಮಿತ್ರರೊಬ್ಬರು ಕೇಳಿದರು. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಓದಲು ಹೇಳಿದೆ. ತಕ್ಷಣವೇ ಪುಸ್ತಕದ 12 ಸಂಪುಟಗಳನ್ನೂ ಖರೀದಿಸಿ ಮಗಳಿಗೆ ಓದಲು ಹೇಳಿದರಲ್ಲದೆ ತಾವು ಕೂಡ ಓದಿ ಹರ್ಷಪಟ್ಟರು. ಪುಸ್ತಕದಲ್ಲಿನ ವಿಶಿಷ್ಟ ಕಥೆಗಳ ಓದಿನ ಅನುಭವ ಬೇರೆ ಮಕ್ಕಳಿಗೂ ದಕ್ಕಲೆಂದು ತಮ್ಮ ಬಡಾವಣೆಯಲ್ಲಿನ ಇತರ ಮಕ್ಕಳಿಗೂ ಓದಲು ಕೊಟ್ಟರು. ಈ ಕಥೆಗಳ ಓದಿನಿಂದ ಮಗಳ ಬೇಸಿಗೆಯ ರಜೆ ಅರ್ಥಪೂರ್ಣವಾಗಿ ಕಳೆಯಿತು ಎನ್ನುವ ಸಾರ್ಥಕ ಭಾವ ಅವರಲ್ಲಿ ಮನೆಮಾಡಿತ್ತು.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆದಿದೆ. ಪಂಜೆ ಮಂಗೇಶರಾಯರಿಂದ ಹಿಡಿದು, ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಶಿವಲಿಂಗಪ್ಪ ಹಂದಿಹಾಳು ಅವರವರೆಗೆ ಅನೇಕ ಸಾಹಿತಿಗಳು ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಜಿ.ಪಿ.ರಾಜರತ್ನಂ, ದಿನಕರ ದೇಸಾಯಿ, ನಾ.ಕಸ್ತೂರಿ, ಕುವೆಂಪು, ಶಿವರಾಮ ಕಾರಂತ, ಆರ್.ಕಲ್ಯಾಣಮ್ಮ, ಸಿಂಪಿ ಲಿಂಗಣ್ಣ, ಎಚ್.ವೈ.ಸರಸ್ವತಮ್ಮ, ಸುಮತೀಂದ್ರ ನಾಡಿಗ, ಸಿಸು ಸಂಗಮೇಶ, ಕಂಚ್ಯಾಣಿ ಶರಣಪ್ಪ ಅವರಂತಹ ಸಾಹಿತಿಗಳು ಮಕ್ಕಳ ಕಥೆ, ಕವಿತೆ, ಕಾದಂಬರಿಗಳನ್ನು ಬರೆದು ಜನಪ್ರಿಯಗೊಳಿಸಿದ್ದಾರೆ.

ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿ ಮಕ್ಕಳ ಸಾಹಿತ್ಯದ ಪಾತ್ರ ಮತ್ತು ಕೊಡುಗೆ ಅನನ್ಯವಾದುದು. ಮೌಖಿಕವಾಗಿ ಹೇಳುವುದಕ್ಕಿಂತ ಮಕ್ಕಳಿಗೆ ಬರವಣಿಗೆಯ ಮೂಲಕ ನೀತಿಪಾಠಗಳನ್ನು ಕಲಿಸುವುದು ಅತ್ಯಂತ ಸಶಕ್ತ ಮತ್ತು ಪರಿಣಾಮಕಾರಿ ವಿಧಾನ. ಮಕ್ಕಳಿಗೆಂದೇ ಪ್ರಕಟವಾದ ಪುಸ್ತಕಗಳನ್ನು ಓದಲು ಕೊಟ್ಟು ಅವರಲ್ಲಿ ಓದಿನ ಅಭಿರುಚಿಯನ್ನು ಬೆಳೆಸುವ ವಾತಾವರಣವನ್ನು ಮನೆ ಮತ್ತು ಶಾಲೆಯಲ್ಲಿ ಸೃಷ್ಟಿಸಬೇಕು. ನಾಗಣ್ಣನ ಕನ್ನಡಕ, ಗಗ್ಗಯ್ಯನ ಗಡಿಬಿಡಿ, ಅಜ್ಜಿಯ ರುಜು, ಮಂಗನ ಮದುವೆ, ನನ್ನ ತಾಯಿ, ಬೆಂಕಿಕೋಳಿ, ಶಾಲೆಯ ಶೂರರು, ಹಾವಾಡಿಗ, ಗಾಂಧಿತಾತಾ, ಸುಳ್ಳಿನ ಸೋಲು, ಚಂದಕ್ಕಿಮಾಮ ಹೀಗೆ ಅನೇಕ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿವೆ.

ಪ್ರಸ್ತುತ ದಿನಗಳಲ್ಲಿ ಆನಂದ ಪಾಟೀಲ, ತಮ್ಮಣ್ಣ ಬೀಗಾರ, ರಾಜಶೇಖರ ಕುಕ್ಕುಂದಾ ಅಂತಹವರು ಮಕ್ಕಳ ಸಾಹಿತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಲೇಖಕರು ಸಾಹಿತ್ಯದ ಬೇರೆ ಪ್ರಕಾರದತ್ತ ವಲಸೆ ಹೋಗದೆ ಮಕ್ಕಳ ಸಾಹಿತ್ಯದಲ್ಲೇ ಕೃಷಿ ಮಾಡುವ ದೀಕ್ಷೆ ಪಡೆದವರಂತೆ ಕಥೆ, ಕವಿತೆ ಮತ್ತು ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮಣ್ಣ ಬೀಗಾರರ ‘ಬಾವಲಿ ಗುಹೆ’ ಮತ್ತು ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್’ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪ್ರಶಸ್ತಿ ದೊರೆತಿರುವುದು ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಸಶಕ್ತ ಬೆಳವಣಿಗೆಗೆ ದೃಷ್ಟಾಂತವಾಗಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಮಕ್ಕಳ ಸಾಹಿತ್ಯ 2012-13’ ಕೃತಿಯಲ್ಲಿ ಐವತ್ತು ಕಥೆಗಳು ಮತ್ತು ಐವತ್ತು ಕವಿತೆಗಳಿವೆ. ಕೆ.ವಿ.ತಿರುಮಲೇಶ, ನಾ.ಡಿಸೋಜ, ಮಾಲತಿ ಪಟ್ಟಣಶೆಟ್ಟಿ, ವೈದೇಹಿ ಅವರಂತಹವರು ಬರೆದ ಕಥೆ ಮತ್ತು ಕವಿತೆಗಳನ್ನು ಓದುವುದೇ ಒಂದು ಸಂಭ್ರಮ.

ಕನ್ನಡದಲ್ಲಿ ಮಕ್ಕಳಿಗಾಗಿಯೇ ಅತ್ಯಂತ ಸರಳವಾಗಿ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಬರೆದು ಪ್ರಕಟಿಸಲಾಗಿದೆ. ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಲು ಮತ್ತು ಬದುಕಿನ ಕುರಿತು ಅವರಲ್ಲಿ ಸಕಾರಾತ್ಮಕ ಮನೋಭಾವವನ್ನು ಮೂಡಿಸಲು ಈ ಬಾಲರಾಮಾಯಣ ಮತ್ತು ಮಹಾಭಾರತದ ಕಥೆಗಳು ನೆರವಾಗುತ್ತವೆ. ರಾಮ, ಕೃಷ್ಣ, ಕರ್ಣ, ಅರ್ಜುನ, ದ್ರೌಪದಿ, ಸೀತೆ, ಲಕ್ಷ್ಮಣ, ಭೀಮ, ಯುಧಿಷ್ಟಿರ, ದುರ್ಯೋಧನ, ಭೀಷ್ಮನ ಕುರಿತಾದ ಪುಟ್ಟ ಪುಟ್ಟ ಕಥೆಗಳು ಮಕ್ಕಳಿಗೆ ಮನರಂಜನೆ ಒದಗಿಸುವುದರ ಜೊತೆಗೆ ಅವರ ಮನೋವಿಕಾಸಕ್ಕೆ ಕಾರಣವಾಗುತ್ತಿವೆ.

ಕೆಲವು ದಶಕಗಳ ಹಿಂದೆ ಮಕ್ಕಳಿಗಾಗಿಯೇ ಪ್ರಕಟವಾಗುತ್ತಿದ್ದ ‘ಚಂದಮಾಮ’ ಮತ್ತು ‘ಬಾಲಮಿತ್ರ’ ನಿಯತಕಾಲಿಕಗಳಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನೀತಿಕಥೆಗಳು ಇರುತ್ತಿದ್ದವು. ಆಬಾಲವೃದ್ಧರಾದಿಯಾಗಿ ಮನೆಯ ಸದಸ್ಯರೆಲ್ಲರೂ ಓದುತ್ತಿದ್ದ ಈ ಪತ್ರಿಕೆಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವಿತ್ತು. ಓದುಗರ ಕೊರತೆಯೋ ಅಥವಾ ಮತ್ತಾವ ಕಾರಣವೋ ಈಗ ಈ ಪತ್ರಿಕೆಗಳ ಪ್ರಕಟಣೆ ಸ್ಥಗಿತಗೊಂಡಿದೆ.

ಮಕ್ಕಳನ್ನು ಸಾಹಿತ್ಯದ ಓದುಗರನ್ನಾಗಿಸುವುದು ಅತ್ಯಂತ ಅವಶ್ಯ. ಸಾಹಿತ್ಯದ ಮೂಲಕವೇ ಮಗು ಪ್ರೀತಿ ಮತ್ತು ಅಂತಃಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್ಸ್ಕಿ ‘ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ. ಬ್ರಾಡ್ಸ್ಕಿಯೇ ಹೇಳಿದಂತೆ- ‘ಮೌನದ ಸಂತ ಸಮಾಧಾನದಲ್ಲಿ ಸತ್ಯ ಪ್ರಕಟಗೊಳ್ಳುವ ಹಾಗೆ, ಬದುಕಿನ ಅರ್ಥ ಹೊಳೆಯುವ ಹಾಗೆ ಸಾಹಿತ್ಯದಲ್ಲಿ ಭಾಷೆ ಕಾವ್ಯವಾಗುತ್ತದೆ. ಭಾಷೆ ಕಾವ್ಯವಾಗುವುದು ಮನುಷ್ಯ ಸಾಂಸ್ಕೃತಿಕವಾಗಿ ವಿಕಾಸಗೊಳ್ಳುವ ದಿಕ್ಕನ್ನು ಸೂಚಿಸುವ ಸಂಗತಿ’.

ಮಕ್ಕಳನ್ನು ಸಾಂಸ್ಕೃತಿಕವಾಗಿ ವಿಕಾಸಶೀಲರನ್ನಾಗಿಸುವ ದಿಸೆಯಲ್ಲಿ ಮಕ್ಕಳ ಸಾಹಿತ್ಯದ ಸಂಪದ್ಭರಿತ ಫಸಲನ್ನು ಉಪಯೋಗಿಸಿಕೊಂಡು ಅವರಲ್ಲಿ ಪುಸ್ತಕಪ್ರೀತಿಯನ್ನು ಒಂದು ಸಂಸ್ಕೃತಿಯಾಗಿ ರೂಪಿಸುವ ಹೊಣೆಗಾರಿಕೆ ಪಾಲಕರು ಮತ್ತು ಶಿಕ್ಷಕರ ಮೇಲಿದೆ.

ಬೆಟ್ಟಕ್ಕೆ ಚಳಿಯಾದರೆ...

ಎಂ.ಎಸ್.ಪುಟ್ಟಣ್ಣ ಅವರ ‘ನೀತಿ ಚಿಂತಾಮಣಿ’ ಜಿ.ಪಿ.ರಾಜರತ್ನಂ ಅವರ ‘ಬೆಳೆಯುವ ಪೈರು’, ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ಮೆಚ್ಚಿನ ಕೃತಿಗಳಾಗಿವೆ. ಎ.ಆರ್.ಕೃಷ್ಣಶಾಸ್ತ್ರಿಗಳ ‘ನಿರ್ಮಲ ಭಾರತಿ’ ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ಪರಿಗಣಿತವಾಗಿದೆ. ಕೆ.ವಿ.ಸುಬ್ಬಣ್ಣ ಅವರ ‘ಬೆಟ್ಟಕ್ಕೆ ಚಳಿಯಾದರೆ’, ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಅಮಾನುಷರು’ ಮತ್ತು ಸುಮತೀಂದ್ರ ನಾಡಿಗರ ‘ಸಾಹಸ’ ಮಕ್ಕಳ ಸಾಹಿತ್ಯದ ವಿಶಿಷ್ಟ ಕೃತಿಗಳು. ಶಿವರಾಮ ಕಾರಂತರು ‘ಬಾಲ ಪ್ರಪಂಚ’ದ ಮೂಲಕ ಮಕ್ಕಳಿಗಾಗಿ ವಿಜ್ಞಾನಲೋಕದ ವಿಸ್ಮಯಗಳನ್ನು ಮನೆ ಮನೆಗೂ ಮುಟ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.