ಬುಧವಾರ, ಮೇ 12, 2021
27 °C
ತರಬೇತಿ ಹೊಂದಿದ ಪದವೀಧರ ಶಿಕ್ಷಕರ ಪರಿಕಲ್ಪನೆ

ಬೆಳಗಾವಿ: ಖಾನಾಪುರದಲ್ಲೊಂದು ಗಣಿತ ಲೋಕ ಸೃಷ್ಟಿ

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 27 ಟಿ.ಜಿ.ಟಿ (ತರಬೇತಿ ಹೊಂದಿದ ಪದವೀಧರ) ಶಿಕ್ಷಕರು ಸೇರಿ ಸ್ವಂತ ಸಂಪನ್ಮೂಲ ಕ್ರೋಢೀಕರಿಸಿ ಗಣಿತವಿಜ್ಞಾನದ ಪಿತಾಮಹ ಭಾಸ್ಕರಾಚಾರ್ಯರ ಹೆಸರಲ್ಲಿ ಗಣಿತಲೋಕ ಸೃಷ್ಟಿಸಿ ಗಮನಸೆಳೆದಿದ್ದಾರೆ.

ಪಟ್ಟಣದ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ ಇತ್ತೀಚೆಗೆ ಸೃಷ್ಟಿಗೊಂಡ ಗಣಿತಲೋಕವನ್ನು ಫೆ.8ರಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ಮತ್ತು ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಲೋಕಾರ್ಪಣೆಗೊಳಿಸಿದ್ದಾರೆ. ಈ ಗಣಿತಲೋಕದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಠ್ಯಕ್ರಮದಲ್ಲಿರುವ 170 ಗಣಿತದ ಸಿದ್ಧ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಅಂಕ ಗಣಿತದ 60 ಮಾದರಿಗಳನ್ನು 10 ಶಿಕ್ಷಕರು, ಬೀಜಗಣಿತದ 55 ಮಾದರಿಗಳನ್ನು 9 ಮತ್ತು ರೇಖಾಗಣಿತದ 55 ಮಾದರಿಗಳನ್ನು 8 ಶಿಕ್ಷಕರು ಸಿದ್ಧಪಡಿಸಿದ್ದಾರೆ. ಮಾದರಿಗಳಿಗೆ ಅಂತಿಮ ಸ್ಪರ್ಶ ನೀಡಲು ವಿವಿಧ ಶಾಲೆಗಳ ಆರು ಸಹ ಶಿಕ್ಷಕರು ಸಹಕರಿಸಿದ್ದಾರೆ.

ತ್ರಿಕೋನ, ತ್ರಿಭುಜ, ವೃತ್ತ, ಭುಜ, ಸಮಮಿತಿ, ಸಮಸಂಖ್ಯೆ, ಭಿನ್ನರಾಶಿ, ಗಣಿತದ ಪ್ರಕಾರಗಳು, ನಿತ್ಯ ಸಮೀಕರಣ, ನಿರ್ದೇಶಾಂಕ ವ್ಯವಸ್ಥೆ, ಚಿಕ್ಕ ಸಂಖ್ಯೆ, ವರ್ತುಲ, ದೊಡ್ಡ ಸಂಖ್ಯೆ, ಘಾತಾಂಕಗಳು, ಮಗ್ಗಿ ಸೇರಿದಂತೆ ಅಂಕಗಣಿತ, ಬೀಜಗಣಿತ ಮತ್ತು ರೇಖಾಗಣಿತದ ಪರಿಕಲ್ಪನೆಯ ಸಚಿತ್ರ ಕಲಿಕಾಂಶಗಳ ಭಂಡಾರ ಇಲ್ಲಿದೆ. ಚಟುವಟಿಕೆ ಆಧಾರದ ಕಲಿಕೆ ತತ್ವವನ್ನು ಶಿಕ್ಷಕರ ಮೂಲಕ ಮಕ್ಕಳಿಗೆ ಒದಗಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಶಿಕ್ಷಕರು.

‘ಶಿಕ್ಷಣ ಇಲಾಖೆಯ ಹಿರಿಯ ಅಕಾರಿಗಳ ಮಾರ್ಗದರ್ಶನ ಮತ್ತು ಟಿಜಿಟಿ ಶಿಕ್ಷಕರ ಸಹಕಾರದಿಂದ ಭಾಸ್ಕರಾಚಾರ್ಯ ಗಣಿತಲೋಕ ಸೃಷ್ಟಿಯಾಗಿದೆ. ಸರ್ಕಾರದಿಂದ ಯಾವುದೇ ಅನುದಾನ ಅಪೇಕ್ಷಿಸದೆ ಶಿಕ್ಷಕರೇ ಹಣ ಹಾಕಿ ಈ ಕಾರ್ಯ ಮಾಡಿದ್ದು ವಿಶೇಷ. ದೈನಂದಿನ ಜೀವನದಲ್ಲಿ ಗಣಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸುವಂತೆ ಶಿಕ್ಷಕರಿಗೆ ತರಬೇತಿ ನೀಡಲು ಇದು ಸಹಕಾರಿಯಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಗಣಿತವನ್ನು ಆಸಕ್ತಿಯಿಂದ ಕಲಿಯುವಂತೆ ಮತ್ತು ಗಣಿತದ ಕುರಿತು ಧನಾತ್ಮಕ ಚಿಂತನೆ ಮೂಡಿಸಲು ಯಶಸ್ವಿಯಾದಲ್ಲಿ ನಮ್ಮ ಶ್ರಮ ಸಾರ್ಥಕವಾದಂತೆ’ ಎನ್ನುತ್ತಾರೆ ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು