ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುಪರಂಪರೆಯ ಹಲವು ಕೊಂಡಿ..

ಸುಮಾವೀಣಾ
Published : 30 ಆಗಸ್ಟ್ 2024, 22:26 IST
Last Updated : 30 ಆಗಸ್ಟ್ 2024, 22:26 IST
ಫಾಲೋ ಮಾಡಿ
Comments

‘ಅ ಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಇಡೀ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ ಗುರುವೆಂಬ ಮಹಾನ್ ಶಕ್ತಿಗೆ ನಮಸ್ಕಾರ ಎಂದು ‘ಗುರು’ಎಂಬ ಮಹಾನ್ ಚೇತನವನ್ನು ನಿತ್ಯ ಸ್ಮರಣೆ ಮಾಡಲೇಬೇಕು.

‘ಪ್ರಜ್ವಾಲಿತೇ ಜ್ಞಾನಮಯ ದಿಲೀಪಃ’ ಎಂಬ ಈ ಪದಪುಂಜದನ್ವಯ ‘ಗುರು’ ಎಂದರೆ ಸ್ವಯಂಶಕ್ತಿಯಿಂದ ತಾನೂ ಬೆಳಗುವುದರೊಂದಿಗೆ ಇತರ ಹಣತೆಗಳಿಗೂ ಜ್ಞಾನ ಎಂಬ ಕಿರಣವನ್ನು ವರ್ಗಾಯಿಸುವವನು ಎಂದರ್ಥ. ಕಾಲ ಸರಿದಂತೆ ಗುರು-ಶಿಷ್ಯ ಪರಂಪರೆಯ ಕೊಂಡಿ  ಸಡಿಲಗೊಂಡಿದೆ. 

ರಾಮಾಯಣದಲ್ಲಿ ವಿಶ್ವಾಮಿತ್ರರು ಕೇವಲ ಸಂಜ್ಞೆಗಳ ಮೂಲಕ ರಾಮನಿಗೆ ನಿರ್ದೇಶನ ಕೊಡುತ್ತಿದ್ದರು; ಆತ ಪಾಲಿಸುತ್ತಿದ್ದ. ಮಹಾಭಾರತದ ಕಾಲಕ್ಕೆ ಸಂಜ್ಞಾಸೂಚನೆ ಹೊರಟುಹೋಗಿ ಕೃಷ್ಣ ಅರ್ಜುನನಿಗೆ ಯುದ್ಧಭೂಮಿಯಲ್ಲಿ ಉಪದೇಶ ನೀಡಬೇಕಾಯಿತು. ಅದನ್ನೇ ನಾವು ಗೀತೋಪದೇಶ ಎಂದು ಇಂದಿಗೂ ಅನುಸಂಧಾನ ಮಾಡುತ್ತಿರುವುದು. ಬುದ್ಧ ಅಂಥ ಅಂಗುಲಿಮಾಲನನ್ನೇ ಸಾಧುವಾಗಿ ಬದಲಾಯಿಸಿದ.

‘ಆಚಾರ್ಯಮುಖೇನ’, ‘ಗುರುಮುಖೇನ’ ಎಂಬ ಮಾತುಗಳು ಜನಜನಿತ. ಯಾವುದೇ ಪೂಜೆ ಹೋಮ ಹವನಗಳಲ್ಲಿ ಇಂಥದ್ದೊಂದು ಮಾತನ್ನು ಮಂತ್ರದ ಒಂದೊಂದು ಭಾಗವಾಗಿ ಕೇಳುತ್ತೇವೆ.  ಜ್ಞಾನ ಎಂಬ ಶಿಖರವನ್ನು ಆ ಭಗವಂತನಿಗೆ ಹೋಲಿಸಿದರೆ ಆ ಜ್ಞಾನವೆಂಬ ಶಿಖರದ ಬಳಿ ನಮಗೆ ಹೋಗಲು ದಿಗ್ದರ್ಶನ ಮಾಡುವುದು ಗುರುವೇ ಹೌದಲ್ವ. ಹಾಗಾಗಿ ನಮ್ಮ ಹಿರಿಯರು ಗುರುವನ್ನು ‘ಆಚಾರ್ಯದೇವೋಭವ’ ಎಂದು ಉಲ್ಲೇಖಿಸಿರುವುದು. ‘ಹರ ಮುನಿದರೂ ಗುರು ಕಾಯ್ವನ್’ ಎಂಬ ಉಕ್ತಿಯೂ ಗುರುವಿನಲ್ಲಿಯೇ ಭಗವಂತ ವಾಸವಾಗಿರುತ್ತಾನೆ ಎಂಬ ಮಾತನ್ನು ಸಾಕ್ಷೀಕರಿಸುತ್ತದೆ.

‘ಗುರು’ ಎಂದರೆ ಕೇವಲ ಅಕ್ಷರಾಭ್ಯಾಸ ಮಾಡಿಸಿದವರು ಎಂಬ ಸೀಮಿತವ್ಯಾಪ್ತಿಯಲ್ಲಿ ಅರ್ಥೈಸಬೇಕಿಲ್ಲ, ವಿಶಾಲಾರ್ಥದಲ್ಲಿಯೂ ಗುರುವನ್ನು ಅರ್ಥೈಸಿಕೊಳ್ಳಬೇಕು. ಇದಕ್ಕೆ ಪೂರಕವೆಂಬಂತೆ ‘ಪರಿಪಕ್ವವಾದ ಸಂಸ್ಕಾರವುಳ್ಳ ನರನಿಗೆ ಗುರು ಯಾವ ರೂಪದಿಂದಾದರೂ ಬರಬಹುದು’ ಎಂದ ಕುವೆಂಪು ಅವರ ಮಾತನ್ನು
ನೆನಪಿಸಿಕೊಳ್ಳಬಹುದು.  

ಗುರುಶಿಷ್ಯ’ ಪರಂಪರೆ ಎಂಬ ಪರಿಭಾಷೆಗೆ ನಮ್ಮಲ್ಲಿ ವಿಶೇಷವಾದ ಘನತೆಯಿದೆ. ‘ಜಗತ್ತನ್ನೇ ಗೆದ್ದ ವೀರ’ ಎಂಬ ಪ್ರಾಪಂಚಿಕ ಇತಿಹಾಸಕಾರರು ಉಲ್ಲೇಖ ಮಾಡುವ ಅಲೆಗ್ಸಾಂಡರ್, ಈತನ ಗುರು ಅರಿಸ್ಟಾಟಲ್. ಭಾರತೀಯ ಪರಂಪರೆ ಭಾರತದ ರಾಜಕೀಯ ಇತಿಹಾಸ ಓದಿದವರಿಗೆ ಚಾಣಾಕ್ಯನಂಥ ಚಾಣಾಕ್ಷಗುರು ಚಂದ್ರಗುಪ್ತ ಮೌರ್ಯನಂಥ ಶಿಷ್ಯನ ಬಗ್ಗೆ ಎಲ್ಲರಿಗೂ ತಿಳಿದಿರುವಂಥದ್ದೆ.

ಕರ್ನಾಟಕ ಇತಿಹಾಸ ಅಧ್ಯಯನ ಮಾಡಿದವರಿಗೆ ಹೊಯ್ಸಳ ವಂಶದ ಮೂಲ ಪುರುಷನ ಪರಿಚಯವಿದ್ದೇ ಇರುತ್ತದೆ. ಶಿಷ್ಯನಿಗೆ ಹುಲಿಯೊಂದರ ವಿರುದ್ದ ಹೋರಾಟ ಮಾಡು [ಪೊಯ್+ಸಳ> ಹೊಯ್+ಸಳ= ಹೊಯ್ಸಳ] ಎಂದು ಆದೇಶ ಮಾಡಿದ ಜೈನಯತಿ ಸುದತ್ತಾಚಾರ್ಯರಿಗೆ ಕನ್ನಡಿಗರು ಎಂದೆಂದಿಗೂ ಋಣಿಗಳೇ. 

‘ಎಂದೂ ಮರೆಯಲಾಗದ ಸಾಮ್ರಾಜ್ಯ’ಎಂದು ನಾಮಾಂಕಿತವಾಗಿರುವ ವಿಜಯನಗರ ಸಾಮ್ರಾಜ್ಯಕ್ಕೆ ಗುರು ವಿದ್ಯಾರಣ್ಯರ ಪ್ರೇರಣೆ ಇದ್ದೇ ಇತ್ತು. 

ಕನ್ನಡದ ‘ಆದಿಕವಿ’ ಎಂದು ಕರೆಸಿಕೊಂಡಿರುವ ಪಂಪನ ಹಿಂದೆ ಅವನ ಗುರು ದೇವೇಂದ್ರ ಮುನಿಗಳ ಮಾರ್ಗದರ್ಶನ ಇದ್ದೇ ಇತ್ತು. ಈತ ವ್ಯಾಸನನ್ನು ಅನುಕರಿಸಿ ‘ಪಂಪಭಾರತ’ವನ್ನು ಬರೆದನು, ಗದುಗಿನ ನಾರಣಪ್ಪರಾಗಿದ್ದ ವ್ಯಕ್ತಿ ಗುರು ವ್ಯಾಸರಾಯರ ಪ್ರಭಾವಕ್ಕೆ ಒಳಗಾಗಿ ‘ಅವರ ಮಾನಸಿಕಪುತ್ರ ನಾನು ಹಾಗಾಗಿ ನಾನು ‘ಕುಮಾರವ್ಯಾಸ’ ಎಂದು ಅವನೇ ಕರೆದುಕೊಂಡಿದ್ದಾನೆ.  ದಾಸ ಸಾಹಿತ್ಯದ ಅಶ್ವಿನಿದೇವತೆಗಳು ಎಂದು ಕರೆಸಿಕೊಂಡಿರುವ ಪುರಂದರದಾಸರು ಹಾಗೂ ಕನಕದಾಸರು ಇಬ್ಬರೂ ಗುರು ವ್ಯಾಸರಲ್ಲಿಯೇ ಶಿಷ್ಯವೃತ್ತಿ ಮಾಡಿದವರು. ಗುರುಗೋವಿಂದಭಟ್ಟ ಹಾಗೂ ಸಂತ ಶಿಶುನಾಳಶರೀಫರ ಅವಿನಾಭಾವ ಸಂಬಂಧಕ್ಕೆ ಶರೀಫರ ಕೀರ್ತನೆಗಳೇ ಸಾಕ್ಷಿಯಾಗಿವೆ. 

‘ತಂದೆಗೂ  ಗುರುವಿಗೂ ಅಂತರವುಂಟು ತಂದೆ ತೋರುವನು ಶ್ರೀಗುರುವ. ಶ್ರೀಗುರು ಬಂಧನವ ಕಳೆವ’ ಎಂದು ಸರ್ವಜ್ಞ ಗುರುವಿನ ಮಹತ್ವವನ್ನು ತನ್ನ ತ್ರಿಪದಿಯಲ್ಲಿ ಉಲ್ಲೇಖ ಮಾಡಿದ್ದಾನೆ.  ರಾಮಕೃಷ್ಣಪರಮಹಂಸ, ಸ್ವಾಮಿ ವಿವೇಕಾನಂದರನ್ನು ಇಲ್ಲಿ ಸ್ಮರಿಸಲೇಬೇಕು. ಭಾರತಮಾತೆಯ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಪಸರಿಸಿದ ಸಂತ. ಇವರ ಶಿಷ್ಯೆ ಸಹೋದರಿ ನಿವೇದಿತಾ.

ಐರ್ಲೆಂಡಿನ ಪುಷ್ಪವಾಗಿ ಭಾರತಮಾತೆಗೆ ಸಮರ್ಪಿತವಾದವಳು. ಶ್ರೀರಾಮಕೃಷ್ಣರ ನೇರ ಶಿಷ್ಯ ಸ್ವಾಮಿ ಶಿವಾನಂದ, ಇವರಿಂದ ದೀಕ್ಷೆ ಪಡೆದವರು ಕುವೆಂಪು ಇವರ ಶಿಷ್ಯ ದೇ.ಜ.ಗೌ . ಎಂಥ ಗುರು ಪರಂಪರೆ ಅಲ್ಲವೇ?. ಕುವೆಂಪು ತಮ್ಮ ಅಧ್ಯಾತ್ಮಗುರುವಿನ ಫೋಟೊವನ್ನು ಕಡೆಯವರೆಗೂ ಪೂಜಿಸುತ್ತಿದ್ದರು ಎಂಬ ಮಾಹಿತಿ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯಿಂದ ತಿಳಿದುಬರುತ್ತದೆ.

ಕುವೆಂಪು ಅವರಿಗೆ ಜೇಮ್ಸ್ ಕಸಿನ್ಸ್‌ರಂಥ ಗುರು ದೊರೆತದ್ದರಿಂದಲೇ ಮೊದಲಿಗೆ ಆಂಗ್ಲಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದರೂ ನಂತರ ಮಾತೃಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಹೊಸಗನ್ನಡ ಸಾಹಿತ್ಯದ ದಿಗ್ಗಜ ಎಂದು ಕರೆಸಿಕೊಂಡಿರುವುದು.

ಏಕಲವ್ಯ ದ್ರೋಣಾಚಾರ್ಯರಂಥ ಮಾನಸಿಕ ಗುರುವಿಗೆ ಹೆಬ್ಬೆರಳನ್ನು ದಕ್ಷಿಣೆಯಾಗಿ ಕೊಟ್ಟ. ಇದು ಸಾರ್ವಕಾಲಿಕ ಗುರು-ಶಿಷ್ಯರ ಸಂಬಂಧದ ಮೌಲ್ಯವನ್ನು ಶೃತಪಡಿಸುತ್ತದೆ. ಗುರು ಬಸವಣ್ಣ ಅವರ ಸಾನ್ನಿಧ್ಯ ತೊರೆದು ಅಕ್ಕಮಹಾದೇವಿ ಶ್ರೀಶೈಲಕ್ಕೆ ತೆರಳುವಾಗ ‘ನಿಮ್ಮ ಮಂಡೆಗೆ ಹೂವ ತರುವರನಲ್ಲದೆ ಹುಲ್ಲ ತಾರೆನು’ ಎಂದು ಹೇಳುತ್ತಾಳೆ. ಈಕೆಯ ಗುರುಭಕ್ತಿಗೆ ಬೆಲೆಕಟ್ಟಲು ಸಾಧ್ಯವಿದೆಯೇ? 

ಹರಿಹರ-ರಾಘವಾಂಕರು ಸಹೋದರ ಸಂಬಂಧಿಗಳಾದರೂ ಗುರುಶಿಷ್ಯರು. ಗುರುವಿನ ಉಪದೇಶ ಅಮೂಲ್ಯವಾದದು. ಬಾಳಿಗೆ ಗೌರವ ಬರುವುದು ಗುರುವಿನ ಮಾರ್ಗದರ್ಶನದಿಂದ. ‘ಜ್ಞಾನಿ ಸಂಸಾರದೊಳ್ ತಾನಿರಲು ತಿಳಿದಿಹನು, ಭಾನು ಮೋಡದಲಿ ಹೊಳೆವಂಥ ಸದಾ ಮೂಲ ಸ್ಥಾನದೊಳಿಹನು ಸರ್ವಜ್ಞ’. ಎಂಬ ಮಾತಿನಂತೆ ಸದಾ ಪ್ರಕಾಶಿಸುವ ಗುರು ಅವನ ಒಲುಮೆಯಿಂದ ನಮ್ಮ ಬಾಳುವೆಗೆ ಘನತೆ ಒದಗಿ ಬರುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT