ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಯ ಮುನ್ನೋಟಕ್ಕೆ ಅಣಕು ಪರೀಕ್ಷೆ: ಇದರ ಮಹತ್ವ ಎಷ್ಟಿದೆ?

Last Updated 1 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೊದಲು ಸಿದ್ಧತೆ ಬಹಳ ಮುಖ್ಯ. ಓದಿನ ತಯಾರಿಯ ಜೊತೆಗೆ ಪರೀಕ್ಷೆ ಎದುರಿಸುವ ಬಗ್ಗೆ ಪ್ರತ್ಯಕ್ಷ ಅನುಭವವೂ ಅಗತ್ಯ. ಈ ಅನುಭವವನ್ನು ಅಣಕು ಪರೀಕ್ಷೆ ಎದುರಿಸುವ ಮೂಲಕ ಪಡೆಯಬಹುದು.

ಸ್ಪರ್ಧಾತ್ಮಕ ಪರೀಕ್ಷೆ ಎಂದ ಕೂಡಲೇ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ ಎಂಬುದು ಗೊತ್ತೇ ಇರುವ ಸಂಗತಿ. ಆದರೆ ಈ ಸಿದ್ಧತೆ ಅಂದರೆ ಕೇವಲ ಅಧ್ಯಯನ ಸಾಮಗ್ರಿ ಸೇರಿಸಿಕೊಂಡು ಓದುವುದು ಮಾತ್ರವಲ್ಲ, ಪರೀಕ್ಷೆಯನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಪ್ರತ್ಯಕ್ಷ ಅನುಭವವೂ ಬೇಕಾಗುತ್ತದೆ. ಈ ಅನುಭವವನ್ನು ಅಣಕು ಪರೀಕ್ಷೆ ಎದುರಿಸಿ ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಲಕ್ಷಾಂತರ ಸ್ಪರ್ಧಾರ್ಥಿಗಳಲ್ಲಿ ಯಶಸ್ಸು ಪಡೆದ ಕೆಲವೇ ಅಭ್ಯರ್ಥಿಗಳನ್ನು ಕೇಳಿದರೆ ಅವರಲ್ಲಿ ಕೆಲವರಾದರೂ ಈ ಅಣಕು ಪರೀಕ್ಷೆಯನ್ನು ಎದುರಿಸಿರುವುದು ಗೊತ್ತಾಗುತ್ತದೆ.

ಹಾಗಾದರೆ ಈ ಅಣಕು ಪರೀಕ್ಷೆ ಎಂದರೇನು? ನಿಜವಾದ ಪರೀಕ್ಷೆಯ ನಿಯಮಗಳು, ಮಾದರಿಯಲ್ಲೇ ಅಭ್ಯಾಸಕ್ಕಾಗಿ ಪರೀಕ್ಷೆ ಎದುರಿಸುವ ಈ ಅಣಕು ಪರೀಕ್ಷೆಯಲ್ಲಿ ಸ್ಪರ್ಧಾರ್ಥಿಯು ತನ್ನ ಸಾಧನೆಯನ್ನು ವಿಶ್ಲೇಷಿಸಬಹುದು. ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ನಿಜವಾದ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಬಹುದು. ಪೇಪರ್‌ ಯಾವ ಮಾದರಿಯಲ್ಲಿ ಇರುತ್ತದೆ, ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ, ಪ್ರಶ್ನೆಗಳು ಕಷ್ಟಕರವೇ, ಎಷ್ಟು ಸಮಯ ಅವಶ್ಯಕ.. ಹೀಗೆ ಹಲವಾರು ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬಹುದು.

ಅಣಕು ಪರೀಕ್ಷೆ ತೆಗೆದುಕೊಳ್ಳದಿದ್ದರೆ ನಿಮ್ಮ ಸಿದ್ಧತೆ ಮಟ್ಟ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಂತಹ ಪರೀಕ್ಷೆಗೆ ಹಾಜರಾದರೆ ಅಧ್ಯಯನಕ್ಕೆ ಯೋಜನೆ ರೂಪಿಸಿಕೊಂಡು ಅಂದುಕೊಂಡಿದ್ದನ್ನು ಸಾಧಿಸಬಹುದು.

1. ಪರೀಕ್ಷೆಯಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಮುನ್ನೋಟ ಸಿಗುತ್ತದೆ. ಈ ಅಣಕು ಪರೀಕ್ಷೆ ಎನ್ನುವುದು ನಿಜವಾದ ಪರೀಕ್ಷೆ ಇದ್ದಂತೆ. ಅಣಕು ಪರೀಕ್ಷೆಯಲ್ಲಿ ನೀವು ಎದುರಿಸುವ ಪ್ರಶ್ನೆಗಳು ನಿಜವಾದ ಪರೀಕ್ಷೆಯಲ್ಲಿ ಯಾವ ಮಾದರಿಯ ಪ್ರಶ್ನೆಗಳು ಎದುರಾಗಬಹುದು ಎಂಬುದನ್ನು ಸೂಚಿಸುತ್ತವೆ.

2. ನಿಮ್ಮ ಸಿದ್ಧತೆ ಮತ್ತು ಪರೀಕ್ಷೆಯಲ್ಲಿ ಹೇಗೆ ಮಾಡಿದ್ದೀರಿ ಎಂಬುದನ್ನು ವಿಶ್ಲೇಷಿಸಬಹುದು. ಇದು ನಿಮ್ಮ ತಯಾರಿಯನ್ನು ಒಂದು ರೀತಿ ರಿಯಾಲಿಟಿ ಚೆಕ್‌ ಮಾಡಿದಂತೆ. ನೀವು ಕಲಿತ ಮತ್ತು ಮನನ ಮಾಡಿಕೊಂಡ ವಿಷಯಗಳು ಮರೆತು ಹೋಗದಂತೆ ನೆನಪಿಸುತ್ತವೆ. ಸಿಲಬಸ್‌ ಅನ್ನು ಪುನರಾವರ್ತನೆ ಮಾಡಲು ಸಹಾಯಕ.

3. ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿ, ಪರೀಕ್ಷಿಸಲು ನೆರವಾಗುತ್ತದೆ. ನಿಜವಾದ ಪರೀಕ್ಷೆ ಎದುರಿಸುವಾಗ ಅತ್ಯುತ್ತಮವಾಗಿ ಬರೆಯಲು ಸಹಾಯಕ. ಪರೀಕ್ಷೆಗೆ ಮುನ್ನವೇ ಬೇರೆ ಬೇರೆ ರೀತಿಯಲ್ಲಿ ಪ್ರಯೋಗ ನಡೆಸಲು ಅಣಕು ಪರೀಕ್ಷೆಗಿಂತ ಉತ್ತಮವಾದದ್ದು ಬೇರೆ ಇಲ್ಲ.

4. ಸಮಯದ ನಿರ್ವಹಣೆಯನ್ನು ಕಲಿಯಬಹುದು. ಪ್ರತಿ ದಿನ ಒಂದು ಅಣಕು ಪರೀಕ್ಷೆ ಎದುರಿಸುವುದರಿಂದ ನೀವು ವೇಗವಾಗಿ ಉತ್ತರಿಸುವುದನ್ನು ರೂಢಿ ಮಾಡಿಕೊಳ್ಳಬಹುದು. ಯಾವ ವಿಭಾಗಕ್ಕೆ ಹೆಚ್ಚು ಸಮಯ ನೀಡಬೇಕು ಅಥವಾ ಕಡಿಮೆ ಅವಧಿಯಲ್ಲಿ ಉತ್ತರಿಸಬಹುದು ಎಂಬುದನ್ನು ಕಲಿಯಬಹುದು. ಇದರಿಂದ ನಿಗದಿತ ಅವಧಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ, ಕೆಲವು ಪ್ರಶ್ನೆಗಳಿಗೆ ಹೆಚ್ಚುವರಿ ಸಮಯ ಉಳಿಸಬಹುದು.

5. ನಿಮಗೆ ಯಾವ ವಿಭಾಗದಲ್ಲಿ ಹೆಚ್ಚು ಸಾಮರ್ಥ್ಯವಿದೆ ಅಥವಾ ಯಾವುದರಲ್ಲಿ ಹಿಂದೆ ಉಳಿದಿದ್ದೀರಿ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಹಾಗೆಯೇ ಯಾವ ವಿಭಾಗ ಸುಲಭ ಅಥವಾ ಕಷ್ಟ ಎಂಬುದನ್ನು ಅರಿಯಬಹುದು. ಕಷ್ಟವಾಗಿರುವ ವಿಷಯದ ಮೇಲೆ ಹೆಚ್ಚು ಗಮನಹರಿಸಲು ಇದರಿಂದ ಸಾಧ್ಯ.

6. ಪರೀಕ್ಷೆಯ ಕುರಿತ ಹಿಂಜರಿಕೆಯನ್ನು ಕಡಿಮೆ ಮಾಡುತ್ತದೆ.

7. ನಿಮ್ಮ ಪ್ರಗತಿ ಹೇಗಿದೆ ಎಂಬುದರ ಮೇಲೆ ನಿಗಾ ಇಡಬಹುದು. ತಪ್ಪುಗಳನ್ನು ಗುರುತಿಸಿ ಅದನ್ನು ಸರಿಪಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT