ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವೋದಯ’ ಪ್ರವೇಶ ಪರೀಕ್ಷೆ :ಪ್ರಶ್ನೋತ್ತರ ಮಾದರಿ

Last Updated 26 ಸೆಪ್ಟೆಂಬರ್ 2022, 3:12 IST
ಅಕ್ಷರ ಗಾತ್ರ

ಪ್ರತಿವರ್ಷ ಪ್ರತಿ ನವೋದಯ ವಿದ್ಯಾಲಯಕ್ಕೆ 6ನೆಯ ತರಗತಿಗೆ 80 ಮಕ್ಕಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಮಕ್ಕಳು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆಗಳಿಸಿರಬೇಕು. ಇವರಲ್ಲಿ ಕನಿಷ್ಟ ಶೇ 75 ರಷ್ಟು ಸ್ಥಾನವನ್ನು ಗ್ರಾಮೀಣ ಭಾಗದ ಅರ್ಹ ಮಕ್ಕಳ ಪ್ರವೇಶಕ್ಕೆ ಆದ್ಯತೆ ನೀಡಲಾಗುತ್ತದೆ.

9ನೆಯ ತರಗತಿಗೆ ನೇರವಾಗಿ ಪ್ರವೇಶ ಬಯಸುವ ಮಕ್ಕಳಿಗೂ ಪ್ರವೇಶ ಪರೀಕ್ಷೆ ಇರುತ್ತದೆ. ಉಳಿದ ಸೀಟುಗಳನ್ನು11ನೆಯ ತರಗತಿಯ ಮಕ್ಕಳಿಗೆ ನೀಡಲಾಗುತ್ತದೆ. 10ನೆಯ ತರಗತಿಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುತ್ತದೆ ಎನ್ನುತ್ತಾರೆ ನವೋದಯ ವಿದ್ಯಾಲಯದ ನಿವೃತ್ತ ಉಪ-ಪ್ರಾಚಾರ್ಯ ಕೆ.ಎಂ. ಚಿದಾನಂದ.

ಕರ್ನಾಟಕದಲ್ಲಿ 31 ನವೋದಯ ವಿದ್ಯಾಲಯಗಳಿವೆ. ಒಂದು ಗಮನದಲ್ಲಿಡಬೇಕಾದ ಅಂಶವೆಂದರೆ, ಆಯಾಯ ಜಿಲ್ಲೆಗಳಲ್ಲಿ ಓದುತ್ತಿರುವ ಮಕ್ಕಳು ಆಯಾಯಾ ಜಿಲ್ಲೆಗಳ ಜವಾಹರ ನವೋದಯ ವಿದ್ಯಾಲಯಗಳಿಗೆ ಮಾತ್ರ ಸೇರಬಹುದು.

ಈಗ ಮೊದಲಿಗೆ ನಾವು 6ನೆಯ ತರಗತಿಯ ಪ್ರವೇಶ ಪರೀಕ್ಷೆಯ ಬಗ್ಗೆ ತಿಳಿಯೋಣ.

ಪರೀಕ್ಷೆಯ ಅವಧಿ 2 ಗಂಟೆಗಳು. ಎಲ್ಲ ಪ್ರಶ್ನೆಗಳೂ ವಸ್ತುನಿಷ್ಠ ಮಾದರಿ ಪ್ರಶ್ನೆಗಳೇ (Objective Type) ಆಗಿರುತ್ತವೆ. ಎಲ್ಲಾ ವಿಭಾಗದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ. ಏಕೆಂದರೆ ಪ್ರತಿಯೊಂದು ವಿಭಾಗದಲ್ಲಿಯೂ ಪ್ರತ್ಯೇಕವಾಗಿ ಅರ್ಹರಾಗಿರಬೇಕಾಗುತ್ತದೆ. ಋಣಾತ್ಮಕ ಅಂಕಗಳು(ನೆಗೆಟಿವ್ ಕರೆಕ್ಷನ್‌) ಇರುವುದಿಲ್ಲ.

ಪ್ರತಿ ಪ್ರಶ್ನೆಗೂ ನಾಲ್ಕು ಸಂಭವನೀಯ ಉತ್ತರಗಳಿರುತ್ತವೆ. ಅವುಗಳಲ್ಲಿ ಒಂದು ಉತ್ತರ ಮಾತ್ರ ಸರಿಯಾಗಿರುತ್ತದೆ. ಸರಿಯಾದ ಉತ್ತರವನ್ನು ಗುರುತಿಸಿ, ಪ್ರಶ್ನಪತ್ರಿಕೆಯ ಜೊತೆಯಲ್ಲಿ ಕೊಟ್ಟಿರುವ ಒ.ಎಂ.ಆರ್ ಹಾಳೆಯಲ್ಲಿ ಉತ್ತರಿಸಬೇಕಿರುತ್ತದೆ ( ಒ.ಎಂ.ಆರ್ ಹಾಳೆಗಳಲ್ಲಿ ಹೇಗೆ ಉತ್ತರಿಸಬೇಕು ಎನ್ನುವ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ತಿಳಿಯೋಣ).

ಈಗ ನಾವು 6ನೆಯ ತರಗತಿಯ ಪ್ರವೇಶ ಪರೀಕ್ಷೆಯ ಮೊದಲನೆಯ ವಿಭಾಗವಾದ ‘ಮಾನಸಿಕ ಸಾಮರ್ಥ್ಯ ಪರೀಕ್ಷೆಯ’ ಪ್ರಶ್ನೆಗಳ ಕೆಲವು ಉದಾಹರಣೆಗಳು ಹಾಗೂ ಅವುಗಳಿಗೆ ಉತ್ತರಿಸುವ ಕೆಲವು ಸುಲಭ ವಿಧಾನಗಳ ಬಗ್ಗೆ ತಿಳಿಯೋಣ.

ಈ ವಿಭಾಗದ ಪ್ರತಿ ಪ್ರಶ್ನೆಯೂ ‘ಚಿತ್ರಾತ್ಮಕ ತಾರ್ಕಿಕ’ (Non-Verbal Reasoning) ಪ್ರಶ್ನೆಯೇ ಆಗಿರುತ್ತದೆ. ಈ ವಿಭಾಗದಲ್ಲಿ ಸಾಮಾನ್ಯವಾಗಿ 10 ಭಾಗಗಳಿರುತ್ತವೆ. ಪ್ರತಿ ಭಾಗದಲ್ಲಿಯೂ 4 ಪ್ರಶ್ನೆಗಳಿರುತ್ತವೆ. ಎಲ್ಲವೂ ವಸ್ತುನಿಷ್ಠ ಮಾದರಿ ಪ್ರಶ್ನೆಗಳು. ಪ್ರತಿ ಪ್ರಶ್ನೆಗೂ 4 ಸಂಭವನೀಯ ಆಯ್ಕೆಗಳಿರುತ್ತವೆ. ಸರಿಯಾದ ಉತ್ತರವನ್ನು ಕಂಡುಹಿಡಿದು ಉತ್ತರಿಸಬೇಕು.

ಈ ವಿಭಾಗದ ಕೆಲವು ಉದಾಹರಣೆಗಳನ್ನು ನೋಡೋಣ.

ಭಾಗ – 1

ಇಲ್ಲಿ A,B,C,D ಅಕ್ಷರಗಳುಳ್ಳ ನಾಲ್ಕು ಆಕೃತಿಗಳನ್ನು ಕೊಡಲಾಗಿ ರುತ್ತದೆ. ಇವುಗಳಲ್ಲಿ ಮೂರು ಆಕೃತಿಗಳು ಒಂದನ್ನೊಂದು ಹೋಲುತ್ತವೆ ಮತ್ತು ಯಾವುದೋ ಒಂದು ಆಕೃತಿಯು ಭಿನ್ನವಾಗಿರುತ್ತದೆ. ಹೀಗೆ ಭಿನ್ನವಾಗಿರುವ ಆಕೃತಿಯನ್ನು ಕಂಡುಹಿಡಿದು ಆ ಆಯ್ಕೆಯನ್ನು ಓ.ಎಂ.ಆರ್. ಹಾಳೆಯಲ್ಲಿ ಉತ್ತರಿಸಬೇಕು.

ಈ ಉದಾಹರಣೆಗಳನ್ನು ನೋಡಿ.

ಈ ಚಿತ್ರಗಳನ್ನು ಗಮನಿಸಿ. ಇಲ್ಲಿ A,B ಮತ್ತು C ಚಿತ್ರಗಳಲ್ಲಿ ಎರಡು ವೃತ್ತಗಳು ಏಕ ಕೇಂದ್ರೀಯ ವೃತ್ತಗಳಾಗಿವೆ ಮತ್ತು ಬಾಣವು ವೃತ್ತದ ಹೊರಗೆ ಬರುತ್ತಿದೆ. ಚಿತ್ರ D ಯಲ್ಲಿ ವೃತ್ತಗಳು ಏಕ ಕೇಂದ್ರೀಯವಾಗಿಲ್ಲ ಮತ್ತು ಬಾಣವು ವೃತ್ತಕ್ಕೆ ಒಳಮುಖವಾಗಿದೆ. ಆದ್ದರಿಂದ ಇಲ್ಲಿ ಚಿತ್ರ D ಯು ಮಿಕ್ಕ ಮೂರು ಚಿತ್ರಗಳಿಗಿಂತ ಭಿನ್ನವಾಗಿದೆ. ಆದ್ದರಿಂದ ಸರಿ ಉತ್ತರ D ಆಗಿದೆ ಅಲ್ಲವೇ?

ಹಾಗೆಯೇ, ಈ ಮೇಲಿನ ಪ್ರಶ್ನೆಗೆ ಸರಿ ಉತ್ತರ ಏನು? ಕಂಡುಹಿಡಿಯಿರಿ.

ಭಾಗ – 2

ಇಲ್ಲಿ, ಒಂದು ಆಕೃತಿಯನ್ನು ಎಡ ಬದಿಗೆ ಕೊಡಲಾಗಿರುತ್ತದೆ. A,B,C,D ಎಂಬ ನಾಲ್ಕು ಆಕೃತಿಗಳನ್ನು ಬಲ ಭಾಗದಲ್ಲಿ ಕೊಡಲಾಗಿರುತ್ತದೆ. ಬಲ ಬದಿಗೆ ಕೊಟ್ಟ ಆಕೃತಿಗಳಲ್ಲಿ ಯಾವ ಒಂದು ಆಕೃತಿಯು ಎಡಬದಿಯ ಆಕೃತಿಗೆ ಪೂರ್ಣವಾಗಿ ಹೊಂದುವುದೋ, ಆ ಆಕೃತಿಯನ್ನು ಗುರುತಿಸಿ ಉತ್ತರಿಸಬೇಕು.

ಈ ಉದಾಹರಣೆಗಳನ್ನು ನೋಡಿ.

ಉತ್ತರ C ಯು ಸರಿ ಉತ್ತರ ಅಲ್ಲವೇ?

ಈ ಮೇಲಿನ ಪ್ರಶ್ನೆಗೆ ಉತ್ತರವನ್ನು ನೀವೇ ಕಂಡುಹಿಡಿಯಬಹುದಲ್ಲವೇ?

ಈ ಪ್ರಶ್ನೆಗಳೇ ಎಷ್ಟು ಆಸಕ್ತಿಕರವಾಗಿವೆ ಮತ್ತು ಬಹಳ ಸುಲಭವಾಗಿವೆ ಅಲ್ಲವೇ? ಹೀಗೆ ಪರೀಕ್ಷೆಯಲ್ಲೂ ಮಕ್ಕಳಿಗೆ ಅರ್ಥವಾಗುವಂತೆ ಪ್ರಶ್ನೆಗಳು ಆಸಕ್ತಿಕರವಾಗಿ, ಸರಳವಾಗಿ, ನೇರವಾಗಿ ಇರುತ್ತವೆ !

ಮುಂದಿನ ಸಂಚಿಕೆಯಲ್ಲಿ ಉಳಿದ ರೀತಿಯ ಪ್ರಶ್ನೆಗಳ ಬಗ್ಗೆ ತಿಳಿಯೋಣ.

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಜಾಲತಾಣವನ್ನು ನೋಡಿ. https://navodaya.gov.in/nvs/en/Home1

(ಲೇಖಕರು: ನಿರ್ದೇಶಕರು,ಸ್ಮಾರ್ಟ್ ಸೆರೆಬ್ರಮ್ ಪ್ರೈವೇಟ್‌ ಲಿಮಿಟೆಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT